ಆ ದಿನಗಳು – ಸ್ವಾತಂತ್ರ್ಯದ ನೆನಪುಗಳು
ಆಗಸ್ಟ್ 15, ಇಂಡಿಯಾದ ಸ್ವಾತಂತ್ರ್ಯ ದಿನ. ಇಂಡಿಯಾದಲ್ಲಿ ಅದೆಶ್ಟು ಮಂದಿ ಸ್ವಾತಂತ್ರ್ಯದ ಅನುಬವ ಪಡೆದುಕೊಂಡಿದ್ದಾರೋ ತಿಳಿದಿಲ್ಲ. ಸ್ವಾತಂತ್ರ್ಯದ ಕಿಡಿಯಂತೂ ನಮ್ಮಲ್ಲಿ ಉಳಿದಿಲ್ಲ. ಆದರೆ ಆ ದಿನ ಬಂದಾಗ, ಅಂದಿಗೆ ಮಾತ್ರ ಸೀಮಿತವೆಂಬುವಂತೆ ಸ್ವಾತಂತ್ರ್ಯದ ನೆನಪುಗಳ ಮೆಲುಕು ಹಾಕುವುದ ನಾವು ಬಿಟ್ಟಿಲ್ಲ. ಇವೆಲ್ಲದರ ನಡುವೆ ನನ್ನ ಎಳವೆ ಕೂಡಿಟ್ಟು ಕೊಂಡಿರುವ ಸ್ವಾತಂತ್ರದ ಕೆಲ ನೆನಪುಗಳ ಗಂಟನ್ನು ಬಿಚ್ಚಿ ನಿಮ್ಮ ಮುಂದಿಡುವ ಬಯಕೆ ನನ್ನದು.
ಈ ಎಳವೆ ಎಂಬುವುದೇ ಹಾಗೆ ನೋಡಿ. ಅದೊಂದು ನೆನಪುಗಳ ಗಣಿ ಇದ್ದಂತೆ. ಅದೆಶ್ಟೇ ಅಗೆದರೂ ನೆನಪುಗಳ ಹೂರಣವೇ ಕಯ್ಗೆಟುಕುತ್ತವೆ. ಹಾಗೆಯೇ ಕಲಿಕೆಯ ಹೊತ್ತಲ್ಲಿ ಆಚರಿಸುತ್ತಿದ್ದ ಈ ಸ್ವಾತಂತ್ರ್ಯ ದಿನವು ಕೂಡ ಒಂದು ಸವಿನೆನಪು. ನಾವು ಕಲಿಕೆ ನಡೆಸಿದ ಊರಿನಲ್ಲಿ ಹಲವು ಕಲಿಕೆಮನೆಗಳಿದ್ದರೂ ಸ್ವಾತಂತ್ರ್ಯ ದಿನಾಚರಣೆಯ ದಿನ ಎಲ್ಲಾ ಕಲಿಕೆಮನೆಯವರೂ ಒಂದೆಡೆ ಕೂಡಿ ಒಟ್ಟಿಗೆ ಕಾರ‍್ಯಕ್ರಮಗಳನ್ನು ಕೊಡುವುದು ಅಲ್ಲಿನ ಪದ್ದತಿ. ನಮಗೆ ಬೇಕೋ ಬೇಡವೋ, ಇಶ್ಟವೋ, ಕಶ್ಟವೋ ಕಲಿಕೆಮನೆಯವರ ಹೆದರಿಕೆಗಾದರೂ ಅದರಲ್ಲಿ ಪಾಲ್ಗೊಳ್ಳುವುದು ನಮ್ಮ ಪದ್ದತಿ. ಹೀಗೆ ಇಂತಹ ಕೂಡಣದ ಕಾರ‍್ಯಕ್ರಮಗಳು ಒಂದು ರೀತಿಯಲ್ಲಿ ಹಲವು ಕಲಿಕೆಮನೆಯವರ ನಡುವಿನ ಪಯ್ಪೋಟಿಗೂ ಕಾರಣವಾಗುತ್ತಿತ್ತು. ಅದಕ್ಕೋ ಏನೋ ಒಂದು ವಾರದ ಮೊದಲೇ ಕಲಿಕೆಮನೆಯಲ್ಲಿ ಕಾರ‍್ಯಕ್ರಮಗಳ ಸಿದ್ದತೆ ಆಗಿರುತ್ತಿತ್ತು. ಅಂದರೆ ಮುಂದಿನ ಒಂದು ವಾರದ ವರೆಗೆ ಕಲಿಕೆಗಳು ನೆಪಮಾತ್ರ. ನಮಗೆ ಅದೂ ಒಂದು ನಲಿವಿನ ಸಂಗತಿ ನೋಡಿ.
ಅಂತೂ ಆ ದಿನ ಬರುತ್ತಿತ್ತು. ಮುಂಜಾನೆಯ ಆರು ಗಂಟೆಯ ಆ ಅನುಬವವೋ, ಅದೊಂದು ರೀತಿಯಲ್ಲಿ ನಮಗೆ ಸ್ವಾತಂತ್ರ್ಯ ದಿನದ ದಯೆ ಎನ್ನಬಹುದು. ಏಕೆಂದರೆ ನೇಸರ ಹುಟ್ಟುವುದನ್ನು ನಾವು ನೋಡುವುದೇ ಅಂದು. ನಮ್ಮ ಮನೆಯಿಂದ ಕಲಿಕೆಮನೆ ತುಸು ದೂರವಿದ್ದಿದ್ದರಿಂದ ಮಂದಿಬಂಡಿಯಲ್ಲಿಯೇ ಹೋಗಬೇಕಿತ್ತು. ಆದರೆ ನಮ್ಮೂರಿನ ಮಂದಿಬಂಡಿಯೋ, ನಮ್ಮನ್ನು ಕಾಯಿಸದಿರುವ ದಿನವಿಲ್ಲ ಬಿಡಿ. ಗಂಟೆಗೊಂದರಂತೆ ಬರುವ ಮಂದಿಬಂಡಿಯಾದ್ದರಿಂದ ಸರಿಯಾಗಿ ಏಳು ಗಂಟೆಗೆ ಬರುವ ಮಂದಿಬಂಡಿಗೆ ನಮ್ಮೂರಿನ ಸುಮಾರು ಅಯ್ವತ್ತಕ್ಕೂ ಹೆಚ್ಚು ಬೇರೆ ಬೇರೆ ಕಲಿಕೆಮನೆಯ ಮಕ್ಕಳು ಬರುತ್ತಿದ್ದರು. ಮಂದಿ ಮತ್ತು ಮಕ್ಕಳ ನೂಕುನುಗ್ಗಲಿನ ನಡುವೆ ಮಂದಿಬಂಡಿ ಹತ್ತಿ ಕಲಿಕೆಮನೆ ಬಳಿ ಇಳಿವಾಗ, ನಮ್ಮ ಬೆಳ್ಳಗಿನ ಅಂಗಿ ಕೆಂಪೇರುತ್ತಿತ್ತು. ಅದನ್ನು ನೋಡಿದ ಕೂಡಲೇ ಕಲಿಸುಗರಿಂದ ಬಯ್ಗುಳಗಳು ಶುರುವಾದರೆ, ಒಗೆಯುವಾಗ ಅಮ್ಮನ ಬಯ್ಗುಳದ ಜೊತೆ ಕೊನೆಯಾಗುತ್ತಿತ್ತು.
ವಿಶೇಶವೆಂದರೆ ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿನಲ್ಲಿ, ಇಂಡಿಯಾದ ಬಾವುಟದ ಮಾದರಿಯ ಬಿಲ್ಲೆಗಳು ಅಂಗಡಿಗಳಲ್ಲಿ ಸಿಗುತ್ತವೆ. ಅಂತಹ ಬಿಲ್ಲೆಗಳನ್ನು ಅಂಗಿಯ ಕಿಸೆಗೆ ಸಿಕ್ಕಿಸಿಕೊಂಡು, ಎಲ್ಲರಿಗೆ ಕಾಣುವಂತೆ ಎದೆಯುಬ್ಬಿಸಿ ನಡೆಯುವುದೆಂದರೇ ಇನ್ನೂ ನಲಿವು. ಬಿಲ್ಲೆಗೋ ಅಯ್ದು ಹತ್ತು ರೂಪಾಯಿ ಕೊಡಬೇಕು. ಹಾಗಾಗಿ ಅಪ್ಪನ ಅಪ್ಪಣೆಗೆ ಎದುರ‍್ಗೊಳ್ಳಬೇಕು. ನಮ್ಮ ಅಪ್ಪ ನಮ್ಮ ನಲಿವಿಗೆ ಎಂದೂ ತೊಡಕು ಮಾಡಿದವರಲ್ಲ ಬಿಡಿ. ಅದರೂ ಅಪ್ಪನಲ್ಲಿ ಕೇಳುವುದೆಂದರೆ ಏನೋ ಬಯ, ಜೊತೆಗೆ ತುಸು ನಾಚಿಕೆ ಕೂಡ. ನಮ್ಮಪ್ಪನಲ್ಲಿ ಕೇಳಲು ಅದೆಂತಾ ನಾಚಿಕೆ ಎಂದು ದರ‍್ಯ ಮಾಡಿ, ಅವರ ಕೇಳ್ವಿಗೆಲ್ಲ ನಮ್ಮ ಹೇಳ್ವಿ ಕೊಟ್ಟು ಬಿಲ್ಲೆಯನ್ನು ಎದೆಗೇರಿಸುವಶ್ಟರಲ್ಲಿ ನಿಟ್ಟುಸಿರೊಂದು ಅರಿವಾಗದಂತೆಯೇ ಹೊರಡುತ್ತಿತ್ತು.
ಇವನ್ನೆಲ್ಲಾ ಮುಗಿಸಿ ಕಲಿಕೆಮನೆಗೆ ಕಾಲಿಡುತ್ತಿದ್ದಂತೆ ಅಲ್ಲಿಯ ಕ್ರಮಗಳು ಪ್ರಾರಂಬವಾಗುತ್ತಿತ್ತು. ಕೆಲವು ಅತಿತಿಗಳ ಇರುವಿಕೆಯಲ್ಲಿ ಕಲಿಸುಗರೊಡಗೂಡಿ ನಮ್ಮ ನಾಡಗೀತೆಗಳು ಶುರುವಾಗುತ್ತಿತ್ತು. ಬಳಿಕ ದ್ವಜಾರೋಹಣ, ಸ್ವಾತಂತ್ರ ಇಂಡಿಯಾದ ಬಗ್ಗೆ ಇರುವವರ ಜೊತೆ ಬಂದವರದ್ದು ಮಾತುಗಳು, ಕೊನೆಗೆ ಸಿಹಿ ಹಂಚುವುದು. ಒಟ್ಟಿನಲ್ಲಿ ಇದು ಸುಮಾರು ಒಂದು ಗಂಟೆಯ ಅವದಿಯಲ್ಲಿ ನಡೆಯುವ ಪ್ರಕ್ರಿಯೆಗಳು. ಆದರೆ ಇವಿಶ್ಟರಲ್ಲಿ ನಾವಿಶ್ಟ ಪಡುತ್ತಿದ್ದದ್ದು ಸಿಹಿ ಹಂಚುವುದನ್ನು ಮಾತ್ರ ಎಂಬುವುದು ನಮಗೆ ಮಾತ್ರ ಗೊತ್ತಿರುವ ಗುಟ್ಟಿನ ವಿಚಾರ.
ಇನ್ನೇನು ಕಲಿಕೆಮನೆಯ ಕಾರ‍್ಯಕ್ರಮಗಳು ಮುಗಿಯಿತಲ್ಲವೆಂದು ನಲಿವಾಗುವಂತಿಲ್ಲ. ಏಕೆಂದರೆ ನಿಜವಾದ ಸವಾಲೆದುರಾಗುವುದೇ ಅಲ್ಲಿಂದ. ವಾದ್ಯ ಡೋಲಿನ ಶಬ್ದದ ಜೊತೆ ಮೆರವಣಿಗೆಯಲ್ಲಿ ಹೊರಟು, ಹತ್ತರ ಸುಮಾರಿಗೆ ಬಯಲಿನಲಿನಲ್ಲಿ ಶುರುವಾಗುವ ಕಾರ‍್ಯಕ್ರಮಕ್ಕೆ ಎಲ್ಲಾ ಕಲಿಕೆಮನೆಯುವರು ಅಲ್ಲಿ ಸೇರುವರು. ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ, ಬಯಲಿನ ಒಂದು ಮೂಲೆಗೆ ಹಾಕಲಾಗುವ ದೊಡ್ಡ ವೇದಿಕೆಯಲ್ಲಿ, ಹಲವಾರು ಗಣ್ಯರ ಉಪಸ್ತಿತಿಯಲ್ಲಿ ಕಾರ‍್ಯಕ್ರಮ ಮೊದಲ್ಗೊಳ್ಳುತ್ತದೆ. ಮತ್ತೆ ದ್ವಜಾರೋಹಣ, ಗಣ್ಯರಿಂದ ಸ್ವಾತಂತ್ರ್ಯದ ಮೆಲುಕುಗಳು. ಕಲಿಕೆ ಮನೆಯಲ್ಲಿ ನಾಲ್ಕಯ್ದು ಮಂದಿಯ ಬಾಶಣಕ್ಕೇ ಬೆಂಡಾಗುವ ನಮಗೆ, ಇಲ್ಲಿ ನಲ್ವತ್ತು ಮಂದಿಯ ಬಾಶಣವೆಂದರೆ ಹೇಗಾಗ ಬೇಡ ಹೇಳಿ. ಅಲ್ಲದೆ ಹೊಸತನವಿಲ್ಲದ ಮಾತುಗಳನ್ನು ಕೇಳುವ ಮನಸ್ಸು ಯಾರಿಗಿರುತ್ತದೆ?. ಒಂದೆಡೆ ಬಿಸಿಲಿನ ಬೆಂಕಿಯ ಉಂಡೆಗಳು, ಮತ್ತೊಂದೆಡೆ ಬಾಶಣದ ತಿವಿತಗಳು. ಇನ್ನೇನು ಒಬ್ಬರ ಮಾತು ಮುಗಿಯತೆಂದು ಎನ್ನುವಶ್ಟರಲ್ಲಿ ಮತ್ತೊಬ್ಬರು ಮಾತಿಗಿಳಿಯುತ್ತಿದ್ದರು. ‘ಈ ಸ್ವಾತಂತ್ರ್ಯದ ದಿನ ಯಾರಾದರು ನಮಗಿಶ್ಟು ಸ್ವಾತಂತ್ರ್ಯ ಕೊಡಿಸಿರಪ್ಪಾ!’ ಎಂದೊಮ್ಮೆ ಅನಿಸಿದರೆ, ಮತ್ತೊಮ್ಮೆ ‘ಯಾಕಾದರೂ ಈ ದಿನ ಬರುತ್ತದಪ್ಪಾ!’ ಎಂದೆನಿಸುತ್ತದೆ. ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಕ್ಕೂ ಮೊದಲಿರುತ್ತಿದ್ದ ಹುರುಪು ಅಂದಿರುತ್ತಿರಲಿಲ್ಲ.
ಮಾತು ಮುಗಿಯುತ್ತಿದ್ದಂತೆ ಹಾಡು ಕುಣಿತಗಳ ಸರದಿ. ಕಲಿಕೆಯನ್ನೆಲ್ಲಾ ಬದಿಗೊತ್ತಿ ಒಂದು ವಾರದಲ್ಲಿ ಕರಗತ ಪಡಿಸಿಕೊಂಡವನ್ನು ಮಂದಿಯ ಮುಂದೆ ಓರೆಹಚ್ಚುವ ಹೊತ್ತು, ಗೆದ್ದವರಿಗೆ ಬಹುಮಾನ, ಸಾದಕರಿಗೆ ಸನ್ಮಾನ. ‘ಅಬ್ಬಾ ! ಇಶ್ಟೆಲ್ಲಾ ಆಗುವವರೆಗೆ ನಮ್ಮ ಮುಂದೆ ಕುಳಿತಿರಲ್ಲಾ’ ಎಂದು ಉಳಿದವರಿಗೆ ಗುಣಗಾನ. ಹತ್ತರಿಂದ ಮದ್ಯಾಹ್ನ ಒಂದು ಗಂಟೆಯ ವರೆಗೆ ಬಿಸಿಲಿನ ನಡುವಲಿ ನಡೆಯುವ ಈ ಕಾರ‍್ಯಕ್ರಮಕ್ಕೆ ಅದೆಶ್ಟೇ ಕಶ್ಟವಾದರೂ ಮಕ್ಕಳು ಕದಲದೇ ಕೂರುತಿದ್ದರು. ಅದಕ್ಕೆ ಕಾರಣವೊಂದಿತ್ತು. ಅದೇನಂದರೆ ಕಾರ‍್ಯಕ್ರಮ ಕೊನೆಗೊಳ್ಳುವುದಕ್ಕೂ ತುಸು ಮೊದಲು ವಿವಿದ ಸಂಗಟನೆಗಳಿಂದ ಪಾನಕ ಮತ್ತು ಊಟದ ಏರ‍್ಪಾಡಿರುತ್ತದೆ. ಒಂದರ‍್ತದಲ್ಲಿ ಎಲ್ಲಾ ಕಲಿಕೆಮನೆಯ ಅಶ್ಟೂ ಮಕ್ಕಳು ಒಟ್ಟಿಗೆ ಕಾಣಸಿಗುವುದು ಆಗ ಮಾತ್ರ.
ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಕೊನೆಯಲ್ಲಿ ಉಳಿಯುವುದು ಮೆರವಣಿಗೆ. ಇದಕ್ಕೆ ಎಲ್ಲಾ ಕಲಿಕೆಮನೆಯವರೂ ಒಬ್ಬರ ಹಿಂದೊಬ್ಬರಂತೆ ಹೋಗಬೇಕಿತ್ತು. ಅಲ್ಲದೇ ಕಾರ‍್ಯಕ್ರಮದಿಂದ ಕದ್ದೋಡಲು ನಮಗೆ ಒದಗಿಬರುತ್ತಿದ್ದ ಒಂದು ಅವಕಾಶ. ಆದರೆ ನಮಗಾಗ ಸ್ವಾತಂತ್ರ್ಯ ದಿನಕ್ಕಿಂತಲೂ ಮೆರವಣಿಗೆಯಿಂದ ಕದ್ದೋಡುವುದು ಸವಾಲಿನ ಮತ್ತು ಹೆಮ್ಮೆಯ ಸಂಗತಿಯಾಗುತಿತ್ತು. ನಗರದ ಸುತ್ತ ಸುಮಾರು ಅರ‍್ದ ಮಯ್ಲಿನವರೆಗೆ ಸಾಗುವ ಮೆರವಣಿಗೆಯ ನಡುವಲಿ ಮೆಲ್ಲನೆ ಜಾರಿಕೊಳ್ಳುತ್ತಾ ಓಟ ಕೀಳುವ ನಾವು, ಮನೆಕಡೆ ದಾರಿಹಿಡಿಯುತ್ತಿದ್ದೆವು. ಇತ್ತ ಮೆರವಣಿಗೆ ಕೊನೆಗೊಳ್ಳುವಾಗ ಮಕ್ಕಳಿಲ್ಲದೇ ಕಾಲಿ ಹೊಡೆಯುತ್ತಿತ್ತು. ಅಲ್ಲಿಗೆ ನಮ್ಮ ಆ ವರುಶದ ಸ್ವಾತಂತ್ರ್ಯ ದಿನ ಕೊನೆಗೊಳ್ಳುತ್ತಿತ್ತು.
(ಚಿತ್ರ ಸೆಲೆ: newindianexpress)
ಇತ್ತೀಚಿನ ಅನಿಸಿಕೆಗಳು