ಬಾನೋಡಗಳಲ್ಲೂ ಕಾಣಲಿ ಕನ್ನಡ

 ವಿವೇಕ್ ಶಂಕರ್.

Airbus_A380_blue_sky

ಇತ್ತೀಚಿನ ದಿನಗಳಲ್ಲಿ ಬಾನೋಡಗಳಲ್ಲಿ ಮಂದಿ ಒಂದೂರಿಂದ ಇನ್ನೊಂದು ಊರಿಗೆ ಹೋಗುತ್ತಿರುವ ಎಣಿಕೆ ತುಂಬಾ ಹೆಚ್ಚಾಗಿದೆ. ಈಗಿನ ಬಿರುಸಿನ ಬದುಕಿಗೆ ತಕ್ಕ ಹಾಗೆ ಈ ಬಾನೋಡಗಳ ಓಡಾಟ ಕೂಡ ತುಂಬಾ ಹೆಚ್ಚಾಗಿದೆ. ಇದರಲ್ಲಿ ಓಡಾಡ ಬೇಕಾದರೆ ತುಂಬಾ ದುಡ್ಡು ಕರ‍್ಚು ಆಗುತ್ತದೆ. ಇತ್ತೀಚಿನ ವರುಶಗಳಲ್ಲಿ ಬಾನೋಡದ ಬೇಡಿಕೆಯೂ ಮುಗಿಲಿಗೆ ಏರಿದೆ. ಕರ‍್ನಾಟಕದೊಳಗೆ ಹಾಗೂ ಕರ‍್ನಾಟದಿಂದ ಬೇರೆ ಕಡೆಗೆ ಕೂಡ ಹಲವು ಬಾನೋಡಗಳು ಓಡಾಡುತ್ತವೆ. ಈ ಎಲ್ಲಾ ವ್ಯಾಪಾರವೂ ನಮ್ಮ ಅಂದರೆ ಗ್ರಾಹಕರ ದುಡ್ಡಿನಲ್ಲೇ ನಡೆಯುತ್ತದೆ. ಆದರೆ ಕರ‍್ನಾಟಕ್ಕೆ ಬರುವ ಇಲ್ಲವೇ ಇಲ್ಲಿಂದ ಬೇರೆ ಕಡೆಗೆ ಹೋಗುವ ಬಾನೋಡಗಳಲ್ಲಿ ಸೇವೆಗಳು ಕನ್ನಡದಲ್ಲಿ ದೊರೆಯುತ್ತವೆಯೇ? ಬಾನೋಡದ ಮಾಹಿತಿಯು ಕನ್ನಡದಲ್ಲಿ ಇದೆಯೇ ? ನಮ್ಮ ದುಡ್ಡಿನಿಂದಲೇ ನಡೆಯುತ್ತಿರುವ ಈ ವ್ಯಾಪಾರದಲ್ಲಿ ಕನ್ನಡದ ಬಳಕೆ ಮಾಡುತ್ತಾರೆಯೇ ?

ಈ ಎಲ್ಲಾ ಕೇಳ್ವಿಗಳಿಗೆ ಹೇಳ್ವಿ ಒಂದೇ, ಹೆಚ್ಚು ಕಡಿಮೆ ಎಲ್ಲಾ ಬಾನೋಡಗಳಲ್ಲಿ ಯಾವ ಬಗೆಯ ಸೇವೆ ಇಲ್ಲವೇ ಮಾಹಿತಿ ಕನ್ನಡದಲ್ಲಿ ದೊರೆಯುವುದಿಲ್ಲ. ಇದರಲ್ಲಿ ಪಯಣ ಮಾಡುವುದೆಂದರೆ ಕನ್ನಡವನ್ನು ನಮ್ಮ ಮನೆಗಳ ಒಂದು ಮೂಲೆಯಲ್ಲಿ ಇಟ್ಟು ಆಮೇಲೆ ಹೊರಡಬೇಕು. ಬಾನೋಡವನ್ನು ಹತ್ತುವ ಮುನ್ನ ನಮಗೆ ನೀಡುವ ಏರುಸೆಲವು(boarding pass) ನೋಡಿದರೆ ಸಾಕು, ಕನ್ನಡದ ಪಾಡು ಯಾವ ಮಟ್ಟದಲ್ಲಿದೆ ಎಂದು ತಿಳಿಯುತ್ತದೆ, ಒಂದು ಚೂರು ಕನ್ನಡ ಇಲ್ಲವೇ ಇಲ್ಲ. ಇದಾದ ಮೇಲೆ ಹತ್ತುವಾಗ ಕನ್ನಡದಲ್ಲಿ ಯಾರು ಬರವು ಮಾಡಿಕೊಳ್ಳುವುದಿಲ್ಲ. ಅಲ್ಲಿರುವ ಮುಗಿಲ್ಗಿತ್ತಿಯರಿಗೆ(air hostesses) ಕನ್ನಡ ಗೊತ್ತಿರುವುದಿಲ್ಲ, ಕನ್ನಡದಲ್ಲಿ ಮಾತನಾಡಿದರೆ ಅವರು ಇಂಗ್ಲಿಶ್ನಲ್ಲಿ “we don’t speak Kannada” ಹೇಳುತ್ತಾರೆ. ಹತ್ತಿದ ಮೇಲೆ ಒಳಗೆ ಅಚ್ಚು ಹಾಕಿರುವ ಯಾವ ಮಾಹಿತಿಯೂ ಕನ್ನಡದಲ್ಲಿ ಇಲ್ಲ, ನಾವು ಕೂರುವ ಕೂರಿರ್‍ಕೆ(seat) ಬಳಿಯಿರುವ ಹಲವು ಮಾಹಿತಿಯೂ ಕೂಡ ಕನ್ನಡದಲ್ಲಿ ಇಲ್ಲ.

ಇವೆಲ್ಲಾ ನೋಡಿದರೆ ನಾವು ಕರ‍್ನಾಟದಲ್ಲಿ ಇದ್ದಿವೋ ಇಲ್ಲವೋ ಎಂಬ ಅನುಮಾನ ಕಾಡುತ್ತದೆ. ಬಾನೋಡ ಹಾರುವ ಮುನ್ನ ಹಲವು ಸಾರಿಕೆಗಳು ಕೂಡ ಕೇಳಿ ಬಂದರೂ ಅವುಗಳ್ಯಾವು ಕನ್ನಡದಲ್ಲಿ ಇರುವುದಿಲ್ಲ, ಕನ್ನಡ ಬಲ್ಲವರಿಗೆ ಅವೇನು ತಿಳಿಯುವುದಿಲ್ಲ. ತುರ‍್ತು ಕುಳ್ಳಿಹದಲ್ಲಿ ಏನು ಮಾಡಬೇಕು ಹಾಗೂ ಬೇರೆ ಮಾಹಿತಿಯನ್ನು ನೀಡುವ ಈ ಸಾರಿಕೆಗಳು ಕನ್ನಡದಲ್ಲಿ ಇಲ್ಲವೇ ಇಲ್ಲ. ಇದೆಲ್ಲ ಕರ‍್ನಾಟಕಕ್ಕೆ ಬರುವ ಇಲ್ಲವೇ ಇಲ್ಲಿಂದ ಹೊರಡುವ ಬಾನೋಡಗಳಲ್ಲೇ ನಡೆಯುತ್ತಿವೆ. ಇದೆಂತ ಪಾಡು ನಮ್ಮೂರಿನಲ್ಲೇ ನಮ್ಮ ನುಡಿಗೆ ಎಡೆಯಿಲ್ಲ. ನಮ್ಮ ದುಡ್ಡು ಬೇಕು ನಾವೂ ಕೂಡ ಬೇಕು ಆದರೆ ನಮ್ಮ ನುಡಿ ಬೇಕಿಲ್ಲ. ಹಾಗಾದರೆ ಕನ್ನಡಿಗರು ಏನು ಮಾಡಬೇಕು? ಕನ್ನಡಿಗರು ಸುಮ್ಮನಿರದೆ ತಮ್ಮ ದನಿಯನ್ನು ಎತ್ತಬೇಕು. ಇದು ನಮ್ಮ ದುಡ್ಡು ಅಲ್ವೇ? ನಮ್ಮ ದುಡ್ಡಿಗೆ ನಮ್ಮ ನುಡಿಯಲ್ಲಿ ಸೇವೆ ಮತ್ತು ಮಾಹಿತಿ ಕೇಳುವುದು ನಮ್ಮ ಹುಟ್ಟು ಹಕ್ಕು.

ಮೊದಲಿಗೆ ಕನ್ನಡಿಗರು ಕನ್ನಡಕ್ಕೆ ಒತ್ತಾಯ ಕೋರಬೇಕು. ಸುಮ್ಮನಿದ್ದರೆ ಯಾವ ಬಗೆಯ ಮಾರ‍್ಪಾಡು ನಡೆಯುವುದಿಲ್ಲ. ಆದರೆ ಇಲ್ಲೊಂದು ಮಾತು, ಈಗಾಗಲೇ ಸಣ್ಣ ಮಟ್ಟದಲ್ಲಿ ಕನ್ನಡಿಗರು ಇದರ ಬಗ್ಗೆ ದನಿ ಎತ್ತಿದ್ದಾರೆ. ಅದರ ಪರಿಣಾಮವಾಗಿ ಕೆಲವು ಬಾನೋಡಗಳಲ್ಲಿ ಕೊಂಚ ಮಟ್ಟಿನಲ್ಲಿ ಕನ್ನಡದ ಕಂಪು ಕಂಡು ಬರುತ್ತಿದೆ. ಎತ್ತುಗೆ:- ಎಮಿರೆಟ್ಸ್ ನಲ್ಲಿ ಕನ್ನಡದ ತಿನಿಸುಪಟ್ಟಿಗಳು ದೊರೆಯುತ್ತವೆ ಹಾಗೂ ಬ್ರಿಟಿಶ್ ಏರ‍್ವೇಸ್ನಲ್ಲಿ ಕೂಡ ಕನ್ನಡದ ಸಾರಿಕೆಗಳು ಕೇಳಿ ಬಂದಿವೆ. ಇದು ಸಣ್ಣ ಬೆಳವಣಿಗೆಯಾದರು ಒಳ್ಳೆಯ, ಸರಿಯಾದ ಬೆಳವಣಿಗೆ ಕೂಡ. ಆದರೆ ಇದು ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಬೇಕಾಗಿರುವ ಬೆಳವಣಿಗೆ.

Dubai_Emirates_Kannada

ಕನ್ನಡಿಗರು ಓಡಾಡುವಾಗ ಕನ್ನಡ ದೊರಯದಿದ್ದರೆ ಅದಕ್ಕೆ ಕೋರಬೇಕು, ದೂರುಗಳನ್ನು ಸಲ್ಲಿಸಬೇಕು ಹಾಗೂ ಬೇರೆಯವರಿಗೂ ಇದರ ಸಲುವಾಗಿ ಅರಿವು ಮೂಡಿಸಿದರೆ ಒಳಿತು ಯಾಕೆಂದರೆ ಇದರಿಂದಾಗುವ ಕನ್ನಡ ಬಳಕೆಯಿಂದ ಕನ್ನಡಕ್ಕೆ ಒಂದು ಬೇಡಿಕೆ ಹೆಚ್ಚುತ್ತದೆ. ಅದರ ನೇರ ಪರಿಣಾಮ ಕನ್ನಡಿಗರಿಗೇ ಹೆಚ್ಚು ಕೆಲಸಗಳು ದೊರೆಯುತ್ತವೆ. ನಾವು ಇದನ್ನು ಕೂಡ ಮರೆಯಬಾರದು, ಗ್ರಾಹಕರೇ ಅರಸರು ಎಂದು ಹಲವು ವ್ಯಾಪಾರಿಗಳು ಆಗಾಗ ಸಾರಿದ್ದಾರೆ. ಇವರ ಹುಟ್ಟುವಳಿ ನಿಂತಿರುವುದು ನಮ್ಮ ದುಡ್ಡಿನ ಮೇಲೆ ಅಲ್ವೇ? ಹಾಗಾಗಿ ಯಾವ ಬಗೆಯ ಹಿಂಜರಿಕೆ ಇಲ್ಲದೇ ಕನ್ನಡಕ್ಕೆ ಕೋರಿದರೆ, ಕೊಂಚ ಹೊತ್ತಾದರು ಸರಿ ನಮಗೆ ದೊರಕಬೇಕಾಗಿರುವ ಕನ್ನಡದ ಸೇವೆ ಸಿಕ್ಕೇ ಸಿಗುತ್ತದೆ ಎಂದು ನನ್ನ ಗಟ್ಟಿ ನಂಬಿಕೆ. ಇದಕ್ಕೆ ತಾಳ್ಮೆ ಬೇಕು. ಒಟ್ಟಿನಲ್ಲಿ ಕರ‍್ನಾಟಕಕ್ಕೆ ಬರುವ ಹಾಗೂ ಇಲ್ಲಿಂದ ಹೊರಡುವ ಎಲ್ಲಾ ಬಾನೋಡಗಳಲ್ಲಿ ಕನ್ನಡವೂ ಎಲ್ಲೆಡೆ ಪಸರಿಸಲಿ. ಇದು ಆದಶ್ಟು ಬೇಗನೆ ಆಗಬೇಕಾದರೆ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕೆಂಬ ಒಕ್ಕೂರಲಿನ ದನಿ ಮೂಡಬೇಕು.

(ಚಿತ್ರ ಸೆಲೆ: en.wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications