ಕಯ್ಗಾರಿಕೆಯ ಕೆಲಸದಲ್ಲಿ ನೆಲಸಿಗರಿಗೆ ಮನ್ನಣೆ

ರತೀಶ ರತ್ನಾಕರ

maruti-suzuki-india-1nov-2

ದಾರಿಯಲ್ಲಿ ಓಡಾಡುವ ಕಾರುಗಳನ್ನು ಗಮನಿಸಿದರೆ ಹತ್ತರಲ್ಲಿ ಎರಡಾದರು ಮಾರುತಿ ಸುಜುಕಿ ಅವರ ಕಾರುಗಳಿರುತ್ತವೆ. ಸುಮಾರು 25 ವರುಶದ ಹಿಂದೆ ಜಪಾನಿನ ಸುಜುಕಿ ಕಂಪನಿಯ ಜೊತೆ ಒಡೆತನದೊಂದಿಗೆ ಆರಂಬವಾದ ಈ ಕಂಪನಿಯು ಇಂದು ಅತಿ ಹೆಚ್ಚು ಕಾರುಗಳನ್ನು ದಾರಿಗಿಳಿಸಿದ ಹೆಮ್ಮೆಯನ್ನು ಹೊಂದಿದೆ. ಹರಿಯಾಣದಲ್ಲಿ ಕಾರುಗಳನ್ನು ಸಿದ್ದಪಡಿಸುವ ಕಯ್ಗಾರಿಕೆಯನ್ನು ಹೊಂದಿರುವ ಇವರು ಇತ್ತೀಚೆಗೆ ಗುಜರಾತಿನಲ್ಲೂ ಕೂಡ ತನ್ನ ಹೊಸ ವಿಬಾಗವನ್ನು ತೆರೆಯಲಿದ್ದಾರೆ.

ಮಾರುತಿ ಸುಜುಕಿ ಕಂಪನಿಯವರು ಗುಜರಾತಿನಲ್ಲಿ ಕಯ್ಗಾರಿಕೆಯನ್ನು ನೆಲೆಗೊಳಿಸುವ ಕೆಲಸವನ್ನೇನೋ ಆರಂಬಿಸಿದರು. ಇದರ ಬಗ್ಗೆ ಮಾತುಕತೆಗೆಂದು 10 ಮಂದಿಯ ತಂಡವೊಂದು ಜೊತೆ ಒಡೆತನದ, ಜಪಾನಿನ ಸುಜುಕಿ ಮೋಟಾರ್ ಕಾರ‍್ಪಿನ ‘ಒಸಾಮು ಸುಜುಕಿ‘ ಅವರನ್ನು ಬೇಟಿ ಮಾಡಲು ಹೋಯಿತು. ಗುಜರಾತಿನಲ್ಲಿ ಕೆಲಸ ಆರಂಬಿಸುವುದಕ್ಕೆ ಎಶ್ಟರ ಮಟ್ಟಿಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ಒಸಾಮು ಅವರು ಅರಿಯ ಬಯಸಿದ್ದರು. ಬೇಟಿ ಮಾಡಲು ಬಂದ 10 ಮಂದಿಯ ತಂಡದಲ್ಲಿ ಯಾರಿಗಾದರೂ ಗುಜರಾತಿ ನುಡಿ ಬರುತ್ತದಯೇ ಎಂದು ಅವರು ಕೇಳಿದರು. ಆದರೆ ಆ ತಂಡದಲ್ಲಿ ಯಾರಿಗೂ ಆ ನುಡಿಯಾಡಲು ಬರುತ್ತಿರಲಿಲ್ಲ. ಮುಂದೆ, ಒಸಾಮು ಅವರು ಇದೇ ಕೆಲಸದ ಮೇಲೆ ಇಂಡಿಯಾಕ್ಕೆ ಬೇಟಿ ನೀಡಿದಾಗ, ಗುಜರಾತಿನಲ್ಲಿ ಕೆಲಸ ಕಯ್ಗೆತ್ತಿಕೊಳ್ಳಬೇಕಾದ ತಂಡದ 40 ಮಂದಿ ಮೇಲುಗರಿಗೂ ಗುಜರಾತಿ ನುಡಿ ಬರುವುದಿಲ್ಲ ಎಂಬುದನ್ನು ತಿಳಿದರು.

ಇದು ಒಸಾಮು ಅವರಿಗೇಕೋ ಸರಿಕಾಣಲಿಲ್ಲ. ಒಂದು ಹೊಸ ಜಾಗದಲ್ಲಿ ಕಯ್ಗಾರಿಕೆಯನ್ನು ಕಟ್ಟುತ್ತಿರುವಾಗ ಅಲ್ಲಿನ ನೆಲಸಿಗರ ನುಡಿಯನ್ನು ತಿಳಿದಿರುವುದು ಮತ್ತು ಅಲ್ಲಿನ ನೆಲಸಿಗರಿಗೆ ಕಯ್ಗಾರಿಕೆಯ ಕೆಲಸಗಳಲ್ಲಿ ಮನ್ನಣೆ ನೀಡುವುದು ಒಳ್ಳೆಯದು ಎಂಬುದು ಒಸಾಮು ಅವರ ತಿಳುವಳಿಕೆಯಾಗಿತ್ತು. ಅದಕ್ಕಾಗಿ ಕೆಲಸ ಮಾಡುವ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಒಸಾಮು ಅವರು ತಂದರು.

ಒಂದು ನಾಡಿನಲ್ಲಿ ಯಾವುದಾದರು ಕಯ್ಗಾರಿಕೆ ಕಟ್ಟಲಾಗುತ್ತಿದೆ ಎಂದರೆ ಆ ನಾಡಿನ ಜಾಗ, ದಾರಿ, ನೀರು, ಮಿಂಚು ಮತ್ತು ಇತರೆ ಸವಲತ್ತುಗಳನ್ನು ಪಡೆದುಕೊಳ್ಳಲಾಗುತ್ತದೆ. ಇದನ್ನು ಆಯಾ ರಾಜ್ಯದ ಸರಕಾರಗಳು ನೋಡಿಕೊಳ್ಳುತ್ತವೆ. ಹೀಗೆ ಸರಕಾರಗಳು ಸವಲತ್ತುಗಳನ್ನು ಕಯ್ಗಾರಿಕೆಗಳಿಗೆ ನೀಡಬೇಕೆಂದರೆ ಆ ರಾಜ್ಯದ ಮಂದಿಯ ತೆರಿಗೆ ಹಣವನ್ನು ಬಳಸುತ್ತದೆ ಮತ್ತು ಆ ಮಂದಿಯ ಜಾಗವನ್ನು ಕೊಂಡುಕೊಂಡು ಕಯ್ಗಾರಿಕೆಗಳಿಗೆ ನೀಡುತ್ತದೆ. ರಾಜ್ಯ ಸರಕಾರದಿಂದ ಮತ್ತು ಮಂದಿಯಿಂದ ಎಲ್ಲಾ ಸವಲತ್ತುಗಳನ್ನು ಪಡೆದ ಕಯ್ಗಾರಿಕೆಗಳು ಆ ರಾಜ್ಯದ ಮಂದಿಗೆ ಕೆಲಸದಲ್ಲಿ ಮನ್ನಣೆ ಕೊಡಲಿಲ್ಲ ಎಂದರೆ ರಾಜ್ಯದ ಮಂದಿಗೆ ಏನು ಉಪಯೋಗ?

ಹಲವಾರು ಕಯ್ಗಾರಿಕೆಗಳು ನೆಲಸಿಗರಿಗೆ ಕೆಲಸದಲ್ಲಿ ಮನ್ನಣೆ ನೀಡುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಮ್ಮ ನೆಲ, ನೀರು ಮತ್ತು ಸವಲತ್ತುಗಳನ್ನು ನೀಡಿರುವ ನಾಡಿನ ಮಂದಿ ಒಂದಲ್ಲ ಒಂದು ದಿನ ಇದರ ಎದುರು ದನಿ ಎತ್ತುತ್ತಾರೆ. ಇತ್ತೀಚಿಗೆ ಕರ್‍ನಾಟಕದಲ್ಲಿ ನಡೆದ ಒಂದು ಗಟನೆ ಇದಕ್ಕೊಂದು ಎತ್ತುಗೆ. ಕರ್‍ನಾಟಕದಲ್ಲಿ ಹೊಂಡಾ ಕಂಪನಿಯವರು ತಮ್ಮ ಕಯ್ಗಾರಿಕೆ ಆರಂಬಿಸಿದ್ದರು, ಆದರೆ ಅಲ್ಲಿ ಕನ್ನಡಿಗರಿಗೆ ಕೆಲಸದಲ್ಲಿ ಯಾವ ಮನ್ನಣೆಯೂ ಇರಲಿಲ್ಲ. ಇದರ ಎದುರು ದನಿ ಎತ್ತಿದ ಕನ್ನಡಿಗರು ಹೋರಾಟ ಮಾಡಿದರು, ಬಳಿಕ ಹೊಂಡಾ ಕಂಪನಿಯವರಿಗೆ ತಮ್ಮ ತಪ್ಪಿನ ಅರಿವಾಗಿ ಕನ್ನಡಿಗರಿಗೆ ಕೆಲಸದಲ್ಲಿ ಮನ್ನಣೆ ನೀಡುವುದಾಗಿ ತಿಳಿಸಿದರು.

ಒಂದು ನಾಡಿನ ಸವಲತ್ತುಗಳನ್ನು ಬಳಸಿಕೊಂಡು ಕಟ್ಟಲಾಗಿರುವ ಕಯ್ಗಾರಿಕೆಯೂ ಆ ನಾಡಿನ ಮಂದಿಗೆ ಕೆಲಸವನ್ನು ಕೊಟ್ಟು ಆಯಾ ನಾಡು-ನುಡಿ ಮತ್ತು ಮಂದಿಗೆ ಮನ್ನಣೆಯನ್ನು ಕೊಡಬೇಕು. ಇಲ್ಲವಾದರೆ ಇಂದಲ್ಲ ನಾಳೆ, ಒಂದಲ್ಲ ಒಂದು ಬಗೆಯಲ್ಲಿ ಕಯ್ಗಾರಿಕೆಯ ಏಳಿಗೆಗೆ ಅದು ಪೆಟ್ಟು ನೀಡಬಹುದು. ಇದು ದೂರದ ಜಪಾನಿನಿಂದ ಬಂದಿರುವ ಒಸಾಮು ಅವರಿಗೆ ಚೆನ್ನಾಗಿ ತಿಳಿದಿತ್ತು ಆದರೆ ಗುಜರಾತಿನಿಂದ ಕೇವಲ 1000 ಕಿಲೋಮೀಟರ್ ದೂರವಿರುವ ಹರಿಯಾಣದ ಮಾರುತಿ ಸುಜುಕಿಯ ಮೇಲದಿಕಾರಿಗಳಿಗೆ ತಿಳಿಯದೇ ಹೋಗಿತ್ತು.

(ಮಾಹಿತಿ ಸೆಲೆ: firstpost)

(ಚಿತ್ರ ಸೆಲೆ: cardekho)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.