ಒಗ್ಗಟ್ಟಿನ ಹೋರಾಟಕ್ಕೆ ಬಂದ ಗೆಲುವಿನ ಬುತ್ತಿ

ರತೀಶ ರತ್ನಾಕರ.

ranaji

ಕನ್ನಡಿಗ ಕ್ರಿಕೆಟ್ ಪ್ರೇಮಿಗಳ ಕಣ್ಣೆಲ್ಲಾ ದೂರದ ಹಯ್ದರಾಬಾದಿನ ರಾಜೀವ್ ಗಾಂದಿ ಅಂತರಾಶ್ಟ್ರೀಯ ಕ್ರೀಡಾಂಗಣದ ಮೇಲೆ ನೆಟ್ಟಿತ್ತು. ಶನಿವಾರದ ಸಂಜೆಯ ಹೊತ್ತಿಗೆ ಕರ‍್ನಾಟಕವು ಹದಿನಯ್ದು ವರುಶಗಳ ಬಳಿಕ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳುವ ಹೊಸ್ತಿಲಿನಲ್ಲಿದೆ ಎಂದು ತಿಳಿದಿತ್ತು. ಮಹಾರಾಶ್ಟ್ರದ ಎದುರು ಕೊನೆಯ ಸುತ್ತಿನ ರಣಜಿ ಪಂದ್ಯದ ಕೊನೆಯ ದಿನ ಬಾಕಿ ಇತ್ತು. ಕನ್ನಡದ ಹುಡುಗರು ಗೆಲುವಿನ ನಗಾರಿ ಬಾರಿಸಿಯೇ ಬಾರಿಸುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಮನೆಮಾಡಿತ್ತು. ಎಲ್ಲರೂ ಆ ಸವಿಯಾದ ಹೊತ್ತಿಗೆ ಎದುರು ನೋಡುತ್ತಿದ್ದರು. ಗೆಲುವಿನ ಆಚರಣೆಗೆ ಆಗಲೇ ಸಿದ್ದತೆಗಳೂ ನಡೆಯುತ್ತಿದ್ದವು. ಪಂದ್ಯದ ಮೊದಲ ದಿನ ಒಂದೆರೆಡು ಕನ್ನಡ ಬಾವುಟಗಳು ಕ್ರೀಡಾಂಗಣದಲ್ಲಿ ಕಾಣುತ್ತಿದ್ದವು. ನಾಲ್ಕನೆಯ ದಿನದ ಕೊನೆಗೆ ಅವುಗಳ ಎಣಿಕೆ ಎಣಿಸಲಾರದಶ್ಟಿದ್ದವು! ಕಎಸ್‍ಸಿಎ ಅವರೂ ಕೂಡ ಹೆಚ್ಚಿನ ಕನ್ನಡ ಬಾವುಟಗಳನ್ನು ತರಿಸಿಕೊಂಡಿದ್ದರು.

ಕರ‍್ನಾಟಕವು ಮೊದಲ ಇನ್ನಿಂಗ್ಸ್ ನಲ್ಲಿ 515 ಓಟಗಳನ್ನು ಗಳಿಸಿತ್ತು, ಮಹಾರಾಶ್ಟ್ರವು ಮೊದಲ ಇನ್ನಿಂಗ್ಸ್ ನಲ್ಲಿ 305 ಓಟಗಳನ್ನು ಗಳಿಸಿತ್ತು. ಮಹಾರಾಶ್ಟ್ರವು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಶನಿವಾರದ ಆಟ ಮುಗಿಯುವ ಹೊತ್ತಿಗೆ 6 ವಿಕೆಟ್‍ಗಳನ್ನು ಕಳೆದು ಕೊಂಡು 272 ಓಟಗಳನ್ನು ಗಳಿಸಿತ್ತು. ಬಾನುವಾರದ ಕೊನೆಯ ದಿನದಾಟ ಬಾಕಿ ಇತ್ತು.

ಬಂದೇ ಬಿಟ್ಟಿತು ಬಾನುವಾರ, ಕನ್ನಡಿಗರು ಕಾತುರದಿಂದ ಕಾಯುತ್ತಿದ್ದ ಆ ಬಾನುವಾರ! ದಿನದ ಆಟ ಶುರುವಾದಂತೆ ಮಹಾರಾಶ್ಟ್ರದ ಕೊನೆಯ ನಾಲ್ಕು ವಿಕೆಟ್‍ಗಳನ್ನು ಕರ‍್ನಾಟಕದ ಬವ್ಲರ್ ಗಳು ಪಟಪಟನೆ ಉದುರಿಸಿದರು. 366 ಓಟಗಳಿಗೆ ಎರಡನೇ ಇನ್ನಿಂಗ್ಸ್ ನ ಆಟವನ್ನು ಮಹಾರಾಶ್ಟ್ರ ಮುಗಿಸಿತ್ತು. 157 ಓಟಗಳ ಗುರಿಯನ್ನು ಬೆನ್ನತ್ತಿದ ಕರ‍್ನಾಟಕ ತಂಡ ಒಳ್ಳೆಯ ಆರಂಬವನ್ನು ಪಡೆಯಿತು ಮೊದಲ ಮೂರು ವಿಕೆಟ್‍ಗಳು ಬಿದ್ದರೂ ಗುರಿಯನ್ನು ತಲುಪಲು ಯಾವ ತೊಂದರೆ ಆಗದಂತೆ ತಂಡದ ಆಟಗಾರರು ನೋಡಿಕೊಂಡಿದ್ದರು. ಕೊನೆಗೆ, ಚಿರಾಗ್ ಕುರಾನ ಅವರ ಎಸೆತಕ್ಕೆ ಕರುಣ್ ನಾಯರ್ ಅವರು ಆರು ರನ್‍ಗಳನ್ನು ಸಿಡಿಸಿದಾಗ ಕರ‍್ನಾಟಕ ತಂಡವು ಹದಿನಯ್ದು ವರುಶಗಳ ಬಳಿಕ ರಣಜಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಏಳನೇ ಬಾರಿ ರಣಜಿ ಟ್ರೋಪಿಯನ್ನು ತನ್ನ ಮುಡಿಗೆ ಏರಿಸಿಕೊಂಡಿತು.

ಕನ್ನಡದ ಬಾವುಟಗಳು ಹಯ್ದರಾಬಾದಿನ ಕ್ರೀಡಾಂಗಣವನ್ನು ತುಂಬಿಕೊಂಡವು. ಇತ್ತ ಕರ‍್ನಾಟಕದಲ್ಲಿ ಮನೆ ಮನೆಯಲ್ಲೂ ನಲಿವು. ಪಟಾಕಿಗಳನ್ನು ಸಿಡಿಸಿ ಕ್ರಿಕೆಟ್ ಪ್ರೇಮಿಗಳು ತಮ್ಮ ನಲಿವನ್ನು ಹಂಚಿಕೊಂಡರು. 2009-10 ರಲ್ಲಿ ಮಯ್ಸೂರಿನಲ್ಲಿ ನಡೆದ ಮುಂಬಯಿ ಎದುರಿನ ರಣಜಿಯ ಕೊನೆಯ ಪಂದ್ಯದಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ತಪ್ಪಿ ಹೋಗಿತ್ತು. ಗೆಲ್ಲುವ ಹಪಹಪಿಯನ್ನು ಮುಂದುವರಿಸಿಕೊಂಡ ಬಂದ ಕರ‍್ನಾಟಕ ತಂಡವು ಒಂದು ತಂಡವಾಗಿ ಒಗ್ಗಟ್ಟಿನ ಆಟವನ್ನು ತೋರಿಸಿದ್ದು ಗಮನ ಸೆಳೆದ ವಿಶಯ.

ಕಳೆಗುಂದದ ತನ್ನಂಬುಗೆ, ಹೊತ್ತಿಗೆ ಸರಿಯಾದ ಆಟ, ಅಬ್ಬರದ ಬ್ಯಾಟಿಂಗ್, ಕರಾರುವಕ್ಕಾದ ಬವ್ಲಿಂಗ್ ಇವೆಲ್ಲದರ ಜೊತೆಗೆ ಒಗ್ಗಟ್ಟಿನ ಹೋರಾಟ. ಹೀಗೆ ಎಲ್ಲವೂ ಮೇಳಯ್ಸಿ ಕರ‍್ನಾಟಕ ತಂಡವನ್ನು ಗೆಲುವಿನ ತುದಿಗೆ ತಲುಪಿಸಿತು. ಕನ್ನಡಿಗರ ಮೊಗದಲ್ಲಿ ನಲಿವನ್ನು ಮೂಡಿಸಿತು. ಕನ್ನಡದ ಹುಡುಗರು ಒಗ್ಗಟ್ಟಾಗಿ ಹೋರಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದನ್ನು ಇವರು ತೋರಿಸಿದರು. ಮರೆಯಲಾಗದ ಈ ಗೆಲುವನ್ನು ಕರ‍್ನಾಟಕ ತಂಡವು, ಇತ್ತೀಚಿಗೆ ನಮ್ಮನ್ನಗಲಿದ ಶ್ರೀ ನರಸಿಂಹ ದತ್ತ ಒಡೆಯರ್ ಗೆ ಮುಡಿಪಾಗಿ ಇಟ್ಟಿದೆ, ಇದರಿಂದ ಈ ಗೆಲುವಿಗೆ ಮತ್ತಶ್ಟು ಕಳೆ ಬಂದಿದೆ. ಗೆದ್ದ ತಂಡಕ್ಕೆ ಸಿಹಿ ಹಾರಯ್ಕೆಗಳು. ಗೆಲುವಿನ ಓಟ ಹೀಗೆ ಮುಂದುವರಿಯಲಿ ಎಂದು ಬಯಸೋಣ.

(ಚಿತ್ರ ಸೆಲೆ: the hindu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: