ಜಾಗತಿಕ ಜಾಣತನದಲ್ಲಿ ಜಾರಿದ ಇಂಡಿಯಾ

– ರತೀಶ ರತ್ನಾಕರ.

GII
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಬಾರಿಯ ಜಿ20 ಸಬೆಯಲ್ಲಿ 2014ರ ’ಜಾಗತಿಕ ಹೊಸಮಾರ‍್ಪಿನ ತೋರುಕ’(Global Innovation Index)ವನ್ನು ಪ್ರಕಟಿಸಲಾಯಿತು. ಈ ತೋರುಕವನ್ನು ಕಾರ್‍ನೆಲ್ ಕಲಿಕೆವೀಡು, ಇನ್‍ಸೀಡ್ (INSEAD) ಮತ್ತು ವರ್‍ಲ್ಡ್ ಇಂಟೆಲೆಕ್ಚುವಲ್ ಪ್ರಾಪರ್‍ಟಿ ಆರ್‍ಗನಯ್ಸೇಶನ್ (World Intellectual Property Organization) ಜೊತೆಗೂಡಿ ಹೊರತರುತ್ತವೆ. ಜಗತ್ತಿನಲ್ಲಿ ಬೆಳೆಯುತ್ತಿರುವ 143 ನಾಡಿನ ಹೊಸಮಾರ‍್ಪಿನ ಅಳವು (Innovation Capabilities) ಮತ್ತು ಅವುಗಳನ್ನು ‘ಅಳೆಯಬಹುದಾದ ಪಲಿತಾಂಶ'(measurable results)ಗಳ ಆದಾರದ ಮೇಲೆ ಸ್ತಾನವನ್ನು ನೀಡಲಾಗುತ್ತದೆ. ಸುಮಾರು 81 ಮಾನದಂಡಗಳನ್ನು ಬಳಸಿ, ಅಳೆದು ಈ ತೋರುಕವನ್ನು ಸಿದ್ದಮಾಡಲಾಗುತ್ತದೆ. ಒಟ್ಟಿನಲ್ಲಿ, ಯಾವ ಯಾವ ನಾಡುಗಳು ಅರಿಮೆ ಮತ್ತು ಚಳಕಗಳಲ್ಲಿ ಹೊಸತನ್ನು ಹುಟ್ಟುಹಾಕುವುದರಲ್ಲಿ ಮುಂದಿವೆ, ಮತ್ತು ಆ ಮೂಲಕ ತಮ್ಮ ನಾಡಿನ ಹಣಕಾಸಿನ ಪರಿಸ್ತಿತಿಯನ್ನು ಮೇಲೆತ್ತಿಕೊಂಡಿವೆ ಎಂಬುದನ್ನು ಈ ತೋರುಕವು ತಿಳಿಸುತ್ತದೆ. ಈ ತೋರುಕವನ್ನು 2007 ರಿಂದ ಹೊರತರಲಾಗುತ್ತಿದೆ.

ಇಂಡಿಯಾದ ಸ್ತಾನವೇನು?
ಈ ತೋರುಕದಲ್ಲಿ ಇಂಡಿಯಾ ಕಳೆದ ಬಾರಿಗಿಂತ 10 ಸ್ತಾನ ಕೆಳಗಿಳಿದಿದೆ! ಒಟ್ಟು 143 ನಾಡುಗಳಲ್ಲಿ 76ನೇ ಜಾಗದಲ್ಲಿದೆ! ಸತತವಾಗಿ ಎರಡು ವರುಶಗಳಿಂದ ಇಂಡಿಯಾವು ಈ ತೋರುಕದಲ್ಲಿ ತನ್ನ ಸ್ತಾನವನ್ನು ಕಳೆದುಕೊಳ್ಳುತ್ತಿದೆ. ಅಂದರೆ ಇಂಡಿಯಾದಲ್ಲಿ ಹೊಸತನ್ನು ಕಂಡುಹಿಡಿಯುವ ಅಳವು ಎಲ್ಲಿಲ್ಲದಂತೆ ಕುಸಿಯುತ್ತಿದೆ! ಹಣಕಾಸಿನ ಏಳಿಗೆಯಲ್ಲಿ ಮುಂದೆ ಬರುತ್ತಿರುವ ನಾಡುಗಳ ಬ್ರಿಕ್ಸ್ (BRICS) ಎನ್ನುವ ಒಂದು ಕೂಟವಿದೆ. ಬ್ರೆಜಿಲ್, ರಶ್ಯಾ, ಇಂಡಿಯಾ, ಚಯ್ನಾ ಮತ್ತು ತೆಂಕಣ ಆಪ್ರಿಕಾಗಳು ಈ ಕೂಟದಲ್ಲಿವೆ. ಉಳಿದ ಬ್ರಿಕ್ಸ್ ನಾಡುಗಳ ಸ್ತಾನಕ್ಕಿಂತಲೂ ಇಂಡಿಯಾ ಕೆಳಗಿನ ಸ್ತಾನದಲ್ಲಿದೆ ಎಂಬುದು ಕಳವಳದ ಸಂಗತಿಯಾಗಿದೆ.

ಜಗತ್ತಿನ ಏಳಿಗೆ ಹೊಂದಿರುವ ಹಾಗು ದೊಡ್ಡ ಹಣಕಾಸಿನ ನಾಡುಗಳು ಕಳೆದ ಬಾರಿಗಿಂತ ತಮ್ಮ ಸ್ತಾನವನ್ನು ಮೇಲೆತ್ತಿಕೊಂಡಿವೆ. ಸ್ವಿಟ್ಜರ್‍ ಲ್ಯಾಂಡ್, ಯುಕೆ ಮತ್ತು ಸ್ವೀಡನ್ ಮೊದಲ ಮೂರು ಸ್ತಾನಗಳನ್ನು ಗಳಿಸಿಕೊಂಡರೆ. ಬ್ರಿಕ್ಸ್ ಕೂಟದಲ್ಲಿರುವ ರಶ್ಯಾ ಕಳೆದ ಬಾರಿಗಿಂತ 13 ಸ್ತಾನ ಮೇಲೆ ಜಿಗಿದು 49 ನೇ ಸ್ತಾನದಲ್ಲಿದೆ.

ಕಾರಣಗಳೇನು?
ಹೊಸಮಾರ್‍ಪಿನ ಏಳಿಗೆಯನ್ನು ತೋರಿಸುವ ಈ ತೋರುಕದಲ್ಲಿ ಇಂಡಿಯಾವು ಕಳೆದ ಬಾರಿಯಂತೆ ಮತ್ತೆ ಕೆಳಗಿಳಿಯಲು ಇರುವ ಹಲವು ಕಾರಣಗಳನ್ನು ಈ ತಂಡವು ಕಂಡು ಹಿಡಿದಿದೆ. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆಯನ್ನು ಕೂಡ ನೀಡಿದೆ. ಅವುಗಳಲ್ಲಿ ಅತಿ ದೊಡ್ಡ ಕಾರಣವೆಂದರೆ ಇಂಡಿಯಾದ ‘ಮೇಲ್ಮಟ್ಟದ ಕಲಿಕೆಯಲ್ಲಿರುವ ತೊಡಕು.’ ಇಂಡಿಯಾದಲ್ಲಿರುವ ಮೇಲ್ಮಟ್ಟದ ಕಲಿಕೆಯು ಹೊಸಮಾರ್‍ಪಿನ ಏಳಿಗೆಗೆ ನೆರವಾಗುವಂತೆ ಇಲ್ಲ, ಇಂಡಿಯಾದ ಹಣಕಾಸಿನ ಏರ್‍ಪಾಡು ಹಲತನದಿಂದ ಕೂಡಿದೆ, ಇದಕ್ಕೆ ತಕ್ಕುದಾದ ಒಳ್ಳೆಯ ಗುಣಮಟ್ಟದ ಕಲಿಕೆಯ ಏರ್‍ಪಾಡನ್ನು ಕಟ್ಟಿಕೊಳ್ಳಬೇಕಿದೆ ಎಂದು ಈ ಸಬೆಯಲ್ಲಿ ಸಲಹೆಗಳನ್ನು ನೀಡಲಾಗಿದೆ.

ಮುಂದಿರುವ ನಾಡುಗಳಾವವು?
ಹೊಸತನ್ನು ಕಂಡುಹಿಡಿಯುವ ಅಳವನ್ನು ತಿಳಿಸುವ ಈ ತೋರುಕದ ಮೊದಲ ೫ ಸ್ತಾನಗಳಲ್ಲಿ ಯುರೋಪ ನಾಡುಗಳಿವೆ. ತಾಯ್ನುಡಿ ಕಲಿಕೆಯ ಮಹತ್ವವನ್ನು ಅರಿತುಕೊಂಡು ಇತ್ತೀಚಿನ ವರುಶಗಳಲ್ಲಿ ತುಂಬಾ ಮುಂಚೂಣಿಗೆ ಬರುತ್ತಿರುವ ಪಿನ್‍ಲ್ಯಾಂಡ್ ಈ ಪಟ್ಟಿಯಲ್ಲೂ ಮುಂದಿದ್ದು, ಅಮೇರಿಕಾವನ್ನು ಹಿಂದಿಕ್ಕಿ ೪ನೇ ಸ್ತಾನ ಪಡೆದಿದೆ. ಅಮೇರಿಕಾ ೬ ನೇ ಸ್ತಾನದಲ್ಲಿದ್ದು, ಏಶಿಯಾ ಕಂಡದ ಸಿಂಗಪೂರ ೭ ಮತ್ತು ಹಾಂಕಾಂಗ್ ೧೦ ನೇ ಸ್ತಾನದಲ್ಲಿವೆ.

ಸರಿಪಡಿಸಲು ದಾರಿಗಳೇನು?
ಪ್ರತಿಯೊಂದು ಹಂತದಲ್ಲೂ ಹಲತನದಿಂದ ಕೂಡಿರುವ ಇಂಡಿಯಾಕ್ಕೆ ಒಂದು ಗಟ್ಟಿಯಾದ ಮೇಲ್ಮಟ್ಟದ ಕಲಿಕೆಯ ಏರ್‍ಪಾಡನ್ನು ಕಟ್ಟುವುದು ಈ ಹೊತ್ತಿನ ಅಗತ್ಯತೆ. ಮೇಲೆ ತಿಳಿಸಿರುವ ತೋರುಕದಲ್ಲಿ ಮೊದಲ ಹಲವು ಸ್ತಾನಗಳನ್ನು ಹಂಚಿಕೊಂಡಿರುವ ನಾಡುಗಳ ಕಲಿಕೆಯ ಏರ್‍ಪಾಡಿನ ಮೇಲೆ ಒಮ್ಮೆ ಕಣ್ಣು ಹಾಯಿಸಬೇಕಿದೆ. ಹವ್ದು, ಏಳಿಗೆ ಹೊಂದಿದ ಹೆಚ್ಚಿನ ನಾಡುಗಳು ತಮ್ಮ ಮೊದಲ ಹಂತದ ಕಲಿಕೆಯಿಂದ ಹಿಡಿದು ಮೇಲ್ಮಟ್ಟದ ಕಲಿಕೆಯನ್ನು ತಮ್ಮ ತಾಯ್ನುಡಿಯಲ್ಲಿಯೇ ಕಟ್ಟಿಕೊಂಡಿವೆ. ನಾವು ತಿಳಿದಿರುವಂತೆ ತಾಯ್ನುಡಿ ಕಲಿಕೆಯು ‘ಹೊಸತರಿವಿನ ಚಳಕ‘(Cognitive skill)ವನ್ನುಹೆಚ್ಚಿಸುತ್ತದೆ. ಗುಣಮಟ್ಟದ ತಾಯ್ನುಡಿ ಕಲಿಕೆ ದೊರೆಯುವಂತಾದರೆ ಅದು ಹೊಸತನ್ನು ಕಂಡುಹಿಡಿಯಲು ದಾರಿ ಮಾಡಿಕೊಡುತ್ತದೆ.

ಈ ನಿಟ್ಟಿನಲ್ಲಿ ಚಿಂತನೆಯನ್ನು ನಡೆಸಿ, ನಮ್ಮ ಏಳಿಗೆಗೆ ತೊಡಕಾಗಿರುವ ತಾಯ್ನುಡಿಯಲ್ಲಿಲ್ಲದ ಮೇಲ್ಮಟ್ಟದ ಕಲಿಕೆಯನ್ನು ಬದಲಿಸಿ ತಾಯ್ನುಡಿಯಲ್ಲಿಯೇ ಮೊದಲ ಹಂತದಿಂದ ಮೇಲ್ಮಟ್ಟದವರೆಗೂ ಕಲಿಕೆಯನ್ನು ಗಟ್ಟಿಯಾಗಿ ಕಟ್ಟಿಕೊಂಡು ನಮ್ಮ ಏಳಿಗೆಗೆ ದಾರಿ ಮಾಡಿಕೊಳ್ಳಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: livemint.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications