ಬಾರತ ಸರಕಾರ ತೋರುವುದೇ ತನ್ನ ಮಂದಿಯ ಬಗ್ಗೆ ಕಾಳಜಿ?

– ಅನ್ನದಾನೇಶ ಶಿ. ಸಂಕದಾಳ.

website

ಬಾರತದಲ್ಲಿ ಇ-ಕಾಮರ್‍ಸ್ ವಲಯದಲ್ಲಿ ಮನ್ಚೂಣಿಯಲ್ಲಿರುವ ಸಂಸ್ತೆಗಳು ತಮ್ಮ ಮಿಂಬಲೆಗಳನ್ನು ಪ್ರಾದೇಶಿಕ ನುಡಿಗಳಲ್ಲಿ ತರುವ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ. ಬಾರತದಲ್ಲಿ ಚೆನ್ನಾಗಿ ಹೆಸರು ಮಾಡಿರುವ ಇ-ಕಾಮರ್‍ಸ್ ಸಂಸ್ತೆಗಳಾದ ಸ್ನ್ಯಾಪ್ ಡೀಲ್, ಪ್ಲಿಪ್ಕಾರ್‍ಟ್, ಜಬೋಂಗ್, ಶಾಪ್ ಕ್ಲೂಸ್, ತಮ್ಮ ಮಿಂಬಲೆಯನ್ನು ಬಾರತದ ನುಡಿಗಳಲ್ಲಿ ಹೊರತರುವ ಮೂಲಕ ಹೆಚ್ಚು ಕೊಳ್ಳುಗರನ್ನು ತಮ್ಮತ್ತ ಸೆಳೆಯುತ್ತಾ, ತಮ್ಮ ವ್ಯಾಪಾರ-ವಹಿವಾಟುಗಳನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ಆ ಸುದ್ದಿ ತಿಳಿಸುತ್ತದೆ.

ಶಾಪ್ ಕ್ಲೂಸ್ ಸಂಸ್ತೆ ಪ್ರಾಯೋಗಿಕವಾಗಿ ದೇಶದ ಬೇರೆ ಬೇರೆ ನುಡಿಗಳಲ್ಲಿ ಮಿಂಬಲೆಯನ್ನು ಹೊರ ತರುವ ಹಮ್ಮುಗೆ ಹಾಕಿಕೊಂಡಿದ್ದರೆ, ಈಗಾಗಲೇ ತಮಿಳು ಮತ್ತು ಹಿಂದಿಯಲ್ಲಿ ಮಿಂಬಲೆ ಹೊರ ತಂದಿರುವ ಸ್ನ್ಯಾಪ್ ಡೀಲ್, ದೀಪಾವಳಿಯಶ್ಟೊತ್ತಿಗೆ ಕನ್ನಡವೂ ಸೇರಿದಂತೆ ಉಳಿದ ನುಡಿಗಳಲ್ಲಿ ಮಿಂಬಲೆಯನ್ನು ಕೊಳ್ಳುಗರ ಮುಂದಿಡುವತ್ತ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗಿದೆ. ಎಲ್ಲರಿಗೂ ಒಂದೇ ನುಡಿಯಲ್ಲಿ (ಆ ನುಡಿ ಜನರಿಗೆ ಗೊತ್ತಿಲ್ಲದಿದ್ದರೂ ) ಸೇವೆ ಕೊಡುವ ಏರ್‍ಪಾಡು, ಹಲವಾರು ನುಡಿಗಳ ಬೀಡಾಗಿರುವ ಬಾರತದಂತ ದೇಶಕ್ಕೆ ತಕ್ಕುದಾದುದಲ್ಲ ಎಂಬುದು ಬಿಡಿಸಿ ಹೇಳಬೇಕಿಲ್ಲ. ಆದರಿಂದ, ಪ್ರಾದೇಶಿಕ ನುಡಿಗಳಲ್ಲಿ ಕೊಳ್ಳುಗರಿಗೆ ಸೇವೆ ನೀಡುವುದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ ಅಂತಲೇ ಹೇಳಬೇಕು.

ಇಂಗ್ಲೀಶ್ ನಲ್ಲಿ ಮಿಂಬಲೆಗಳಿರೋವಾಗ ಉಳಿದ ನುಡಿಗಳ ಮಿಂಬಲೆಗಳ್ಯಾಕೆ?

ಈ ಸಂಸ್ತೆಗಳು ಈಗ ಇಂಗ್ಲೀಶಿನಲ್ಲಿ ಕೊಳ್ಳುಗರಿಗೆ ಸೇವೆ ಕೊಡುತ್ತಿದ್ದರೂ, ಪ್ರಾದೇಶಿಕ ನುಡಿಗಳತ್ತ ಯಾಕೆ ಒಲವು ತೋರುತ್ತಿದ್ದಾರೆ ಎಂಬುದರ ಬಗ್ಗೆ ಕುತೂಹಲಕಾರಿ ಅಂಶವೊದನ್ನು ಆ ಬರಹದಲ್ಲಿ ವರದಿ ಮಾಡಲಾಗಿದೆ. ಅದೇನಪ್ಪಾ ಅಂದರೆ, ಹೆಚ್ಚು ಜನರು ಇಂಗ್ಲೀಶ್ ಮಿಂಬಲೆಯನ್ನು ಬಳಸದೇ ಇರಲು ಕಾರಣ ಬಹುಪಾಲು ಮಂದಿಗೆ ಇಂಗ್ಲೀಶ್ ಗೊತ್ತಿಲ್ಲದಿರುವುದು. ಬಾರತದಲ್ಲಿ ಎಲ್ಲರಿಗೂ ಇಂಗ್ಲೀಶ್ ತಿಳಿದಿರುತ್ತದೆ ಎಂಬುದು ತಪ್ಪಾದ ತಿಳುವಳಿಕೆಯಾಗಿದೆ. ಇಂಗ್ಲೀಶಿನ ಮಿಂಬಲೆಯ ಬಳಕೆದಾರರ ಎಣಿಕೆ ಕಡಿಮೆ ಇದ್ದು, ಹೆಚ್ಚೆಂದರೆ ಏಳಿಗೆ ಹೊಂದಿದ ನಗರಗಳಲ್ಲಿ ಹೆಚ್ಚು ಮಂದಿ ಇಂಗ್ಲೀಶಿನಲ್ಲಿ ಮಿಂಬಲೆ ಬಳಸುತ್ತಿರುತ್ತಾರೆ. ಉಳಿದ ಬಹುಪಾಲು ಮಂದಿ, ತಮಗರಿವಿಲ್ಲದ ನುಡಿಯಲ್ಲಿನ ಸೇವೆಯನ್ನು ಪಡೆಯಲು ಮುಂದಾಗುವ ಪ್ರಶ್ನೆಯೇ ಬಾರದೇ, ಇ-ಕಾಮರ್‍ಸ್ ವಲಯದಿಂದ ಹೊರಗಡೆಯೇ ಉಳಿಯುತ್ತಾರೆ ಎಂಬುದು ಮೇಲೆ ಹೆಸರಿಸಿರುವ ಸಂಸ್ತೆಗಳ ಅನಿಸಿಕೆ. ಹಾಗೇ, ಚೀನಾ ದೇಶದಲ್ಲಿ ಪ್ರಾದೇಶಿಕ ನುಡಿ ಬಳಸಿ ಸೇವೆ ನೀಡುತ್ತಿರುವವರು, ಅಲ್ಲಿರುವ ಬಹುರಾಶ್ಟ್ರೀಯ ಸಂಸ್ತೆಗಳನ್ನು ಹಿಂದಿಕ್ಕಿರುವುದನ್ನು ನೋಡಿರುವ ಇ-ಕಾಮರ್‍ಸ್ ಸಂಸ್ತೆಗಳು, ಪ್ರಾದೇಶಿಕ ನುಡಿಗಳ ತಾಕತ್ತನ್ನು ಅರಿತುಕೊಂಡಿದ್ದಾರೆ. ಅದಶ್ಟೇ ಅಲ್ಲದೆ, ಕೆಳಗೆ ಪಟ್ಟಿ ಮಾಡಿರುವ ಅಂಶಗಳನ್ನೂ ಈ ಸಂಸ್ತೆಗಳು ಗಮನಿಸಿದ್ದಾರೆ ಎಂದು ಆ ವರದಿ ಹೇಳುತ್ತದೆ.

i.     ಈಗ ಇಂಗ್ಲೀಶ್ ಬಳಸಿ ಸೇವೆ ಪಡೆಯುವ ಮಂದಿ
ii.    ಏಳಿಗೆ ಹೊಂದಿದ ನಗರಗಳಿಂದ ಸೇವೆ ಪಡೆಯುವ ಮಂದಿ
iii.   ಏಳಿಗೆ ಹೊಂದಿರದ ಮತ್ತು ಹೊಂದುತ್ತಿರುವ ನಗರಗಳಿಂದ ಸೇವೆ ಪಡೆಯುವ ಮಂದಿ
iv.   ಇಂಟರ್‍ನೆಟ್ ಬಳಕೆದಾರರ ಎಣಿಕೆ
v.     ಇನ್ನು ಮುಂದೆ ಪ್ರಾದೇಶಿಕ ನುಡಿಗಳಲ್ಲಿ ಇಂಟರ್‍ನೆಟ್ ಬಳಸುವವರ ಎಣಿಕೆ
vi.    ಮೊಬಯ್ಲಿನಲ್ಲಿ ಇಂಟರ್‍ನೆಟ್ ಬಳಸುವವರ ಎಣಿಕೆ

ಹೀಗೆ ಇಂತಾ ಹಲವಾರು ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡು, “ಪ್ರಾದೇಶಿಕ ನುಡಿಯಲ್ಲಿ ಸೇವೆ ಕೊಡಬೇಕು” ಎಂಬ ತೀರ್‍ಮಾನಕ್ಕೆ ಬಂದಿದ್ದಾರೆ ಅಂತ ಅನ್ನಲು ಅಡ್ಡಿ ಇಲ್ಲ.

ಬಾರತ ಸರಕಾರದ ಸೇವೆಗಳಲ್ಲಿ ಪ್ರಾದೇಶಿಕ ನುಡಿಗಳ ಬಳಕೆ :

ಬಾರತ ಸರಕಾರವೂ ತನ್ನ ನಾಡಿನ ನಾಗರೀಕರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಬಾರತ ಸರಕಾರದ ಬಹುಪಾಲು ಸೇವೆಗಳು ಕೇವಲ ಒಂದು ಬಾಶಿಕ ಸಮುದಾಯದ, ಪ್ರಾದೇಶಿಕ ನುಡಿಯಾದ ಹಿಂದಿಯಲ್ಲಿದ್ದು, ಹಿಂದಿಯೇತರರಿಗೆ ಇಂಗ್ಲೀಶ್ನಲ್ಲಿ ಸೇವೆ ನೀಡುತ್ತದೆ. ತನ್ನ ಎಲ್ಲಾ ನಾಗರೀಕರನ್ನು ಸಮನಾಗಿ ಕಾಣುವ ಮತ್ತು ಸಮನಾಗಿ ಉಪಚರಿಸುವ ಹೊಣೆ ಬಾರತ ಸರಕಾರದ ಮೇಲಿದ್ದರೂ, ಅದು “ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ” ಎಂಬ ನೀತಿಯನ್ನು ಪಾಲಿಸುತ್ತದೆ ಎಂದರೆ ತಪ್ಪಾಗಲಾರದು. ಪಾಸ್ಪೋರ್‍ಟ್ ಆಗಲೀ, ಅಂಚೆ ಚೀಟಿ ಆಗಲೀ, ಆದಾಯ ತೆರಿಗೆ ಅರ್‍ಜಿಗಳಾಗಿರಲಿ, ಸೇವೆಗಳ ಬಗ್ಗೆ ಮಾಹಿತಿ ಆಗಿರಲಿ, ಇಲಾಕೆಗಳ ಮಿಂದಾಣವಾಗಲಿ – ಎಲ್ಲಿಯೂ, ಬಾರತ ಸರಕಾರವೇ ಗುರುತಿಸಿರುವ ಹಿಂದಿಯೇತರ ನುಡಿಗಳಾದ ಕನ್ನಡ, ತಮಿಳು, ಗುಜರಾತಿ ಇತ್ಯಾದಿ ನುಡಿಗಳನ್ನು ಬಳಸುವುದಿಲ್ಲ.

ಮಿಂದಾಣ ನಡೆಸುವಂತಹ ಚಿಕ್ಕ ಚಿಕ್ಕ ಕಂಪನಿಗಳೇ ಜನರ ನುಡಿಯಲ್ಲಿ ತಮ್ಮ ಮಿಂದಾಣ ನಡೆಸಬಲ್ಲರೆಂದರೆ, ಇಶ್ಟು ದೊಡ್ಡ ಸರಕಾರವು ಜನರ ನುಡಿಯಲ್ಲಿ ತನ್ನ ಮಿಂದಾಣಗಳನ್ನು ಕಟ್ಟಲಾರದು ಎಂದರೆ ನಂಬಲಾಗುತ್ತದೆಯೇ? ಎಲ್ಲಾ ನುಡಿಗಳನ್ನು ಸಮನಾಗಿ ಕಾಣಬೇಕಿರುವ ಬಾರತ ಸರಕಾರ, ಹಿಂದಿಗೆ ಮಾತ್ರ ಬೆಂಗಾವಲಾಗಿ ನಿಂತು, ಆ ಮೂಲಕ ಎಲ್ಲರ ಮೇಲೆ ಹಿಂದಿ ಹೇರುತ್ತಿರುವುದು, ಬಾರತ ಮಂದಿಯಾಳ್ವಿಕೆ ಹೊಂದಿರುವ ದೇಶವೇ ಎಂದು ಕೇಳಿ ಕೊಳ್ಳುವಂತಾಗಿದೆ . ಬಾರತ ಸರಕಾರ ಹಿಂದಿಯನ್ನು ಹೊರತು ಪಡಿಸಿ, ಜನರ ನುಡಿಯಲ್ಲಿ ಸೇವೆ ನೀಡದೇ ಇರುವುದು ಹಿಂದಿಯೇತರರನ್ನು ಈ ದೇಶದ ಎರಡನೇ ದರ್‍ಜೆ ನಾಗರೀಕರನ್ನಾಗಿ ಮಾಡಿದೆ.

“ಬಾರತೀಯರೆಲ್ಲರೂ, ಹಿಂದಿಯನ್ನು ಒಪ್ಪಲೇಬೇಕೆಂದು ಮಾಡಿರುವ ಬಾರತದ ಬಾಶಾ ನೀತಿ” ಯನ್ನು ಬದಲಾಯಿಸುವುದರಿಂದ ಮಾತ್ರ ಮಂದಿಯಾಳ್ವಿಕೆ ವಿರೋದಿ ನಡೆಯಾದ “ಹಿಂದಿ ಹೇರಿಕೆ” ಗೆ ಕೊನೆ ಹಾಡಲು ಸಾದ್ಯ. ಅದಾಗ ಬೇಕೆಂದರೆ ಆ ನಿಟ್ಟಿನಲ್ಲಿ, ಹಿಂದಿಯೇತರರು ಒಗ್ಗಟ್ಟಾಗಿ ಮುಂದಡಿ ಇಡಬೇಕಿರುವುದು ಆಗಲೇ ಬೇಕಿರುವ ಕೆಲಸ.

(ಮಾಹಿತಿ ಸೆಲೆ: economictimes.com)

(ಚಿತ್ರ ಸೆಲೆ: snapdeal.comindiapost.gov.in)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: