ತಾಯ್ನುಡಿ ಕಲಿಕೆಯಿಂದಲೇ ಹಣಕಾಸು ಅಸಮಾನತೆ ನೀಗಿಸಲು ಸಾದ್ಯ
– ಸಂದೀಪ್ ಕಂಬಿ.
ಸೊಮ್ಮು ಅಂದರೆ ಸಂಪತ್ತು ಪ್ರಪಂಚದ ಉದ್ದಗಲಕ್ಕೂ ಹೇಗೆ ಹರಡುತ್ತದೆ, ಹೇಗೆ ಕೂಡುತ್ತದೆ, ಹೀಗೆ ಕೂಡುವ ಮತ್ತು ಹರಡುವುದಕ್ಕೆ ಯಾವ ಸಂಗತಿಗಳು ಕಾರಣವಾಗುತ್ತವೆ ಎಂಬುದರ ಬಗ್ಗೆ ಪ್ರೆಂಚ್ ಹಣಕಾಸರಿಗರಾದ ತಾಮಸ್ ಪಿಕೆಟಿಯವರು ಬರೆದಿರುವ ಕ್ಯಾಪಿಟಲ್ ಇನ್ ದಿ ಟ್ವೆಂಟಿ ಪಸ್ಟ್ ಸೆಂಚುರಿ ಎಂಬ ಹೊತ್ತಗೆ ಇತ್ತೀಚಿನ ದಿನಗಳಲ್ಲಿ ಸಾಕಶ್ಟು ಚರ್‍ಚೆಗೆ ಒಳಗಾಗಿದೆ. ಬರಿಯ ತಿಯರಿಗಳನ್ನು ನಂಬದೆ, ಕಳೆದ ಇನ್ನೂರು-ಮುನ್ನೂರು ವರುಶಗಳಲ್ಲಿ, ಹಲವು ದೇಶಗಳಲ್ಲಿ ಬರೆಡಿದಲಾದ ತೆರಿಗೆ ಮತ್ತು ಇನ್ನಿತರೆ ಮಾಹಿತಿಗಳನ್ನು ಕಲೆ ಹಾಕಿ ಸೊಮ್ಮಿನ ಹಂಚಿಕೆ, ಕೂಡಣದಲ್ಲಿನ ಹಣಕಾಸಿನ ಏಳು-ಬೀಳುಗಳು, ಅಸಮಾನತೆಗಳು ಮುಂತಾದವುಗಳ ಬಗ್ಗೆ ಆಳವಾದ ಸೀಳುನೋಟ ನಡೆಸಿ ಚರ್‍ಚಿಸಿದ್ದಾರೆ ಪಿಕೆಟಿಯವರು. ಅಸಮಾನತೆಗಳನ್ನು ನೀಗಿಸುವ ವಿಶಯದ ಕುರಿತಾಗಿಯೂ ಕೂಡ ಅವರು ಸಾಕಶ್ಟು ಚರ್‍ಚಿಸಿದ್ದು, ನಾಡು ನಾಡುಗಳ ನಡುವಿನ ಅಸಮಾನತೆಗಳು ಮತ್ತು ನಾಡಿನೊಳಗಿನ ಅಸಮಾನತೆಗಳ ಬಗ್ಗೆ ಬಿಡಿಸಿ ಹೇಳಿದ್ದಾರೆ. ಈ ಬರಹದಲ್ಲಿ ನಾಡು ನಾಡುಗಳ ನಡುವಿನ ಅಸಮಾನತೆ ಮತ್ತು ಅದನ್ನು ನೀಗಿಸಲು ಪಿಕೆಟಿಯವರು ತಿಳಿಸಿರುವ ದಾರಿಗಳ ಬಗ್ಗೆ ಗಮನಿಸೋಣ.
ಹಣಕಾಸರಿಮೆಯಲ್ಲಿ GDP ಎಂಬುದು ಒಂದು ನಾಡಿನ ಏಳಿಗೆಯನ್ನು ಅಳೆಯಲು ಬಳಕೆಯಲ್ಲಿರುವ ಅಳತೆಗೋಲುಗಳಲ್ಲೊಂದು. ಇದರ ಅರ್‍ತ ವರುಶಕ್ಕೆ ಒಂದು ನಾಡಿನ ಒಳಗೆ ಆದ ಒಟ್ಟು ಇಳುವರಿ ಎಂದು. ಅಂದರೆ ಕಯ್ಗಾರಿಕೆ, ಆರಂಬ (ಬೇಸಾಯ) ಮುಂತಾದವುಗಳಲ್ಲಿ ಒಂದು ವರುಶದಲ್ಲಿ ನಾಡಿನ ಒಳಗೆ ಆದ ದುಡಿಮೆಯಿಂದ ಹೊರ ಬಂದ ಇಳುವರಿ. ಹಣಕಾಸು ಏಳಿಗೆಯ ಇನ್ನೊಂದು ಅಳತೆ ತಲಾ GDP, ಅಂದರೆ ಒಟ್ಟು ನಾಡಿನ ಇಳುವರಿಯನ್ನು, ಆ ನಾಡಿನ ಮಂದಿಯೆಣಿಕೆಯಿಂದ ಬಗೆದರೆ ಸಿಗುವ ಎಣಿಕೆಯೇ ತಲಾ GDP. ಪಿಕೆಟಿಯವರು ತಲಾ GDPಯ ಪಾಲು ಹಿಂದಿನಿಂದ, ಅಂದರೆ ಸುಮಾರು 1700ರಿಂದ ಹೇಗೆ ಬಡ ಮತ್ತು ಸಿರಿವಂತ ನಾಡುಗಳ ನಡುವೆ ಏರಿಳಿತಗಳನ್ನು ಕಂಡಿದೆ ಎಂಬುದನ್ನು ತೋರಿಸುವುದಕ್ಕೆ ಎರಡು ಪೆರ್‍ನೆಲ ಬಿಡಿಗಳನ್ನು ತೆಗದುಕೊಂಡಿದ್ದಾರೆ. ಬಡ ನಾಡುಗಳನ್ನು ಹೊಂದಿರುವ ಏಶಿಯಾ-ಆಪ್ರಿಕಾ ಒಂದು ಬಿಡಿಯಾದರೆ, ಮುಂದುವರಿದ ನಾಡುಗಳನ್ನು ಹೊಂದಿರುವ ಯೂರೋಪ್-ಅಮೇರಿಕಾ ಇನ್ನೊಂದು ಬಿಡಿ. ಈ ಕೆಳಗಿನ ಗೆರೆಚಿತ್ರವನ್ನು ಗಮನಿಸಿ:
1700ರಲ್ಲಿ ಪ್ರಪಂಚದ ಸರಾಸರಿಗೆ 150%ರಶ್ಟು ಇದ್ದ ಯೂರೋಪ್-ಅಮೇರಿಕಾ ಬಿಡಿಯ ತಲಾ GDP ಮುಂದೆ ಹೋಗುತ್ತ ತೀರಾ ಹೆಚ್ಚಾಗುತ್ತದೆ. ಕಾಯ್ಗಾರಿಕಾ ಕ್ರಾಂತಿಯ ಕಾರಣದಿಂದಾಗಿ ಈ ಬಗೆಯಲ್ಲಿ ಪಡುವಣದ ಬಿಡಿ ಏರಿಕೆ ಕಂಡಂತೆ ಏಶಿಯಾ-ಆಪ್ರಿಕಾ ಬಿಡಿಯ ತಲಾ GDPಯ ಪಾಲು ಕಡಿಮೆಯಾಗುತ್ತ ಹೋಗುತ್ತದೆ. ಈ ಎರಡು ಗೆರೆಗಳು 1700ರಿಂದೀಚೆಗೆ ಒಂದರಿಂದೊಂದು ದೂರ ಸರಿಯುತ್ತ ಹೋಗುತ್ತವೆ ಮತ್ತು 1950ರ ಬಳಿಕ ಕೊಂಚ ಹಿಂದಕ್ಕೆಳೆದು ಮತ್ತೆ ಹತ್ತಿರಕ್ಕೆ ಬರುವ ಸೂಚನೆಗಳು ಕಾಣಿಸುತ್ತವೆ. ಆದರೆ ಈ ಎರಡು ಗೆರೆಗಳು ಇನ್ನೂ ಹತ್ತಿರಕ್ಕೆ ಬಂದು ಒಂದು ಕಡೆ ಕೂಡುವ ಹಾಗೆ ಮಾಡುವುದಕ್ಕೆ ಏನು ಮಾಡಬಹುದು ಎಂಬುದು ಮೇಲ್ನೋಟಕ್ಕೆ ತೀರಾ ಸಿಕ್ಕಲಿನ ವಿಚಾರ ಏನೂ ಅಲ್ಲವೆನಿಸುತ್ತದೆ. ಏಕೆಂದರೆ ಮುಂದುವರಿದ ನಾಡುಗಳಲ್ಲಿ ಆಗಲೇ ಸಾಕಶ್ಟು ಸೊಮ್ಮು, ಹಣ ಇರುವುದರಿಂದ ಅದನ್ನು ಹಿಂದುಳಿದ ದೇಶಗಳಲ್ಲಿ ಹೂಡಿದರೆ ಇಬ್ಬರಿಗೂ ಒಳಿತಾಗುತ್ತದೆ. ಮುಂದುವರಿದ ನಾಡುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಕೊಟ್ಟು ಲಾಬ ಗಳಿಸಬಹುದಲ್ಲದೆ ಬಡ ದೇಶಗಳು ಅದನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ, ಇಳುವರಿಗಳ ಮೂಲಕ ಏಳಿಗೆ ಸಾದಿಸಬಹುದು, ಅಲ್ಲವೇ?
ಇದು ಅಶ್ಟು ಸರಳವಾದ ವಿಶಯವಲ್ಲ ಎನ್ನುತ್ತಾರೆ ಪಿಕೆಟಿಯವರು. ತಲಾ GDPಯ ಜೊತೆ ನಾಡಿನ ಒಟ್ಟು ಆದಾಯ ಮತ್ತು ತಲಾ ಆದಾಯವೂ ಮುಕ್ಯ. ಹೊರಗಿನ ಹೂಡಿಕೆಯಿದ್ದರೆ, GDPಯ ಒಂದು ಪಾಲು ಹೊರ ನಾಡಿಗೆ ಹೋಗುವುದರಿಂದ GDPಗಿಂತ ನಾಡಿನ ಆದಾಯ ಕೊಂಚ ಕಡಿಮೆಯೇ ಇರುತ್ತದೆ ಮತ್ತು ತಲಾ ಆದಾಯವೂ ಕಡಿಮೆಯಾಗುತ್ತದೆ. ಅಲ್ಲದೆ ಬರೀ ಹೊರನಾಡಿನ ಹೂಡಿಕೆಯಿಂದ ಯಾವುದೋ ಒಂದು ನಾಡು ಬೆಳೆದು ಮುನ್ನಡೆದಿದೆ ಎಂದು ಹೇಳುವುದಕ್ಕೆ ಗಟ್ಟಿಯಾದ ಪುರಾವೆಗಳಿಲ್ಲ. ಬದಲಾಗಿ ತೆರೆದ ಮಾರುಕಟ್ಟೆಯಲ್ಲಿ ಸ್ವಂತ ಉಳಿತಾಯಗಳಿಂದಲೇ ಬೆಳೆದು ಬಂದ ನಾಡುಗಳ ಸಾಕಶ್ಟು ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಹಾಗಾಗಿ ಪಿಕೆಟಿಯವರ ಪ್ರಕಾರ ಒಂದು ನಾಡು ತೆರೆದ ಮಾರುಕಟ್ಟೆಯ ಅವಕಾಶಗಳನ್ನು ಬಳಸಿಕೊಂಡು ಸ್ವಂತ ಉಳಿತಾಯಗಳ ನೆರವಿನಿಂದ ಜಗತ್ತಿನ ಮಾರುಕಟ್ಟೆಗೆ ಬೇಕಾದ ವಸ್ತುಗಳನ್ನು ತಯಾರಿಸಿ, ಬೇರೆಯ ನಾಡುಗಳೊಂದಿಗಿನ ಪಯ್ಪೋಟಿಯನ್ನು ಎದುರಿಸಿ, ಆ ವಸ್ತುಗಳನ್ನು ಮಾರಿ, ಹಣ ಗಳಿಸಿ ಮುಂದುವರಿಯುವ ಸಾದ್ಯತೆಗಳೇ ಹೆಚ್ಚು. ಆದರೆ ಹೀಗೆ ಪಯ್ಪೋಟಿಯನ್ನೊಡ್ಡಬಲ್ಲ ವಸ್ತುಗಳು ಮತ್ತು ಸೇವೆಗಳನ್ನು ನೀಡಲು ನಾಡಿನ ಮಂದಿಯ ಅರಿಮೆ ಮತ್ತು ಚಳಕದ ತಿಳಿವು ಏರುತ್ತ ಸಾಗಬೇಕಾಗುತ್ತದೆ. ಜಪಾನ್, ತಯ್ವಾನ್, ತೆಂಕಣ ಕೊರಿಯಾದಂತಹ ದೇಶಗಳು ಸಾದಿಸಿದ ಏಳಿಗೆ ಮತ್ತು ಇತ್ತೀಚಿಗೆ ಚಯ್ನಾ ಸಾದಿಸಿದ ಏಳಿಗೆ ಮತ್ತು ಬೆಳವಣಿಗೆ ಇದಕ್ಕೆ ಉದಾಹರಣೆಗಳು.
ಒಟ್ಟಾರೆ, ಈ ಎರಡು ಗೆರೆಗಳು ಕೂಡುವತ್ತ ಸಾಗಬೇಕಾದರೆ ಎಲ್ಲಕ್ಕೂ ಮುಕ್ಯವಾಗುವುದು ಹಿಂದುಳಿದ ನಾಡುಗಳ ಮಂದಿಯ ತಿಳಿವು. ಇದಕ್ಕೆ ಪಿಕೆಟಿಯವರು ‘ತಿಳಿವಿನ ಪಸರಿಕೆ’ (knowledge diffusion) ಎನ್ನುತ್ತಾರೆ. ಹೊರನಾಡುಗಳಿಂದ ಹೆಚ್ಚೆಚ್ಚು ಹೂಡಿಕೆಯನ್ನು ತಂದರೆ ಹೆರನಾಡುಗಳ ಒಡೆತನಕ್ಕೆ ಹೆಚ್ಚು ಒಳಗಾಗುವ ಕುತ್ತು ಇದ್ದೇ ಇರುತ್ತದೆ. ಆದ್ದರಿಂದ ತಿಳಿವು, ಅರಿಮೆ ಮತ್ತು ಚಳಕಗಳು, ಮತ್ತು ಕಲಿಕೆಯಿಂದಲೇ ಬಡ ನಾಡುಗಳ ಏಳಿಗೆ ಸಾದ್ಯ ಎಂಬುದು, ನಾಡುಗಳ ಏಳಿಗೆ ಮತ್ತು ಬೆಳವಣಿಗೆಗಳ ಹಿನ್ನೆಲೆಯನ್ನು ಆಳವಾಗಿ ಗಮನಿಸಿ ಪಿಕೆಟಿಯವರು ಕಂಡುಕೊಂಡ ಸತ್ಯ.
ಹಾಗಾಗಿ ಹಿಂದುಳಿದ ದೇಶಗಳು ನಿಜವಾದ ಏಳಿಗೆಯನ್ನು ಕಾಣಬೇಕಿದ್ದಲ್ಲಿ ಮೊದಲ ಹಂತದ ಮತ್ತು ಮೇಲ್ಮಟ್ಟದ ಕಲಿಕೆಯನ್ನು ಸಾಕಶ್ಟು ಕಟ್ಟಿ ಬೆಳೆಸಬೇಕು. ಆದರೆ ನಮ್ಮ ಕರ್‍ನಾಟಕವೂ ಸೇರಿದಂತೆ ಹಲವು ಹಿಂದುಳಿದ ನಾಡುಗಳಲ್ಲಿ ಇಂದು ಮಂದಿಯ ಕಲಿಕೆಯ ವಿಚಾರದೆಡೆಗೆ ಸರಕಾರಗಳು ಗಂಬೀರವಾಗಿ ಗಮನ ಹರಿಸಿಲ್ಲ. ಕಲಿಕೆಯಲ್ಲಿ ಸರಕಾರಗಳು ಹೆಚ್ಚಿನ ಹಣ ತೊಡಗಿಸುತ್ತಿಲ್ಲ, ಮತ್ತು ತಮ್ಮ ಇತರೆ ಹೊಣೆಗಾರಿಕೆಗಳನ್ನು ಹೊತ್ತು ನಡೆಸುತ್ತಿಲ್ಲ ಎಂಬುದು ಒಂದೆಡೆಯಾದರೆ ನಾಡಿನ ಕಲಿಕೆಯರಿಗರು (educationists), ನುಡಿಯರಿಗರು ಮತ್ತು ಇನ್ನಿತರೆ ಕೂಡಣದ ಬುದ್ದಿವಂತರು ಕಲಿಕೆಯ ನಿಜವಾದ ಸ್ವರೂಪ ಹೇಗಿರಬೇಕು, ಅದರ ಗುರಿಗಳೇನು, ಮತ್ತು ಕಲಿಕೆ ಯಾವ ಬಗೆಯಲ್ಲಿ ಸಾಗಿದರೆ ಆಳಿಗೂ, ಸಮುದಾಯಕ್ಕೂ ಒಳಿತಾಗಬಲ್ಲುದು ಎಂಬವುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸೋತಿದ್ದಾರೆ. ನಿಜವಾಗಿಯೂ, ಸೋತಿದ್ದಾರೆ ಎನ್ನುವುದಕ್ಕಿಂತ ಗೊಂದಲಕ್ಕೀಡು ಮಾಡಿ ಮಂದಿಯನ್ನು ತಪ್ಪು ದಾರಿಗೆ ಎಳೆಯುವಲ್ಲಿ ಗೆದ್ದಿದ್ದಾರೆ ಎನ್ನುವುದೇ ಸರಿ ಎನ್ನಿಸುತ್ತದೆ.
ಕಲಿಕೆಯ ಸ್ವರೂಪಕ್ಕೆ ಬಂದರೆ ಮೊದಲ ಹಂತದ ಕಲಿಕೆ ತಾಯ್ನುಡಿಯಲ್ಲೇ ಇರುವುದು ಸರಿಯೆಂದು ಪ್ರಪಂಚದ ಉದ್ದಗಲಕ್ಕೂ ನಡೆದಿರುವ ಅರಕೆಗಳು ತೋರಿಸಿ ಕೊಟ್ಟಿವೆ. UNESCO ಕೂಡ ಇದನ್ನೇ ಹೇಳುತ್ತದಲ್ಲದೆ ತಾಯ್ನುಡಿ ಕಲಿಕೆಯು ಪ್ರತಿ ಮಗುವಿನ ಹಕ್ಕು ಎಂದು ಹೇಳುತ್ತದೆ. ತಾಯ್ನುಡಿಯಲ್ಲಿ ಕಲಿಯುವುದನ್ನು ಹೆಚ್ಚು ಪ್ರೋತ್ಸಾಹಿಸಿ, ಮೊದಲ ಹಂತದ ಕಲಿಕೆಯನ್ನು ತಾಯ್ನುಡಿಯಲ್ಲೇ ಕಟ್ಟುವುದರ ಜೊತೆಗೆ ಮೇಲ್ಮಟ್ಟದ ಕಲಿಕೆಯನ್ನೂ ಕಟ್ಟುವತ್ತ ಸರಕಾರಗಳು ಯೋಚಿಸಬೇಕಾಗಿದೆ. ಹೂಡಿಕೆಯನ್ನು ತಂದು ಕಾಯ್ಗಾರಿಕೆಗಳನ್ನು ಕಟ್ಟಿ ಕೆಲಸಗಳನ್ನು ಹುಟ್ಟು ಹಾಕುವುದರಿಂದ ಒಂದು ಮಟ್ಟಿನ ಏಳಿಗೆ ಸಾದ್ಯವಾಗುತ್ತದೆ. ಆದರೆ ಅದಕ್ಕೆ ಚಳಕಗಳನ್ನು ಒದಗಿಸುವ ಸಲುವಾಗಿ ಮತ್ತು ಆ ಮೂಲಕ ಕಾಯ್ಗಾರಿಕೆಗಳ ಇನ್ನೂ ಹೆಚ್ಚಿನ ಬೆಳವಣಿಗೆಗಾಗಿ ಕಲಿಕೆಯೇ ಮುಕ್ಯವಾಗುತ್ತದೆ ಮತ್ತು ತಾಯ್ನುಡಿ ಮಾದ್ಯಮ ಕಲಿಕೆಯದು ದೊಡ್ಡ ಪಾತ್ರವಿದೆ. ಇಂದು ಬೆಳೆದು ನಿಂತಿರುವ ನಾಡುಗಳಲ್ಲಿಯೂ ಕಲಿಕೆ ಅದರಲ್ಲೂ ತಾಯ್ನುಡಿ ಮಾದ್ಯಮದ ಕಲಿಕೆ ದೊಡ್ಡ ಪಾತ್ರ ವಹಿಸಿರುವುದನ್ನು ಗಮನಿಸಬಹುದು.,
ಆದರೆ, ಇವುಗಳ ಬಗ್ಗೆ ಅಸಡ್ಡೆಯನ್ನು ತೋರುತ್ತಿರುವ ಸರಕಾರದ ಹೊಣೆಗಾರಿಕೆಯ ಇಲ್ಲದಿಕೆ, ಮತ್ತು ಗೊಂದಲಕ್ಕೀಡಾಗಿರುವ ಮಂದಿಯ ಮುಗ್ದತೆಯನ್ನು ಬಳಸಿಕೊಂಡು ಇಂಗ್ಲೀಶ್ ಮಾದ್ಯಮವೇ ಗೆಲುವಿನ ದಾರಿಯೆಂಬ ಹುಸಿಯ ಮೇಲೆ ಕಾಸಗಿ ಶಾಲೆಗಳು ಬೆಳೆದು ನಿಂತು ಕೂಡಣವನ್ನು ದಾರಿ ತಪ್ಪಿಸಿವೆಯಲ್ಲದೆ, ಕೆಲ ಮಂದಿಯನ್ನು ಬಿಟ್ಟು, ಕೂಡಣದ ಒಟ್ಟಾರೆ ಏಳಿಗೆಗೆ ಕಾರಣವಾಗುತ್ತಿಲ್ಲ. ಹಾಗಾಗಿ, ಪಿಕೆಟಿಯವರು ಹೇಳಿರುವ “ತಿಳಿವಿನ ಪಸರಿಕೆ”ಯನ್ನು ಸಾದಿಸಿ, ಆ ಮೂಲಕ ಹಿಂದುಳಿದ ನಾಡುಗಳು ತಮ್ಮ ಏಳಿಗೆಯನ್ನು ಸಾದಿಸಬೇಕಾದರೆ ತಿಳಿವನ್ನು, ಕಲಿಕೆಯನ್ನು ತಮ್ಮ ಎಲ್ಲ ಮಂದಿಗೆ ಎಟುಕಿಸುವಂತೆ ಮಾಡಬೇಕು. ಇದಕ್ಕೆ ಮೊದಲ ಹಂತದ ಕಲಿಕೆಯನ್ನು ತಾಯ್ನುಡಿಯಲ್ಲಿ ಕಟ್ಟುವುದಲ್ಲದೆ, ಮೆಲ್ಲಗೆ ಎಲ್ಲ ಬಗೆಯ ಮೇಲುಮಟ್ಟದ ಕಲಿಕೆಯನ್ನೂ ತಯ್ನುಡಿಗಳಲ್ಲಿಯೇ ಕಟ್ಟುವತ್ತ ಹಮ್ಮುಗೆಗಳನ್ನು ಹೂಡಬೇಕು.
ಏಶಿಯಾ-ಆಪ್ರಿಕಾ ಬಿಡಿಯಲ್ಲಿ ಜಪಾನ್ ಮತ್ತು ತೆಂಕಣ ಕೊರಿಯಾ ದೇಶಗಳು ಕೂಡ ಒಂದು ಗಟ್ಟಿಯಾದ ತಾಯ್ನುಡಿ ಕಲಿಕೆಯ ಬುಡದ ಮೇಲೆಯೇ, ಪಡುವಣದೊಂದಿಗೆ ತಲಾ GDPಯಲ್ಲಿರುವ ಕಂದರವನ್ನು ಮುಚ್ಚಿದವು. ಇವುಗಳಿಗೆ ಮೊದಲು ಕಾಯ್ಗಾರಿಕಾ ಕ್ರಾಂತಿಯಲ್ಲಿ ತೊಡಗಿ ಪಳಗಿದ ಯೂರೋಪ್ ನಾಡುಗಳಾದ ಬ್ರಿಟನ್, ಪ್ರಾನ್ಸ್, ಜರ್‍ಮನಿ ಮುಂತಾದ ದೇಶಗಳು ಮತ್ತು ಅವುಗಳ ಬಳಿಕ ಏಳಿಗೆ ಸಾದಿಸಿದ ಸ್ವೀಡನ್, ಡೆನ್ಮಾರ್‍ಕ್, ಪಿನ್ ಲ್ಯಾಂಡ್ ಮುಂತಾದ ನಾಡುಗಳಿಗೂ ಹಣಕಾಸಿನ ಏಳಿಗೆಯಲ್ಲಿ ತಾಯ್ನುಡಿ ಕಲಿಕೆಯು ಗಟ್ಟಿಯಾದ ಬುನಾದಿಯನ್ನು ಒದಗಿಸಿತು ಎಂದು ಬೇರೆ ಹೇಳಬೇಕಾಗಿಲ್ಲ. ಇದೇ ಬಗೆಯಲ್ಲಿ, ತಾಯ್ನುಡಿ ಕಲಿಕೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳದ ಎಶಿಯಾ-ಆಪ್ರಿಕಾ ಬಿಡಿಯ ನಾಡುಗಳು ಹೂಡಿಕೆ ಹರಿದು ಬಂದಿದ್ದರೂ ಹೆಚ್ಚು ಹಣಕಾಸಿನ ಏಳಿಗೆ ಸಾದಿಸಿಲ್ಲ ಎಂಬುದು ಕಾಕತಾಳೀಯವಲ್ಲ.
ಹೂಡಿಕೆ ಮತ್ತು ನಾಡುಗಳು ಕಯ್ಗೊಳ್ಳುವ ಹಣಕಾಸಿನ ನೀತಿ ಹಣಕಾಸಿನ ಏಳಿಗೆಯಲ್ಲಿ ಮುಕ್ಯವಾದ ಪಾತ್ರವಹಿಸುತ್ತವೆ ಎಂಬುದೇನೋ ನಿಜ. ಆದರೆ ಏಳಿಗೆಯನ್ನು ಮುನ್ನಡೆಸುವುದಕ್ಕೆ ತಿಳಿವೇ ಹೆದ್ದಾರಿ ಎಂಬ ಪಿಕೆಟಿಯವರ ವಾದಕ್ಕೆ ಎರಡು ಮಾತಿಲ್ಲ.
(ಚಿತ್ರದ ಸೆಲೆ: piketty.pse.ens.fr, tcf.org)
ಇತ್ತೀಚಿನ ಅನಿಸಿಕೆಗಳು