’ಅರಿಮೆ’ ಆಯಿತು ಹೂಡಿಕೆದಾರರ ನೆಚ್ಚಿನ ತಾಣ

ಚೇತನ್ ಜೀರಾಳ್.

IndustryKnowledgeIcon2

ಇತ್ತಿಚೀಗೆ ಬ್ಲೂಮ್ಬರ‍್ಗ್ ಪ್ರಕಟಿಸಿರುವ ವರದಿಯಲ್ಲಿ ಅಮೇರಿಕಾದ ಹೆಚ್ಚು ಗಳಿಕೆ ಮಾಡುತ್ತಿರುವ ಸಂಸ್ತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂರನೇ ಜಾಗದಲ್ಲಿದ್ದ ಗೂಗಲ್ ಸಂಸ್ತೆಯು ಎಕ್ಸಾನ್ ಸಂಸ್ತೆಯನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಬೆಲೆಯುಳ್ಳ ಸಂಸ್ತೆಯಾಗಿ ಹೊರಹೊಮ್ಮಿದೆ ಎಂದು ಸುದ್ದಿ ಹೇಳುತ್ತದೆ.

ಇಲ್ಲಿಯವರೆಗೂ ಎರಡನೇ ಜಾಗದಲ್ಲಿದ್ದ ಎಕ್ಸಾನ್ ಪ್ರಪಂಚದ ಅತಿ ಹೆಚ್ಚು ಬಂಡಿಗಳಿಗೆ ಉಪಯೋಗಿಸಲಾಗುವ ಎಣ್ಣೆಯನ್ನು ತಯಾರು ಮಾಡುವ ಸಂಸ್ತೆ. ಇದನ್ನು ಹುಡುಕುಬಿಣಿಗೆಯಲ್ಲಿ (Search Engine) ಮುಂದಿರುವ ಗೂಗಲ್ ಸಂಸ್ತೆ ಹಿಂದಿಕ್ಕಿದೆ. ಮೊದಲನೇ ಜಾಗದಲ್ಲಿ ಆಪಲ್ ಸಂಸ್ತೆ ಮುಂದುವರೆದಿದೆ. ನಾಲ್ಕನೇ ಜಾಗದಲ್ಲಿ ಮಯ್ಕ್ರೋಸಾಪ್ಟ್ ಸಂಸ್ತೆ ಮುಂದುವರೆದಿದೆ.

ಬ್ಲೂಮ್ಬರ‍್ಗ್ ಸಂಪಾದಿಸಿರುವ ಅಂಕಿ ಅಂಶಗಳ ಪ್ರಕಾರ ಆಪಲ್ ಸಂಸ್ತೆ ಒಟ್ಟು 463.5 ಬಿಲಿಯನ್ ಡಾಲರ್‍ ಮಾರುಕಟ್ಟೆ ಬೆಲೆ ಹೊಂದಿದೆ. ಎರಡನೇ ಜಾಗದಲ್ಲಿ 395.4 ಬಿಲಿಯನ್ ಡಾಲರ್‍ ಮಾರುಕಟ್ಟೆ ಬೆಲೆಯೊಂದಿಗೆ ಗೂಗಲ್ ಎರಡನೇ ಜಾಗದಲ್ಲಿದೆ ಹಾಗೆಯೇ ಮೂರನೇ ಜಾಗದಲ್ಲಿ 395.7 ಬಿಲಿಯನ್ ಡಾಲರ್‍ ಮಾರುಕಟ್ಟೆ ಬೆಲೆಯೊಂದಿಗೆ ಎಕ್ಸಾನ್ ಸಂಸ್ತೆ ಮೂರನೇ ಜಾಗದಲ್ಲಿದೆ (ಇಲ್ಲಿಯ ಅಂಕಿ ಅಂಶದ ಪ್ರಕಾರ ಎಕ್ಸಾನ್ ನ ಮಾರುಕಟ್ಟೆ ಬೆಲೆ ಗೂಗಲ್ ಗಿಂತ ಕೊಂಚ ಮುಂದಿದ್ದರೂ ಮಾರುಕಟ್ಟೆಯ ಗಳಿಕೆಯಲ್ಲಿ ಮತ್ತು ಸಂಸ್ತೆಯ ಬೆಲೆಯ ಲೆಕ್ಕದಲ್ಲಿ ಗೂಗಲ್ ಎರಡನೇ ಜಾಗವನ್ನು ಪಡೆದುಕೊಂಡಿದೆ)

ಮಾರುಕಟ್ಟೆಯಲ್ಲಿ ಹೊಸ ಚಿಗುರು:

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ತುಂಬುತ್ತಿದೆ ಎಂದರೆ ತಪ್ಪಾಗಲಾರದು. ಅರಿಮೆಯನ್ನು ನೆಚ್ಚಿಕೊಂಡಿರುವ ಸಂಸ್ತೆಗಳು (ಎತ್ತುಗೆಗೆ: ಗೂಗಲ್, ಆಪಲ್, ಮಯ್ಕ್ರೋಸಾಪ್ಟ್) ಹಿಂದಿನ ಪ್ರಯ್ಮರಿ ಸೆಕ್ಟರ್‍ ನಲ್ಲಿನ ಸಂಸ್ತೆಗಳನ್ನು (ಎತ್ತುಗೆಗೆ: ಪೆಟ್ರೋಲಿಯಂ, ಜವಳಿ, ಬಂಡಿ ತಯಾರಿಕೆ ಮುಂತಾದವು), ಹಣಕಾಸಿನ ಸಂಸ್ತೆಗಳನ್ನು, ರಿಟೇಲ್ ಸಂಸ್ತೆಗಳನ್ನು ಹಿಂದಿಕ್ಕುತ್ತಿರುವುದನ್ನು ಹಣದರಿಗರು ಒಪ್ಪಿಕೊಳ್ಳುತ್ತಿದ್ದಾರೆ. ಅರಿಮೆ, ಮಾರುಕಟ್ಟೆಯ ಹೊಸ ನೆಚ್ಚಿನ ಹೂಡಿಕೆಯ ತಾಣವಾಗಿದೆ. ಮತ್ತು ಈ ಸಂಸ್ತೆಗಳ ಬೆಳವಣಿಗೆ ಹೂಡಿಕೆದಾರರಿಗೆ ಅರಿಮೆಯ ವಿಶಯದಲ್ಲಿ ಕೆಲಸ ಮಾಡುತ್ತಿರುವ ಸಂಸ್ತೆಗಳಲ್ಲಿ ಹೂಡಿಕೆ ಮಾಡಲು ತೋರಿಸುತ್ತಿರುವ ಒಲವಿಗೆ ಹಿಡಿದ ಕನ್ನಡಿಯಾಗಿದೆ.

ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು:

ಜಾಗತೀಕರಣದ ಹೊಸ ಹೊಸ ಹೊಳಹುಗಳನ್ನು ತಮ್ಮ ಬಂಡವಾಳ ಮಾಡಿಕೊಂಡು ಜನರಿಗೆ ಅದರ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಜನರಿಗೆ ಹತ್ತಿರುವಾಗುತ್ತಿರುವ ಸಂಸ್ತೆಗಳು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬೆಳವಣಿಗೆ ಕಾಣುತ್ತಿರುವುದು ಸ್ಪಶ್ಟವಾಗಿ ಕಾಣಿಸುತ್ತಿದೆ. ಎತ್ತುಗೆಗೆ ಆಪಲ್, ಮಯ್ಕ್ರೋಸಾಪ್ಟ್, ಗೂಗಲ್, ನೋಕಿಯಾ, ಪೇಸ್ಬುಕ್ ಮುಂತಾದ ಸಂಸ್ತೆಗಳೇ ಇದಕ್ಕೆ ಎತ್ತುಗೆ. ಇದರ ಜೊತೆಗೆ ಬಾರತದಲ್ಲೇ ಏರ‍್ಟೆಲ್, ಮಯ್ಕ್ರೋಮ್ಯಾಕ್ಸ್ ಮುಂತಾದ ಸಂಸ್ತೆಗಳು ಬೆಳೆಯುತ್ತಿರುವುದು ಕಾಣುತ್ತದೆ. ಇವೆಲ್ಲವುಗಳು ಏಳಿಗೆ ಕಾಣುತ್ತಿರುವುದಕ್ಕೆ ಕಾರಣ ಜನರಿಗೆ ಬೇಕಾಗಿರುವ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿ ಅವರಿಗೆ ಬಳಸಲು ಸುಲವಾಗಿ ದೊರೆಯುವಂತೆ ಮತ್ತು ಕಡಿಮೆ ಬೆಲೆಗೆ ಒದಗಿಸುತ್ತಿರುವುದೆ ಆಗಿದೆ.

1998 ರಲ್ಲಿ ಶುರುವಾದ ಗೂಗಲ್ ಸಂಸ್ತೆಯು ಹುಡುಕುಬಿಣಿಗೆಯೊಂದಿಗೆ ಶುರುವಾಯಿತು. ಜನರಿಗೆ ತಮಗೆ ಬೇಕಾದ ಮಾಹಿತಿಯನ್ನು ಅರಸಲು ನೆರವು ಮಾಡಿಕೊಡುತ್ತಿದ್ದ ಗೂಗಲ್ ಇಂದು ಅರಸು ಪದಕ್ಕೆ ಪರ‍್ಯಾಯವಾಗಿದೆ ಎಂದರೆ ತಪ್ಪಲ್ಲ. ಆದರೆ ಇದೊಂದನ್ನೇ ನೆಚ್ಚಿಕೊಂಡು ಕೂರದ ಗೂಗಲ್ ಮುಂದೆ ನಡುಬಲೆಯ ಬಯಲರಿಕೆ, ಜಿಮೇಲ್, ಗೂಗಲ್ ಕ್ಯಾಲಂಡರ್‍, ಗೂಗಲ್ ಡ್ರಯ್ವ್, ಅಂಡ್ರ್ಯಾಡ್, ಗೂಗಲ್ ನೆಕ್ಸಸ್ ನಡೆಯುಲಿ (Mobile), ಟ್ಯಾಬ್ಲೆಟ್ ಮುಂತಾದವುಗಳನ್ನು ಜನರಿಗೆ ಬೇಕೆನಿಸುವ ರೀತಿಯಲ್ಲಿ ನೀಡುವುದರ ಮೂಲಕ ಜನರಿಗೆ ಹತ್ತಿರವಾಗಿದೆ. ಇದು ಅದರ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಕಾಣಿಸುತ್ತಿದೆ.

ಅದೇ ರೀತಿ ಆಪಲ್ ಸಹ ತನ್ನ ಮ್ಯಾಕ್ ಬುಕ್ ಸರಣಿ ಎಣ್ಣುಕಗಳು, ಅದಕ್ಕೆ ಹೊಂದಿಕೊಂಡಂತೆ ಇರುವ ಸೇವೆಗಳು (ಅಯ್ ಟ್ಯೂನ್ಸ್ ಮುಂತಾದವು) ಮತ್ತು ಅಯ್ ಪೋನ್ ನಡೆಯುಲಿಗಳ ಸರಣಿಯಿಂದ, ಅಯ್ ಪ್ಯಾಡ್ ಸರಣಿಯಿಂದಾಗಿ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿದೆ. ಅದೇ ರೀತಿ ಮಯ್ಕ್ರೋಸಾಪ್ಟ್ ಜನರಿಗೆ ತಮ್ಮ ಎಣ್ಣುಕದಲ್ಲಿ ಬಳಸುವ ಆಪರೇಟಿಂಗ್ ಸಿಸ್ಟಂ ಅನ್ನು ಸುಲಬವಾಗಿ ಉಪಯೋಗಿಸುವಂತೆ ರೂಪಿಸಿ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿದೆ.

ಇದೇ ರೀತಿ ಹಲವಾರು ಸಂಸ್ತೆಗಳು ಜನರಿಗೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಇಲ್ಲವೇ ತಮಗೆ ಬೇಕಾದವರೊಡನೆ ಬೆರೆಯಲು ಮಿಂಬಲೆಯಲ್ಲಿ/ನಡೆಯುಲಿಯಲ್ಲಿ ನೆರವು ನೀಡುವುದರ ಮೂಲಕ ಹೆಸರುವಾಸಿಯಾಗಿವೆ ಹಾಗೂ ಒಳ್ಳೆಯ ದುಡ್ಡನ್ನು ಗಳಿಸುತ್ತಿವೆ ಮತ್ತು ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ದಿಗ್ಗಜರೆಂದು ಕರೆಸಿಕೊಳ್ಳುತ್ತಿದ್ದ ಸಂಸ್ತೆಗಳನ್ನು ಹಿಂದಿಕ್ಕಿವೆ.

ಎಲ್ಲವೂ ಗೆದ್ದಿಲ್ಲ:

ಹಾಗಂತ ಈ ಮೇಲಿನ ಸಂಸ್ತೆಗಳು ಮತ್ತು ಇನ್ನಿತರ ಸಂಸ್ತೆಗಳು ಮಾಡಿರುವ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಗೆದ್ದಿವೆ ಎಂದು ಹೇಳಲು ಆಗುವುದಿಲ್ಲ. ಆಪಲ್, ಗೂಗಲ್ ಮತ್ತು ಮಯ್ಕ್ರೋಸಾಪ್ಟ್ ನಂತಹ ಸಂಸ್ತೆಗಳ ಹಲವಾರು ತಂತ್ರಾಶಗಳು, ಸೇವೆಗಳು ಸೋತಿವೆ ಅನ್ನುವುದನ್ನು ಸಹ ನೆನಪಿಡಬೇಕು. ಇದಕ್ಕೆ ಕಾರಣ ಜನರಿಗೆ ಇವುಗಳಿಂದ ಉಪಯೋಗ ಸಿಗದಿರುವುದು ಅತವಾ ಬಳಸಲು ಕಶ್ಟವಾಗಿರುವುದು ಅತವಾ ಜನರನ್ನು ತಲುಪುವಲ್ಲಿ ಆ ಸಂಸ್ತೆಗಳೇ ಎಡವಿರುವುದು ಕಾರಣವಾಗಿರಬಹುದು.

ಒಟ್ಟಿನಲ್ಲಿ ಇಂದು ಜಗತ್ತು ಹೊಸ ಚಿಂತನೆ ಹಾಗೂ ಯೋಚನೆಯನ್ನು ತಮ್ಮ ದಿನನಿತ್ಯದ ಬದುಕಿಗೆ ಅಳವಡಿಸಿಕೊಳ್ಳುತ್ತಿದೆ. ಇಂತಹ ಅರಿಮೆಯನ್ನು ಜನರಿಗೆ ಸುಲಬವಾಗಿ ಉಪಯೋಗಿಸಲು ಕಡಿಮೆ ಬೆಲೆಯಲ್ಲಿ, ಅವರದೇ ನುಡಿಯಲ್ಲಿ, ಗುಣಮಟ್ಟದ ಸೇವೆಯ ಮೂಲಕ ಸಂಸ್ತೆಗಳು ಜನರನ್ನು ತಮ್ಮ ಬಳಿಗೆ ಸೆಳೆಯುವುದರೊಂದಿಗೆ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿ ಪರಿಣಮಿಸುತ್ತಿವೆ.

(ಚಿತ್ರಸೆಲೆ: www.lumostechnologies.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಸಾಫ್ಟ್ ವೇರ್ ಇಲ್ಲದೇ ಯಾವೊಂದು ವ್ಯವಸ್ಥೆಯೂ ನಡೆಯುವುದು ಕಷ್ಟ ಎಂಬ ಪರಿಸ್ಥಿತಿಯ ಕಡೆ ಸಾಗುತ್ತಿರುವಾಗ ಭವಿಷ್ಯದಲ್ಲಿ ಇಂತಹ ಸಂಸ್ಥೆಗಳೇ ಮೇಲುಗೈ ಪಡೆಯುವುದು ನಿಸ್ಸಂಶಯ

ಅನಿಸಿಕೆ ಬರೆಯಿರಿ:

Enable Notifications OK No thanks