ಮಾರ‍್ಕೆಟ್ ಏನ್ ದೇವ್ರ?!

– ಬರತ್ ಕುಮಾರ್.

Fredmeyer_edit_1 - Copy

{ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ }

ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ ಬಗ್ಗೆ ಮಾತಾಡುವಾಗ ಹಲವು ಸವಾಲುಗಳು ಎದುರಾಗುತ್ತವೆ. ಅಂತಹ ಕುಳ್ಳಿಹ(situation)ಗಳಲ್ಲಿ ಕಡಾಕಂಡಿತವಾಗಿ ಒಂದು ತೀರ‍್ಮಾನಕ್ಕೆ ಬರಲಾಗುವುದಿಲ್ಲ. ಆಗ ಸಾಮಾನ್ಯವಾಗಿ “ನಾವು ಈ ವಿಶಯವನ್ನು ಮಾರುಕಟ್ಟೆಗೆ ಬಿಟ್ಟುಬಿಡೋಣ. ಅದೇ ಸರಿಯಾದುದೇನು ಎಂದು ತೀರ‍್ಮಾನಿಸಲಿ” ಎಂದು ಹೇಳಲಾಗುತ್ತದೆ. ಅಂದರೆ ಮಾರುಕಟ್ಟೆ ತೀರ‍್ಮಾನಿಸುವುದೆಲ್ಲವೂ ಸರಿಯಾಗಿರುತ್ತದೆ ಎಂಬ ನಿಲುವು ಈ ದಿನಗಳಲ್ಲಿ ಹಲವು ಮಂದಿಯಲ್ಲಿ ಮನೆ ಮಾಡಿದೆ.

ಹೀಗೆ ನಿಲುವು ಹೊಂದಿರುವುದಕ್ಕೆ ಕಾರಣವಿದೆ ಯಾಕಂದರೆ ಯಾವುದೇ ಮಾಡುಗೆ ಮಾರಾಟವಾಗಬೇಕಾದರೆ ಅದು ಕೊಳ್ಳುಗನಿಗೆ ಇಶ್ಟವಾಗಬೇಕು. ತನ್ನ ಮುಂದಿರುವ ಹಲವು ಆಯ್ಕೆಗಳಲ್ಲಿ ಒಂದನ್ನು ಕೊಳ್ಳುಗ ಆರಿಸಿಕೊಳ್ಳುತ್ತಾನೆ. ಆ ಮೂಲಕ ಆರಿಸಿಕೊಳ್ಳುವ ಹಕ್ಕನ್ನು ಕೊಳ್ಳುಗ ಚಲಾಯಿಸುತ್ತಿರುತ್ತಾನೆ. ತನ್ನ ಬೇರುಮಟ್ಟದ ಹಕ್ಕನ್ನು ಚಲಾಯಿಸುವುದರಿಂದ, ಇದು ಮಂದಿಯಾಳ್ವಿಕೆಯ ನೆಲೆಯಲ್ಲಿ ಒಪ್ಪಿತವಾಗುತ್ತದೆ. ಹಾಗಾಗಿ ಮಾರುಕಟ್ಟೆ ತೀರ‍್ಮಾನಿಸುವುದು ಎಂದರೆ ಕೊಳ್ಳುಗರು ತೀರ‍್ಮಾನಿಸುವುದೇ ಆಗಿರುವುದರಿಂದ ಈ ಮೇಲಿನ ನಿಲುವು ಸರಿಯಾಗಿದೆ ಎಂದು ವಾದಿಸಬಹುದು.

ಇದು ಮೇಲ್ನೋಟಕ್ಕೆ ಸರಿಯೆನಿಸಿದರೂ, ಆಳಕ್ಕೆ ಇಳಿದರೆ ಕೆಲವು ಗೊಂದಲಗಳು ಇಲ್ಲವೆ ಕೇಳ್ವಿಗಳು ನಮ್ಮನ್ನು ಕಾಡುತ್ತವೆ. ಹಾರ‍್ವಿ ಕಾಕ್ಸ್ ಎಂಬ ದರ‍್ಮದರಿಗರು ’Market as God’ ಎಂಬ ಬರಹದಲ್ಲಿ ಹೀಗೆ ಹೇಳುತ್ತಾರೆ.

ಯಾವುದೇ ದರ‍್ಮದ ಏರ‍್ಪಾಟಿನ ನೆತ್ತಿಯಲ್ಲಿ ದೇವರು ಇಲ್ಲವೆ ದೇವರ ಬಗ್ಗೆ ನಂಬಿಕೆ ಇರುತ್ತದೆ. ಈ ಹೊಸ ಮಾರುಕಟ್ಟೆಯ ದರ‍್ಮದ ಏರ‍್ಪಾಟಿನಲ್ಲಿ ’ಮಾರುಕಟ್ಟೆ’ಯೇ ದೇವರ ಸ್ತಾನದಲ್ಲಿದೆ ಯಾಕಂದರೆ ಮಾರುಕಟ್ಟೆಯ ಸುತ್ತ ಇರುವ ಗುಟ್ಟು(mystery) ಮತ್ತು ಉದ್ಯಮಿಗಳು ಅದಕ್ಕೆ ತೋರಿಸುವ ಓಲಯ್ಕೆ(reverence). ಏಸುದರ‍್ಮದಲ್ಲಿ ದೇವರನ್ನು ಕೆಲವೊಮ್ಮೆ ಎಲ್ಲಳವಿ, ಎಲ್ಲಬಲ್ಲ ಮತ್ತು ಎಲ್ಲೆಡೆಯಿರುವ ಎಂದು ಬಣ್ಣಿಸುಲಾಗುತ್ತದೆ. ದೇವರಿಗೆ ಈ ಗುಣಗಳು ದಿಟವಾಗಲೂ ಇವೆ ಆದರೆ ಮನುಶ್ಯರು ತಮ್ಮ ಕೆಡುಗೆಲಸಗಳಿಂದ ಇಲ್ಲವೆ ಈ ಪ್ರಾಪಂಚಿಕ ಅನುಬವಗಳ ಎಲ್ಲೆಯಿಂದಾಗಿ ದೇವರ ಈ ಗುಣಗಳನ್ನು ಕಾಣಲಾಗುತ್ತಿಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಮಾರುಕಟ್ಟೆ ಕೂಡ ದೇವರ ಹಾಗೆ ಅಂದರೆ ಅದರ ಅಳವಿನ, ಇರುವಿನ ಬಗ್ಗೆ ಯಾವುದೇ ಕೇಳ್ವಿ ಕೇಳದ ಅದನ್ನು ಒಪ್ಪಿ ನಂಬಬೇಕಾಗುತ್ತದೆ.

ಮಾರುಕಟ್ಟೆಯ ಬಗ್ಗೆ ಹಲವರಲ್ಲಿ ಮೂಡಿರುವ ಬಕ್ತಿಬಾವನೆ ಇಲ್ಲವೆ ನಿಯತ್ತನ್ನು ನೋಡಿದರೆ ನಮಗೆ ಗೊತ್ತಿಲ್ಲದಂತೆ ಮಾರುಕಟ್ಟೆಯನ್ನು, ಹಾರ‍್ವಿ ಕಾಕ್ಸ್ ಹೇಳಿದಂತೆ, ಒಂದು ’ದೇವರಾಗಿ’ ಇಲ್ಲವೆ ದರ‍್ಮವಾಗಿ ಕಾಣುತ್ತಿದ್ದೇವೆ ಯಾಕಂದರೆ ಮನುಶ್ಯರು ಕಶ್ಟ ಕೋಟಲೆಗಳಲ್ಲಿ ಸಿಕ್ಕಿಕೊಂಡು ನಿಸ್ಸಹಾಯಕರಾದಾಗ ’ಎಲ್ಲ ದೇವರಿಗೆ ಬಿಟ್ಟು ಬಿಡೋಣ’ ಎಂದು ಹೇಳುವುದುಂಟು. ಆದರೆ ಈಗ ’ಎಲ್ಲ ಮಾರುಕಟ್ಟೆಗೆ ಬಿಟ್ಟುಬಿಡೋಣ’ ಎನ್ನುವ ಪಾಡು ಎದುರಾಗಿದೆ. ಹಲವು ಬುದ್ದಿಜೀವಿಗಳು ಪ್ರಪಂಚದ ಬೇರೆ ಬೇರೆ ದರ‍್ಮದ ಮತ್ತು ದೇವರ ಬಗ್ಗೆ ಇರುವ ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಅರಿಮೆಯ ಕಾರಣಗಳನ್ನು ಕೊಟ್ಟು ಪ್ರಶ್ನಿಸುವವರು, ಮಾರುಕಟ್ಟೆ ಎಂಬ ದೇವರ ಬಗ್ಗೆ ಅಂತ ಕೇಳ್ವಿಗಳನ್ನು ಕೇಳುತ್ತಿಲ್ಲವಲ್ಲ, ಮಾರುಕಟ್ಟೆಯನ್ನು ದೇವರಂತೆ ಕಾಣುತ್ತಿರುವುದೇಕೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮಾರುಕಟ್ಟೆಯು ತನ್ನ ಬಕ್ತರ ಎಣಿಕೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿರುವುದರಿಂದ ಇದರ ಬಗ್ಗೆ ಮಂದಿ ತಲೆಕೆಡಿಸಿಕೊಳ್ಳದೆ ಮಾರುಕಟ್ಟೆಯ ಮಾಯೆಗೆ ಒಳಗಾಗುತ್ತಿದ್ದಾರೆಯೆ ಎಂದು ಅನಿಸುತ್ತದೆ.

ಹೆಚ್ಚು-ಕಡಿಮೆ ಎಲ್ಲ ’ಹಳೆಯ’ ದರ‍್ಮಗಳು ಮನುಶ್ಯನಿಗೆ ಒಂದು ಲವ್ಕಿಕ ಮಿತಿಯನ್ನು ಹಾಕುತ್ತದೆ. ಆದರೆ ಮಾರುಕಟ್ಟೆಯು ಮನುಶ್ಯನ ಆಸೆಗೆ ಅಂದರೆ ಮನುಶ್ಯನಿಗೆ ಯಾವ ಮಿತಿಯೇ ಇಲ್ಲ ಎಂದು ಹೇಳುತ್ತದೆ. ಮಾರುಕಟ್ಟೆ ಎಂಬ ದೇವರು ತಾನು ಗಟ್ಟಿಯಾಗಿ ನೆಲೆಯೂರಲು ಮನುಶ್ಯನ ಆಸೆಗೆ ಮಿತಿ ಹಾಕಲು ಬಿಡುವುದಿಲ್ಲ. ಹಾಗಾಗಿ ಮಾರುಕಟ್ಟೆಯ ದರ‍್ಮದಲ್ಲಿ ಎಲ್ಲವನ್ನು ಕೊಂಡುಕೊಳ್ಳಬಹುದು. ಎಲ್ಲವನ್ನು ಮಾರಾಟಕ್ಕೆ ಇಡಬೇಕಾಗುತ್ತದೆ. ಮನುಶ್ಯನ ಕಿಡ್ನಿ, ತೊಗಲು, ಬೋನ್ ಮ್ಯಾರೊ, ವೀರ‍್ಯ, ಕೊನೆಗೆ ಗುಂಡಿಗೆ ಕೂಡ ಮಾರಾಟಕ್ಕೆ ಇಡಲಾಗುತ್ತಿದೆ. ಇದಲ್ಲದೆ ಅಮೆರಿಕಾದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಜೀನ್ ಮಾರುಕಟ್ಟೆ’ಯನ್ನು ತೆರೆಯಲು ಸಿದ್ದತೆ ನಡೆದಿತ್ತು; ಆದರೆ ಅದು ಕಯ್ಗೂಡಲಿಲ್ಲ.

ಅಂದರೆ ಮಾರುಕಟ್ಟೆಯು ಈ ನೆಲದ ಮೇಲಿರುವುದಕ್ಕೆಲ್ಲ ’ಬೆಲೆಕಟ್ಟ’ಲು ಶುರು ಮಾಡುತ್ತದೆ. ನಾವು ಏನೇ ಮಾಡಿದರೂ ಅದನ್ನು ಮಾರುಕಟ್ಟೆ ’ಸರಕು’ ಎಂದೇ ಎಣಿಸುತ್ತದೆ. ಮನುಶ್ಯರು ತಮ್ಮನ್ನು ತಾವು ಮಾರಾಟಕ್ಕೆ ಇಡಲಾಗಿರುವ ’ಸರಕು’ಗಳು ಎಂದು ನೋಡಿಕೊಳ್ಳುವ ದಿನಗಳು ದೂರ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮಾರುಕಟ್ಟೆಯ ದರ‍್ಮದಲ್ಲಿ ಮನುಶ್ಯ ಮನುಶ್ಯನಾಗಿ ಉಳಿಯುವುದಕ್ಕಾಗುವುದಿಲ್ಲ. ಅಂತಹ ಪಾಡು ನೆನೆಸಿಕೊಂಡರೆ ಯಾರಿಗಾದರೂ ಕೊಂಚ ಹೆದರಿಕೆ ಆಗುತ್ತದೆ. ಮಾರುಕಟ್ಟೆಯ ಅಳವು ಎಶ್ಟಿದೆಯೆಂದರೆ ಅದು ಮನುಶ್ಯರನ್ನು ಒಂದು ಕಡೆ ಇರಲು ಬಿಡುವುದಿಲ್ಲ. ಜನರು ಮಾರುಕಟ್ಟೆ ಬೇಕೆಂದ ಕಡೆ ಓಡಲು ಅಣಿಯಾಗಿರಬೇಕಾಗುತ್ತದೆ. ಹಾಗಾಗಿ ಮಾರುಕಟ್ಟೆ ಸಂಸ್ಕ್ರುತಿ ಇದ್ದ ಕಡೆ ಅದು ಬೇರೆ ಮಾನವೀಯ ಗುಣಗಳ ಮೇಲೆ ನಿಂತಿರುವ ಸಂಸ್ಕ್ರುತಿ (ಎತ್ತುಗೆಗೆ, ಬುಡಕಟ್ಟು ಸಂಸ್ಕ್ರುತಿ)ಗಳನ್ನು ತಲೆಯೆತ್ತಲು ಬಿಡುವುದಿಲ್ಲ.

ಮುಗಿಸುವ ಮುನ್ನ, ಜಪಾನಿನ ಒಬ್ಬ ಜೆನ್ ಮಾಸ್ಟರ್ ಸಾಯುವ ಮುನ್ನ “ನಾನು ಬದುಕಿನಲ್ಲಿ ಒಂದನ್ನು ಕಲಿತಿದ್ದೇನೆ, ಅದೇನೆಂದರೆ ಎಶ್ಟು ಸಾಕು ಎಂಬುದನ್ನು” ಎಂದು ಹೇಳುತ್ತಾನೆ. ಆದರೆ ಮಾರುಕಟ್ಟೆಯ ದರ‍್ಮದಲ್ಲಿ ’ಇಶ್ಟು ಸಾಕು’ ಎನ್ನುವ ಪದಕಂತೆಗೆ ಅರ‍್ತವೇ ಇಲ್ಲ ಯಾಕಂದರೆ ಯಾವ ಮಾರುಕಟ್ಟೆ ಸಾಕು ಅಂತ ಕಯ್ಕಟ್ಟಿ ಕುಳಿತುಕೊಳ್ಳುತ್ತದೆಯೋ ಅದು ಸಾಯುವುದು ನಿಕ್ಕಿ. ಮನುಶ್ಯರು ಸಾಕು ಎಂದು ಹೇಳಿದರೆ ಮಾರುಕಟ್ಟೆಯ ಉಸಿರು ಹಾರಿಹೋಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: