ಬುಲೆಟ್ ಟ್ರೇನ್ ಹಿಂದಿರುವ ಗುಟ್ಟೇನು?

 ವಿವೇಕ್ ಶಂಕರ್.

ಜಪಾನ್ ಅಂದರೆ ನೇಸರು ಹುಟ್ಟುವ ನಾಡು. ಇದರ ಜೊತೆ ಬುಲೆಟ್ ಟ್ರೇನೂ ತುಂಬಾ ಹೆಸರು ಪಡೆದಿದೆ. ಒಂದೂರಿಂದ ಇನ್ನೊಂದು ಊರಿಗೆ ಹೊತ್ತು ಹೊತ್ತಿಗೂ ಓಡಾಡುವ ಬಿರುಸು ಹಳಿಬಂಡಿಗಳ ನಾಡೇ ಜಪಾನ್. ಅವುಗಳು ಓಡಾಡುವ ಬಿರುಸಿನಿಂದಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಚಿಟಕಿ ಹೊಡೆಯೊಳಗೆ ಓಡಾಡಬಹುದು. ಇದು ಇಡೀ ಜಗತ್ತಿನ ಗಮನವನ್ನು ಸೆಳೆದಿದೆ, ಹಾಗಾದರೆ ಇದರ ಗೆಲುವಿಗೆ ದೂಸರವೇನು ? ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.

20140531_blp504

ಹಳಿಬಂಡಿಗಳು ಜಪಾನ್ ನಾಡಿನ ಬೆಳವಣಿಗೆಯ ಒಂದು ಗುರುತು. ಹಿಂದೆ, 1930 ರಲ್ಲಿ ಟೋಕಿಯೋ ಊರಿಗೂ ನಗೋಯ(Nagoya), ಕ್ಯೂಟೊ(Kyoto), ಒಸಾಕ(Osaka) ಮತ್ತು ಕೋಬೆ(Kobe) ಮುಂತಾದ ಊರುಗಳ ನಡುವೆ ಓಡಾಡುವ ಹಳಿಬಂಡಿಗಳಲ್ಲಿ ದಟ್ಟಣೆ(congestion) ತುಂಬಾ ಹೆಚ್ಚಾಗಿತ್ತು. ಶಿನ್ಕಾನ್ಸೆನ್(Shinkansen, ಇಂಗ್ಲಿಶ್ನಲ್ಲಿ “new mainline”) ಹೆಸರಿನ ಮೊದಲ ಕಡುವುರುಬಿನ ಹಳಿಬಂಡಿಯೂ(high speed train) 1964 ರಲ್ಲಿ ಟೋಕಿಯೋ ಒಸಾಕ ಊರುಗಳ ನಡುವೆ ಓಡಾಡಿತು. ಆರು ಗಂಟೆಯ ಪಯಣ ಈಗ ನಾಲ್ಕು ಗಂಟೆಗೆ ಇಳಿಯಿತು. ಇದು ಬಾನೋಡದ ಓಡಾಟಕ್ಕೂ ಪಯ್ಪೋಟಿಯನ್ನು ನೀಡಿತು.

ಜಪಾನ್ ನಾಡಿನ ನೆಲದರಿಮೆ(geography) ಹೇಗಿದೆಯೆಂದರೆ ಇಲ್ಲಿನ 128 ಮಿಲಿಯನ್ ಮಂದಿ ಕೆಲವೇ ಕೆಲವು ಊರುಗಳಲ್ಲಿ ನೆಲೆಸಿದ್ದಾರೆ. ಆದುದರಿಂದಲೇ ಟೋಕಿಯೋ ಊರಿಗೂ ಈ ಕೆಲವು ಊರುಗಳಿಗೆ ಕಡುವುರುಬಿನ ಹಳಿಬಂಡಿಗಳನ್ನು ಒದಗಿಸಿದರೆ ಪ್ರತಿದಿನದ ಓಡಾಟಕ್ಕೆ ತುಂಬಾ ಅನುಕೂಲವಾಗುತ್ತದೆ. ಟೋಕಿಯೋದಲ್ಲಿ 4 ಕೋಟಿ ಮಂದಿ ಇದ್ದಾರೆ, ಒಸಾಕ, ಕ್ಯೂಟೊ ಹಾಗೂ ಕೋಬೆ ಊರುಗಳಲ್ಲಿ ಸುಮಾರು 2 ಕೋಟಿ ಮಂದಿ ನೆಲೆಸಿದ್ದಾರೆ. ಈ ಹಳಿಬಂಡಿಗಳಲ್ಲಿ ಓಡಾಡುವುದಕ್ಕೆ ಹೆಚ್ಚು ಕರ‍್ಚಾದರೂ ಜಪಾನಿನ ಸಿರಿವಂತ ಮಂದಿಗೆ ಇದು ಅಡ್ಡಿಯಲ್ಲ. ಈ ಕಡುವುರುಬಿನ ಹಳಿಬಂಡಿ ಶುರುವಾಗಿ ಮೂರು ಏಡು(ವರುಶ)ಗಳಲ್ಲೇ 100 ಮಿಲಿಯನ್ ಮಂದಿ ಓಡಾಡಿದರು, 1976 ರಲ್ಲಿ ಇದು 100 ಕೋಟಿಗೆ ಏರಿತು. ಈಗ ಒಂದು ಏಡಿನಲ್ಲಿ ಸುಮಾರು 14.3 ಕೋಟಿ ಮಂದಿ ಓಡಾಡುತ್ತಾರೆ. ಊರುಗಳ ನಡುವೆ ಬಿರುಸಾಗಿ ಓಡಾಡುವ ಜೊತೆ ಇಲ್ಲಿನ ಮಂದಿ ಇದರ ಮೇಲೆ ಕರ‍್ಚು ಮಾಡುವುದರಿಂದ ಈ ಕಡುವುರುಬಿನ ಹಳಿಬಂಡಿಗಳ ಗೆಲುವಾಗಿವೆ.

1987 ರಲ್ಲಿ ಜಪಾನ್ ತಮ್ಮ ಹಳಿಬಂಡಿಯ ಏರ‍್ಪಾಟನ್ನು ಏಳು ಕೂಟಗಳಾಗಿ ಪಾಲು ಮಾಡಿದರು, ಇವೆಲ್ಲ ಆಳ್ವಿಕೆಯೇತರರ ಹಾಗೂ ಹೆಚ್ಚುವರಿ ಮಾಡುವ ಕೂಟಗಳು. ಈ ಏಳು ಕೂಟಗಳಲ್ಲಿ ಪಯಣಿಗರ ಎಣಿಕೆಯಲ್ಲಿ ಜೆ.ಆರ್ ಈಸ್ಟ್ ಹೆಚ್ಚು ದೊಡ್ಡ ಕೂಟ, ಇವರಿಗೆ ಆಳ್ವಿಕೆ ನೆರವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಯಾಕೆಂದರೆ ಇವರಿಗೆ ಹಳಿಬಂಡಿಯ ದಾರಿಯಲ್ಲಿ ಬರುವ ಎಲ್ಲಾ ನಿಲ್ದಾಣಗಳು, ಹಳಿಗಳು ತಮಗೆ ಸೇರಿರುತ್ತವೆ. ಇದರಿಂದ ಇಲ್ಲಿನ ಪಾರುಪತ್ಯಯ ತಂಡಗಳು ಮಾಡಿದ್ದೇ ಕೆಲಸಗಳನ್ನು ಮತ್ತೆ ಮಾಡುವುದಿಲ್ಲ. ಆದುದರಿಂದಲೇ ಜಪಾನ್ ನಲ್ಲಿ ಈ ಬಗೆಯ ನೆಲುಹು(network) ಕಟ್ಟಬಹುದು. ಇದರ ಜೊತೆ ಜೆ.ಆರ್ ಈಸ್ಟ್ ಬಳಿಯಿರುವ ನೆಲ(land) ಹಾಗೂ ಇವರಿಗೆ ಸೇರಿರುವ ಕಟ್ಟಡ, ಮಳಿಗೆಗಳಿಂದ ಕೂಡ ಹುಟ್ಟುವಳಿ ಪಡೆಯುತ್ತಾರೆ, ಈ ಹುಟ್ಟುವಳಿಯನ್ನು ಮತ್ತೆ ಈ ಹಳಿಬಂಡಿಯ ನೆಲುಹುವಿನ ಸಲುವಾಗಿ ಮರುಹೂಡುತ್ತಾರೆ. ಇದರಿಂದ ಇವರು ಇಂತಹ ಏರ‍್ಪಾಟನ್ನು ಸುಳುವಾಗಿ ಕಟ್ಟಬಹುದು ಆದರೆ ಬೇರೆ ನಾಡಿನಲ್ಲಿ ಇದನ್ನು ಮಾಡುವುದು ಒಂದು ತೊಡಕಿನ ಕೆಲಸವೇ ಸರಿ.

ಒಂದೆಡೆ ಮಂದಿ ಓಡಾಡದ ಬೇಡಿಕೆಯನ್ನು ಪೂರಯಿಸುತ್ತಾ ಇನ್ನೊಂದೆಡೆ ಹಳಿಬಂಡಿಯ ನೆಲುಹು ಸುತ್ತಲೂ ದೊಡ್ಡ ಬೆಳವಣಿಗೆಗಳನ್ನು ಮಾಡುವುದರಿಂದ ಇದಕ್ಕೆ ಅದೇ ಒಂದು ದೊಡ್ಡ ಕೊಡುಗೆ ಹಾಗೂ ಈ ಎಲ್ಲಾ ಪಯಣಗಳಿಗೂ ಹೆಚ್ಚು ಬೆಲೆಯನ್ನು ಕೂಡ ಹಾಕಬಹುದು. ಇವೆಲ್ಲವೂ ಜಪಾನಿನ ಬುಲೆಟ್ ಟ್ರೇನಿನ ಗೆಲುವಿಗೆ ದೂಸರುಗಳು. ಒಟ್ಟಿನಲ್ಲಿ ಮುಂದುವರೆದ ಜಪಾನ್ ತಮ್ಮ ಜಾಣ್ಮೆಯಿಂದ ಜಗತ್ತನ್ನೇ ಬೆರಗೊಳಿಸುವ ಕಡುವುರುಬಿನ ಹಳಿಬಂಡಿಯ ಏರ‍್ಪಾಟನ್ನು ಕಟ್ಟಿದ್ದಾರೆ, ಇದು ಎಲ್ಲರಿಗೂ ಒಂದು ಮಾದರಿ.

(ಮಾಹಿತಿ ಮತ್ತು ಚಿತ್ರ ಸೆಲೆ: economist.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.