ಪದ ಮತ್ತು ಅದರ ಹುರುಳು
ನುಡಿಯರಿಮೆಯ ಇಣುಕುನೋಟ – 27
ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.
ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ್ಪಟ್ಟಾಗಲೂ ಅವುಗಳ ಹುರುಳು ಮಾರ್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ್ಪಾಡುಗಳೇನೂ ಆಗಿರಲಿಲ್ಲ.
ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.
ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.
ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.
ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.
ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.
ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ್ಪಟ್ಟಿರುತ್ತದೆ.
ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.
ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.
(ಈ ಬರಹ ವಿಜಯ ಕರ್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] << ನುಡಿಯರಿಮೆಯ ಇಣುಕುನೋಟ – 27 […]