ಪತ್ರಕ್ಕೊಂದು ಉತ್ತರ

ಪ್ರಶಾಂತ ಸೊರಟೂರ.

ವಿನಾಯಕ ಹಂಪಿಹೊಳಿ ಎಂಬುವವರು ದಟ್ಸ್ ಕನ್ನಡ ಮತ್ತು ಪೇಸಬುಕ್ ತಾಣದಲ್ಲಿ ಎಲ್ಲರ ಕನ್ನಡದ ಬಗ್ಗೆ ಆಡಿರುವ ಮಾತುಗಳಿಗೆ ಉತ್ತರವಾಗಿ ನನ್ನ ಅನಿಸಿಕೆ, ಅನುಬವಗಳನ್ನು ಈ ಬರಹದಲ್ಲಿ ಹಂಚಿಕೊಳ್ಳುತ್ತಿರುವೆ.

ಹಿರಿಯರಾದ ಶಂಕರ ಬಟ್ಟರ ಬಗ್ಗೆ ಬರಹಗಾರರು ಬಳಸಿದ ಕಳಪೆಮಟ್ಟದ, ತಕ್ಕುದಲ್ಲದ ಮಾತುಗಳಿಗೆ ಇಲ್ಲಿ ಒತ್ತುಕೊಡದೇ, ವಿರೋದ ಇದ್ದವರೂ ಕೂಡ ಅಂತಹ ಮಾತುಗಳನ್ನು ಆಡಬಾರದು ಅಂತಶ್ಟೇ ಹೇಳಿ ನನ್ನ ವಯಕ್ತಿಕ ಅನಿಸಿಕೆಗಳನ್ನು ಮುಂದುವರೆಸುವೆ.

ಬರಹಗಾರರು ಉತ್ತರ ಕರ‍್ನಾಟಕದವರ ಮಾತುಗಳಲ್ಲಿ ಮಹಾಪ್ರಾಣಗಳನ್ನು ಬಳಸಲಾಗುತ್ತಿದೆ ಹಾಗಾಗಿ ’ಎಲ್ಲರ ಕನ್ನಡ’ದಿಂದ ತೊಂದರೆಯಾಗುತ್ತದೆ ಅನ್ನುವಂತ ಮಾತುಗಳನ್ನಲ್ಲದೇ, ಇದರಿಂದಾಗಿ ಉತ್ತರ ಕರ‍್ನಾಟಕದವರು ಬೇರೆ ರಾಜ್ಯ ಕೇಳ್ತಾರೆ ಅನ್ನುವಂತ ತಲೆಬುಡವಿಲ್ಲದ ಮಾತುಗಳನ್ನೂ ಆಡಿದ್ದಾರೆ.

ಬರಹವನ್ನು ಮುಂದುವರೆಸೋ ಮೊದಲ ನನ್ನ ಊರು, ಕುಲ-ಗೋತ್ರದ ಬಗ್ಗೆ ಸಣ್ಣದಾಗಿ ಇಲ್ಲಿ ಹೇಳಿಬಿಡ್ತೀನಿ. ಬರಹಗಾರರು ಎತ್ತಿರುವ ತಕರಾರುಗಳಿಗೂ ಇದಕ್ಕೂ ಸಂಬಂದ ಇರೋದರಿಂದ ಹೀಗೆ ಮಾಡಬೇಕಾಗ್ಯದ. ನಮ್ಮೂರು ಉತ್ತರ ಕರ‍್ನಾಟಕದ ಗದಗ, ಜಾತಿಯಿಂದ ಬ್ರಾಹ್ಮಣ (ನಾನು ಜಾತಿನ ಹಚ್ಕೊಂಡವನೂ ಅಲ್ಲ, ಬಿಟ್ಟವನೂ ಅಲ್ಲ ಆದ್ರೂ ಇಲ್ಲಿ ಹೇಳಬೇಕಾಗ್ಯದ. ಇಲ್ಲಾ ಅಂದ್ರ ಮಂದಿ ಅದನ್ನ ದೊಡ್ಡ ವಿಶಯ ಮಾಡಿಬಿಡ್ತಾರ ಅನ್ನೋ ಅಂಜಿಕಿ ನಂದು).

ಬರಹಗಾರರು ಎಲ್ಲರ ಕನ್ನಡದ ಕುರಿತಾಗಿ ಎತ್ತಿರುವ ತಕರಾರುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು,

1) ಉತ್ತರ ಕರ‍್ನಾಟಕದಲ್ಲಿ ಬಳಕೆಯಲ್ಲಿರುವ ಭಾಳ (ಬಹಳ), ಛೋಲೋ (ಚನ್ನ), ಖರೆ (ನಿಜ) ಅನ್ನುವಂತ ಕೆಲವು ಸಾಮಾನ್ಯ ಪದಗಳನ್ನು ಜತೆಗೆ ಭಾಮ್ಟ್ಯಾ (?), ಢೇಪ್ಯಾ (?) ಅನ್ನುವಂತ ವಿಚಿತ್ರಪದಗಳನ್ನು ಎತ್ತಿಕೊಂಡು, ಎಲ್ಲರ ಕನ್ನಡದಿಂದ ಇವುಗಳಿಗೆ ತೊಂದರೆಯಾಗುತ್ತದೆ ಅಂದಿದ್ದಾರೆ.

2) ಉತ್ತರ ಕರ‍್ನಾಟಕದವರನ್ನು ಒಟ್ಟಾಗಿ ಪ್ರತಿನಿದಿಸುವಂತೆ ಮಾತನಾಡಿ, ಇಡಿ ಉತ್ತರ ಕರ‍್ನಾಟಕದವರ ಮಾತಿನಲ್ಲಿ ಮಹಾಪ್ರಾಣಗಳಿವೆ ಹಾಗಾಗಿ ಮಹಾಪ್ರಾಣಗಳನ್ನು ಬರಹಗನ್ನಡದಲ್ಲಿ ಕಯ್ಬಿಡಬಹುದು ಎನ್ನುವ ’ಎಲ್ಲರ ಕನ್ನಡ’ವನ್ನು ಬರೀ ದಕ್ಶಿಣ ಕರ‍್ನಾಟಕಕ್ಕೆ ಸೀಮೀತಗೊಳಿಸಿದ್ದಾರೆ, ಉತ್ತರ ಕರ‍್ನಾಟಕಕ್ಕೆ ಬೇಡ ಎಂದಿದ್ದಾರೆ.

ಬರಹಗಾರರ ಅನಿಸಿಕೆಗಳನ್ನು ಓದಿದಾಗ ಅವರು ಮರಾಟಿ ಪ್ರಬಾವವಿರುವ ಉತ್ತರ ಕರ‍್ನಾಟಕದ ಬ್ರಾಹ್ಮಣರ ಓಣಿಯೊಂದರಿಂದ ಕೂಗುತ್ತಿದ್ದಾರೆ ಅನ್ನಿಸುತ್ತಿದೆ ನನಗೆ ಯಾಕೆಂದರೆ, ಉತ್ತರ ಕರ‍್ನಾಟಕದ ಉದ್ದಗಲದ ಸೊಗಡನ್ನು ಅರಿತವರಾರೂ ಇಂತ ಮಾತುಗಳನ್ನು ಆಡಲಾರರು. ದಕ್ಶಿಣದಂತೆ ಉತ್ತರ ಕರ‍್ನಾಟಕದ ಹೆಚ್ಚಿನ ಕನ್ನಡಿಗರ ಮಾತಲ್ಲೂ ಮಹಾಪ್ರಾಣಗಳಿಲ್ಲ ಅನ್ನುವುದು ಸ್ವಲ್ಪ ಕಿವಿಗೊಟ್ಟು ಕೇಳಿದರೆ ತಾನಾಗಿಯೇ ಗೊತ್ತಾಗುವಂತದು. ಈ ಕುರಿತಾಗಿ ಉತ್ತರದ ಬಾಗದಲ್ಲಿ, ದಕ್ಶಿಣದ ಬಾಗದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ. ದಕ್ಶಿಣ ಕರ‍್ನಾಟಕದ ಬ್ರಾಹ್ಮಣರೂ ಕೂಡ ಉತ್ತರ ಕರ‍್ನಾಟಕದ ಬ್ರಾಹ್ಮಣರಂತೆ ’ಬೇಕಿದ್ದರೆ’ ಮಹಾಪ್ರಾಣ ಉಲಿಯಬಲ್ಲರು. ಬ್ರಾಹ್ಮರಶ್ಟೇ ಅಲ್ಲ ಎರಡೂ ಬಾಗದಲ್ಲಿ ಬೇರೆಯ ಕೆಲವರೂ ’ಬೇಕಿದ್ದರೆ’ ಮಹಾಪ್ರಾಣಗಳನ್ನು ಉಲಿಯಬಲ್ಲರು. (’ಸಾಮಾನ್ಯವಾಗಿ’ ಮಾತನಾಡುವಾಗ ಅವರೆಲ್ಲರ ಮಾತಲ್ಲೂ ಮಹಾಪ್ರಾಣಗಳಿಲ್ಲ ಅನ್ನುವುದು ನನಗಂತೂ ಅನುಬವಕ್ಕೆ ಬಂದಿದೆ. ಸಂಶಯವಿದ್ದವರು ಈ ವಿಶಯವನ್ನು ಒರೆಗೆಹಚ್ಚಬಹುದು).

ಉತ್ತರ ಕರ‍್ನಾಟಕದ ಕೆಲವು ಮುಂದಾಳುಗಳು ಮಾತನಾಡಿರುವ ವಿಡಿಯೋಗಳನ್ನು ಈಗ ನೋಡೋಣ. ಇವರ ಮಾತಲ್ಲಿ ಮಹಾಪ್ರಾಣಗಳಿವೆಯೇ? ನೀವೇ ಹೇಳಿ.

1) ಮೊದಲಿಗೆ ನಮ್ಮೂರು ಗದಗನವರೇ ಆದ ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲ ಅವರ ಈ ಕೆಳಗಿನ ವಿಡಿಯೋ ನೋಡಿ. ಅವರಾಡಿದ ಸಂದರ‍್ಬ, ಅಬ್ಯರ‍್ತಿ ಮುಂತಾದ ಪದಗಳು ಅಲ್ಪಪ್ರಾಣಗಳಾಗಿಯೇ ನನಗಂತೂ ಕೇಳಿಸುತ್ತಿವೆ. ಈ ಸಂದರ‍್ಶನದ ಕೊನೆಯ ಬಾಗದಲ್ಲಿರುವ ’ಗಾಟ’ ಅನ್ನುವಂತ ಪದವನ್ನು ಗಮನವಿಟ್ಟು ಕೇಳಿ. ಪಾಟೀಲರು ’ಮೆಣಸಿನಕಾಯಿ ಗಾಟ’, ’ಮೆಣಸಿನಕಾಯಿ ಗಾಟ’ ಅಂತಾನೇ ಹಲವು ಬಾರಿ ಹೇಳುತ್ತಿದ್ದಾರೆ. ನೆನಪಿರಲಿ ಈ ಪದವನ್ನು ಬರೆಯಬೇಕಾಗಿ ಬಂದಾಗ ’ಘಾಟ’ ಅಂತಾನೇ ಬರೆಯಬೇಕು ಅನ್ನುತ್ತದೆ ಈಗಿನ ಬರಹದ ನಡೆ.

[youtube https://www.youtube.com/watch?v=hzDBB4goUk4&w=420&h=315]

2) ಈಗ ನಮ್ಮೂರಿಂದ ಇನ್ನೊಂಚುರು ಉತ್ತರಕ್ಕೆ ಹೋಗೋಣ. ಗುಲ್ಬರ‍್ಗದವರಾದ ಇನ್ನೊಬ್ಬ ಹಿರಿಯ ರಾಜಕಾರಣಿ ಮಲ್ಲಿಕಾರ‍್ಜುನ ಕರ‍್ಗೆ ಅವರ ಮಾತುಗಳನ್ನು ಕೇಳಿ. ನನಗಂತೂ ಮಹಾಪ್ರಾಣಗಳು ಕೇಳಿಸುತ್ತಿಲ್ಲ.

[youtube https://www.youtube.com/watch?v=LGTZadI1Hug&w=420&h=315]

3) ಸರಿ. ಈಗ ರಾಜಕಾರಣಿಗಳು ಸಾಕು. ಬೆಳಗಾವಿ ಜಿಲ್ಲೆಯವರಾದ ಹಿರಿಯ ಸಾಹಿತಿಗಳಾದ ಚಂದ್ರಶೇಕರ ಕಂಬಾರರ ಮಾತುಗಳನ್ನು ಕೇಳಿ. ’ಮಾಧ್ಯಮ’ ಅನ್ನುವಂತ ಬರಹದಲ್ಲಿರುವ ಪದವನ್ನು ಕಂಬಾರರು ’ಮಾದ್ಯಮ’, ’ಮಾದ್ಯಮ’ ಅಂತಾನೇ ಹಲವು ಬಾರಿ ನುಡಿಯುತ್ತಿದ್ದಾರೆ.

[youtube https://www.youtube.com/watch?v=q8UfbqMLLZg&w=420&h=315]

4) ಬಳ್ಳಾರಿ ಜಿಲ್ಲೆಯವರಾದ ಕುಂ.ವೀರಬದ್ರಪ್ಪನವರ ಮಾತುಗಳನ್ನು ಈಗ ಆಲಿಸಿ. ಬರಹದಲ್ಲಿರುವ ’ಅಖಿಲ’ ಅನ್ನುವಂತ ಪದವನ್ನು ಅವರು ’ಅಕಿಲ’ ಅಂತಾನೇ ಉಲಿಯುತ್ತಿದ್ದಾರೆ.

[youtube https://www.youtube.com/watch?v=gsUsBGHGGpk&w=420&h=315]

ಹಾಗಾದರೆ ಇವರಾರು ಉತ್ತರ ಕರ‍್ನಾಟಕದವರಲ್ಲವೇ!? ಇವರಾಡುತ್ತಿರುವ ನುಡಿ ಕನ್ನಡವಲ್ಲವೇ!? ಬರಹವನ್ನು ತಮ್ಮ ದುಡಿಮೆಯನ್ನಾಗಿಸಿಕೊಂಡವರ ಮಾತಲ್ಲೇ ಮಹಾಪ್ರಾಣಗಳು ಇಲ್ಲವೆನ್ನುವಾಗ, ಸಾಮಾನ್ಯ ಜನರಲ್ಲಿ ಅವುಗಳು ಇಲ್ಲದಿರುವುದು ತುಂಬಾನೇ ಸಾಮಾನ್ಯವಲ್ಲವೇ?

’ಎಲ್ಲರ ಕನ್ನಡ’ದ ನಡೆಗಳು ದಕ್ಶಿಣ ಕರ‍್ನಾಟಕಕ್ಕೆ ಎಶ್ಟು ಮುಕ್ಯವೋ ಉತ್ತರ ಕರ‍್ನಾಟಕಕ್ಕೂ ಅಶ್ಟೇ ಇಲ್ಲವೇ ಅದಕ್ಕಿಂತ ಹೆಚ್ಚಿಗೆಯೇ ಬೇಕು. ಯಾಕೆಂದರೆ ಎಲ್ಲರ ಕನ್ನಡದಿಂದ ಲಿಪಿಯಲ್ಲಿರುವ ತೊಡಕುಗಳು, ಪದಗಳಲ್ಲಿರುವ ಕಗ್ಗಂಟಗಳು ಕಳಚಿಕೊಂಡು ಕಲಿಕೆ ಸುಲಬವಾಗಬಲ್ಲದು. ಕಲಿತವರ ಎಣಿಕೆ ಮತ್ತು ಅದರಿಂದ ಹೊಮ್ಮುವ ತಿಳುವಳಿಕೆ ಹೆಚ್ಚಾಗಬಲ್ಲದು. ಕಲಿತವರ ಎಣಿಕೆ ಕಡಿಮೆಯಿರುವ ನಮ್ಮ ಉತ್ತರದ ಬಾಗಕ್ಕೆ ಇದು ಹೇಳಿಮಾಡಿಸಿದಂತಿದೆ.

ಇಲ್ಲಿ ಇನ್ನೊಂದು ಪ್ರಶ್ನೆ ಏಳುತ್ತದೆ, ಕೆಲವು ಮಂದಿಯ ಬಾಯಲ್ಲಿ ಮಹಾಪ್ರಾಣ ಹೊರಳುವಾಗ ಅವರ‍್ಯಾಕೆ ಮಹಾಪ್ರಾಣಗಳನ್ನು ಬಿಡಬೇಕು. ಇಂತಲ್ಲಿ ನೇರವಾಗಿ ನಾವು ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ 1) ಇಡಿ ಕರ‍್ನಾಟಕದಲ್ಲಿ ಅಂತವರು ಎಶ್ಟು ಮಂದಿ ಇದ್ದಾರೆ? 2) ಆ ಮಂದಿಯ ಮಾತಲ್ಲೂ ಬಳಕೆಯಾಗುವ ಮಹಾಪ್ರಾಣ ಪದಗಳ ಬಳಕೆ ಎಶ್ಟು? ಮೊದಲನೆಯದಕ್ಕೆ 3-4% ಅಂತಾ ಹೇಳಬಹುದಾದರೆ, ಎರಡನೆಯದಕ್ಕೆ ಲಕ್ಶಗಟ್ಟಲೇ ಪದಗಳಲ್ಲಿ 30-40 ಪದಗಳೆನ್ನಬಹುದೆನೋ. ಕೆಲವು ಮಂದಿ ಮಾತನಾಡುವ, ಕೆಲವೇ ಕೆಲವು ಪದಗಳಲ್ಲಿ ಮಹಾಪ್ರಾಣಗಳನ್ನು ಬಳಸುತ್ತಾರೆ ಅದಕ್ಕೆ ಇಡಿ ನುಡಿಕುಟುಂಬವೇ ಲಿಪಿಯಲ್ಲಿ ಆ ಹೊರೆಯನ್ನು ಹೊರಬೇಕು ಅನ್ನುವುದು ಸರಿಯೇ?

ಇಶ್ಟಕ್ಕೂ ಕೆಲವು ಮಂದಿ ಮಹಾಪ್ರಾಣಗಳು ತಮಗೆ ಬೇಕೇ-ಬೇಕು ಅನ್ನುವುದಾದರೆ ಬಳಸಲು ಯಾರದೆನೂ ಅಡ್ಡಿಯಿರಲಾರದು. ಯಾವ ಜಾತಿ, ಪ್ರದೇಶವಾದರೇನು ಎಲ್ಲರಿಗೂ ಅವರವರ ನಿಲುವಿಗೆ ತಕ್ಕಂತೆ ನಡೆದುಕೊಳ್ಳುವ ಸ್ವಾತಂತ್ರವಿದೆ. ಆದರೆ ಹಾಗೆನೇ ಬೇರೆಯವರಿಗೂ ಮಹಾಪ್ರಾಣಗಳನ್ನು ಕಯ್ಬಿಡುವ ಸ್ವಾತಂತ್ರವಿರಬೇಕು. ಹಾಗೇ ಕಯ್ಬಿಡುವುದು, ಅಸ್ವಾಬಾವಿಕ, ತಪ್ಪು ಅನ್ನುವಂತ ಅಲ್ಲಗಳೆತ, ಕೀಳರಿಮೆ, ತೆಗಳಿಕೆ ನಿಲ್ಲಬೇಕು. ಅಪ್ಪಟ ಕನ್ನಡದ ಪದಗಳಲ್ಲಿ ಮಹಾಪ್ರಾಣಗಳೇ ಇಲ್ಲ ಅನ್ನುವುದು ನಿಜವಾಗಿರುವಾಗ, ಮಹಾಪ್ರಾಣವಿಲ್ಲದ ಬರಹ ಕನ್ನಡಿಗರಿಗೆ ತುಂಬಾನೇ ಸ್ವಾಬಾವಿಕ.

’ಎಲ್ಲರ ಕನ್ನಡ’ದ ನಿಲುವು ’ಏನು’ ಅನ್ನುವುದನ್ನು, ಅದನ್ನು ವಿರೋದಿಸುವ ಮೊದಲು ಆಳವಾಗಿ, ಸರಿಯಾಗಿ ತಿಳಿದುಕೊಳ್ಳಬೇಕು. ಆದರೆ ಈಗ ವಿರೋದಿಸುವವರಲ್ಲಿ ಅಂತ ನಡೆ ಕಾಣುತ್ತಿಲ್ಲ ಅನ್ನುವುದು ಬೇಸರದ ಸಂಗತಿ. ಎಲ್ಲರ ಕನ್ನಡವೆಂಬ ಬರಹಗನ್ನಡದ ನಡೆ ಕರ‍್ನಾಟಕದ ಎಲ್ಲಾ ಒಳನುಡಿಗಳನ್ನೂ ಇರುವಂತೆಯೇ ಸೇರಿಸಿಕೊಂಡು ಇಲ್ಲವೇ ಎಲ್ಲವನ್ನೂ ಕಯ್ಬಿಟ್ಟು ಸಾಗುವಂತದಲ್ಲ. ಹಲವು ಒಳನುಡಿಗಳಿಗೆ, ಆಡುನುಡಿಗೆ ’ಹತ್ತಿರ’ವಾಗಿರುವ ಆದರೆ ಎಲ್ಲರಿಗೂ ತಿಳಿಯಲೆಂದು ’ಬರಹ’ಕ್ಕಿರುವ ಕೆಲವು ಚವ್ಕಟ್ಟುಗಳನ್ನು ಇಟ್ಟುಕೊಂಡಿರುವ ನಿಲುವು ಎಲ್ಲರ ಕನ್ನಡದ್ದು ಎಂದು ಅರಿತುಕೊಳ್ಳಬೇಕಾಗಿದೆ. ಎಲ್ಲರಕನ್ನಡ ಇರುವುದು ಪ್ರತಿಯೊಬ್ಬ ಕನ್ನಡಿಗನಿಗೂ ತನ್ನ ಉಲಿಕೆಗೆ, ತನ್ನ ಒಳನುಡಿಗೆ ಗವ್ರವ ತಂದುಕೊಡುವಂತಹುದು. ಹಾಗಾಗಿ ಎಲ್ಲರಕನ್ನಡವನ್ನು (ಲಿಪಿ ಸುದಾರಣೆ ಮತ್ತು ಕನ್ನಡದ ಬೇರು ಪದಗಳನ್ನು) ಕನ್ನಡಿಗರನ್ನು ಒಗ್ಗೂಡಿಸಲು ಬಳಸಲಾಗುತ್ತಿದೆಯೇ ಹೊರತು ಒಡೆಯಲಿಕ್ಕಲ್ಲ.

ಮೂರು-ನಾಲ್ಕು ವರುಶಗಳ ಹಿಂದೆ ಮೊಟ್ಟಮೊದಲ ಬಾರಿಗೆ ಶಂಕರ ಬಟ್ಟರ ಅಂಕಣವೊಂದನ್ನು ಓದಿದಾಗ ನನಗೂ ಮಹಾಪ್ರಾಣ ಏಕೆ ಬಿಡಬೇಕು ಅನ್ನಿಸಿತ್ತು. ನನಗೆ ಮಹಾಪ್ರಾಣ ಬರೆಯಲು ಬರುತ್ತದಲ್ಲ ಬೇರೆಯವರಿಗೆ ಅದ್ಯಾಕೆ ತೊಂದರೆ ಆಗಬೇಕು ಅನ್ನುವಂತ ಅನಿಸಿಕೆಗಳೇ ನನ್ನಲ್ಲಿದ್ದವು. ಆದರೆ ಈ ನಿಟ್ಟಿನಲ್ಲಿ ಶಂಕರ ಬಟ್ಟರ ಹೊತ್ತಗೆಗಳನ್ನು ಓದಿದಾಗ ಮತ್ತು ನಾನೂ ಕೂಡ ಹೊಸಬರಹವನ್ನು ಬರೆಯಲು ತೊಡಗಿದಾಗ ಅದರ ಒಳಿತುಗಳು ನೇರವಾಗಿ ಕಾಣತೊಡಗಿದವು. ಕನ್ನಡದ ಬೇರು ಪದಗಳಿಗೆ ಒತ್ತುಕೊಟ್ಟು, ಲಿಪಿಯಲ್ಲಿ ತಕ್ಕುದಾದ ಬದಲಾವಣೆಗಳನ್ನು ಮಾಡಿಕೊಳ್ಳುವಂತ ’ಎಲ್ಲರ ಕನ್ನಡ’ದ ನಿಲುವು ನಿಜವಾಗಲೂ ಎಲ್ಲ ಕನ್ನಡಿಗರಿಗೆ ಒಳಿತನ್ನು ಮಾಡಬಲ್ಲದು.

ಬರಹ ಮುಗಿಸುವ ಮುನ್ನ, ಬರಹಗಾರರು ಅದೆನೋ ’ಗಂಡು ನುಡಿ’ ಅನ್ನುವ ವಿಚಾರ ಎತ್ತಿದ್ದಾರೆ. ಉತ್ತರ ಕರ‍್ನಾಟಕದ್ದು ಗಂಡು ನುಡಿ ಅನ್ನುವ ಅವರು, ಅದ್ಯಾಕೋ ಹೆಣ್ತನಕ್ಕಿರುವ (ಮೆದುತನಕ್ಕಿರುವ) ಮಹತ್ವವನ್ನು ಅಲ್ಲಗಳೆದಿರುವಂತಿದೆ. ಇರಲಿ, ಅದು ಬರೀ ಹುಮ್ಮಸ್ಸಿನಲ್ಲಿ ಬರೆದಿರುವ ಸಾಲುಗಳೆಂದುಕೊಳ್ಳೋಣ. ಕನ್ನಡ ತನಗೆ ಗಂಡಸ್ತನ (ಗಡಸುತನ) ಬೇಕೆಂದಾಗ ಹೆಚ್ಚಾಗಿ ಒತ್ತಕ್ಶರಗಳನ್ನು ಬಳಸಿಕೊಂಡು ದಕ್ಕಿಸಿಕೊಳ್ಳತ್ತದೆಯೇ ಹೊರತು ಸಂಸ್ಕ್ರುತದ ಮಹಾಪ್ರಾಣಗಳಿಗೆ ಅದು ಮೊರಹೋಗುತ್ತದೆ ಅಂತಲ್ಲ. ಇದರಲ್ಲಿ ಉತ್ತರ, ದಕ್ಶಿಣದ ಮಾತುಗಳೇಕೆ? ಇಕ್ಕು, ಗುದ್ದು, ಕೆಚ್ಚೆದೆ ಅನ್ನುವುದು ಅದಕ್ಕಿರುವ ಒರಟುತನದ, ಗಡಸುತನದ ಸೊಗಡಾದರೆ ಇಂಪು, ಕಂಪು, ಸೊಂಪು ಅನ್ನುವಂತ ಮೆದುತನದ ಸೊಬಗೂ ನಮ್ಮ ನಲ್ನುಡಿಗಿದೆ, ಕಣ್ತೆರೆದು ನೋಡಬೇಕಶ್ಟೇ.

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಅಪ್ಪಟ ಕನ್ನಡದ ಪದಗಳಲ್ಲಿ ಮಹಾಪ್ರಾಣಗಳೇ ಇಲ್ಲ ಅನ್ನುವುದು ನಿಜವಾಗಿರುವಾಗ, ಮಹಾಪ್ರಾಣವಿಲ್ಲದ ಬರಹ ಕನ್ನಡಿಗರಿಗೆ ತುಂಬಾನೇ ಸ್ವಾಬಾವಿಕ. – ಸರಿಯಾದ ಮಾತು. ಒಳ್ಳೆಯ ಬರಹ.

  2. ಡಿ ಎನ್ ಶಂಕರ ಬಟ್ಟರ ಲಿಪಿಕ್ರಾಂತಿಯನ್ನು ಒಪ್ಪದಿರುವವರಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಕೊರತೆಯೆಂದರೆ ” ಕನ್ನಡಿಗರ ಮಾತಿನ ಉಚ್ಚಾರಣೆಯಲ್ಲಿ ಇಲ್ಲದ ಅಕ್ಕರಗಳನ್ನು ಕನ್ನಡ ಬರಹದಲ್ಲಿ ಬರೆಯಬೇಕಾದ ಅಗತ್ಯವಿಲ್ಲ ” ಎಂಬ ಸಂಗತಿಯನ್ನು ಅರಿಯದಿರುವುದು . ಇದನ್ನು ಅವರು ಮನದಟ್ಟು ಮಾಡಿಕೊಳ್ಳಬೇಕಾದರೆ , ಈಗ ಕನ್ನಡ ಬರಹದಲ್ಲಿ ಬಳಸುತ್ತಿರುವ ಅರಾಬಿಕ್ , ಪರ್ಶಿಯನ್ , ಉರ್ದು , ಮರಾಟಿ , ಹಿಂದಿ ಮತ್ತು ಇಂಗ್ಲಿಶಿನ ಪದರೂಪಗಳನ್ನು , ಆಯಾಯ ನುಡಿಗಳ ಮೂಲಪದರೂಪಗಳ ಜತೆ ಹೋಲಿಸಿ ನೋಡಿದರೆ , ಕನ್ನಡಿಗರ ಮಾತಿನ ಉಚ್ಚಾರಣೆಯಲ್ಲಿ ಅವು ಬದಲಾಗಿರುವುದು ಕಂಡು ಬರುತ್ತದೆ . ಈ ರೀತಿ ಬದಲಾಗುವುದಕ್ಕೆ ಕಾರಣವೇನೆಂದರೆ , ಕನ್ನಡಿಗರಾದ ನಾವು ಇತರ ನುಡಿಗಳಲ್ಲಿನ ಪದಗಳನ್ನು ಎರವಲಾಗಿ ಪಡೆದುಕೊಂಡು ಬಳಸತೊಡಗಿದಾಗ , ಕನ್ನಡ ನುಡಿ ಸಾಮಗ್ರಿಗಳಾದ ಮಾತಿನ ಉಲಿ ರಚನೆ ಪದ ರಚನೆ ಮತ್ತು ವಾಕ್ಯ ರಚನೆಯ ನಿಯಮಗಳಿಗೆ ತಕ್ಕಂತೆ ಬದಲಾಗುತ್ತವೆ .
    ಕನ್ನಡ ನುಡಿಯಲ್ಲಿ ಮಹಾಪ್ರಾಣಗಳು ಇಲ್ಲದಿರುವುದರಿಂದ , ಕರ್ನಾಟಕದ ಯಾವುದೇ ಊರಿನಲ್ಲಿಯೂ ಕನ್ನಡಿಗರ ಉಚ್ಚಾರಣೆಯಲ್ಲಿ ಅವು ಕೇಳಿ ಬರುವುದಿಲ್ಲ . ಸಂಸ್ಕ್ರುತ ಹಾಗೂ ಇನ್ನಿತರ ನುಡಿಗಳಿಂದ ಎರವಲು ಪಡೆದಿರುವ ಮಹಾಪ್ರಾಣವುಳ್ಳ ಪದಗಳು , ಕನ್ನಡಿಗರ ಬಾಯಲ್ಲಿ ಅಲ್ಪಪ್ರಾಣಗಳಾಗಿವೆ ಉಚ್ಚಾರಗೊಳ್ಳುತ್ತಿವೆ . ಆದುದರಿಂದ ಡಿ ಎನ್ ಎಸ್ ಹೇಳುವಂತೆ ಕನ್ನಡಿಗರು ಬರಹದಲ್ಲಿ ಮಹಾಪ್ರಾಣಗಳನ್ನು ಬಿಡುವುದು ಸರಿಯಾದ ನಿಲುವಾಗಿದೆ .
    ಸಿ ಪಿ ನಾಗರಾಜ

  3. ನನಗ ತಡಕೊಲಾಕ ಆಗಲಿಲ್ಲರಿ… ಒತ್ತರಿಸಿ ಬರಕತ್ತಿತ್ತು.. ನಿಮ್ಮಂಗ ಹಗುರಂಗ ಹೇಳಿದ್ರ ತಿಳ್ಯೇನ್ಗಿಲ್ಲ ಅದಕ್ಕ ಜೋರಾಗಿ “ಝಾಡಿಸಿ” ಅಲ್ಲೇ ಬರಿದೀನಿ. 🙂 🙂 🙂

  4. KP Bolumbu says:

    ಕುಂ.ವೀ. ಮಹಾಪ್ರಾಣಗಳನ್ನು ಉಚ್ಚರಿಸದಿರಲಿಲ್ಲ. (ಉಚ್ಚರಿಸಿದ್ದರು) ಆದರೆ ಅವರ ಉಚ್ಚಾರ subtle ಆಗಿತ್ತು. ಮಹಾಪ್ರಾಣಗಳನ್ನು ಒಪ್ಪುವವರು ಈ subtlenessನ ಒಪ್ಪುವವರೇ ಆಗಿದ್ದಾರೆ.

Nagaraja Chekkere Puttegowda ಗೆ ಅನಿಸಿಕೆ ನೀಡಿ Cancel reply

%d bloggers like this: