ಶಿಕ್ಶಣದ ಮಾದ್ಯಮ ಯಾವುದಿರಬೇಕು ?
ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ ಸತ್ಯವನ್ನು ಮಂಡಿಸುತ್ತಿದ್ದೇನೆ.
ವಿಶಯ ಮಂಡಿಸುವುದಕ್ಕಿಂತ ಮುಂಚೆ ನನ್ನನ್ನು ನಾನು ಸ್ಪಶ್ಟಗೊಳಿಸಿಕೊಳ್ಳಲು, ಬಾಶಾನೀತಿಯು ಹೀಗಿರಬೇಕು ಎಂದು ನಂಬುತ್ತೇನೆ:-
1) ಶಿಕ್ಶಣ ಮಾದ್ಯಮವು ಯಾವುದಾಗಬೇಕೆಂಬುದನ್ನು ನಿರ‍್ದರಿಸುವಾಗ, ಆ ಮಾದ್ಯಮಗಳಿಂದಾಗಿ , ಇತರರಿಗೆ ಸಿಗಬಹುದಾದ ಬವಿಶ್ಯವನ್ನು ಬೋರೇ ಗೌಡನ ಮೊಮ್ಮಗನು ತನ್ನ ಆರ‍್ತಿಕ ಹಾಗೂ ಸಾಮಾಜಿಕ ಸ್ತಾನದಿಂದಾಗಿ ಕಳೆದುಕೊಳ್ಳುವಂತಾಗಬಾರದು.
2) ಇಡೀ ದೇಶಕ್ಕೆ ಏಕರೀತಿಯ ಬಾಶಾಮಾದ್ಯಮದಿಂದ ಮಾತ್ರ ಇದು ಸಾದ್ಯ.
3) ಇಶ್ಟ ಇರಲಿ ಇಶ್ಟ ಇಲ್ಲದಿರಲಿ ಇಂಗ್ಲೀಶ್ ನಮಗೆ ಅನಿವಾರ‍್ಯವಾಗಿದೆ.
ನಾನು ಕಂಡಂತೆ ಉಳ್ಳವರಿಗೆ ಒಂದು ಇತರರಿಗೆ ಒಂದು ಎಂಬ ಬಾಶಾಮಾದ್ಯಮ ನೀತಿಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಪಟ್ಟಣ, ಜೊತೆಗೆ ಗ್ರಾಮಾಂತರ ಪ್ರದೇಶಗಳ ಮಕ್ಕಳೂ ಸಹ ಎರಡು ಬಾಗಗೊಂಡಿದ್ದನ್ನು ಸ್ಪಶ್ಟವಾಗಿ ಗುರುತಿಸಬಹುದಾಗಿದೆ. ಉಳ್ಳವರ ಮಕ್ಕಳು ಕಾಸಗಿ ಶಾಲೆಗೆ ಹೋದರೆ ಇತರರು ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ.
ನಮ್ಮ ತಂದೆಯು, ತನ್ನ ಡಜನ್ ಮಕ್ಕಳಿಗೆ ವಿದ್ಯೆಗಾಗಿ ವೆಚ್ಚಮಾಡಿದ್ದಕ್ಕಿಂತ ಹೆಚ್ಚು ಹಣವನ್ನು ಈಗಿನ ಒಂದೋ ಎರಡೋ ಮೊಮ್ಮಕ್ಕಳ ಮೇಲೆ ನಮ್ಮ ಮಕ್ಕಳು ವೆಚ್ಚಮಾಡುತ್ತಿದ್ದಾರೆ. ಮನೆಯ ಪಕ್ಕದಲ್ಲಿರುವ ಸರಕಾರಿ ಶಾಲೆಯನ್ನು ಬಿಟ್ಟು ದೂರ ದೂರದ ಕಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆಳೆತ್ತರದ ಡೊನೇಶನ್ ಸುರಿದಿದ್ದಲ್ಲದೇ, ಮಕ್ಕಳ ಬೂಟು, ಟಯ್, ಯೂನಿಪಾರಂ ಗಳನ್ನು ಹೊರತುಪಡಿಸಿ, ನಗರದಲ್ಲಿ ಆಟೋಗಳಿಗಾಗಿ ಕನಿಶ್ಟ ಐದುನೂರು ರೂಪಾಯಿ ಕರ‍್ಚು ಮಾಡುತ್ತಿದ್ದಾರೆ. ಮೂವತ್ತು ನಲವತ್ತು ಕಿಲೋಮೀಟರ್ ಗಳಿಂದ ಸಿರಸಿಯ ಪ್ರತಿಶ್ಟಿತ ಶಾಲೆಗೆ ಬರುವವರು ಒಂದು ಸಾವಿರಕ್ಕಿಂತ ಹೆಚ್ಚು ವೆಚ್ಚವನ್ನು ತಿಂಗಳೊಂದಕ್ಕೆ ಮಾಡುತ್ತಾರೆ. ಕೆಲವರಂತೂ ತೋಟಗಳ ಕೆಲಸವನ್ನು ಬಿಟ್ಟು ಮಕ್ಕಳನ್ನು ಶಾಲೆಗೆ ಕರೆದು ಕಳುಹಿಸುವುದನ್ನೇ ತಮ್ಮ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಜಂಜಾಟ ಬೇಡ ಎಂದು ಕೆಲವರು ಸಿರಸಿಯಲ್ಲಿ ಬಾಡಿಗೆ ಮನೆ ಮಾಡಿದ್ದರೆ ಇನ್ನು ಕೆಲವರು ಸ್ವಂತ ಮನೆಯನ್ನೇ ಹೊಂದಿದ್ದಾರೆ. ಇಪ್ಪತ್ತು ಮೂವತ್ತು ವರುಶಗಳ ಹಿಂದೆ ಮಹಾನಗರಗಳಲ್ಲಿ ಕಂಡುಬರುತ್ತಿದ್ದ ಸನ್ನಿವೇಶಗಳು ಈಗ ಇಲ್ಲಿ ಸ್ರುಶ್ಟಿಯಾಗುತ್ತಿವೆ. ಹಳ್ಳಿಗಳು ಬರಡಾಗುತ್ತಿವೆ. ಸರಕಾರಿ ಶಾಲೆಯು ತನ್ನಿಂದ ತಾನೆ ಮುಚ್ಚಿಕೊಳ್ಳುತ್ತಿದೆ. (ಸರಕಾರಕ್ಕೆ ಉಳಿತಾಯವನ್ನು ತಂದುಕೊಡುತ್ತಿದೆ.)
ತನ್ನ ಆರ‍್ತಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಕೆಳವರ‍್ಗದ ಮಕ್ಕಳು ಮಾತ್ರ ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ. ಈಗಿನ ಉಳ್ಳವರ ಮಕ್ಕಳ ತಾಯಂದಿರಲ್ಲಿ ಕೆಲವರು ಗ್ರ್ಯಾಜುವೇಟ್ ಗಳಾಗಿದ್ದು ಕನಿಶ್ಟ ಪಿ. ಯು. ಸಿ ಓದಿರದವರು ಒಬ್ಬರೂ ಇಲ್ಲ. ಹೀಗಾಗಿ ಅವರು ತಮ್ಮ ಮಕ್ಕಳಿಗೆ ಸುಲಬವಾಗಿ ಹೊಂ ವರ‍್ಕ್ ಗಳಲ್ಲಿ ಸಹಾಯಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಮನೆಯೂ ಸ್ಕೂಲಾಗಿರುತ್ತದೆ. ಪರಿಕ್ಶೆಯಲ್ಲಿ ಮಾರ‍್ಕುಗಳು ಸುಲಬದಲ್ಲಿ ಇವರ ಪಾಲಾಗುತ್ತದೆ. ಅನಕ್ಶರಸ್ತ ಮಾತೆಯರ ಹಾಗೂ ಕೂಲಿಯವರ ಮಕ್ಕಳು ಮಾತ್ರ ಸರಕಾರಿ ಶಾಲೆಗೆ ಹೋಗುತ್ತಾರೆ. ದಡ್ಡರಾಗಿಯೇ ಉಳಿಯುತ್ತಾರೆ.
ಸಾಮಾಜಿಕವಾಗಿ ಹಿಂದುಳಿದವರಲ್ಲಿ ಕೆಲವರು ಆರ‍್ತಿಕ ಪರಿಸ್ತಿತಿ ಉತ್ತಮ ಇದ್ದು ಅವರ ಮಕ್ಕಳನ್ನು ಕಾಸಗಿ ಶಾಲೆಗೆ ಕಳುಹಿಸುವ ಶಕ್ತಿ ಹೊಂದಿರುವವರಿದ್ದಾರೆ. ಆದರೆ ಮನೆಯಲ್ಲಿ ಮಾತೆಯರು ಹೊಂ ವರ‍್ಕ್ ಮಾಡಿಸಲಾರದೇ ದಡ್ಡರಾಗುವವರಿದ್ದಾರೆ. ಮಕ್ಕಳು ಶಾಲೆಯಲ್ಲಿ ಅವಮಾನಿತರಾಗಬಾರದೆಂದಾದರೆ ಇವರ ಪಾಲಕರು ಕಾಸಗಿ ಟ್ಯೂಶನ್ನಿನ ಏರ‍್ಪಾಡನ್ನೂ ಮಾಡಬೇಕಾಗುತ್ತದೆ. ಎರಡು ತರಹದ ಆರ‍್ತಿಕ ಹೊರೆಯನ್ನು ಹೊರಬೇಕಾಗುತ್ತದೆ ಎಂಬ ಕಾರಣಕ್ಕೆ ಇವರೂ ಕಾಸಗಿ ಶಾಲೆ ಎಂದರೆ ನಮಗಲ್ಲ ಎಂದೇ ಹೇಳುತ್ತಾರೆ.
ಉಳ್ಳವರ ಹಾಗೂ ಇಲ್ಲದವರ ನಡುವೆ ಮದ್ಯಮ ವರ‍್ಗದವರು ಎಂಬ ಒಂದು ವರ‍್ಗವಿದೆ. ಅವರಲ್ಲಿ ಕೆಲವರು ತಮ್ಮ ಹೊಟ್ಟೆ ಬಟ್ಟೆಗಳನ್ನು ಕಟ್ಟಿ ಮಕ್ಕಳನ್ನು ಕಾಸಗಿ ಶಾಲೆಗೆ ಕಳುಹಿಸಿ ಕ್ರುತಾರ‍್ತರಾಗುತ್ತಾರೆ. ಇದರಲ್ಲಿ ಕೆಲವರು ಸಾಮಾಜಿಕ ಮೇಲು ಸ್ತರದಲ್ಲಿದ್ದು ಆರ‍್ತಿಕವಾಗಿ ಕೆಳಸ್ತರದಲ್ಲಿ ಇರುವವರಿದ್ದಾರೆ. ಇವರು ತಮ್ಮ ಸಾಮಾಜಿಕ ಕಾರಣಗಳಿಂದಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಮುಜುಗರ ಪಡುತ್ತಿದ್ದಾರೆ. ಹಾಗೂ ಆರ‍್ತಿಕ ಅಸಾಮರ‍್ತ್ಯದಿಂದಾಗಿ ಕಾಸಗಿ ಶಾಲೆಗಳಿಗೆ ಕಳುಹಿಸುವುದಕ್ಕೆ ಹಿಂಜರಿಯುತ್ತಿದ್ದಾರೆ ಇವರಿಗೆ ಸರಕಾರಿ ಶಾಲೆ ಅನಿವಾರ‍್ಯ. ಆದರೆ ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಸಾದ್ಯವಿಲ್ಲ. ಇವರು ತ್ರಿಶಂಕು ಸ್ತಿತಿಯವರು. ಇವರ ಪರಿಸ್ತಿತಿ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬಂತಾಗಿದೆ. ಅನಿವಾರ‍್ಯತೆಯನ್ನು ಹೊರತು ಪಡಿಸಿ ಇವರ ಆಯ್ಕೆ ಕಾಸಗಿ ಶಾಲೆಯೇ ಆಗಿರುತ್ತದೆ.
ಸಾಯಂಕಾಲ ಶಾಲೆ ಬಿಡುವ ಸಮಯದಲ್ಲಿ ಪ್ರತಿಶ್ಟಿತ ಕಾಸಗಿ ಶಾಲೆಯ ಎದುರಿಗೆ ನಿಂತು ನೋಡಿದರೆ ತಲ್ಲಣವಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಕೆಲವರು ಕುದ್ದಾಗಿ ಬಂದಿರುತ್ತಾರೆ. ಮಕ್ಕಳ ಕಲರವದ ಜೊತೆಗೆ ಎಲ್ಲಾತರಹದ ವಾಹನದ ಸದ್ದು, ಅವುಗಳ ಹಾರನ್ ಗಳ ಸದ್ದು ಗಿಜಿಗಿಜಿಗಳು ಒಂದು ಕ್ಶಣ ಬೆಂಗಳೂರಿನ ಮೆಜಿಸ್ಟಿಕ್ಕನ್ನು ನಮ್ಮೂರಿನಲ್ಲಿಯೂ ಸ್ರುಶ್ಟಿಸಿಬಿಡುತ್ತವೆ.
ಇದು ಸಿರಸಿಯ ನಗರದ ಹಾಗೂ ಗ್ರಾಮಾಂತರ ಪ್ರದೇಶದ ಒಂದು ಕತೆ. ಬೇರೆ ಊರಿನ ಗ್ರಾಮಾಂತರದಲ್ಲಿಯೂ ಇದೇ ಕತೆ ಇದೆ ಎಂಬುದು ನನ್ನ ತಿಳುವಳಿಕೆ.
ಬಾರತದ ಸಂವಿದಾನವು ತನ್ನ ನಾಗರಿಕರಿಗೆ ಕೊಟ್ಟ ಆಶ್ವಾಸನೆ – ಹುಟ್ಟಿನ ಸ್ತಳ, ದರ‍್ಮ, ಲಿಂಗ, ಬಾಶೆಯ ಕಾರಣಗಳಿಂದಾಗಿ ಯಾರನ್ನೂ ಪ್ರತ್ಯೇಕಿಸಬಾರದು ಎಂಬ ಆಶಯವನ್ನು, ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ನ್ಯಾಯವಾದಿಗಳು ಸುಪ್ರೀಮ್ ಕೋರ‍್ಟಿಗೆ ಮನದಟ್ಟು ಮಾಡಿಕೊಡುತ್ತಾರೆ ಎಂದು ನಂಬುತ್ತೇನೆ. ಹಾಗೂ ನ್ಯಾಯಾಲಯವು ಈ ವಾದವನ್ನು ಒಪ್ಪಿಕೊಳ್ಳುತ್ತದೆ ಎಂಬ ನಿರೀಕ್ಶೆಯನ್ನೂ ಇಟ್ಟುಕೊಳ್ಳುತ್ತೇನೆ.
ಇನ್ನೊಂದು ಪ್ರಶ್ನೆಯೂ ನನ್ನನ್ನು ಕಾಡುತ್ತಿದೆ. ಅಕ್ಶರದಿಂದ ಮಾತ್ರ ಅನ್ನ ಸಿಗುತ್ತದೆಯೇ? ಶಾಲಾ ಪುಸ್ತಕ ಓದಿ ಪಾಸಾದವನಿಗೆ ಮಾತ್ರ ಬದುಕುವ ಹಕ್ಕಿದೆಯೇ ? ಓದದವನಿಗೆ ಬದುಕೇ ಇಲ್ಲವೇ?
ಶಿಕ್ಶಣವನ್ನು ಉದ್ದಿಮೆಯಾಗಿ ಮಾಡಿಕೊಂಡ ಉದ್ದಿಮೆ ದಾರರು ಹಾಗೂ ಅವರು ಮಂಡಿಸುವ ವಾದಗಳು, ಅವರ ಬಲವಾದ ನ್ಯಾಯವಾದಿಗಳು, ಜೊತೆಗೆ ಅವರ ಲಾಬಿಗಳಿಗೆ ಮಣಿಯುವ ರಾಜಕಾರಣಿಗಳು ನನ್ನ ಆಶಯವು ಇಡೇರಿಸಲು ತೊಡರುಗಾಲನ್ನು ಹಾಕಬಹುದು ಎಂಬ ಸಣ್ಣ ಬಯವೂ ಇದೆ.
(ಚಿತ್ರ ಸೆಲೆ: The Hindu)
ಇತ್ತೀಚಿನ ಅನಿಸಿಕೆಗಳು