ಇಂಬಿನ ಮುನ್ನೊಟ್ಟುಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9
ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) fore ಒಟ್ಟು:
ಈ ಒಟ್ಟಿಗೆ ಮುಂದಿನ ಎಂಬ ಇಂಬಿನ ಹುರುಳು ಮಾತ್ರವಲ್ಲದೆ, ಮೊದಲಿನ ಇಲ್ಲವೇ ಹಿಂದಿನ ಎಂಬ ಹೊತ್ತಿನ ಹುರುಳೂ ಇದೆ; ಇವುಗಳಲ್ಲಿ ಹೊತ್ತಿನ ಹುರುಳನ್ನು ಮುಂದೆ (3)ರಲ್ಲಿ ವಿವರಿಸಲಾಗಿದೆ; ಮುಂದಿನ ಎಂಬ ಇಂಬಿನ ಹುರುಳಿನಲ್ಲಿ ಇದನ್ನು ಬಳಸಿರುವಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮುಂದೆ ಬಳಸಲು ಬರುತ್ತದೆ:
land | ನೆಲ | foreland | ಮುನ್ನೆಲ | |
name | ಹೆಸರು | forename | ಮುಂಬೆಸರು | |
mast | ಕೂವೆಮರ | foremast | ಮುಂಕೂವೆಮರ |
(2) inter ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ (ಕ) ಎರಡಕ್ಕೂ ತಾಗು, ಮತ್ತು (ಚ) ಎರಡರ ನಡುವೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳಿನಲ್ಲಿ ಕನ್ನಡದ ಒಡ ಎಂಬ ಪದವನ್ನು ಮತ್ತು ಎರಡನೆಯ ಹುರುಳಿನಲ್ಲಿ ನಡು ಎಂಬ ಪದವನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಎರಡನ್ನೂ ತಾಗು ಎಂಬ ಹುರುಳಿನಲ್ಲಿ:
lace | ಹೆಣೆ | interlace | ಒಡಹೆಣೆ | |
mingle | ಬೆರೆ | intermingle | ಒಡಬೆರೆ | |
twine | ಹೊಸೆ | intertwine | ಒಡಹೊಸೆ |
(ಚ) ಎರಡರ ನಡುವೆ ಎಂಬ ಹುರುಳಿನಲ್ಲಿ:
leaf | ಹಾಳೆ | interleaf | ನಡುಹಾಳೆ | |
net | ಬಲೆ | internet | ನಡುಬಲೆ | |
national | ನಾಡಿನ | international | ನಡುನಾಡಿನ | |
connect | ತೆರು | interconnect | ನಡುತೆರು | |
mediate | ಹೊಂದಿಸು | intermediate | ನಡುಹೊಂದಿಸು |
(3) out ಒಟ್ಟು:
ಮೇಲೆ ವಿವರಿಸಿದ ಹಾಗೆ, ಈ ಒಟ್ಟಿಗೆ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಕೆಯಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಇಂಬಿಗೆ ಸಂಬಂದಿಸಿದುದಾಗಿದೆ; ಈ ಹುರುಳಿನಲ್ಲಿ ಕನ್ನಡದ ಹೊರ ಎಂಬ ಪದವನ್ನೇ ಇದಕ್ಕೆ ಸಾಟಿಯಾಗಿ ಪದಗಳ ಮೊದಲಿಗೆ ಬಳಸಲು ಬರುತ್ತದೆ:
flow | ಹರಿವು | outflow | ಹೊರಹರಿವು | |
house | ಮನೆ | outhouse | ಹೊರಮನೆ | |
post | ಪಾಳೆಯ | outpost | ಹೊರಪಾಳೆಯ | |
going | ಹೋಗುವ | outgoing | ಹೊರಹೋಗುವ | |
pour | ಸುರಿ | outpour | ಹೊರಸುರಿ | |
burst | ಸಿಡಿ | outburst | ಹೊರಸಿಡಿ | |
cast | ತಳ್ಳು | outcast | ಹೊರತಳ್ಳಿದ |
(4) over ಒಟ್ಟು:
ಹೆಚ್ಚಿನ ಬಳಕೆಗಳಲ್ಲೂ ಮೀರು ಇಲ್ಲವೇ ಮೀರಿದ ಎಂಬ ಅಳವಿನ ಹುರುಳಿದೆ; ಆದರೆ, ಕೆಲವು ಬಳಕೆಗಳಲ್ಲಿ ಮೇಲೆ ಇಲ್ಲವೇ ಮೇಲಿನ ಎಂಬ ಇಂಬಿನ ಹುರುಳೂ ಇದೆ:
arm | ತೋಳು | overarm | ಮೇಲ್ತೋಳಿನ (ಎಸೆತ) | |
ground | ನೆಲ | overground | ಮೇಲ್ನೆಲದ | |
lord | ಆಳ್ಮ | overlord | ಮೇಲಾಳ್ಮ | |
shoe | ಕೆರ | overshoe | ಮೇಲ್ಕೆರ |
(5) sub ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ಒಳ ಮತ್ತು ಕೆಳ ಎಂಬ ಎರಡು ಹುರುಳುಗಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇವೇ ಪದಗಳನ್ನು ಬಳಸಲು ಬರುತ್ತದೆ; ಕೆಳ ಎಂಬುದಕ್ಕೆ ಬದಲಾಗಿ ಕಿಳ್/ಕೀಳ್ ಎಂಬ ಪರಿಚೆಬೇರನ್ನು ಬಳಸಿ ಹೆಚ್ಚು ಅಡಕವಾದ ಪದಗಳನ್ನೂ ಪಡೆಯಲು ಬರುತ್ತದೆ:
group | ಗುಂಪು | subgroup | ಒಳಗುಂಪು | |
tenant | ಬಾಡಿಗೆಗಾರ | subtenant | ಒಳಬಾಡಿಗೆಗಾರ | |
total | ಮೊತ್ತ | subtotal | ಒಳಮೊತ್ತ | |
routine | ಹಮ್ಮುಗೆ | subroutine | ಒಳಹಮ್ಮುಗೆ | |
way | ಹಾದಿ | subway | ಕೆಳಹಾದಿ | |
script | ಬರಿಗೆ | subscript | ಕೆಳಬರಿಗೆ | |
soil | ಮಣ್ಣು | subsoil | ಕೆಳಮಣ್ಣು | |
sonic | ಉಲಿಯ | subsonic | ಕೀಳುಲಿಯ |
(6) super ಒಟ್ಟು:
ಈ ಒಟ್ಟಿಗೆ ಮೇಲೆ ಎಂಬ ಇಂಬಿನ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮೇಲೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
impose | ಹೇರು | superimpose | ಮೇಲೆಹೇರು | |
script | ಬರಿಗೆ | superscript | ಮೇಲ್ಬರಿಗೆ | |
structure | ಕಟ್ಟಡ | superstructure | ಮೇಲ್ಕಟ್ಟಡ |
(7) trans ಒಟ್ಟು:
ಈ ಒಟ್ಟಿಗೆ ಆಚೆ ಎಂಬ ಹುರುಳು ಮಾತ್ರವಲ್ಲದೆ ಮಾರ್ಪಡಿಸು ಎಂಬ ಹುರುಳೂ ಇದೆ; ಹಾಗಾಗಿ, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಆಚೆ ಎಂಬುದನ್ನು ಪದದ ಬಳಿಕ, ಮತ್ತು ಮರು/ಮಾರ್ ಎಂಬುದನ್ನು ಎಸಕಪದಗಳ ಮೊದಲು ಇಲ್ಲವೇ ಹೆಸರುಪದಗಳ ಬಳಿಕ ಬಳಸಲು ಬರುತ್ತದೆ:
continent | ಪೆರ್ನೆಲ | transcontinental | ಪೆರ್ನೆಲದಾಚೆಯ | |
nation | ನಾಡು | transnational | ನಾಡಿನಾಚೆಯ | |
plant | ನಾಟು | transplant | ಮರುನಾಟು | |
act | ಎಸಗು | transact | ಮಾರೆಸಗು | |
scribe | ಬರೆಗ | transcribe | ಮಾರ್ಬರೆ | |
form | ಪರಿಜು | transform | ಪರಿಜುಮಾರು |
(8) under ಒಟ್ಟು:
ಈ ಒಟ್ಟಿಗೆ ಕೆಳ ಮತ್ತು ಒಳ ಎಂಬ ಎರಡು ಇಂಬಿನ ಹುರುಳುಗಳಿವೆ; ಇದಲ್ಲದೆ, ಕೊರೆ ಎಂಬ ಅಳವಿನ ಹುರುಳೂ ಇದಕ್ಕಿದೆ.
ಇಂಬಿನ ಹುರುಳಿನಲ್ಲಿ ಇದಕ್ಕೆ ಸಾಟಿಯಾಗಿ ಕೆಳ(ಗೆ) ಮತ್ತು ಒಳ(ಗೆ) ಎಂಬ ಪದಗಳನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಕೆಳ ಎಂಬ ಹುರುಳಿನಲ್ಲಿ ಬಳಕೆ:
lay | ಇಡು | underlay | ಕೆಳಗಿಡು | |
cut | ಕಡಿ | undercut | ಕೆಳ ಕಡಿ | |
belly | ಹೊಟ್ಟೆ | underbelly | ಕೆಳ ಹೊಟ್ಟೆ | |
growth | ಬೆಳವಿ | undergrowth | ಕೆಳ ಬೆಳವಿ | |
arm | ತೋಳು | underarm | ಕೆಳತೋಳಿನ |
(ಚ) ಒಳ ಎಂಬ ಹುರುಳಿನಲ್ಲಿ ಬಳಕೆ:
clothing | ಉಡುಪು | underclothing | ಒಳ ಉಡುಪು | |
current | ಹರಿವು | undercurrent | ಒಳ ಹರಿವು | |
coat | ಹಚ್ಚುಗೆ | undercoat | ಒಳಹಚ್ಚುಗೆ |
ಕೆಲವು ಕಡೆಗಳಲ್ಲಿ ಕೆಳ(ಗೆ) ಎಂಬುದನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ:
foot | ಕಾಲು | underfoot | ಕಾಲ್ಕೆಳಗೆ | |
ground | ನೆಲ | underground | ನೆಲದ ಕೆಳಗೆ | |
water | ನೀರು | underwater | ನೀರ ಕೆಳಗೆ |
(9) ex ಒಟ್ಟು:
ಇಂಗ್ಲಿಶ್ನ ex ಒಟ್ಟನ್ನು ಮೊದಲಿನ ಎಂಬ ಹೊತ್ತಿನ ಹುರುಳಿನಲ್ಲಿ ಮಾತ್ರವಲ್ಲದೆ ಹೊರಗಿನ ಎಂಬ ಇಂಬಿನ ಹುರುಳಿನಲ್ಲೂ ಬಳಸಲಾಗುತ್ತದೆ; ಈ ಎರಡನೆಯ ಬಳಕೆಯಲ್ಲಿ ಅದು ಒಳಗಿನ ಎಂಬ ಹುರುಳಿರುವ in ಎಂಬ ಒಟ್ಟಿಗೆ ಬದಲಾಗಿ ಬರುತ್ತದೆ (import : export).
ಇಂತಹ ಕಡೆಗಳಲ್ಲಿ ಇಂಗ್ಲಿಶ್ನ in ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಳ ಎಂಬ ಪದವನ್ನು, ಮತ್ತು ex ಎಂಬುದಕ್ಕೆ ಸಾಟಿಯಾಗಿ ಹೊರ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಕೆಲವೆಡೆಗಳಲ್ಲಿ ಈ ರೀತಿ ಒಳ-ಹೊರ ಎಂಬ ಪದಗಳನ್ನು ಬಳಸುವಲ್ಲಿ ಅವುಗಳ ಬಳಿಕ ಬರುವ ಎಸಕಪದವನ್ನೂ ಬದಲಾಯಿಸಬೇಕಾಗುತ್ತದೆ:
implode | ಒಳಸಿಡಿ | explode | ಹೊರಸಿಡಿ | |
interior | ಒಳಮಯ್ | exterior | ಹೊರಮಯ್ | |
import | ಒಳತರು | export | ಹೊರಕಳಿಸು | |
inhale | ಒಳಸೆಳೆ | exhale | ಹೊರಬಿಡು |
(10) extra ಒಟ್ಟು:
ಇದಕ್ಕೆ ಹೊರಗಿನ ಎಂಬ ಹುರುಳಿದ್ದು, ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೊರಗಿನ ಎಂಬ ಪದವನ್ನು ಹೆಸರುಪದದ ಬಳಿಕ ಬಳಸಬೇಕಾಗುತ್ತದೆ:
marital | ಮದುವೆಯ | extramarital | ಮದುವೆಹೊರಗಿನ | |
intestinal | ಕರುಳಿನ | extraintestinal | ಕರುಳುಹೊರಗಿನ | |
linguistic | ನುಡಿಯ | extralinguistic | ನುಡಿಯ ಹೊರಗಿನ | |
official | ಮಣಿಹದ | extraofficial | ಮಣಿಹದ ಹೊರಗಿನ |
(11) tele ಒಟ್ಟು:
ದೂರದ ಎಂಬ ಹುರುಳಿರುವ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಗೆಂಟು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
care | ಆರಯ್ಕೆ | telecare | ಗೆಂಟಾರಯ್ಕೆ | |
learning | ಕಲಿಕೆ | telelearning | ಗೆಂಟುಕಲಿಕೆ | |
sale | ಮಾರಾಟ | telesale | ಗೆಂಟುಮಾರಾಟ | |
screen | ತೆರೆ | telescreen | ಗೆಂಟುತೆರೆ |
ತಿರುಳು:
ಇಂಗ್ಲಿಶ್ನಲ್ಲಿ ಹಲವು ಇಂಬಿನ ಮುನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಇವಕ್ಕೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಮುನ್, ಎಡ, ನಡು, ಹೊರ, ಒಳ, ಕೆಳ, ಮೇಲ್, ಗೆಂಟು ಎಂಬಂತಹ ಪರಿಚೆಬೇರುಗಳನ್ನು ಇಲ್ಲವೇ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.
ಬಲಾ ರೆ… ನಾನಿದನ್ನ ಕಾಯ್ತ ಇದ್ದೆ…
ಆದರೆ transnational ನಾಡಿನಾಚೆಯ ಅನ್ನೊದಕ್ಕೆ ನಗೇಕೊ ಮನಸ್ಸೊಪ್ಪದಾಗಿದೆ.
ಅದಕ್ಕೆ ಬೇಕಿದ್ದರೆ, ಮುನ್ನೊಟ್ಟು ಕೊಟ್ಟೆ ಬರೆದರೆ “ಆಚೆನಾಡಿನ” ಎಂದಾಗುತ್ತದೆ. ಇದರಲ್ಲಿ ತಪ್ಪೇನಿಲ್ಲ ಅಲ್ಲವೆ.
scribe ಅಂದರೆ ಬರೆಗ, subscription ಗೆ ಬರಕೊಟ್ಟ ಎನ್ನಬಹುದೆ? ಇಲ್ಲ ಬರಿಜು?
undergrowth ಗೆ ಸೊರಗು ಅನ್ನಬಹುದಲ್ಲ.
ಬೆಳೆ – ಸೊರಗು
ಮಗು ಬೆಳೆಯುತ್ತಿದೆ, ರೋಗ ಬಂದಾಗ ಸೊರಗಿದೆ.
port => ಒಯ್ಯು ಅಂತ ಆದರೆ
import => ಒಳಗೊಯ್ಯು
export => ಹೊರಗೊಯ್ಯು
transport => ಆಚೆಗೊಯ್ಯು
ಅರಿವಾಯ್ತು “ನಾಡಿನಾಚೆಯ” ನೆ ಸರಿಯಾಗಿದೆ…
ಆಚೆನಾಡಿನ ಅಂದರೆ ಆಚೆಬದಿಯಲ್ಲಿರುವ ಒಂದು ನಾಡು, ಅದರ ತಪ್ಪುಹುರುಳು ಕೊಟ್ಟಂತಾಗುತ್ತದೆ.