ಸ್ಪೆಶಾಲ್ 458 – ಹೊಚ್ಚ ಹೊಸ ಪೆರಾರಿ ಕಾರು
ಪಾರ‍್ಮುಲಾ-1 ಕಾರುಗಳ ತಯಾರಕ ಇಟಲಿಯ ಹೆಸರುವಾಸಿ ಪೆರಾರಿ ಕೂಟದವರು ಇದೀಗ ಹೊಚ್ಚ ಹೊಸದಾಗಿಸಿದ ಸ್ಪೆಶಾಲ್ 458 (Speciale 458) ಮಾದರಿ ಸಿದ್ದಗೊಳಿಸಿದ್ದಾರೆ. ಈಗಾಗಲೇ ಬಿಡುಗಡೆಗೊಳಿಸಿದ್ದ ಇಟಾಲಿಯಾ 458 (Italia 458) ಮತ್ತು ಸ್ಪಾಯ್ಡರ್ 458 (Spider 458) ಮಾದರಿ ಬಂಡಿಗಳಲ್ಲಿ ಕೆಲ ಚಿಕ್ಕ ಪುಟ್ಟ ಮಾರ‍್ಪಾಡುಗಳನ್ನು ಮಾಡಿ ಹೊಸದಾಗಿ ‘ಸ್ಪೆಶಾಲ್ 458’ ಹೆಸರಿನಲ್ಲಿ ಪೆರಾರಿ ಮಾರುಕಟ್ಟೆಗೆ ತಂದಿದೆ.
ನಾಲ್ಕುವರೆ ಲೀಟರ್ ಅಳತೆಯ ಬಿಣಿಗೆಯು ಮುಂಚೆಗಿಂತಲೂ ಹೆಚ್ಚಿನ ಬಲಪಡೆದುಕೊಂಡಿದೆ. ಈ ಮೊದಲು 562 ಕುದುರೆಬಲದ (horse power) ಕಸು ನೀಡುತ್ತಿದ್ದರೆ ಇದೀಗ 567 ಕುದುರೆಬಲದ ಮೂಲಕ ಇನ್ನಶ್ಟು ಬಲಶಾಲಿಯಾಗಿದೆ. ಈ ಬಿಣಿಗೆಯಲ್ಲಿ ಯಾವುದೇ ಗಾಳಿದೂಡುಕ (turbo charger) ಇಲ್ಲದಿರುವುದು ಇದರ ವಿಶೇಶ. ಜಗತ್ತಿನಲ್ಲಿ ಗಾಳಿದೂಡುಕವಿರದ ಹೆಚ್ಚಿನ ಕುದುರೆಬಲದ ವಿ-ಆಕಾರದ ಬಿಣಿಗೆ ಇದೊಂದೇ ಎಂದು ಕೂಟ ಹೇಳಿಕೊಂಡಿದೆ.
ಪ್ರತಿ ಲೀಟರ್‍ಗೆ ಸುಮಾರು 133 ಹೆಚ್.ಪಿ ಕಸುವು ನೀಡುವ ಬಿಣಿಗೆ ಉಸಿರಾಟಕ್ಕೆ ಯಾವುದೇ ಗಾಳಿದೂಡುಕವನ್ನು ಬಳಸಿಕೊಳ್ಳದ ವಿ-8 ಮಾದರಿ ಇದಾಗಿದ್ದು, ಸೆಳೆಬಲದಲ್ಲಿ (torque)ಯಾವುದೇ ವ್ಯತ್ಯಾಸವಿರದೇ ಮೊದಲಿನ ಮಾದರಿಗಳಂತೆ 398 ಪವಂಡ್ -ಪೀಟ್ (lb-ft) ಆಗಿರಲಿದೆ.
ಸ್ಪೆಶಾಲ್ ಕಾರಿನ ತೂಕದಲ್ಲೂ ಸಾಕಶ್ಟು ಕಡಿತವಾಗಿದ್ದು, ಈ ಮುಂಚಿಗಿಂತ 200 ಪವಂಡ್ ರಶ್ಟು ಕಡಿಮೆಯಾಗಿದೆ. ಮೊದಲಿನ ಇಟಾಲಿಯಾ 458 ತೂಕ 3042 ಪವಂಡ್ ಆಗಿದ್ದರೆ ಹೊಸ ಸ್ಪೆಶಾಲ್ ದು ಬರಿ 2844 ಪವಂಡ್‍ಗಳು ಮಾತ್ರ. ಕಾರಿನ ಕಡಿಮೆ ತೂಕವೇ ಹೆಚ್ಚು ಬಲವುಂಟುಮಾಡಲು ನೆರವಾಗಿದೆ.
ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದು ಜುಮ್ಮನೆ ಸಾಗಲು ಈ ಕಾರಿಗೆ ಬರಿ 3 ಸೆಕೆಂಡ್ಗಳು ಸಾಕಂತೆ. 200 ಕಿ.ಮೀ ವೇಗ ಮುಟ್ಟಲು 9.1 ಸೆಕೆಂಡ್ ತಗುಲಲಿದೆ ಎಂದು ತಿಳಿದು ಬಂದಿದೆ. ಸ್ಪೆಶಾಲ್ ಕಾರಿನ ಹಲ್ಲುಗಾಲಿ 7 ಬಗೆಯ ವೇಗಗಳ ಇಮ್ಮಡಿ ಕ್ಲಚ್ (7-speed dual clutch transmission) ಹೊಂದಿದೆ.
ಪೆರಾರಿ ಇಟಾಲಿಯಾ ಮತ್ತು ಸ್ಪಾಯ್ಡರ್458 ಕಾರಿನಲ್ಲಿ ನೀಡುತ್ತಿದ್ದ 3 ಹೊಗೆಕೊಳವೆಗಳನ್ನು (Exhaust outlet) ತೆಗೆದು ಸ್ಪೆಶಾಲ್ ನಲ್ಲಿ ಎರಡು ಹೊಗೆ ಕೊಳವೆಗಳನ್ನು ನೀಡಲಾಗಿದೆ. ಗಾಳಿಹೊಯ್ದಾಟದಲ್ಲಿ (aerodynamics) ಕೂಡ ಕೊಂಚ ಬದಲಾವಣೆ ಮಾಡಿ ಸ್ಪೆಶಾಲ್ ಬಂಡಿಯನ್ನು ಹೆಚ್ಚು ಗಾಳಿಯ ಅಲೆಗಳ ವಿರುದ್ದ ಗಟ್ಟಿಗೊಳಿಸಲಾಗಿದೆ. ತಮ್ಮ ಬಂಡಿಗಳ ಒರೆಹಚ್ಚುವಿಕೆಗೆ ಪೆರಾರಿಯವರೇ ಕಟ್ಟಿದ ಪಿಯೊರಾನೊ (Fiorano) ಬಯಲಿನಲ್ಲಿ (test track) ಸ್ಪೆಶಾಲ್ ಕಾರಿನ ಮೂಲಕ 1 ನಿಮಿಶ 23 ಸೆಕೆಂಡ್ಗಳಲ್ಲಿ ಒಂದು ಪೂರ‍್ತಿ ಸುತ್ತನ್ನು (lap) ಹಾಕಬಹುದಾಗಿದೆ.
ಪ್ರೆಂಚ್ ನಾಡಿನ ಹೆಸರುವಾಸಿ ಟಾಯರ್ ಮಾರಾಳಿ ಕೂಟ ಮಿಶೆಲಿನ್ (Michelin) ಜೊತೆಗೂಡಿ ಸ್ಪೆಶಾಲ್ ಗೆಂದೇ ವಿಶೇಶ ಟಾಯರ‍್ಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ಗಂಟೆಗೆ 317 ಕಿ.ಮೀ ಓಡುವ ಲಂಬೋರ‍್ಗಿನಿ ಗಲ್ಲರ‍್ಡೋ ಎಲ್.ಪಿ. 570 (Lamborghini Gallardo LP-570) ಕಾರಿಗೆ ಪಯ್ಪೋಟಿವೊಡ್ಡಲು ಸ್ಪೆಶಾಲ್ ಕಾರು ಪ್ರತಿ ಗಂಟೆಗೆ 325 ಕಿ.ಮೀ ಓಡುವ ಮೂಲಕ ಪಣವೊಡ್ಡಿದೆ.
(ತಿಟ್ಟಸೆಲೆ: ಪೆರಾರಿ)
ಉಪಯುಕ್ತ ಮಾಹಿತಿ… 🙂