ಹೊನಲು ಹಬ್ಬ: ವರುಶ ತುಂಬಿದ ಸಡಗರ

ಹೊನಲು ತಂಡ.

Honalu4

ಕನ್ನಡ ಬರಹದಲ್ಲಿ ಬೇಡದ ಬರಿಗೆಗಳನ್ನು ಬಿಟ್ಟು, ಹೆಚ್ಚಾಗಿ ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸುವ ಮೂಲಕ, ಅರಿಮೆ ಮತ್ತು ಚಳಕದ ಬರಹಗಳಿಗೆ ಬೇಕಾಗುವ ಪದಗಳಿಗೆ ಕನ್ನಡದ್ದೇ ಪದಗಳನ್ನು ಹುಟ್ಟುಹಾಕುವ ಮೂಲಕ, ಆಡುನುಡಿ ಹಾಗೂ ಬರಹಕ್ಕೆ ಇರುವ ಅಂತರವನ್ನು ಕಡಿಮೆಗೊಳಿಸುವ ಮೂಲಕ, ಬರಹಗಳನ್ನು ಹೆಚ್ಚು ಜನರ ಹತ್ತಿರಕ್ಕೆ ಕೊಂಡೊಯ್ಯಲು ಸಾದ್ಯ ಅನ್ನುವ ನಂಬಿಕೆ ಇಟ್ಟುಕೊಂಡು ಒಂದು ವರುಶದ ಹಿಂದೆ ಹೊನಲು ಮಿಂಬಾಗಿಲನ್ನು (https://honalu.net) ಶುರುಮಾಡಲಾಗಿತ್ತು. ಕಳೆದ ಒಂದು ವರುಶದಲ್ಲಿ ಸುಮಾರು 600 ಅಂಕಣಗಳು ಹೊನಲಿನಲ್ಲಿ ಮೂಡಿಬಂದಿವೆ.

ಹೊನಲು ಮಿಂಬಾಗಿಲಿಗೆ ಒಂದು ವರುಶ ತುಂಬಿದ ಸವಿ ನೆನಪಿನಲ್ಲಿ ಮೇ 3 ರಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ವರ‍್ಲ್ಡ್ ಕಲ್ಚರ್ -ಇಲ್ಲಿ ಕಾರ‍್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ‍್ಯಕ್ರಮದಲ್ಲಿ ಅತಿತಿಗಳಾಗಿ ಕುವೆಂಪು ಬಾಶಾ ಬಾರತಿ ಪ್ರಾದಿಕಾರದ ಮುಂದಾಳಾದ ಡಾ. ಕೆ.ವಿ. ನಾರಾಯಣ, ಕನ್ನಡದ ಹಿರಿಯ ಸಂಶೋದಕರಾದ ಡಾ. ಎಸ್. ಶೆಟ್ಟರ್ ಹಾಗೂ ಹಿರಿಯ ಪತ್ರಕರ‍್ತರಾದ ಶ್ರೀ ಎನ್. ಎ. ಎಂ ಇಸ್ಮಾಯಿಲ್ ಅವರು ಪಾಲ್ಗೊಂಡಿದ್ದರು. ಅತಿತಿಗಳು ಸೊಡರು ಬೆಳಗಿಸುವುದರೊಂದಿಗೆ ಕಾರ‍್ಯಕ್ರಮವನ್ನು ಶುರು ಮಾಡಲಾಯಿತು. ಹಿಮ್ಮೇಳದಲ್ಲಿ ’ಹಚ್ಚೇವು ಕನ್ನಡದ ದೀಪ’ ಹಾಡನ್ನು ಮೊಳಗಿಸಲಾಯಿತು. ಸಂದೀಪ್ ಅವರು ಬಂದವರನ್ನು ಬರಮಾಡಿಕೊಳ್ಳುತ್ತಾ, ಹೊನಲು ಶುರು ಮಾಡಿದ್ದು ಮತ್ತು ಹೊನಲು ಮಿಂಬಾಗಿಲು ನಡೆದ ಬಂದ ದಾರಿಯನ್ನು ವಿವರಿಸಿದರು. ಅದು ಹೇಗೆ ಬರಹಗಾರರನ್ನು ಮತ್ತು ಓದುಗರನ್ನು ಸೆಳೆದಿದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.

ಹೊನಲು ಮಿಂಬಾಗಿಲ ಮುನ್ನಡೆಸುಗರಾದ ಶ್ರೀ ಕಿರಣ್ ಬಾಟ್ನಿ ಅವರು ಮೊದಲ ನುಡಿಗಳನ್ನಾಡುತ್ತಾ.  “ಹೊನಲು ತಾಣವನ್ನು ಮಿಂಬಾಗಿಲು ಎಂದು ಕರೆಯುವುದಕ್ಕೆ ಕಾರಣ ’ಹೊನಲು’ ಎಂಬ ಬಾಗಿಲು ತೆರೆದರೆ ಎಲ್ಲ ವಿಶಯಗಳ ಬಗೆಗಿನ ಬರಹಗಳು ಎಣ್ಣುಕದ ತೆರೆಯಲ್ಲಿ ಮೂಡುತ್ತವೆ. ಎಲ್ಲರಕನ್ನಡದ ಬಗ್ಗೆ ಮಾತಾಡುತ್ತಾ ಕನ್ನಡಿಗರ ಓದಿನಲ್ಲಿರದ ಬರಿಗೆಗಳನ್ನು ಬರಹದಲ್ಲಿ ಕಯ್ಬಿಟ್ಟು ಹೊನಲಿನಲ್ಲಿ ಬರಹಗಳನ್ನು ಮಾಡಲಾಗುತ್ತಿದೆ. ಇದಲ್ಲದೆ ಕನ್ನಡದ್ದೇ ಆದ ಸುಳುವಾದ ಪದಗಳನ್ನು ಕಟ್ಟುತ್ತಿರುವುದರಿಂದ ಬೇರೆ ಬೇರೆ ವಲಯಗಳಲ್ಲಿ ಬರಹಗಳನ್ನು ಮಾಡಲಾಗುತ್ತಿದೆ. ಕನ್ನಡದಲ್ಲಿ ಅರಿಮೆ ಮತ್ತು ಚಳಕದ ಬರಹಗಳು ತುಂಬಾ ಕಡಿಮೆ ಇರುವುದನ್ನು ಮನಗಂಡು ಹೊನಲಿನಲ್ಲಿ ಅರಿಮೆಯ ಬರಹಗಳಿಗೆ ಹೆಚ್ಚು ಒತ್ತನ್ನು ಕೊಡಲಾಗಿದೆ. ಇದಲ್ಲದೆ ’ಪದ ಪದ ಕನ್ನಡ ಪದಾನೇ’ ಎಂಬ ಪೇಸ್ ಬುಕ್ ಗುಂಪಿನಲ್ಲಿ ಹೆಚ್ಚು ಹೆಚ್ಚು ಹೊಸದಾದ ಕನ್ನಡದ್ದೇ ಆದ ಪದಗಳನ್ನು ಕಟ್ಟಲಾಗುತ್ತಿದೆ. ಬೇರೆ ಬೇರೆ ದೇಶಗಳು ಅವರವರ ನುಡಿಯಲ್ಲಿ ಅರಿಮೆಯನ್ನು ಕಟ್ಟಿಕೊಂಡಿರುವುದರಿಂದ ಕನ್ನಡಿಗರಿಗೂ ಕನ್ನಡದಲ್ಲೇ ಅರಿಮೆಯನ್ನು ಕಟ್ಟಿಕೊಳ್ಳಬಹುದು. ಕನ್ನಡದಲ್ಲಿ ಅರಿಮೆಯು ಸಾದ್ಯವಿಲ್ಲ ಎಂಬ ಚಾಲನೆಯಲ್ಲಿರುವ ’ತಿಳಿವಿ’ಗೆ ಸವಾಲೊಡ್ಡಿ ’ಕನ್ನಡದ ಬರಹದಲ್ಲಿ ಅರಿಮೆ ಸಾದ್ಯವಿದೆ’ ಎಂಬ ’ಎದುರುತಿಳಿವ’ನ್ನು ಹೊನಲಿನ ಮೂಲಕ ಮುಂದಿಡಲಾಗುತ್ತಿದೆ” ಎಂದು ಕಿರಣ್ ಹೇಳಿದರು. ’ಕನ್ನಡದ ನುಡಿಹಮ್ಮುಗೆ’(Language Planning)ಯಲ್ಲಿ ಹೊನಲು ತುಂಬ ಮುಕ್ಯವಾದ ಪಾತ್ರವನ್ನು ವಹಿಸಿಕೊಂಡಿದೆ ಎಂದು ಹೇಳಿ ಕಿರಣ್ ತಮ್ಮ ಮಾತು ಮುಗಿಸಿದರು.

honalu2

ಪ್ರಶಾಂತ್ ಅವರು ಅರಿಮೆಯ ನಡೆಸುಗರಾಗಿ ತಮ್ಮ ಮಾತುಗಳನ್ನಾಡುತ್ತಾ, ಹೊನಲಿನಲ್ಲಿ ಅರಿಮೆ ಬರಹಗಳ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ವಿವರ ಮುಂದಿಟ್ಟರು. ಅವರು ತಮ್ಮ ಜಪಾನಿನ ತಿರುಗಾಟದಲ್ಲಿ ಕಣ್ಣಾರೆ ಕಂಡುಕೊಂಡ ಕೆಲವು ವಿಶಯಗಳನ್ನು ಮುಂದಿಡುತ್ತಾ ಜಪಾನಿಗರು ಅರಿಮೆಯನ್ನು ಹೇಗೆ ನೆರೆಯಾಗಿ ಜಪಾನೀಸ್ ನುಡಿಯಲ್ಲೇ ಕಟ್ಟುಕೊಂಡಿದ್ದಾರೆಂದು, ಹೀಗೆ ಬೇರೆ ಬೇರೆ ದೇಶಗಳು ಅರಿಮೆಯನ್ನು ತಮ್ಮ ತಮ್ಮ ನುಡಿಗಳಲ್ಲಿ ಕಟ್ಟುಕೊಂಡಿರುವುದರ ಬಗ್ಗೆ ತಿಳಿಸಿದರು. ಇದಲ್ಲದೆ ತಾವೇ ಕಟ್ಟಿರುವ ಬಿಣಿಗೆಯರಿಮೆಯ ಕೆಲವು ಸುಳುವಾದ ಪದಗಳನ್ನು ನೆರೆದಿದ್ದವರಿಗೆ ತೋರಿಸಿಕೊಟ್ಟರು. ಇದಲ್ಲದೇ, ತಮ್ಮ ಬದುಕಿನಲ್ಲೇ ಹಿಂದೆಂದೂ ಬರಹ ಮಾಡದವರ ಬಗ್ಗೆ ಹೇಳುತ್ತಾ ಯಶವನ್ತ ಬಾಣಸವಾಡಿಯವರನ್ನು ಎತ್ತುಗೆಯಾಗಿ ನೀಡಿ ಈಗ ಅವರು ಹೊನಲಿನ ಮುಂಚೂಣಿಯ ಬರಹಗಾರರಾಗಿ ಬದಲಾಗಿರುವುದನ್ನು ತಿಳಿಸಿದರು.

ಬರತ್ ಅವರು ನಲ್ಬರಹದ ನಡೆಸುಗರಾಗಿ ಮಾತನಾಡುತ್ತಾ, ಬರಹಗಾರರು ಮತ್ತು ಓದುಗರು ಹೆಚ್ಚಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರಕನ್ನಡ ಒಂದು ಜನಪರವಾದ ವೇದಿಕೆಯನ್ನು ಒದಗಿಸಿದೆ ಎಂದು ಹೇಳುತ್ತಾ ’ಎಲ್ಲರಕನ್ನಡ’ವನ್ನು ಕನ್ನಡದ ಕೂಡಣ ಒಂದು ಪ್ರಯೋಗವಾಗಿ ನೋಡಬೇಕೆಂದರು.
ಇಸ್ಮಾಯಿಲ್ ಅವರು ಮಾತನಾಡಿ, ಹೊನಲು ಹೊಸ ತೆರನಾದ ಬರಹಗಳನ್ನು ಕೊಡುತ್ತಾ ದೊಡ್ಡ ಮಟ್ಟದ ಗೆಲುವು ಪಡೆದಿದೆ ಎಂದು ಹೇಳಿದರು. ಹೊನಲಿನಲ್ಲಿ ಹೊಸ ಚಿಂತನೆಗಳನ್ನು ಹೇಳಲು ತನ್ನದೇ ಆದ ದಾರಿ ಇದೆ. ಅದಕ್ಕೆ ತನ್ನದೇ ಆದ ನುಡಿಯಿದೆ. ಕನ್ನಡದಲ್ಲಿ ಪದಕಟ್ಟಣೆಗಳು ಆಗುವಲ್ಲಿ ಅನುಬವದ ಪಾತ್ರ ಮುಕ್ಯವಾದುದು. ಅರಿಮೆಯಲ್ಲಿ ಎರಡು ತೆರೆನಾದ ದಾರಿಗಳಿವೆ – 1. ಪಾರಿಬಾಶಿಕ ಪದಕಟ್ಟಣೆ 2 ಅನುಬವದ ಮೂಲಕ ಅರಿಮೆಯನ್ನು ದಾಟಿಸುವುದು. ಹೊನಲು, ಒಂದನೇ ದಾರಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದೇ ತರ ’ಅಡಿಕೆ ಪತ್ರಿಕೆ’ಯಲ್ಲಿ ಹಲವು ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸಲಾಗುತ್ತಿದೆ ಎಂದರು. ಬೇರೆ ಬೇರೆ ಅಯ್ತಿಹಾಸಿಕ ಕಾರಣಗಳಿಂದ ಅರಿಮೆಯ ವಿಶಯಗಳ ಬಗ್ಗೆ ಹೆಚ್ಚು ಬರಹ ಬರಲಿಲ್ಲ, ಅಂತಹ ಬರಹಗಳಿಗೆ ಬೇಕಾದ ಎಲ್ಲ ಪದಗಳನ್ನು ಬರೀ ನುಡಿಯರಿಗರೇ ಕಟ್ಟಲಾಗುವುದಿಲ್ಲ, ತಮ್ಮ ತಮ್ಮ ಪರಿಣಿತಿ ವಲಯಗಳಲ್ಲಿ ಕೆಲಸ ಮಾಡುತ್ತಿರುವವರೇ ಕನ್ನಡದಲ್ಲಿ ಪದಗಳನ್ನು ಕಟ್ಟಬೇಕಾಗಿದೆ ಎಂದರು. ಹೊನಲು ಬಗೆಯ ಪ್ರಯೋಗಗಳಾದಾಗ ಕನ್ನಡ ನುಡಿಸಮುದಾಯ ಒಂದು ಮದ್ಯಮ ಮಾರ‍್ಗವನ್ನು ಕಂಡುಕೊಳ್ಳುತ್ತದೆ ಎಂಬ ಆಶಾವಾದವನ್ನು ಅವರು ಮುಂದಿಟ್ಟರು.

ಡಾ | ಕೆ. ವಿ. ನಾರಾಯಣ ಅವರು ಹೊನಲು ಮಿಂಬಾಗಿಲಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ, ಹೆಚ್ಚು ಹೆಚ್ಚು ಓದುಗರನ್ನು ತಲುಪಿಸುವ ಕಡೆ ಹೊನಲು ದಿಟ್ಟ ಹೆಜ್ಜೆ ಇಟ್ಟಿದೆ. ಸಾಮಾನ್ಯ ಮಂದಿಗೂ ಹತ್ತಿರವಾದ ವಿಶಯಗಳಾದ ಪಂಚಾಯತ್ ರಾಜ್ ಏರ‍್ಪಾಟಿನ ಬಗ್ಗೆ ಇನ್ನು ಕನ್ನಡದಲ್ಲೇ ಒಂದು ಬರಹ ಬಂದಿಲ್ಲ ಎಂದು ಕೇಳುತ್ತಾ, ಅರಿಮೆಯಲ್ಲಿ ಎರಡು ಬಗೆಗಳಿವೆ; ಕನ್ನಡಕ್ಕೆ ಇಳಿದು ಬಂದ ತಿಳುವಳಿಕೆ ಎಂಬುದೊಂದು, ಕನ್ನಡದಲ್ಲೇ ಹುಟ್ಟಿದ ತಿಳುವಳಿಕೆ ಎಂಬುದು ಇನ್ನೊಂದು , ಇದರಲ್ಲಿ ಎರಡನೆಯದರಲ್ಲಿರುವ ಸವಾಲುಗಳ ಬಗ್ಗೆ ತಿಳಿಸಿದರು. ಕನ್ನಡದಲ್ಲಿ ಅರಿಮೆ ಬರಹಗಳಿಗೆ ಒಂದು ಹಿನ್ನಡವಳಿ ಇದೆ ಎಂದು ಹೇಳುತ್ತಾ- ಡಾ| ಡಿ.ಎಸ್.ಶಿವಪ್ಪನವರು ಕನ್ನಡದ್ದೇ ಆದ ಪದಗಳನ್ನು ಬಳಸಿ ವಯ್ದ್ಯಕೀಯ ಪದಕೋಶಗಳನ್ನು ಮಾಡಿಕೊಟ್ಟಿದ್ದನ್ನೂ, ಅವರು heart ಎಂಬುದಕ್ಕೆ ಹ್ರುದಯ ಎಂಬ ಪದ ಬಳಸದೇ ’ಗುಂಡಿಗೆ’ ಎಂಬ ಪದವನ್ನೇ ಬಳಸಿದ್ದನ್ನೂ ನೆನೆದರು. ಹಿಂದಿನಿಂದಲೂ ಹೆಸರುಪದಗಳನ್ನು ಬಳಸುವ ಬಗ್ಗೆ ಹಲವು ಜಗಳ-ತಿಕ್ಕಾಟಗಳು ನಡೆದಿರುವುದನ್ನು ತಿಳಿಸಿದರು. ಕೂಡಣದರಿಮೆ ಮತ್ತು ಮಾನವಿಕ ವಿಶಯಗಳ ಬಗೆಗೂ ಹೊನಲಿನಲ್ಲಿ ಬರಹ ಬರಲಿ ಎಂದು ಹೇಳುತ್ತಾ, ಪ್ರತಿ ದಿನವೂ ಬರಹಗಳನ್ನು ಮೂಡಿಸುತ್ತಿರುವ ಹೊನಲು ಬಹಳ ದೊಡ್ಡ ಹೆಜ್ಜೆ ಇಟ್ಟಿದೆ ಎಂದರು. ಹೊನಲು ಮಿಂಬಾಗಿಲಿನ ಪ್ರಯೋಗದ ಬಗ್ಗೆ ತಮ್ಮದೇ ಆಶಾವದದ ಮತ್ತು ಅನುಮಾನಗಳನ್ನು ಅವರು ಮುಂದಿಟ್ಟರು. ಕನ್ನಡಿಗರಿಲ್ಲಿರುವ ತಿಳಿವು, ಅರಿವಿನತ್ತ ಮುನ್ನಡೆಯಲಿ ಎಂದು ಹೇಳುತ್ತಾ ತಮ್ಮ ಮಾತು ಮುಗಿಸಿದರು.

honalu3

ಪ್ರೊ. ಎಸ್.ಶೆಟ್ಟರ್ ಅವರು ಮಾತುಗಳನ್ನಾಡುತ್ತಾ ಸಾಮಾನ್ಯ ಜನರ ತಿಳುವಳಿಕೆ ಮತ್ತು ಉಲಿಕೆಗೆ ನಿಲುಕುವ ಪದಗಳನ್ನು ಬಳಸಿದರೆ ಆ ಬರಹಗಳನ್ನು ಒಪ್ಪಿಕೊಳ್ಳುವುದಕ್ಕೆ ಕಶ್ಟವಾಗುವುದಿಲ್ಲ. ಹೊನಲು ಹೊಂದಾಣಿಕೆ ಮಾಡಿಕೊಂಡು ಮುನ್ನಡೆದರೆ ಗೆಲುವು ಸಿಗುತ್ತದೆ. ಜನಾಂಗ ಒಗ್ಗಟ್ಟಾಗಿದ್ದಾಗ ಹೊಸ ಪ್ರಯೋಗಳನ್ನು ಮಾಡಲು ಸುಲಬವಾಗುತ್ತದೆ. ಅಮೇರಿಕನ್ ಇಂಗ್ಲಿಶಿನಲ್ಲಿ ಮಾಡಿಕೊಂಡ ಬದಲಾವಣೆಗಳಂತೆ ನಮ್ಮ ಕನ್ನಡದಲ್ಲು ಬೇಡದ ಬರಿಗೆಗಳನ್ನು ಬಿಡಬಹುದು. ವ್ಯವಹಾರದ ಬರಹಗಳಲ್ಲಿ ಮಹಾಪ್ರಾಣಗಳಿರಲಿಲ್ಲ ಎಂಬುದು ಹದಿನಾರನೇ ಶತಮಾನದ ಕಲ್ಬರಹಗಳಲ್ಲಿ ಕಂಡುಬರುತ್ತದೆ. ಮಹಾಪ್ರಾಣಗಳಿಲ್ಲ ಎಂಬುದಕ್ಕೆ ಇನ್ನು ಹೆಚ್ಚಿನ ಕಲ್ಬರಹದ ಪುರಾವೆಗಳನ್ನು ಒದಗಿಸಿದರೆ ಈ ವಾದಕ್ಕೆ ಹೆಚ್ಚು ಬಲ ಬರುತ್ತದೆ ಎಂದು ನುಡಿದರು. ನಮ್ಮ ಸಮಾಜದಲ್ಲಿಯೇ ಹಲವು ಅಚ್ಚಗನ್ನಡ ಪದಗಳಿವೆ, ಅವನ್ನು ಹುಡುಕಿ ಬಳಸುವುದಕ್ಕೆ ಮೊದಲು ಮಾಡಬೇಕೆಂದು ಹೇಳಿದರು.  ಪ್ರೊ. ಎಸ್. ಶೆಟ್ಟರ್ ಅವರು ’ಎಲ್ಲರಕನ್ನಡ’ಕ್ಕೆ ಬೆಂಬಲ ನೀಡುತ್ತಾ, ಮುಂದೆ ಹೊರತರುವ ತಮ್ಮ ಹೊತ್ತಗೆಯ ಅನುಬಂದದಲ್ಲಿ ಮಹಾಪ್ರಾಣಗಳನ್ನು ಬಿಟ್ಟ ಬರಹವನ್ನು ಅಳವಡಿಸಿಕೊಂಡಿದ್ದಾರೆಂದು ಮೊದಲ ಬಾರಿಗೆ ಈ ಸಮಾರಂಬದಲ್ಲಿ ಪ್ರಕಟಿಸಿದರು.

ಹೊನಲು ಮಿಂಬಾಗಿಲಿನ ಬೆನ್ನೆಲುಬಾದ ಬರಹಗಾರರ ಹೊಗಳಿಕೆಯ ಸಲುವಾಗಿ, ಎಲ್ಲ ಬರಹಗಾರರ ಹೆಸರುಗಳನ್ನು ಸಮಾರಂಬದಲ್ಲಿ ಓದಲಾಯಿತು. ಹೆಸರುಗಳನ್ನು ಓದುವಾಗ ಅವರ ಹೆಸರು ಮತ್ತು ತಿಟ್ಟಗಳನ್ನು ತೆರೆಯ ಮೇಲೆ ಮೂಡಿಸಿ ಬರಹಗಾರರ ದುಡಿಮೆಯನ್ನು ಗುರುತಿಸುವುದರ ಜೊತೆಗೆ ಮೆಚ್ಚುಗೆಯನ್ನು ತೋರಿಸಲಾಯಿತು. ಹೊನಲು ತಂಡಕ್ಕೆ ಬೇರೆ ಬೇರೆ ಬಗೆಯಲ್ಲಿ ನೆರವಿತ್ತ ’ಬರಹ’ ವಾಸು ಮತ್ತು ’ದಟ್ಸ್ ಕನ್ನಡ’ದ ಮಹೇಶ್ ಮಲ್ನಾಡ್ ಅವರನ್ನು ನೆನೆಯಲಾಯಿತು.

ಅಂದವಾಗಿ ಬಣ್ಣಬಣ್ಣದಲ್ಲಿ ಅಚ್ಚು ಹಾಕಿಸಿದ ಹೊನಲಿನ ಆಯ್ದ ಅರಿಮೆಯ ಬರಹಗಳಿರುವ ’ಅರಿಮೆಯ ಹೊನಲು’ ಎಂಬ ಹೊತ್ತಗೆಯನ್ನು ನೆನಪಿನ ಕಾಣಿಕೆಯಾಗಿ ಅತಿತಿಗಳಿಗೆ ನೀಡಲಾಯಿತು. ಕಾರ‍್ಯಕ್ರಮದ ಕೊನೆಯಲ್ಲಿ ಸಂದೀಪ್ ಅವರು ನನ್ನಿ ಸಲ್ಲಿಸಿದರು.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *