ಅತ್ತೆ-ಅಳಿಯಂದಿರ ನುಡಿ

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 37

nudi_inukuಆಸ್ಟ್ರೇಲಿಯಾದ ಕೆಲವು ನುಡಿಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಬಾವ ಮೊದಲಾದ ನಂಟರೊಡನೆ ಮಾತನಾಡುವಾಗ ಬಳಸುವ ನುಡಿ ಇತರ ಕಡೆಗಳಲ್ಲಿ ಬಳಸುವ ನುಡಿಗಿಂತ ತೀರ ಬೇರಾಗಿರುತ್ತದೆ. ಎರಡರಲ್ಲೂ ಒಂದೇ ಬಗೆಯ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ; ಆದರೆ, ಪದಗಳು ಮಾತ್ರ ಬೇರೆ ಬೇರಾಗಿರುತ್ತವೆ. ಎತ್ತುಗೆಗಾಗಿ, ದ್ಯಿರ್ಬಲ್ ಎಂಬ ನುಡಿಯಲ್ಲಿ ಹೊರಗೆ ಬಾ ಎನ್ನಲು ‘ಮಯಿನ್’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಯಿಲ್ವುನ್’ ಎನ್ನುತ್ತಾರೆ; ತಿನ್ನು ಎನ್ನುವುದಕ್ಕೆ ‘ದ್ಯಂಗ್ನ್ಯು’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಯಲ್ಮಿನ್ಯು’ ಎನ್ನುತ್ತಾರೆ. ನೀರಿಗೆ ‘ಬನ’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಜುಜಮ’ ಎನ್ನುತ್ತಾರೆ. ಗಂಡಸು ಮತ್ತು ಹೆಂಗಸು ಎಂಬುದಕ್ಕೆ ‘ಯರ’ ಮತ್ತು ‘ಜುಗುಂಬಿಲ್’ ಎನ್ನುತ್ತಾರಾದರೆ ಅತ್ತೆನುಡಿಯಲ್ಲಿ ‘ಬಯಬಯ್’ ಮತ್ತು ‘ಜಯನ್ನಿ’ ಎನ್ನುತ್ತಾರೆ. ಬೇರೆ ಕಡೆಗಳಲ್ಲಿ ಮಾತನಾಡುವಾಗ ಬಳಸುವ ಪದಗಳಲ್ಲಿ ಒಂದನ್ನೂ ದ್ಯಿರ್ಬಲ್ನ ಈ ಅತ್ತೆನುಡಿಯಲ್ಲಿ ಬಳಸಲು ಬರುವುದಿಲ್ಲ.

ಈ ಅತ್ತೆನುಡಿಯನ್ನು ಗಂಡಸರು ತಮ್ಮ ಹೆಂಡತಿಯ ತಾಯಿ, ಮಗನ ಹೆಂಡತಿ, ತಾಯಿಯ ಅಣ್ಣತಮ್ಮಂದಿರ ಇಲ್ಲವೇ ತಂದೆಯ ಅಕ್ಕತಂಗಿಯರ ಮಗಳು – ಇವರೊಂದಿಗೂ, ಹೆಂಗಸರು ತಮ್ಮ ಗಂಡನ ತಂದೆ, ಮಗಳ ಗಂಡ, ಮತ್ತು ತಾಯಿಯ ಅಣ್ಣತಮ್ಮಂದಿರ ಇಲ್ಲವೇ ತಂದೆಯ ಅಕ್ಕತಂಗಿಯರ ಮಗ – ಇವರೊಂದಿಗೂ ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಬೇರೆ ಕೆಲವು ನಂಟರೊಂದಿಗೂ (ಎತ್ತುಗೆಗಾಗಿ, ಗಂಡಸರ ಮಟ್ಟಿಗೆ ತಾಯಿಯ ಅಣ್ಣತಮ್ಮಂದಿರ ಮಗಳೊಂದಿಗೆ, ಮತ್ತು ಹೆಂಗಸರ ಮಟ್ಟಿಗೆ ತಾಯಿಯ ಅಣ್ಣತಮ್ಮಂದಿರ ಮಗನೊಂದಿಗೆ) ಅತ್ತೆನುಡಿಯನ್ನು ಬಳಸಬಹುದಾದರೂ, ಇದರಲ್ಲಿ ಕಡ್ಡಾಯವಿಲ್ಲ. ಉಳಿದವರೊಂದಿಗೆ ಮಾತ್ರ, ಈ ಅತ್ತೆನುಡಿಯನ್ನು ಬಳಸಬಾರದು; ಸಾಮಾನ್ಯ ನುಡಿಯನ್ನೇ ಬಳಸಬೇಕು.

ಈ ಅತ್ತೆನುಡಿಯಲ್ಲಿ ಬಳಕೆಯಾಗುವ ಪದಗಳು ತುಂಬಾ ಕಡಿಮೆ: ಸಾಮಾನ್ಯ ನುಡಿಯಲ್ಲಿ ಬಳಕೆಯಾಗುವ ಪದಗಳ ಕಾಲಂಶದಶ್ಟು ಮಾತ್ರ ಇದರಲ್ಲಿ ಬಳಕೆಯಾಗುತ್ತವೆ. ಹೀಗಿದ್ದರೂ, ಹೇಳಬೇಕೆಂದಿರುವ ಸಂಗತಿಗಳನ್ನೆಲ್ಲ ಅದರ ಮೂಲಕ ಹೇಳಲು ಏನೂ ತೊಂದರೆಯಾಗುವುದಿಲ್ಲ. ಈ ರೀತಿ ಪದಗಳ ಎಣಿಕೆ ಅತ್ತೆನುಡಿಯಲ್ಲಿ ಕಡಿಮೆಯಿರಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯ ನುಡಿಯಲ್ಲಿ ಬರುವ ಮೂರು-ನಾಲ್ಕು ಪದಗಳಿಗೆ ಬದಲಾಗಿ, ಅತ್ತೆನುಡಿಯಲ್ಲಿ ಒಂದೇ ಪದವಿರುತ್ತದೆ. ಎತ್ತುಗೆಗಾಗಿ, ಅತ್ತೆನುಡಿಯಲ್ಲಿ ನೋಡು ಎಂಬ ಹುರುಳಿನ ‘ನ್ಯಮ್ಮಲ್’ ಎಂಬ ಒಂದು ಪದಕ್ಕೆ ಬದಲಾಗಿ, ಸಾಮಾನ್ಯ ನುಡಿಯಲ್ಲಿ ‘ವಬಲ್’ (ಮೇಲೆ ನೋಡು), ‘ನ್ಗಡ್ನ್ಯಯ್’ (ಎವೆಯಿಕ್ಕದೆ ನೋಡು), ‘ಗಿಂದಲ್’ (ರಾತ್ರಿ ಹೊತ್ತು ದೀಪದ ಬೆಳಕಿನಲ್ಲಿ ನೋಡು), ‘ಮಮಿಲ್’ (ಗೊತ್ತಾಗದ ಹಾಗೆ ನೋಡು), ‘ಬುಡಲ್’ (ಒಬ್ಬನ ಕಡೆಗೆ ನೋಡು) ಮೊದಲಾದ ಹಲವು ಪದಗಳಿವೆ.

ಈ ಎರಡು ಬಗೆಯ ಒಳನುಡಿಗಳು ದ್ಯಿರ್ಬಲ್ನಲ್ಲಿ ಹಳಬರಲ್ಲಿ ಮಾತ್ರ ಉಳಿದಿವೆಯಲ್ಲದೆ, ಉಳಿದವರ ಮಾತಿನಲ್ಲಿ ಉಳಿದಿಲ್ಲ. ಈ ಮೂಲನಿವಾಸಿಗಳ ಬೇರೆ ನಡವಳಿಗಳ ಹಾಗೆ, ಈ ನುಡಿನಡವಳಿಯೂ ಅಳಿದು ಹೋಗುತ್ತಿದೆ. ಆಸ್ಟ್ರೇಲಿಯಾದ ಬೇರೆ ಹಲವು ಬುಡಕಟ್ಟಿನ ಜನರ ನುಡಿಗಳಲ್ಲೂ ಇಂತಹ ಅತ್ತೆನುಡಿಗಳು ಬಳಕೆಯಲ್ಲಿವೆ; ಆದರೆ, ಇವು ದ್ಯಿರ್ಬಲ್ನಲ್ಲಿದ್ದಶ್ಟು ಹರವಿನವಲ್ಲ: ಬೆನುಬ ಎಂಬ ನುಡಿಯಲ್ಲಿ ಒಟ್ಟು ಸುಮಾರು ನೂರು ಅತ್ತೆನುಡಿ ಪದಗಳು ಸಾಮಾನ್ಯ ನುಡಿಯ ಪದಗಳಿಗಿಂತ ಬೇರಾಗಿವೆ. ಆದರೆ ಅವನ್ನು ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಸಾಮಾನ್ಯ ನುಡಿಯ ಪದಗಳನ್ನೇ ಅತ್ತೆನುಡಿಯಲ್ಲೂ ಬಳಸಲಾಗುತ್ತದೆ. ಇನ್ನು ಕೆಲವು ನುಡಿಗಳಲ್ಲಿ ಸೊಲ್ಲಿಗೊಂದು ಪದದ ಹಾಗೆ ಅತ್ತೆನುಡಿಯಲ್ಲಿ ಬೇರಾಗಿದ್ದರೆ ಸಾಕು; ಉಳಿದೆಲ್ಲ ಪದಗಳೂ ಸಾಮಾನ್ಯ ನುಡಿಯವೇ ಆಗಿರಬಹುದು.

ಅತ್ತೆನುಡಿಯನ್ನು ಬಳಸಬೇಕಾಗಿರುವ ನಂಟರ ನಡುವೆ ಹತ್ತಿರದ ಸಂಬಂದ ಬೆಳೆಯಬಾರದೆಂಬುದೇ ಈ ರೀತಿ ಅವರ ನಡುವೆ ಸಾಮಾನ್ಯ ನುಡಿಯ ಬಳಕೆಯ ಮೇಲೆ ಕಟ್ಟುಪಾಡು ಮೂಡಿಬರಲು ಕಾರಣವಾಗಿದೆ. ಈ ನಂಟುಗಳಿರುವ ಜನರು ಒಬ್ಬರ ಬಳಿ ಒಬ್ಬರು ಸಾರಬಾರದು, ನೇರವಾಗಿ ನೋಡಬಾರದು ಎಂಬಂತಹ ಬೇರೆ ಕಟ್ಟುಪಾಡುಗಳೂ ಇವೆ. ಬೇರೆ ಕೆಲವು ಬುಡಕಟ್ಟಿನ ಜನರಲ್ಲಿ ಇಂತಹ ನಂಟಿರುವ ಜನರು ಒಬ್ಬರೊಡನೊಬ್ಬರು ಮಾತನಾಡಲೂ ಬಾರದೆಂಬ ಕಟ್ಟುಪಾಡಿದೆ. ಆಸ್ಟ್ರೇಲಿಯಾದ ನುಡಿಗಳಲ್ಲಿ ಮಾತ್ರವಲ್ಲದೆ, ಬೇರೆಯೂ ಹಲವು ನುಡಿಗಳಲ್ಲಿ ಇಂತಹ ನಂಟಿರುವ ಮಂದಿಯನ್ನು ಬೇರ್ಪಡಿಸಲು ಅತ್ತೆನುಡಿಯನ್ನು ಬಳಸಲಾಗುತ್ತದೆ. ಆಸ್ಟೊನೇಶಿಯನ್ ನುಡಿಗಳಲ್ಲಿ, ಅಮೆರಿಕಾದ ಹಲವು ಬುಡಕಟ್ಟಿನ ನುಡಿಗಳಲ್ಲಿ ಮತ್ತು ಆಪ್ರಿಕಾದ ಇತಿಯೋಪಿಯನ್ ಮತ್ತು ಬಂಟು ನುಡಿಗಳಲ್ಲಿ ಇಂತಹ ಬೇರ್ಪಡಿಕೆಗಳನ್ನು ಕಾಣಬಹುದು.

ಸೊಲೊಮನ್ ನಡುಗುಡ್ಡೆಗಳಲ್ಲಿ ಬಳಕೆಯಲ್ಲಿರುವ ಸಾನಕ್ರುಸ್ ಎಂಬ ಆಸ್ಟ್ರೊನೇಶಿಯನ್ ನುಡಿಯಲ್ಲಿ ಇದೇ ಕೆಲಸವನ್ನು ನಡೆಸಲು ಬೇರೊಂದು ಬಗೆಯ ನಡವಳಿ ಬಳಕೆಗೆ ಬಂದಿದೆ: ಹೆಣ್ಣುಕೊಟ್ಟ ಮಾವ-ಅಳಿಯಂದಿರ ನಡುವೆ, ಅತ್ತೆ-ಅಳಿಯಂದಿರ ನಡುವೆ, ಮತ್ತು ಅಕ್ಕತಂಗಿಯರ ಗಂಡಂದಿರ ನಡುವೆ ‘ಕಾಡೊ’ ಎಂದು ಕರೆಯಲಾಗುವ ನಂಟಿದೆ; ಈ ನಂಟಿರುವವರು ಒಬ್ಬರ ಹೆಸರನ್ನು ಇನ್ನೊಬ್ಬರು ಬಳಸಲೇಬಾರದೆಂಬ ಕಟ್ಟಲೆಯಿದೆ. ಇಂತಹ ನಂಟಿರುವವರಲ್ಲಿ ಒಬ್ಬನು ತೀರಿಹೋದಮೇಲೂ ಆತನ ಹೆಸರಿನ ಕುರಿತಾಗಿರುವ ಈ ತಡೆತವನ್ನು ಉಳಿಸಿಕೊಂಡಿರಬೇಕಾಗುತ್ತದೆ. ಅವರಲ್ಲಿ ಯಾರಾದರೂ ಅಪ್ಪಿತಪ್ಪಿ ಆ ಪದವನ್ನು ಇನ್ನೊಬ್ಬರೆದುರು ಬಳಸಿದರಾದರೆ, ಅದನ್ನು ಕೇಳಿದವರಿಗೆ ಆತನು ತಪ್ಪಿತವಾಗಿ ತಿಂಡಿಯನ್ನೋ ಹೊಗೆಸೊಪ್ಪನ್ನೋ ಕೊಡಬೇಕಾಗುತ್ತದೆ.

ಹಕ್ಕಿ, ಮರ, ಗಾಳಿ, ನೀರು ಎಂಬಂತಹ ಹಲವು ದಿನಬಳಕೆಯ ಪದಗಳು ಈ ಜನರ ಹೆಸರುಗಳಲ್ಲಿ ಬಳಕೆಯಾಗುತ್ತಿದ್ದು, ಅಂತಹ ಪದಗಳನ್ನೂ ಇವರು ಬಳಸುವಂತಿಲ್ಲ. ಅವುಗಳ ಬದಲು ಬೇರೆ ನುಡಿಯ ಪದಗಳನ್ನು ಎರವಲು ಪಡೆದು ಬಳಸಬೇಕಾಗುತ್ತದೆ, ಇಲ್ಲವೇ ಆ ಹುರುಳು ದೊರಕುವಂತೆ ಬೇರೆ ನುಡಿತಗಳನ್ನು ಬಳಸಬೇಕಾಗುತ್ತದೆ. ಸಾನಕ್ರುಸ್ ನುಡಿಯಲ್ಲಿ ಬರುವ ಪದಗಳಲ್ಲಿ ನೂರಕ್ಕೆ ಅಯ್ವತ್ತರಶ್ಟು ಪದಗಳೂ ಈ ರೀತಿ ಜನರ ಹೆಸರುಗಳಲ್ಲಿ ಬರುತ್ತಿದ್ದು, ಅವೆಲ್ಲವೂ ಒಬ್ಬರಿಗಲ್ಲದಿದ್ದರೆ ಇನ್ನೊಬ್ಬರಿಗೆ ನುಡಿಯಲಾಗದ ಪದಗಳಾಗಿಬಿಟ್ಟಿರುತ್ತವೆ!

ಆಸ್ಟ್ರೇಲಿಯಾದ ಬುಡಕಟ್ಟಿನ ಜನರಲ್ಲಿ ಬಳಕೆಯಲ್ಲಿರುವ ಇನ್ನೊಂದು ನಡವಳಿಯೂ ಪದಗಳ ಬಳಕೆಯ ಮೇಲೆ ಇಂತಹದೇ ಪರಿಣಾಮವನ್ನು ಬೀರುತ್ತದೆ: ಅವರಲ್ಲಿ ಯಾರಾದರೂ ಸತ್ತರೆ ಆತನ ಹೆಸರನ್ನು ಹೋಲುವ ಪದ ಅವರ ನುಡಿಯಲ್ಲಿ ಯಾವುದಿದ್ದರೂ ಅದನ್ನು ಆಮೇಲೆ ಉಲಿಯುವಂತಿಲ್ಲ; ಹಾಗೆ ಉಲಿದಲ್ಲಿ ಸತ್ತವನ ಉಸಿರು (ಇಲ್ಲವೇ ದೆವ್ವ) ಅವರಿರುವಲ್ಲಿಗೆ ಬಂದೀತೆಂಬ ಹೆದರಿಕೆಯೇ ಇದಕ್ಕೆ ಕಾರಣ. ಸೊಲೊಮನ್ ನಡುಗುಡ್ಡೆಗಳಲ್ಲಿ ಬಳಕೆಯಲ್ಲಿರುವ ಮಲಯ್ತಾನ್ ಎಂಬ ಆಸ್ಟ್ರೋನೇಶಿಯನ್ ನುಡಿಯಲ್ಲಿಯೂ ಇಂತಹದೇ ನಡವಳಿ ಬಳಕೆಯಲ್ಲಿದೆ: ಅವರಲ್ಲಿಯೂ ಸತ್ತವರ ಹೆಸರನ್ನಾಗಲಿ, ಇಲ್ಲವೇ ಅದನ್ನು ಹೋಲುವ ಬೇರೆ ಪದಗಳನ್ನಾಗಲಿ ಅವನ ಹತ್ತಿರದ ನಂಟರು ಉಲಿಯಬಾರದೆಂಬ ಕಟ್ಟಲೆಯಿದೆ; ಉಳಿದವರೂ ಈ ಜನರೆದುರು ಆ ಪದಗಳನ್ನು ಉಲಿಯಬಾರದು. ಸತ್ತವನು ತೊನ್ನು ಇಲ್ಲವೇ ಟಿಬಿಯಿಂದ ಬಳಲುತ್ತಿದ್ದರೆ ಈ ಕಟ್ಟಲೆ ಆತನ ಊರಿನವರೆಲ್ಲರನ್ನೂ ತಾಗುತ್ತದೆ.

ಇಂತಹ ಕಟ್ಟಲೆಗಳು ಸತ್ತವರ ಕುರಿತಾಗಿ ಜನರಲ್ಲಿರುವ ಹೆದರಿಕೆಯಿಂದ ಬಳಕೆಗೆ ಬಂದಿವೆಯಾದರೆ, ಅವರ ಕುರಿತಾಗಿ ಜನರಲ್ಲಿರುವ ಮದಿಪಿನಿಂದ ಇಲ್ಲವೇ ಒಲವಿನಿಂದ ಬೇರೆಯೇ ಬಗೆಯ ಕೆಲವು ಕಟ್ಟಲೆಗಳು ಹಲವು ಸಮಾಜಗಳಲ್ಲಿ ಬಳಕೆಗೆ ಬಂದಿರುವುದನ್ನು ಕಾಣಬಹುದು. ಸತ್ತವರ ಹೆಸರನ್ನು ಅವರ ಮೊಮ್ಮಗನಿಗೆ ಇಲ್ಲವೇ ಮೊಮ್ಮಗಳಿಗೆ ಇರಿಸುವುದು, ಬೀದಿ, ಆಟದ ಬಯಲು, ಕಟ್ಟಡ ಮೊದಲಾದವುಗಳಿಗೆ ಇರಿಸುವುದು ಎಂಬಂತಹವೆಲ್ಲ ಈ ರೀತಿ ಅವರ ಮೇಲಿರುವ ಮದಿಪನ್ನು ಇಲ್ಲವೇ ಒಲವನ್ನು ತೋರಿಸುವುದಕ್ಕಾಗಿ ಬಳಕೆಗೆ ತಂದಿರುವ ಕಟ್ಟಲೆಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<<ನುಡಿಯರಿಮೆಯ ಇಣುಕುನೋಟ – 36

(ಇದು ‘ನುಡಿಯರಿಮೆಯ ಇಣುಕುನೋಟ’ ಸರಣಿಯ ಕೊನೆಯ ಬರಹ. ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡಲು ನಾವು ಏನು ಮಾಡಬೇಕು ಎಂಬುದನ್ನು ತಿಳಿಸುವುದೇ ಈ ಸರಣಿ ಬರಹದ ಮುಕ್ಯ ಗುರಿಯಾಗಿತ್ತು. ಎಲ್ಲರ ಕನ್ನಡದ ಈ ಬರಹಗಳ ಗೊಂಚಲು ಈಗ ಕನ್ನಡ ನುಡಿಯರಿಮೆಯ ಇಣುಕುನೋಟ ಎಂಬ ಹೆಸರಿನ ಹೊತ್ತಗೆಯಾಗಿ ಹೊರಬಂದಿದ್ದು, ಕರ‍್ನಾಟಕದ ಮುಂಚೂಣಿ ಹೊತ್ತಗೆ ಅಂಗಡಿಗಳಲ್ಲಿ ದೊರೆಯುತ್ತದೆ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: