ಹಾಯ್ಡ್ರೋಜನ್ ‘ಹಾಯ್-ಪಾಯ್ವ್’

– ಜಯತೀರ‍್ತ ನಾಡಗವ್ಡ.

FCEV

ಮುಗಿದು ಹೋಗದ ಉರುವಲುಗಳಿಗೆ ಇತ್ತಿಚೀನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ತಾನೋಡದ ಉದ್ಯಮಗಳಲ್ಲಿ ಡೀಸಲ್, ಪೆಟ್ರೋಲ್ ಗಳಿಗೆ ಬದಲಾಗಿ ಬ್ಯಾಟರಿ ಹಾಗೂ ಉರುವಲು-ಗೂಡು (fuel cell) ಕಾರುಗಳ ಬಳಕೆಗೆ ಹುರುಪು ತುಂಬಲಾಗುತ್ತಿದೆ. ಇದರ ಮುಂದಿನ ಹೆಜ್ಜೆ ಎಂಬಂತೆ ಯೂರೋಪ್ ಕಂಡದಲ್ಲಿ ಜಗತ್ತಿನ ವಿವಿದ ತಾನೋಡ ತಯಾರಕರು ಸೇರಿ ಹೊಸ ಹಮ್ಮುಗೆಯೊಂದನ್ನು ಹಾಕಿಕೊಂಡಿದ್ದಾರೆ. ಇದೇ ಹಾಯ್-ಪಾಯ್ವ್ (HyFive) ಹಮ್ಮುಗೆ.

ಇದರ ಮುಕ್ಯ ಉದ್ದೇಶ ಹಾಯ್ಡ್ರೋಜನ್ ಉರುವಲು ಗೂಡಿನ ಕಾರುಗಳ ಬಳಕೆ ಹೆಚ್ಚಿಸಲು ಬೇಕಾದ ಎಲ್ಲ ಸವ್ಲಬ್ಯ ಒದಗಿಸುವುದು. ಉರುವಲು ಗೂಡಿನ ಕಾರುಗಳಿಗೆ ಬೇಕಾಗುವ ಹಾಯ್ಡ್ರೋಜನ್ ತುಂಬಿಸುವ ಕೇಂದ್ರಗಳು ಇನ್ಮುಂದೆ ಯೂರೋಪ್ ಕಂಡದ ಪ್ರಮುಕ ನಾಡುಗಳಲ್ಲಿ ಕಾಣಿಸಿಕೊಳ್ಳಲಿವೆ. ಅಶ್ಟೇ ಅಲ್ಲದೇ ಉರುವಲು ಗೂಡಿನ ಕಾರುಗಳ ಅಳವುತನ ಹೆಚ್ಚಿಸುವುದು, ಇದಕ್ಕೆ ಬೇಕಾಗುವ ಅರಕೆಯ ಕೆಲಸವನ್ನು ಬಿರುಸುಗೊಳಿಸುವುದು ಮುಂತಾದ ಗುರಿಗಳನ್ನು ಇಟ್ಟುಕೊಂಡು ಹಾಯ್-ಪಾಯ್ವ್ ಹಮ್ಮುಗೆ ಹೊರಹೊಮ್ಮಿದೆ.

ಅಯ್ವತ್ತೇರಡು(52) ಮಿಲಿಯ ಅಮೇರಿಕಾ ಡಾಲರ್‍ (ಸುಮಾರು 314 ಕೋಟಿ ರುಪಾಯಿಗಳು) ವೆಚ್ಚದ ಈ ದೊಡ್ಡ ಹಮ್ಮುಗೆಗೆ ಇದೀಗ ಜಪಾನ್ ಮೂಲದ ಹೋಂಡಾ ಕೂಟ ಕೂಡ ಕಯ್ ಜೋಡಿಸುವ ಮೂಲಕ ಅಯ್ದನೇಯ ಪಾಲುದಾರನಾಗಿ ಸೇರಿಕೊಂಡಿದೆ. ಬಿ.ಎಮ್.ಡಬ್ಲ್ಯೂ, ಡಾಯ್ಮಲರ್‍, ಟೋಯೋಟಾ, ಹ್ಯುಂಡಾಯ್ ಇದರಲ್ಲಿರುವ ಇತರೆ ನಾಲ್ಕು ಪಾಲುದಾರರು. ಇವರೆಲ್ಲ ಸೇರಿ ಇದೀಗ ಯೂರೋಪ್‍ನ ವಿವಿದೆಡೆಗಳಲ್ಲಿ ಹಾಯ್ಡ್ರೋಜನ್ ತುಂಬುವ ಕೇಂದ್ರಗಳನ್ನು ತೆರೆಯಲಿವೆ.

ಇದಕ್ಕೆಂದೇ 110 ಉರುವಲು ಗೂಡಿನ ಬಂಡಿಗಳನ್ನು ಅಣಿಗೊಳಿಸಿ ಯೂರೋಪ್‍ನ ಹಲವೆಡೆ ಓಡಾಡಿಸುವ ಜವಾಬ್ದಾರಿಯನ್ನು ಈ ಕೂಟಗಳಿಗೆ ಒಪ್ಪಿಸಲಾಗಿದೆ. ಬ್ರಿಟನ್‍ನ ನೆಲೆವೀಡಾದ ಲಂಡನ್ (London), ಜರ‍್ಮನಿಯ ಮ್ಯುನಿಕ್ (Munich) ಮತ್ತು ಸ್ಟುಟ್ಗಾರ‍್ಟ್ (Stuttgart), ಆಸ್ಟ್ರಿಯಾದ ಇನ್ಸಬ್ರುಕ್ (Innsbruck) ಮತ್ತು ಡೆನ್ಮಾರ‍್ಕ್ ದೇಶದ ಕೊಪನ್ ಹೆಗನ್ (Copenhagen) ಮುಂತಾದ ಊರುಗಳಲ್ಲಿ ಹಾಯ್ಡ್ರ‍ೋಜನ್ ತುಂಬುವ ಕೇಂದ್ರಗಳು ನೆಲೆಗೊಳ್ಳಲಿವೆ.

hydrogen station

ಇದಕ್ಕೆ ತಕ್ಕಂತ ಎಲ್ಲ ರೀತಿಯ ಸವ್ಕರ‍್ಯಗಳನ್ನು ಮೇಲೆ ತಿಳಿಸಿದ 5 ಬಿಣಿಗೆ ಕೂಟಗಳು ಒದಗಿಸಲಿವೆ. ಹಾಯ್ಡ್ರೋಜನ್ ಕೊಳವೆಗಳಿಂದ ಸಾಗಣಿಕೆ, ಯೂರೋಪಿನೆಲ್ಲೆಡೆ ಇಂತ ಹಾಯ್ಡ್ರೋಜನ್ ತುಂಬುವ ಕೇಂದ್ರಗಳ ಬಲೆ ಹೆಣೆಯುವುದು, ಇದಕ್ಕೆ ತಗಲುವ ಕಚ್ಚಾ ವಸ್ತುಗಳು ಮತ್ತು ಇತರೆ ಏರ‍್ಪಾಟುಗಳಿಗೆ ಈ ಅಯ್ದು ಕೂಟಗಳ ಕೆಲಸಿಗರು ಒಟ್ಟಾಗಿ ದುಡಿಯಲಿದ್ದಾರೆ. ತಮ್ಮ ಕೂಟದಲ್ಲಿ ಹೆಚ್ಚು ತಿಳುವಳಿಕೆ ಹೊಂದಿರುವ ಅರಕೆಗಾರರನ್ನು ಈ ಮುಕ್ಯವಾದ ಹಮ್ಮುಗೆಯ ಕೆಲಸಕ್ಕೆ ಅಣಿಗೊಳಿಸಲಾಗಿದೆ. ವಿವಿದ ಕೂಟಗಳ ಪರಸ್ಪರ ಅರಿಮೆ ಮತ್ತು ಚಳಕಗಳನ್ನು ಹಂಚಿಕೊಂಡು ಕೆಲಸ ಮಾಡಲು ಇದು ದಾರಿಯಾಗಿಸಿದೆ.

ಹೋಂಡಾ ಕೂಟ ಇದರಲ್ಲಿ ಪಾಲ್ಗೊಳ್ಳುವುದರೊಂದಿಗೆ ತಾನೋಡಗಳ ಉದ್ಯಮದಲ್ಲಿ ಬಾರಿ ಸುದ್ದಿಯಾಗಿದೆ. ಯೂರೋಪ್ ಕಂಡದಲ್ಲಿ 2016 ರಲ್ಲಿ ಮುಂದಿನ ತಳಿಯ ಹೊಸ ಉರುವಲು ಗೂಡಿನ ಕಾರನ್ನು (next gen Fuel cell car) ಹೋಂಡಾ ಕೂಟ ಹೊರತರುವುದಾಗಿ ಈ ಮೊದಲು ತಿಳಿಸಿತ್ತು. ಇದರಿಂದ ಹೋಂಡಾ ಹಾಯ್-ಪಾಯ್ವ್ ಹಮ್ಮುಗೆಯಲ್ಲಿ ಜೊತೆಗಾರನಾಗಿದ್ದು, ಹಮ್ಮುಗೆಯ ಮುಂದಾಳ್ತನ ವಹಿಸಿರುವ ಪ್ಯುಲ್ ಸೆಲ್ಸ್ ಅಂಡ್ ಹಾಯ್ಡ್ರೋಜನ್ ಜಾಯಿಂಟ್ ಅಂಡರ್‍ ಟೆಕಿಂಗ್ (FCH JU-Fuel Cell And Hydrogen Joint Undertaking) ಸಂಸ್ತೆಗೆ ಕುಶಿಕೊಟ್ಟಿದೆ. ಈ ಸಂಸ್ತೆ ಹೇಳುವಂತೆ ಯೂರೋಪ್ ನಲ್ಲಿ ಇಶ್ಟೊಂದು ದೊಡ್ಡ ಪ್ರಮಾಣದ ಹಮ್ಮುಗೆ ಇದೇ ಮೊದಲು.

ಉರುವಲು ಗೂಡಿನ ಕಾರುಗಳು ಹಿಂದೆಂದಿಗಿಂತಲೂ ಹೆಚ್ಚು ಅಳವುತನ ಹೊಂದಿ 640 ಕಿ.ಮೀ.ವರೆಗೂ ಹಾಯ್ಡ್ರೋಜನ್ ತುಂಬಿಸಿಕೊಳ್ಳದೆ ಸಾಗುವಂತೆ ಮಾಡುವುದು ಹಾಯ್-ಪಾಯ್ವ್ ಹಮ್ಮುಗೆಯ ಮತ್ತೊಂದು ಮುಕ್ಯ ಗುರಿ. ನಂಜಿರದ ಗಾಳಿ, ಹಸಿರು ವಾತಾವರಣದತ್ತ ಹೆಜ್ಜೆ ಇಟ್ಟಿರುವ ಹಾಯ್-ಪಾಯ್ವ್ ಹಮ್ಮುಗೆ ಗೆಲುವು ಕಂಡು ಬೇರೆ ನಾಡುಗಳಿಗೂ ಬೇಗ ಕಾಲಿಡಲಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: