ಅಚ್ಚರಿ ಮೂಡಿಸುವ ಅರಕೆಗಳು – ಬಾಗ 1
1. ಟಾಯ್ಟನ್ ಆರ್ಮ್ (Titan Arm)
ಕಯ್ ಕಾಲುಗಳಿಗೆ ದೊಡ್ಡ ಪೆಟ್ಟಾದಾಗ ಅದರಿಂದ ಗುಣವಾಗಲು ಹೆಚ್ಚು ಹೊತ್ತು ತಗಲುತ್ತದೆ. ಕೆಲವೊಮ್ಮೆ ಒಳಕಯ್ ಗೆ ನೋವು ಮಾಯಲು ತಿಂಗಳುಗಳೇ ಬೇಕು. ಇಂತ ಸಮಯದಲ್ಲಿ ಉಕ್ಕಾಳಿನ ಮಾಡಿದ ಕಯ್ ನಿಮ್ಮ ನೆರವಿಗೆ ಬಳಸಬಹುದು. ಆದರೆ ಈಗಿರುವ ಉಕ್ಕಾಳಿನ ಕಯ್ಗಳನ್ನು ನೀವು ಬಳಸಬೇಕೆಂದರೆ ಅವುಗಳನ್ನು ಗೋಡೆಗೆ ಸಿಕ್ಕಿಸಿ ಚಾರ್ಜ್ ಮಾಡಬೇಕು ಅದು ಅಲ್ಲದೇ ಅವುಗಳು ತುಂಬಾ ದುಬಾರಿ. ನಿಮ್ಮ ಜೊತೆ ಕೊಂಡೊಯಲ್ಲು ಅಶ್ಟೊಂದು ಅನುಕೂಲವಾಗಿಲ್ಲ.
ಇದೆಲ್ಲವನ್ನು ನೀಗಿಸಲು 2012 ರಲ್ಲಿ ಪೆನ್ಸಿಲ್ವೇನಿಯಾದ(Pennsylvania) ಬಿಣಿಗೆಯರಿಗರು ಒಂದು ಸುಲಬದ ಮತ್ತು ಕಡಿಮೆ ಬೆಲೆಯ ಉಕ್ಕಾಳಿನ ಕಯ್ ಮಾಡಿ ಗೆಲುವುಕಂಡಿದ್ದಾರೆ. ಎಲಿಜಬೆತ್ ಬೀಟಿ(Elizabeth Beatie), ನಿಕೊಲಾಸ್ ಮ್ಯಾಕ್ಗಿಲ್(Nicholas McGill), ನಿಕ್ ಪರ್ರೊಟ್ಟಾ(Nick Parrotta) ಮತ್ತು ನಿಕೊಲಯ್ ವ್ಲಾಡಿಮಿರೊವ್(Nikoloy Vladimirov) ಇವರೇ ಈ ಅರಕೆಗಾಗಿ ಹಗಲಿರುಳೆನ್ನದೇ ದುಡಿದ ಬಿಣಿಗೆಯರಿಗರು. ಈ ಅರಕೆಯಿಂದ ಮಾಡಿದ ಕಯ್ಗೆ ಟಾಯ್ಟನ್ ಆರ್ಮ್ (Titan Arm) ಎಂಬ ಹೆಸರು ನೀಡಲಾಗಿದೆ. ಟಾಯ್ಟನ್ ಆರ್ಮ್ ಗಾತ್ರದಲ್ಲಿ ಚಿಕ್ಕದು, ತೂಕದಲ್ಲಿ ಹಗುರ, ಹೆಚ್ಚು ಬಲವುಳ್ಳದ್ದು ಮತ್ತು ಕಯ್ಗೆಟಕುವ ಬೆಲೆಯಲ್ಲಿ ದೊರಕಲಿದೆ. ಇದರ ಮಿಂಚಿನ ನರಕಟ್ಟು ಬಳಸುವರಿಗೆ ಹೆಚ್ಚಿನ ಬಲವೊದಗಿಸುವದಶ್ಟೇ ಅಲ್ಲ 40 ಪವಂಡ್ ದಶ್ಟು ಬಾರವನ್ನು ಸುಲಬವಾಗಿ ಎತ್ತಲು ನೆರವಾಗುತ್ತದೆ. ಇದರಲ್ಲಿ ಒಂದು ಮಿಂಚಿನ ಓಡುಗೆ(Electric Motors)ಮತ್ತು ಕೆಲವು ತಿಳಿಕಗಳನ್ನು ಬಳಸಲಾಗಿದೆ. ಹಿಂದೆ-ಮುಂದೆ, ಮೇಲೆ-ಕೆಳಗೆ ಕಯ್ ಚಾಚಲು ಮಿಂಚಿನ ಓಡುಗೆಯು ಕಸುನೀಡುತ್ತದೆ.
ಈಗಿರುವ ಎಲ್ಲ ಉಕ್ಕಾಳಿನ ಕಯ್ಗಳು ಬಳಸುತ್ತಿದ್ದ ಬಾರದ ವಸ್ತುಗಳ ಬದಲಾಗಿ ಟಾಯ್ಟನ್ ಆರ್ಮ್ ನಲ್ಲಿ ಅಲುಮಿನಿಯಮ್ ಬಳಸಲಾಗಿದೆ. ಟಾಯ್ಟನ್ ಆರ್ಮ್ ನಲ್ಲಿರುವ ತಿಳಿಕ ಮತ್ತಿತರೆ ಮಿಂಚಿನ ಕಸುವಿನ ಎಲ್ಲ ತಂತಿಗಳನ್ನು ಒಂದು ಚೀಲದಂತೆ ಹೊಂದಿಸಿ ನಾವುಗಳು ಬಳಸುವ ಬ್ಯಾಕ್-ಪ್ಯಾಕ್ (Backpack bag)ತರಹವಾಗಿ ಮಾಡಲಾಗಿದೆ. ಇದರಿಂದ ನೀವು ಇದನ್ನು ಎಲ್ಲಿಗೂ ಕೊಂಡೊಯ್ಯಬಹುದು, ನಿಮ್ಮ ಎಣ್ಣುಕಗಳನ್ನು ಚೀಲದಲ್ಲಿ ತುಂಬಿ ಬೆನ್ನ ಹಿಂದೆ ಹಾಕಿಕೊಂಡು ಸಾಗುವಂತೆ ಇದನ್ನು ತೆಗೆದುಕೊಂಡು ಸಾಗಬಹುದು.
ಗುಂಡಿಗೆ ಬೇನೆ(Heart Stroke), ಜಾರಿಬಿದ್ದು ಕಯ್ ಇಲ್ಲವೇ ಮೊಳಕಯ್ಗೆ ಬಲವಾದ ಗಾಯ ಮಾಡಿಕೊಂಡವರಿಗೆ ಇದು ವರದಾನ ಎನ್ನುತ್ತದೆ ಈ ಬಿಣಿಗೆಯರಿಗರ ತಂಡ. ಬೆಲೆ ಕೂಡ ಎರಡು ಸಾವಿರ ಡಾಲರ್ ಅಶ್ಟೇ.ಮಾರುಕಟ್ಟೆಯಲ್ಲಿ ಸಿಗುವ ಇಂತ ಉಕ್ಕಾಳಿನ ಕಯ್ಗಳಿಗಿಂತ ಹತ್ತಾರು ಪಟ್ಟು ಕಡಿಮೆ. ಬೆಲೆಯಲ್ಲಿ ಕಡಿಮೆ, ಗಾತ್ರದಲ್ಲಿ ಕಿರಿದಾಗಿ, ಎಲ್ಲೆಂದಲ್ಲಿ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬಲ್ಲ ಇಂತ ಆರ್ಮ್ ಇದ್ದರೆ ಕಯ್ ಪೆಟ್ಟು ತಿಂದು ಬಳಲುವರಿಗೆ ಇದು ಆದಾರವಾಗಲು ಸಾದ್ಯ.
2. ಕುಳಿರರಿಮೆಯ ಟ್ರಕ್ (Cryogenic Truck)
ಕೆಲವು ತಿಂಡಿತಿನಿಸು, ಕಾಯಿ-ಪಲ್ಲೆ, ಮಾಂಸ ಮುಂತಾದ ಬೇಗನೆ ಕೆಡುವ ಸರಕುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಕೆಡದಂತೆ ಸಾಗಿಸುವುದು ಬಲು ಕಶ್ಟ. ಇತ್ತಿಚೀನ ದಿನಗಳಲ್ಲಿ ಇದಕ್ಕೋಸ್ಕರ ಸರಕು ಸಾಗಿಸುವ ಹಲವು ಟ್ರಕ್ಕುಗಳು ತಂಪಾಗಿಸುವ ಏರ್ಪಾಟನ್ನು(Refrigerated trucks) ಹೊಂದಿರುತ್ತವೆ. ಹೊರಗಿನ ವಾತಾವರಣದ ಬಿಸಿಲಿಗೆ ಬೇಗನೆ ಕೆಟ್ಟು ಹೋಗುವ ಇಂತ ತಿಂಡಿಗಳನ್ನು ನಾವು ತಂಪಾಗಿಸುವ ಏರ್ಪಾಟು ಹೊಂದಿರುವ ಟ್ರಕ್ಕುಗಳಲ್ಲಿ ಯಾವ ಅಳುಕಿಲ್ಲದೆ ಸಾಗಿಸಬಹುದು. ನಮ್ಮ ದೇಶ ಸೇರಿದಂತೆ ಜಗತ್ತಿನ ಹಲವಾರು ಕಡೆ ಇಂತ ಬಂಡಿಗಳು ಕೆಲಸದಲ್ಲಿವೆ. ಅಶ್ಟೇ ಏಕೆ ಸಾವಿರಾರು ಮಯ್ಲಿ ದೂರದ ನಾಡುಗಳಿಂದ ಹಲವಾರು ಕಾಯಿಪಲ್ಲೆ, ಮಾಂಸದ ವಸ್ತುಗಳನ್ನು ಕೆಡದಂತೆ ತಂಪು ವಾತಾವರಣದಲ್ಲಿ ಬಾನೋಡ/ಹಡಗುಗಳಲ್ಲೂ ಸಾಗಿಸಬಹುದು.
ಆದರೆ ಇಂತ ತಂಪಾಗಿಟ್ಟುಕೊಂಡು ತಿಂಡಿ ಸಾಗಿಸುವ ಟ್ರಕ್ಕು, ಲಾರಿಗಳು ಹೆಚ್ಚಿನ ಡೀಸಲ್, ಪೆಟ್ರೋಲ್ ಕುಡಿಯುತ್ತವೆ. ಇದರಿಂದ ಬಂಡಿಯ ಮಯ್ಲೇಜ್ ಕುಸಿಯುತ್ತಿದ್ದು, ಹಣದ ವೆಚ್ಚವೂ ಏರುವುದು. ಇದನ್ನು ಕಡಿತಗೊಳಿಸಿ ಉರುವಲಿನ ಮಯ್ಲೇಜ್ ನ್ನು ಎಂದಿನಂತೆ ಕಾಪಾಡಿಕೊಂಡು ಸಾಗಲು ಡೀಯರ್ ಮನ್ (Dearman) ಕಂಪನಿಯ ಪ್ರಮುಕ ಅರಕೆಗಾರರಾದ ಪೀಟರ್ ಡೀಯರ್ ಮನ್ (Peter Dearman) ಹೊಸ ಚಳಕವನ್ನು ನಮ್ಮ ಮುಂದಿಟ್ಟಿದ್ದಾರೆ.
ಸುಮಾರು -200 ಡಿಗ್ರೀ ಸೆಲ್ಸಿಯಸ್ (ಅಂದರೆ ಕುಳಿರರಿಮೆಯ ಬಿಸಿಪು) ತಂಪಾದ ಹರಿವಿನ ಸ್ತಿತಿಯಲ್ಲಿನ ಗಾಳಿಯನ್ನು(liquid air) ಟ್ರಕ್ ಒಂದರ ಕೊಳಾಯಿಯಲ್ಲಿ ಕೂಡಿಡಲಾಗುತ್ತದೆ. ಇಶ್ಟು ಕಡುತಂಪಿನ(Cryogenic) ಹರಿವಿನ ಸ್ತಿತಿಯಲ್ಲಿರುವ ಗಾಳಿಯು ಟ್ರಕ್ಕಿನ ಮೇಲಿನ ಬಿಸುಪಿಗೆ ತಂಪುಗೊಂಡು ತಂಗಾಳಿಯಾಗಿ ಸರಕು ಸಾಮಾನುಗಳನ್ನು ತಂಪಾಗಿಡುತ್ತದೆ. ಇದರಿಂದ ಸಾಮಾನ್ಯವಾಗಿ ಟ್ರಕ್ಕುಗಳಲ್ಲಿ ಬಳಸಲ್ಪಡುವ ಒತ್ತಡಕದ ಹೊರೆ ಕಡಿಮೆಗೊಂಡು ಉರುವಲಿನ ಅಳವುತನ ಹೆಚ್ಚುತ್ತದೆ.
ಇವೊತ್ತಿನ ಟ್ರಕ್ಕುಗಳಲ್ಲಿ ಹೆಚ್ಚಾಗಿ ಒತ್ತಡಕಗಳನ್ನು ಉಪಯೋಗಿಸುತ್ತಾರೆ,ಒತ್ತಡಕಗಳು ಬಿಣಿಗೆಯ ಕಸುವನ್ನು ಬಳಸುವುದರಿಂದ ಹೆಚ್ಚು ಡೀಸಲ್ ಕುಡಿಯುತ್ತವೆ. ಡೀಯರ್ ಮನ್ ರವರ ಹೊಸ ಚಳಕದ ಮೂಲಕ ಉರುವಲಿನ ಅಳವುತನ ಶೇಕಡಾ 25 ರಶ್ಟು ಹೆಚ್ಚಲಿದೆ.
ಪ್ರಮುಕ ಅರಕೆಗಾರ- ಪೀಟರ್ ಡೀಯರ್ ಮನ್
ಅರಕೆಯ ಬೆಳವಣಿಗೆಗೆ ತಗುಲಿದ ವೆಚ್ಚ- 8.3 ಮಿಲಿಯ ಡಾಲರ್
ಕೂಟ- ದ ಡೀಯರ್ ಮನ್ ಇಂಜೀನ್ ಕಂಪನಿ (The Dearman Engine co.)
3. ರನ್ ವೇ ಬೇಕಿಲ್ಲದ ಬಾನೋಡ:
ಒಂದು ಬಾನೋಡ ತಾಣವೆಂದರೆ ಹತ್ತಾರು ಕಿ.ಮೀ ಗಳಶ್ಟು ಜಾಗವೇಬೇಕು ಅದರಲ್ಲೂ ಬಾನೋಡಗಳು ದುತ್ತನೆ ನೆಲದಿಂದ ಮೇಲೆರುವ ಮುನ್ನ ಇಲ್ಲವೇ ಚಂಗನೆ ನೆಲಕ್ಕೆ ಮುಟ್ಟಿ ವೇಗ ಕಡಿಮೆಗೊಳಿಸಿ ಸಾಗಲು ನಾಲ್ಕಾರು ಚದರ ಕಿ.ಮೀ ಗಳ ಜಾಗವೇ ಬೇಕು. ಇಂತ ಸಮಯದಲ್ಲಿ ರನವೇ ಬೇಕಿಲ್ಲದ ನೂರಾರು ಮೀಟರ್ ಸಾಗುತ್ತಲೇ ಮೇಲೆ ಹಾರುವಂತಿದ್ದರೆ ಎಶ್ಟು ಚೆನ್ನ. ಸಾವಿರಾರು ಎಕರೆ ಜಾಗವನ್ನು ಬರಡುಗೊಳಿಸುವ ಅಗತ್ಯವೇ ಇಲ್ಲ, ಹೆಲಿಕಾಪ್ಟರ್ ಇಳಿಯುವ ಚಿಕ್ಕ ಹೆಲಿಪ್ಯಾಡ್ ನಂತೆ ಬಾನೋಡವಿದ್ದರೆ ಬಲು ಒಳ್ಳೆಯದಲ್ಲವೇ!
ಹವ್ದು ರನ್ ವೇ ಬೇಕಿಲ್ಲದ ಕಡಿಮೆ ಜಾಗ ಬಳಸಿಕೊಳ್ಳುವಂತ ಬಾನೋಡಗಳ ಅರಕೆ ಶುರುವಾಗಿದೆ. ಜೋಬೆನ್ ಬೆವಿರ್ಟ್ (JoeBen Bevirt) ಎಂಬ 40ರ ಹರೆಯದ ಉದ್ಯಮಿ ಮತ್ತು ಅರಕೆಗಾರ ಇಂತ ಬಾನೋಡಗಳ ಅರಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾನೋಡಗಳು ಸಾಮಾನ್ಯದಂತೆ ವೇಗ ಕಡಿಮೆಗೊಳಿಸುತ್ತ ಅಡ್ಡವಾಗಿ ನೆಲಮುಟ್ಟುವುದಿಲ್ಲ ಬದಲಾಗಿ ನೆಟ್ಟಗೆ(Vertical) ಹೆಲಿಕಾಪ್ಟರ್ ನಂತೆ ಕೆಳಗಿಳಿದು ಕಡಿಮೆ ಜಾಗದಲ್ಲಿ ನೆಲೆಗೊಳ್ಳುತ್ತದೆ. ಈ ಬಾನೋಡ ಹಾರಲು ಮಿಂಚಿನ ಕಸುವು (Electric Engine)ಪಡೆದುಕೊಳ್ಳುತ್ತಿರುವುದು ಇನ್ನೊಂದು ವಿಶೇಶ.
ಪೂರ್ತಿ ಪ್ರಮಾಣದ ಮಾದರಿ ಸದ್ಯಕ್ಕೆ ಇನ್ನೂ ತಯಾರುಗೊಂಡಿಲ್ಲವಾದರೂ, ಕಿರಿದಾದ ಅಂದರೆ 10 ಪವಂಡ್ ತೂಕದ ಒಂದು ಡಜನ್ ಮಾದರಿಗಳಲ್ಲಿ ಈ ಹೊಸ ಹೊಳಹಿನ ಓರೆಹಚ್ಚುವಿಕೆ ಕೆಲಸ ಬರದಿಂದ ಸಾಗಿದೆ. ಅಮೇರಿಕಾದ ನಾಸಾ ಕೂಟದವರು ಈ ಅರಕೆಯಲ್ಲಿ ಆಸಕ್ತಿ ತೋರಿಸಿದ್ದು, 55 ಪವಂಡ್ ತೂಕದ ಮಾದರಿ ಸಿದ್ದಗೊಳಿಸಲು ಬೆವಿರ್ಟ್ ತಂಡಕ್ಕೆ ಹಣಕಾಸಿನ ನೆರವು ಒದಗಿಸುತ್ತಿದೆ. ಕೊನೆಯದಾಗಿ ಸಿದ್ದವಾಗಲಿರುವ ಸುಮಾರು 1700 ಪವಂಡ್ ತೂಕದ ಬಾನೋಡವೊಂದರ ಅಣುಕು ಮಾದರಿಗಳನ್ನು(simulation models) ಚುರುಕಿನ ಎಣ್ಣುಕದಲ್ಲಿ ತಯಾರಿಸಿ ಓರೆಹಚ್ಚುವಿಕೆಯ ಕೆಲಸ ನಡೆದಿದೆ.
ಇಬ್ಬರನ್ನು ಕೂರಿಸ್ಕೊಂಡು ಒಂದು ಗಂಟೆಯಲ್ಲಿ 200 ಮಯ್ಲಿ ಸಾಗಲು ಕೇವಲ 50 ಕಿಲೊವ್ಯಾಟ್-ಹವರ್ ಬಳಸಿಕೊಳ್ಳುವ ಈ ಬಾನೋಡ ಸಾಮಾನ್ಯದ ಬಾನೋಡಕ್ಕಿಂತ 5 ಪಟ್ಟು ಹೆಚ್ಚು ಅಳುವುತನದ್ದು. ಇದರ ಬೆಳವಣಿಗೆಯಲ್ಲಿ ಹಲವು ಅರಿವಿಕ ಮತ್ತು ಓಡುಗೆಗಳನ್ನು ಜೋಡಿಸಿ ರೆಕ್ಕೆಗಳನ್ನು ಮಡಚಲು ಅನುಕೂಲವಾಗುವಂತೆ, ಸಪ್ಪಳವನ್ನು ಕಡಿಮೆಗೊಳ್ಳುವಂತೆ ಮಾಡಲಾಗುತ್ತಿದೆ.
ಮುಕ್ಯ ಅರಕೆಗಾರ ಜೋ ಬೆನ್ ಬೆವಿರ್ಟ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಹಮ್ಮುಗೆಗೆ ಜೋಬಿ ಏವಿಯೇಶನ್ (Joby aviation) ಕೂಟ ಈಗಾಗಲೇ ಸಾಕಶ್ಟು ಡಾಲರ್ ಹಣಸುರಿದಿದೆ.
(ಸೂಚನೆ: ಈ ಮೇಲಿನ ಎಲ್ಲ ಅರಕೆಗಳು ಬೆಳವಣಿಗೆಯ ಹಂತದಲ್ಲಿವೆ ಆದ್ದರಿಂದ ಹೆಚ್ಚಿನ ವಿವರಗಳನ್ನು ಕೆಲಸ ಮಾಡುವ ಪೂರ್ತಿ ಮಾಹಿತಿಯನ್ನು ಬಹುತೇಕ ಕೂಟಗಳು ಹೊರಹಾಕಿಲ್ಲ.)
(ಮಾಹಿತಿ ಸೆಲೆ: popsci.com)
1 Response
[…] (ಅಚ್ಚರಿ ಮೂಡಿಸುವ ಅರಕೆಗಳು ಬರಹದ ಮುಂದುವರಿದ ಬಾಗ) […]