ಹಣಕಾಸು: ದುಡಿತ ಮತ್ತು ದುಡ್ಡು

 ಬರತ್ ಕುಮಾರ್.

Indian rupees

{ಇಲ್ಲಿ ’ದುಡ್ಡು’ ಎಂಬುದನ್ನು ’Money’ ಎಂಬ ಹುರುಳಲ್ಲಿ ಬಳಸಲಾಗಿದೆ. ’ದುಡಿತ ’ ಎಂಬುದನ್ನು labour ಎಂಬ ಹುರುಳಿನಲ್ಲಿ ಬಳಸಲಾಗಿದೆ.}

ತಾನು ಬದುಕಲು ಮಾನವ ಮೊದಲಿನಿಂದಲೂ ದುಡಿತ ಮಾಡಿಕೊಂಡು ಬಂದ. ಒಂದು ಕಾಲಗಟ್ಟದಲ್ಲಿ ಮಾನವ ಒಂದೆಡೆ ನೆಲೆನಿಂತ ಅಂದರೆ ಒಕ್ಕಲಾದ. ಹೀಗೆ ಒಕ್ಕಲಾದ ಹಲವು ಮಂದಿ ಒಬ್ಬರಿಗೊಬ್ಬರು ನೆರವಾದರೆ ಹೆಚ್ಚು ಸುರಕ್ಶಿತವಾಗಿರಬಹುದಲ್ಲದೆ ಹಸನಾದ ಬದುಕು ನಡೆಸಬಹುದೆಂದು ಬಗೆದು ಗುಂಪು ಗುಂಪುಗಳಲ್ಲಿ ಬಾಳತೊಡಗಿದರು. ಈ ಗುಂಪುಗಳೇ ಹಾಡಿ-ಹಳ್ಳಿಗಳಾದವು. ಹೀಗೆ ಗುಂಪಿನಲ್ಲಿ ಬದುಕುವಾಗ ತಾನು ದುಡಿದದ್ದನ್ನು ಇಲ್ಲವೆ ತನ್ನಲ್ಲಿರುವುದನ್ನು ಕೊಟ್ಟು ತನಗೆ ಬೇಕಾದುದನ್ನು, ಆದರೆ ತನ್ನ ಹತ್ತಿರ ಇಲ್ಲದ್ದನ್ನು ಕೊಳ್ಳುವ ಪರಿಪಾಟ ತಾನಾಗಿಯೇ ಬೆಳೆದು ಬಂತು. ಎತ್ತುಗೆಗೆ, ಒಂದು ಸೇರು ಅಕ್ಕಿ ಕೊಟ್ಟು ಎರಡು ಸೇರು ರಾಗಿ ಈಸಿಕೊಳ್ಳುವುದು. ಇದನ್ನೇ ಕನ್ನಡದಲ್ಲಿ ’ಮಾರು’ ಎಂದು, ಇಂಗ್ಲಿಶಿನಲ್ಲಿ ’barter’ ಎಂದು ಕರೆಯುತ್ತಾರೆ. ಮಾರು ಎಂಬ ಪದಕ್ಕೆ ಮೊದಮೊದಲು ’barter’ ಎಂಬ ಹುರುಳೇ ಇದ್ದಿರಬಹುದು, ಆಮೇಲೆ ’to sell’ ಎಂಬ ಹುರುಳು ಬಂದಿರಬಹುದೆನಿಸುತ್ತದೆ.

ತೀರ ಇತ್ತೀಚಿನವರೆಗೂ ’ಮಾರು’(barter) ಪದ್ದತಿಯೇ ಹೆಚ್ಚು ಬಳಕೆಯಲ್ಲಿತ್ತು. ಈ ಪದ್ದತಿಯಲ್ಲಿ, ಮೇಲೆಮೇಲೆ ಬರೀ ವಸ್ತುಗಳನ್ನು ಕೊಟ್ಟುಕೊಳ್ಳುವುದಾಗಿ ಕಂಡರೂ, ದಿಟವಾಗಲೂ ಬೇರುಮಟ್ಟದಲ್ಲಿ ಮಂದಿ ತಮ್ಮ ’ದುಡಿತ’ದ ಕೊಡುಕೊಳೆ ಮಾಡಿಕೊಳ್ಳುತ್ತಿದ್ದರು. ಈ ಪದ್ದತಿಯಲ್ಲಿ ಬರೀ ’ಕೊಡುಕೊಳೆ’ ನಡೆಯುವುದರಿಂದ ’ದುಡ್ಡು’ ಎಂಬುದರ ಅಗತ್ಯ ಬರಲೇ ಇಲ್ಲ. ಈ ಮೊದಲು ದುಡಿತದ ಬದಲಾಗಿ ದುಡ್ಡು ಸಿಗುತ್ತಿರಲಿಲ್ಲ; ಊಟ, ಅಕ್ಕಿ, ಕಾಳು, ಬಟ್ಟೆ –ಹೀಗೆ ವಸ್ತುಗಳು ಸಿಗುತ್ತಿತ್ತು. ತೀರ ಇತ್ತೀಚಿನವರೆಗೂ ಇದು ನಡೆಯುತ್ತಿತ್ತು. ಇಂದಿಗೂ ನಮ್ಮಲ್ಲಿ ’ಮುಯ್ಯಾಳು’, ’ಮುಯ್ಯಾರು’ ಎಂಬುದು ವಾಡಿಕೆಯಲ್ಲಿದೆ.
ಆದರೆ ಈ ಪದ್ದತಿಯಲ್ಲಿ ಒಂದು ಕೊರತೆ ಕಾಣಿಸಿತು. ಅದೇನೆಂದರೆ ಯಾವುದೇ ವಸ್ತುಗಳನ್ನು ಒಂದು ಕಡೆ ಕೂಡಿಡುವುದು ಮತ್ತು ಅವುಗಳು ಹಾಳಾಗದೆ ನೋಡಿಕೊಳ್ಳುವುದು ಕಶ್ಟವೆನಿಸತೊಡಗಿತು ಇಲ್ಲವೆ ಅದಕ್ಕೆ ಹೆಚ್ಚು ’ದುಡಿತ’ವು ಬೇಕಾಗತೊಡಗಿತು. ಅಂದರೆ ವಸ್ತುಗಳು (ಎತ್ತುಗೆಗೆ ಅಕ್ಕಿ, ರಾಗಿ, ಹಣ್ಣು, ಬಟ್ಟೆ…ಇತ್ಯಾದಿ) ಕಯ್ಗೆ ಬಂದಾಗ ಅದನ್ನು ’ಮಾರಿ’ಬಿಡುವ ಒತ್ತಡ ಯಾವಾಗಲೂ ಇತ್ತು. ಅಂತಹ ಸಂದರ್‍ಬದಲ್ಲಿ ಈ ವಸ್ತುಗಳನ್ನು ಕೂಡಿಡುವ ಬದಲು ಆ ವಸ್ತುಗಳ ’ಬೆಲೆ’(value)ಯನ್ನು ಕೂಡಿಡುವ ಒಂದು ವಯಿನ(ಸಾದನ)ದ ಅವಶ್ಯಕತೆ ಹೆಚ್ಚಾಯಿತು. ಈ ವಯಿನವನ್ನೇ ನಾವು ಇಂದು ’ದುಡ್ಡು’(money) ಎಂದು ಕರೆಯುತ್ತಿದ್ದೇವೆ. ಯಾವುದೇ ವಸ್ತುವಿನ ’ಬೆಲೆ’(value)ಯನ್ನು ಕೂಡಿಡಲು ದುಡ್ಡು ಬೇಕಾಗುತ್ತದೆ. ಹೀಗೆ ಎಲ್ಲ ವಸ್ತುಗಳ ಬೆಲೆಯನ್ನು ಕೂಡಿಡಲು ದುಡ್ಡು ಬೇಕಾಗುವುದರಿಂದ, ದುಡ್ಡಿದ್ದರೆ ಬೇಕಾದ ವಸ್ತುಗಳನ್ನು ಕೊಳ್ಳಲು ಬರುತ್ತದೆ.

ದುಡ್ಡಿನ ಕೆಲಸಗಳು (advantages):

  1. ವಸ್ತುಗಳ (ಅಂದರೆ ವಸ್ತುಗಳ ಹಿಂದಿರುವ ದುಡಿತದ) ಕೊಡುಕೊಳೆ ಎಗ್ಗಿಲ್ಲದೆ ನಡೆಸಲು ಅನುವು ಮಾಡಿಕೊಡುವುದು
  2. ಬೆಲೆಯನ್ನು ಹಿಡಿದಿಡುವುದು ಇಲ್ಲವೆ ಕೂಡಿಡುವುದು ಇಲ್ಲವೆ ಪ್ರತಿನಿದಿಸುವುದು
  3. ಯಾವುದೇ ವಸ್ತುವಿನ ಮಾರಳತೆಗೋಲಾಗಿರುವುದು,

ದುಡ್ಡಿನಿಂದಾದ ತೊಂದರೆಗಳು:

  1. ಬೆಲೆಯನ್ನು ಹಿಡಿದಿಡಬೇಕಾದರೆ ಆಗಬಹುದಾದ ತಪ್ಪುಗಳು ಅಂದರೆ ಹಿಡಿದಿಟ್ಟ ಬೆಲೆಗಿಂತ ಅದರ ದಿಟವಾದ ಬೆಲೆ ಹೆಚ್ಚು ಕಡಿಮೆ ಆಗಿರಬಹುದು. ಅಂದರೆ ಕೆಲವರಿಗೆ ಇದರಿಂದ ಗಳಿಕೆಯಾದರೆ ಇನ್ನು ಕೆಲವರಿಗೆ ಕಳಿಕೆ ಆಗಬಹುದು.
  2. ಯಾವಾಗಲೂ, ದುಡ್ಡು ಕೂಡಿಡುವುದು ಬೇರೆಯವರ ’ದುಡಿತ’ವನ್ನಾದುದರಿಂದ, ದುಡ್ಡಿದ್ದವರು ಬೇರೆಯವರ ’ದುಡಿತ’ವನ್ನು ಎಗ್ಗಿಲ್ಲದೆ ಯಾವಾಗ ಬೇಕಾದರೂ ಕೊಂಡುಕೊಳ್ಳಬಹುದು. ಇವತ್ತು ನಮಗೆ ಸಿಗುವ ಅಕ್ಕಿ, ರಾಗಿ, ಬಟ್ಟೆ, ಟಿವಿ, ಕಾರು, ಬಸ್ಸು, ಚಿನ್ನ, ಕರೆಂಟು, ಪೋನ್ – ಹೀಗೆ ಎಲ್ಲ ವಸ್ತುಗಳ ಹಿಂದೆ ಮಂದಿಯ ’ದುಡಿತ’ ಇದ್ದೇ ಇದೆ.
  3. ದುಡ್ಡು ಕೂಡಿಡುವುದನ್ನೇ ಸುಳುವಾಗಿಸಿದ್ದರಿಂದ(ಅಂದರೆ ನೋಟಿನ ದುಡ್ಡು, ಹಣಮನೆಯಲ್ಲಿ ಎಣಿಕೆಯ ದುಡ್ಡು), ದುಡ್ಡು ಕೂಡಿಡಲು ಪಯ್ಪೋಟಿ ನಡೆದುದರಿಂದ ಕೂಡಣದಲ್ಲಿ ಉಳ್ಳವರು-ಇಲ್ಲದವರು ಎಂಬ ವರ್‍ಗಗಳು ಹುಟ್ಟಿತು. ಉಳ್ಳವರು ದುಡಿತ ಮಾಡದೇ ಬೇರೆಯವರ ದುಡಿತವನ್ನು ಕೊಂಡುಕೊಳ್ಳಬಹುದಾದ ಪಾಡು ಎದುರಾಯಿತು.
  4. ಇಂದಿನ ಹಣಕಾಸಿನ ಏರ್‍ಪಾಟುಗಳಲ್ಲಿ ಏನಾಗಿದೆಯೆಂದರೆ ದುಡ್ಡೇ ದುಡ್ಡನ್ನು ದುಡಿಯುತ್ತಿದೆ. ಎತ್ತುಗೆಗೆ, ಹಣಮನೆಯಲ್ಲಿಟ್ಟ ಇಡುಗಂಟು ಬಡ್ಡಿಯ ದುಡ್ಡನ್ನು ತಂದುಕೊಡುತ್ತದೆ. ಇದಕ್ಕೆ ಯಾವುದೇ ತೆರನಾದ ದುಡಿತ ಬೇಕಾಗಿಲ್ಲ. ದುಡ್ಡು ದುಡ್ಡನ್ನೇ ಉಂಟುಮಾಡುತ್ತಿರುವುದರಿಂದ ದುಡ್ಡಿರುವವರ ಹತ್ತಿರವೇ ದುಡ್ಡು ಸೇರುತ್ತಿದೆ. ದುಡ್ಡಿರುವವರಿಗೆ ದುಡಿಯಬೇಕೆಂಬ ಒತ್ತಡವಿರಲಿ, ಅವಶ್ಯಕತೆಯೇ ಇಲ್ಲವಾಗಿದೆ. ಇದರಿಂದಾಗಿ ಹತ್ತುಹಲವು ಸಾಮಾಜಿಕ, ರಾಜಕೀಯ ಮತ್ತು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಿದೆ.

ತೀರಮೆಗಳು:

ಇಶ್ಟೆಲ್ಲ ತೊಂದರೆಗಳಿದ್ದರೂ ಇದಕ್ಕೆಲ್ಲ ಮಂದಿಯಾಳ್ವಿಕೆಯ ನೆಲೆಯಲ್ಲಿ ತಕ್ಕಮಟ್ಟಿಗೆ ಬಗೆಹರಿಕೆಗಳನ್ನು ಕಂಡುಕೊಳ್ಳಬಹುದು. ಆಳ್ವಿಕೆಯು ಕಟ್ಟಲೆಯ ಮೂಲಕ ದುಡ್ಡು ಮತ್ತು ದುಡಿತಗಳನ್ನು ತೂಗಿಸಿಕೊಂಡು ಹೋಗುವ ದಾರಿಗಳನ್ನು ಕಂಡುಕೊಳ್ಳಬಹುದು. ದುಡ್ಡಿನಿಂದಾಗುವ ಬಳಕೆಯನ್ನು ಇರಿಸಿಕೊಂಡು, ದುಡ್ಡು ಕೂಡಿಡುವುದಕ್ಕೆ ಕಡಿವಾಣ ಹಾಕಲು ಆಳ್ವಿಕೆಯು ಕಟ್ಟಲೆಯನ್ನು ಮಾಡಬಹುದು. ನೂರಕ್ಕೆ ನೂರು ಸರಿಯಾದ ಏರ್‍ಪಾಟನ್ನು ಕಟ್ಟಿಕೊಳ್ಳಲಾಗದಿದ್ದರೂ ಆದಶ್ಟು ದುಡ್ಡಿನಿಂದಾಗುವ ತೊಂದರೆಗಳನ್ನು ತಡೆಗಟ್ಟಲು ಮೊಗಸಬಹುದು.

(ಮಾಹಿತಿ ಸೆಲೆ: Seventeen Contradictions and The End of Capitalism by David Harvey)

(ಚಿತ್ರ ಸೆಲೆ: thegaurdian.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 12/09/2014

    […] ಹಿಂದಿನ ಬರಹದಲ್ಲಿ ದುಡ್ಡು ಅಂದರೇನು ಮತ್ತು ಅದು ಹೇಗೆ […]

ಅನಿಸಿಕೆ ಬರೆಯಿರಿ: