ನಂಗೆ ಬಾಶೆ ಕೊಡ್ತೀರಾ?

ಸಿ.ಪಿ.ನಾಗರಾಜ

Autorickshaw_Bangalore

ಮಯ್ಸೂರನ್ನು ತಲುಪಿದಾಗ ಸಂಜೆ ಅಯ್ದು ಗಂಟೆಯಾಗಿತ್ತು. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೊ ಮೀಟರ್ ಅಂತರದೊಳಗಿದ್ದ ಆ ಕಚೇರಿಗೆ ನಡೆದುಕೊಂಡು ಹೋದರೆ, ಕಚೇರಿಯ ವ್ಯವಹಾರದ ವೇಳೆ ಮುಗಿದುಹೋದೀತೆಂಬ ಆತಂಕದಿಂದ, ರಸ್ತೆಯಂಚಿನಲ್ಲಿ ನಿಂತಿದ್ದ ಆಟೋದಲ್ಲಿ ಕುಳಿತು, ಡ್ರಯ್‌ವರನಿಗೆ ನಾನು ಹೋಗಬೇಕಾಗಿದ್ದ ಕಚೇರಿಯ ಹೆಸರನ್ನು ಹೇಳಿ ” ಸ್ವಲ್ಪ ಬೇಗ ಹೋಗಪ್ಪ ” ಎಂದೆ. ಆತ ಸ್ಟಾರ‍್ಟರ್‌ಗೆ ಕಯ್ಯನ್ನು ಹಾಕುತ್ತಿದ್ದಂತೆಯೇ-
“ಹತ್ತು ರೂಪಾಯಿ ಆಗುತ್ತೆ ಸಾರ್” ಎಂದ.
“ಯಾಕಯ್ಯಾ ಹತ್ತು ರೂಪಾಯಿ ?…ಇಲ್ಲಿಂದ ಸರಿಯಾಗಿ ಒಂದು ಕಿಲೊ ಮೀಟರ್ ಕೂಡ ಆಗಲ್ಲ.. ಮಿನಿಮಮ್ ಚಾರ‍್ಜ್ ಅಯ್ದು ರೂಪಾಯಿ ಅಲ್ವೇನಯ್ಯ ?”
ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಆಗ ಮಿನಿಮಮ್ ಚಾರ‍್ಜು ನಾಲ್ಕು ರೂಪಾಯಿ ಅರವತ್ತು ಪಯ್ಸೆ. ಸಾಮಾನ್ಯವಾಗಿ ಅಯ್ದು ರೂಪಾಯಿಯನ್ನು ಡ್ರಯ್ವರ್ ಕಯ್ಗೆ ಕೊಟ್ಟರೆ… ಆತ ಚಿಲ್ಲರೆ ಕೊಡುತ್ತಿರಲಿಲ್ಲ… ಪಯಣಿಗರು ಕೇಳುತ್ತಿರಲಿಲ್ಲ. ಸ್ಟಾರ‍್ಟರ್ ಮೇಲಿನ ಕಯ್ಯನ್ನು ತೆಗೆದ ಡ್ರಯ್ವರ್-
“ಬರೋಕಾಗೊಲ್ಲ ಸಾರ್” ಎಂದ.
ನನಗೆ ಕಚೇರಿಯ ವೇಳೆಯ ಕಡೆಗೆ ಗಮನವಿದ್ದುದರಿಂದ –
“ಆಗ್ಲಿ ನಡೀಯಪ್ಪ… ಬೇಗ ಸ್ಟಾರ‍್ಟ್ ಮಾಡು ” ಎಂದೆ. ಆಟೋ ’ಬರ್ ’ ಎಂದು ಶಬ್ದ ಮಾಡುತ್ತಾ ಹೊರಟಿತು. ಡ್ರಯ್‌ವರ್ ಜತೆ ಈಗ ನಾನು ವಾಗ್ವಾದಕ್ಕೆ ಇಳಿದೆ.
“ಏನಯ್ಯಾ, ದರ‍್ಮಕರ‍್ಮ ಅನ್ನೋದು ಕಿಂಚಿತ್ತಾದರೂ ಬೇಡ್ವೇನಯ್ಯ ?… ಒಂದಕ್ಕೆ ಡಬ್ಬಲ್ ಕೇಳ್ತಾಯಿದ್ದೀಯಲ್ಲ… ಇದು ನ್ಯಾಯವೇನಯ್ಯ ?”
“ನ್ಯಾಯ ಕಟ್ಕೊಂಡು ನಾನೇನ್ ಮಾಡ್ಲಿ.. ನಂಗೆ ದುಡ್ ಬೇಕಾಗಿದೆ… ಸಂಪಾದನೆ ಮಾಡ್ತೀನಿ.”
“ಸಂಪಾದನೆ ಮಾಡೋಕು ಒಂದು ಲೆಕ್ಕಾಚಾರ ಬೇಡ್ವೇನಯ್ಯ?”
“ನೋಡ್ರಿ… ಈಗ ದಸರಾ ನಡೀತಾಯಿದೆ. ಈ ಟಯ್‌ಮ್ನಲ್ಲಿ ನಾಲ್ಕಾಸು ಹೆಚ್ಚಾಗಿ ಸಂಪಾದನೆ ಮಾಡ್ಕೊಂಡ್ರೆ… ಏನ್ರಿ ತಪ್ಪು?”
“ಮೀಟರ್ ಅಂತ ಇರೋದು ಯಾಕಯ್ಯಾ ? ಇಶ್ಟು ಕಿಲೊ ಮೀಟರ‍್ಗೆ… ಇಶ್ಟು ಚಾರ‍್ಜು ಅಂತ ಸರ‍್ಕಾರದವರು ಗೊತ್ತು ಮಾಡಿರೋದು ಯಾಕೆ?”
ನನ್ನ ಮಾತುಗಳನ್ನು ಕೇಳುತ್ತಿದ್ದಂತೆಯೇ, ಡ್ರಯ್‌ವರ್ ವಿಚಿತ್ರವಾಗಿ ನಗತೊಡಗಿದ. ಆಟೋ ಮುಂದೆ ಮುಂದೆ ಸಾಗುತ್ತಿತ್ತು.
“ಸರ‍್ಕಾರ ಕಾನೂನು ಮಾಡಿರೂವಂಗೆ… ಎಲ್ಲಾ ಕಡೆ ಕೆಲ್ಸಕಾರ‍್ಯಗಳು ನಡೀತಾ ಇದೆಯೇನ್ರಿ?” ಎಂದ.
ಅವನ ಕೇಳ್ವಿಗೆ ಬದಲು ಕೊಡಲು ತುಸು ತಡಮಾಡಿದೆ.
“ಯಾಕ್ರಿ ಸುಮ್ಮನಾಗಿಬಿಟ್ರಿ… ರ್ರೀ… ಸ್ವಾಮಿ… ಇವತ್ತು ಇಲ್ಲಿ ನನ್ನನ್ನು ಹಿಂಗೆ ಕೇಳ್ತಾಯಿದ್ದೀರಲ್ಲ… ಹಂಗೆ ನಿಮ್ಮ ಜೀವಮಾನದಲ್ಲಿ ಎಶ್ಟು ಜನರನ್ನು ಕೇಳಿದ್ದೀರಿ ?… ನಿಮ್ಮ ಕಾಗದ ಪತ್ರ ಎಲ್ಲಾ ಸರಿಯಾಗಿದ್ರೂ… ಕೆಲ್ಸ ಮಾಡಿಕೊಡುವಾಗ ಇದುವರೆಗೂ ನಿಮ್ಮಿಂದ ಎಲ್ಲೂ… ಯಾರೂ… ಅನ್ಯಾಯವಾಗಿ ದುಡ್ಡನ್ನ ಕಿತ್ತೇ ಇಲ್ಲವೋ?”
“ನಿಂದೊಳ್ಳೆ ವಿತಂಡವಾದ ಕಣಯ್ಯ ! ಅಲ್ಲೆಲ್ಲೋ… ಯಾರೋ ಲಂಚ ಹೋಡೀತಾವ್ರೆ ಅಂತ… ನೀನು ಇಲ್ಲಿ ಹಿಂಗೆ ಜನಗಳ ಹತ್ರ ಕಿತ್ಕೊಂಡು ತಿನ್ತೀಯ?”
“ಇಲ್ಲಿ ಈಗ ನನ್ನನ್ನ ಜಗ್ಗಿಸಿ ಕೇಳ್ತಿರೂವಂಗೆ… ಯಾವತ್ತಾದ್ರೂ ಆಪೀಸರ್‌ಗಳನ್ನ… ರಾಜಕೀಯದೋರನ್ನ…. ನಿಮಗಿಂತ ಮೇಲ್ಪಟ್ಟವರನ್ನ ನೀವು ಪ್ರಶ್ನೆ ಮಾಡಿದ್ದೀರಾ?”
ಇದೀಗ ಅವನ ಮಾತುಗಳನ್ನ ಸುಮ್ಮನೆ ಕೇಳತೊಡಗಿದೆ.
“ಯಾಕ್ ಸುಮ್ಮನಾಗ್ಬುಟ್ರಿ ?… ಅಲ್ಲೆಲ್ಲಾ ಕೇಳೂಕೆ ನಿಮಗೆ ಬಾಯ್ ಬರೂದಿಲ್ಲ… ಯಾಕಂದ್ರೆ ಅವರೆಲ್ಲಾ ದೊಡ್ಡೋರ್ ನೋಡಿ ಅದಕ್ಕೆ…. ಅಲ್ಲಾದ್ರೆ ಅವರು ಕೇಳ್ದಶ್ಟು ದುಡ್ಡು ಕೊಟ್ಬುಟ್ಟು…ಕಯ್ ಮುಕ್ಕೊಂಡು ಬರ‍್ತೀರಿ. ಇಲ್ಲಾದ್ರೆ ನಮ್ಮಂತ ಸಣ್ಣೋರ್ ಮುಂದೆ, ನ್ಯಾಯ ಅನ್ಯಾಯ ಅಂತ ಹೇಳೋಕೆ ಬರ‍್ತೀರಿ”
ಡ್ರಯ್‌ವರನ ವಾದಕ್ಕೆ ತಕ್ಕ ಉತ್ತರವನ್ನು ಕೊಡಲಾಗದೆ-
“ಹಾಗಾದ್ರೆ ನಿನ್ನ ಕೇಳುದ್ದೆ ತಪ್ಪು ಅಂತೀಯಾ ?”
“ತಪ್ಪೇನಿಲ್ಲ ಕೇಳಿ… ನೋಡ್ರಿ… ಈಗಲೂ ಹೇಳ್ತಾಯಿದ್ದೀನಿ… ಇನ್ನು ಮುಂದೆ ಯಾರಾದ್ರೂ ನಿಮ್ಮ ದುಡ್ಡನ್ನ ಅನ್ಯಾಯದಲ್ಲಿ ಸುಲಿಗೆ ಮಾಡೋಕೆ ಬಂದಾಗ… ಇವತ್ತು ನನ್ನನ್ನು ಕೇಳ್ದಂಗೆ ಅವರನ್ನೂ ಕೇಳ್ತೀರಾ ?… ಕೇಳ್ತೀನಿ ಅಂತ ನಂಗೆ ಬಾಶೆ ಕೊಡೋದಾದ್ರೆ… ಮಿನಿಮಮ್ ಚಾರ‍್ಜನ್ನೇ ಕೊಡಿ.. ಸಾಕು” ಅಂದ.
ಅಶ್ಟರಲ್ಲಿ ಕಚೇರಿಯ ಹತ್ತಿರ ಆಟೊ ಬಂದು ನಿಂತಿತು. ಆಟೋ ಡ್ರಯ್‌ವರನಿಗೆ ಬಾಶೆಯನ್ನು ಕೊಡುವಶ್ಟು ಆತ್ಮವಿಶ್ವಾಸವಿಲ್ಲದ ನಾನು… ಹತ್ತು ರೂಪಾಯಿಯ ನೋಟೊಂದನ್ನು ನೀಡಿ, ಕೆಳಕ್ಕಿಳಿದೆ.

(ಚಿತ್ರ: caughtinjam.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: