ಪದಗಳ ಹುರುಳು ಮತ್ತು ತಿಳಿವು

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 30

nudi_inukuಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.

ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!

ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.

ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.

ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.

ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.

ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.

ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.

ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.

ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.

ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.

ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.

ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು) 

<< ನುಡಿಯರಿಮೆಯ ಇಣುಕುನೋಟ – 29

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 05/03/2014

    […] << ನುಡಿಯರಿಮೆಯ ಇಣುಕುನೋಟ – 30 […]

ಅನಿಸಿಕೆ ಬರೆಯಿರಿ: