ಊಟದಲ್ಲಿರಲಿ ಸೊಪ್ಪಿಗೂ ಜಾಗ

ಸುನಿತಾ ಹಿರೇಮಟ.

ಬಹಳ ದಿನಗಳ ನಂತರ ಅಮ್ಮನ ಮನೆಗೆ ರಜಕ್ಕೆಂದು ಹೋಗಿದ್ದೆ. ಕೇಳಬೇಕೆ… ಶುರು ಸೋಮಾರಿ ದಿನಾರಂಬ, ಬೆಳಕು ಬಿಟ್ಟು ಹೊತ್ತಾದರು ಹಾಸಿಗೆಯಿಂದ ಎದ್ದಿರಲಿಲ್ಲ. ರಾಜ್ಗೀರ್ ಪಲ್ಲೆ, ಪುಂಡೆ ಪಲ್ಲೆ, ಮೆಂತೆ ಪಲ್ಲೆ, ಪನಕನ ಪಲ್ಲೆ, ಪುದಿನಾ, ಕೊತ್ತೊಂಬ್ರಿ ಹೀಗೆ ಸಾಗಿತ್ತು ಸೊಪ್ಪು ಮಾರುವಳ ಪಕ್ಕಾ ರಾಗ. ಸರಿ, ಬಡ ಬಡನೆ ಎದ್ದು ಹೋಗುವಶ್ಟರಲ್ಲಿ, ನನ್ನ ತಮ್ಮನ ಮಡದಿ ಸೊಪ್ಪು ಮಾರುವವಳ ಬುಟ್ಟಿಯನ್ನು ಇಳಿಸಿಯು ಆಗಿತ್ತು. ನಾ ಮೆಲ್ಲನೆ ಮಾತಿಗಿಳಿದೆ, “ಏನೆನ್ ಪಲ್ಲೆ ಅದಾವಬೆ” ಅಂತ. “ಏನ್ ಅಂತ ಹೇಳ್ಳಿ, ಅವ್ ಐದಾರ್ ಪಲ್ಲೆ ಇದಾವ್, ಬ್ಯಾರವ್ ತಂದ್ರ ಕಣ್ಣ್ ಕಣ್ಣ ಬಿಡ್ತಾರ… ಏನದು ಅಂತ… ಇರಲ್ ಬಿಡವ್ವಾ, ನಂಗ ಹೊತ್ತಾತು ಎತ್ತವ್ವ ಬುಟ್ಟಿನಾ”. ರಾಜ್ಗೀರ್ ಪಲ್ಲೆ, ಪುಂಡೆ ಪಲ್ಲೆ, ಮೆಂತೆ ಪಲ್ಲೆ, ಪುದಿನಾ, ಕೊತ್ತೊಂಬ್ರಿ… ಮತ್ತದೇ ರಾಗ, ಹೊರಟೇ ಬಿಟ್ಟಳು ಬುಟ್ಟಿ ಹೊತ್ತ ಸೊಪ್ಪಮ್ಮ!

ಆವಾಗಲೆ ನನ್ನ ತಲೆಯಲ್ಲಿ ಹುಳ ಕೊರಿಯುವುದಕ್ಕೆ ಶುರುವಾಗಿತ್ತು. ನನ್ನವ್ವ (ನನ್ನ ಅಜ್ಜಿ) ಬಳಸುತ್ತಿದ್ದ ಸೊಪ್ಪುಗಳೇ ಬೇರೆ, ನನ್ನಮ್ಮ ಬಳಸುತ್ತಿದ್ದ ಸೊಪ್ಪುಗಳೇ ಬೇರೆ. ಇನ್ನು ನಾವು ಬಳಸುವ ಸೊಪ್ಪುಗಳು ಆ ಸೊಪ್ಪಿನಮ್ಮ ಹೇಳಿದ ಐದಾರಶ್ಟೆ, ಇನ್ನೂ ಹೆಚ್ಹೆಂದರೆ ಹತ್ತನ್ನೊಂದು ಇರಬಹುದೇನೋ. ಪಟ್ಟಣಕ್ಕೆ ಬಂದ ಮೇಲೆ ಬರೀ ಪಲಾಕ್ ಸೊಪ್ಪು, ಮೆಂತ್ಯೆ, ಇನ್ನೊಂದು ಸೇರಿಸುವುದಾದರೆ ಸಬ್ಬಾಕ್ಶಿ ಸೊಪ್ಪುಗಳಲ್ಲೆ ಕಾಲ ಕಳೆಯುವ ನಮಗೆ ಸೊಪ್ಪುಗಳ ಹರವು ಎಶ್ಟೆಂದು ಮರೆತೇ ಹೋಗಿದೆ. ಸರಿ ಹುಡುಕುತ್ತಾ ಹೊರಟೆ ಸೊಪ್ಪುಗಳ ಹೆಸರುಗಳನ್ನು, ಅದರ ಚಿತ್ರಗಳ ಬಗ್ಗೆ ಇನ್ನೊಮ್ಮೆ ಪ್ರಯತ್ನಿಸಿದರಾಯಿತೆಂದು ಹೆಸರುಗಳನ್ನು ಪಟ್ಟಿ ಮಾಡುತ್ತಾ ಹೊರಟೆ.

ಅಗಸೆ ಪಲ್ಲೆ, ಕೀರಕಸಾಲೆ, ಹರಿವೆ, ಬಸಳೆ, ಪುಂಡೆ ಪಲ್ಲೆ, ಕೆಂಪು ಹಾಗು ಹಸಿರು ಬಣ್ಣದ ರಾಜಗಿರಿ, ದೊಡ್ಡಪತ್ರೆ, ಪಾಲಕ, ಹೊನಗೊನೆ, ಸಬ್ಬಾಕ್ಶಿ, ಮೆಂತೆ, ಚುಕ್ಕೆ ಸೊಪ್ಪು, ನುಗ್ಗೆ ಸೊಪ್ಪು, ಕೆಸುವಿನ ಸೊಪ್ಪು, ತುರಿಕೆ ಸೊಪ್ಪು, ಹುಣಿಸೆ ಅಣ್ಣೇ ಸೊಪ್ಪು, ಚಕ್ರಮುನಿ, ಕಾರೇಸೊಪ್ಪು, ಚಗಟೆ ಸೊಪ್ಪು, ಕೋಳೀಕಾಲಿನ ಸೊಪ್ಪು, ಅಕ್ಕೊರಗಿ ಸೊಪ್ಪು, ಗಣಿಕೆಸೊಪ್ಪು, ಒಂದೆಲಗ, ತೊಂಡೆಸೊಪ್ಪು, ಕುಂಬಳಸೊಪ್ಪು, ಆಡುಸೋಗೆ, ಚಿಗುರಿನ ಪಲ್ಲೆ, ಕರಿಬೇವು, ಕೊತ್ತಂಬರಿ, ಪುದಿನ ಇವು ಹೆಚ್ಚಿನವರಿಗೆ ತಿಳಿದಿರಬಹುದು. ಇನ್ನು ಕೇಳರಿಯದ ಸೊಪ್ಪಿನ ಬಗ್ಗೆ ಹೇಳುವುದಾದರೆ ದೋಸೆಕಾಡು ಸಬ್ಸಿಗೆ, ನಾಲ್ಕೆಲೆ ಹೊನ್ನೆ, ದಾಗಡಿ, ವಾಯಿ ನಾರಾಯಣಿ, ಮಂಗರಬಳ್ಳಿ, ನಾರಬಳ್ಳಿ, ಹಡಗುಚಿಟ್ಟ, ಬುಡದುಂಬೆ, ಅಕ್ಕಿಅವರೆ, ಜಾಲಮೂಲಂಗಿ… ಹೀಗೆ ಬಾಲ ಬೆಳೆಯುವುದು.

ಸೊಪ್ಪುಗಳ ವೈವಿದ್ಯತೆಯೇ ಹಾಗೆ, ತಿಂಗಳು ಮತ್ತು ನಾಡಿನ ಹವಾಗುಣಕ್ಕೆ ತಕ್ಕಂತೆ ಊರೂರಿಗೂ ಬದಲಾಗುತ್ತಾ ಹೋಗುತ್ತವೆ. ಬೇಸಿಗೆಗೆ ಕೆಲವಿದ್ದರೆ, ಮಳೆ ಹಾಗು ಚಳಿಗಾಲಕ್ಕೆ ಇನ್ನು ಕೆಲವು. ಹೆಚ್ಚು ರುಚಿ ಕೊಡುವ ಸೊಪ್ಪುಗಳೆಂದರೆ ಹೊಲದಲ್ಲಿ, ಕಾಡಿನಲ್ಲಿ, ಕೆರೆಯಂಗಳದಲ್ಲಿ ಸಿಗುವ ಸೊಪ್ಪುಗಳು .

ಇನ್ನು ಕರ‍್ನಾಟಕವನ್ನೇ ತೆಗೆದುಕೊಂಡರೆ, ಉತ್ತರ ಕರ‍್ನಾಟಕದಲ್ಲಿ ದೊರೆಯುವ ಸೊಪ್ಪುಗಳಲ್ಲಿ ಮುಕ್ಯವಾದುವು ಮೆಂತೆ ಪಲ್ಲೆ, ಪುಂಡೆ ಪಲ್ಲೆ, ರಾಜಗಿರಿ, ಹುಂಚಿಕ್ಕಿ ಪಲ್ಲೆ, ಸಬ್ಬಕ್ಶಿ, ಹುಣಿಸೆ ಚಿಗುರು, ತಿರಕಸಾಲೆ, ಮುಂತಾದವು. ಇನ್ನು ಮಲೆನಾಡ ಕಡೆ ಹೊರಳಿದರೆ ಕೆಸುವಿನ ಎಲೆ, ಬಸಳೆ, ಒಂದೆಲಗ ಹೀಗೆ ಹತ್ತು ಹಲವು. ರಾಜ್ಯದ ಉದ್ದಗಲಕ್ಕು ದೊರೆಯುವ ಸೊಪ್ಪುಗಳು ಅನೇಕ. ಹಳ್ಳಿಹಳ್ಳಿಗೂ ಒಂದೊಂದು ಸೊಪ್ಪಿನ ಗಮವಿದೆ.

ಸೊಪ್ಪಿನ ಉಪಯೋಗಗಳು:

ಹಸಿರು ಸೊಪ್ಪುಗಳು ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಅತ್ಯಾವಶಕವಾದ ಮುಕ್ಯ ಪೌಶ್ಟಿಕಾಂಶಗಳನ್ನು ಒಳಗೊಂಡಿದ್ದು, ಕಬ್ಬಿಣಾಂಶ, ಕ್ಯಾಲ್ಸಿಯಂ, ಬೀಟ ಕೆರೊಟೀನ್, ಪ್ರೊಟೀನ್, ಮಿನರಲ್ಸ್, ವಿಟಮಿನ್ ಎ ಮತ್ತು ಸಿ, ಪೊಟಾಶಿಯಮ್ ಹಾಗೂ ಸಲ್ಪರ‍್ ಕನಿಜಾಂಶ ಹೊಂದಿವೆ. ನಮ್ಮ ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೊಪ್ಪುಗಳ ಸೇರ‍್ಪಡೆಯಿಂದ ಉತ್ತಮ ಆರೋಗ್ಯ ಹೊಂದಬಹುದು. ನಮ್ಮ ದೇಹಕ್ಕೆ ಪರಿಪೂರ‍್ಣ ಆರೋಗ್ಯ ನೀಡುವಲ್ಲಿ ವಿಟಮಿನ್ ಗಳ ಮತ್ತು ಪೋಶಕಾಂಶಗಳ ಪಾತ್ರ ಅತ್ಯಂತ ಹಿರಿದು.

  • ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮುಕ್ಯ ತೊಂದರೆ ರಕ್ತಹೀನತೆ, ನಿಶ್ಯಕ್ತಿ, ಬಳಲಿಕೆ ಇವುಗಳನ್ನು ನಿವಾರಿಸಲು ಉತ್ತಮ ಪೌಶ್ಟಿಕಾಂಶಗಳನ್ನು ಸೊಪ್ಪುಗಳು ನೀಡುತ್ತವೆ.
  • ಬಸಿರಿಯರಲ್ಲಿ, ಹಾಲುಣಿಸುವ ತಾಯಂದಿರಲ್ಲಿ, ಹೆಂಗಸರಲ್ಲಿ ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಬ್ಬಿಣದ ಅಂಶ ಹಾಗೂ ವಿಟಮಿನ್ ಗಳ ಕೊರತೆ ತಗ್ಗಿಸುತ್ತದೆ.
  • ಬೆಳೆಯುವ ಮಕ್ಕಳಲ್ಲಿ ಮೂಳೆ ಮತ್ತು ಸ್ನಾಯುಗಳನ್ನು ಗಟ್ಟಿಗೊಳಿಸಿವಲ್ಲಿ ನೆರವಾಗುತ್ತವೆ.
  • ಕಿನ್ನತೆಯನ್ನು ತಗ್ಗಿಸುವಲ್ಲಿ ಬಹುತೇಕ ಎಲ್ಲಾ ಹಸಿರು ಸೊಪ್ಪುಗಳು ಸಹಕಾರಿ.
  • ನಮ್ಮ ಮೆದುಳಿಗೆ ಬೇಕಾದ ಪೋಶಕಾಂಶದ ಹೆಚ್ಚಿನ ಬಾಗವನ್ನು ಈ ಸೊಪ್ಪುಗಳು ಒದಗಿಸುತ್ತವೆ. ಇವು ದೇಹದ ಆರೋಗ್ಯ ಕಾಪಾಡಿ ಮೆದುಳನ್ನು ಚುರುಕುಗೊಳಿಸುತ್ತವೆ.
  • ಸೊಪ್ಪುಗಳ ಸೇವನೆಯಿಂದ ಶುದ್ದರಕ್ತ ಹೆಚ್ಚುತ್ತದೆ. ರಕ್ತಹೀನತೆಯಿಂದ ನರಳುತ್ತಿರುವವರು, ಕ್ಯಾಲ್ಶಿಯಂ ಕೊರತೆ ಇರುವವರು, ಮಲಬದ್ದತೆಯಿರುವವರು ಪ್ರತಿದಿನ ಸೊಪ್ಪುಗಳನ್ನು ಬಳಸುವುದು ಒಳ್ಳೆಯದು.
  • ಬಗೆಬಗೆಯ ಜೀವಸತ್ವಗಳು ಸಾಕಶ್ಟು ಪ್ರಮಾಣದಲ್ಲಿರುವುದರಿಂದ ಹಾಗು ಈ ಸೊಪ್ಪಿನಲ್ಲಿರುವ ಸೀರೆಣ್ಣೇ (Lipids) ಅಣುಜೀವಿ ನಿರೋದಕವಾಗಿರುವುದರಿಂದ, ಸೊಪ್ಪುಗಳು ರೋಗ ನಿರೋದಕ ಸಾಮರ‍್ತ್ಯ ನೀಡುತ್ತವೆ.

ನಲಿವಿನ ಸಂಗತಿಯೆಂದರೆ, ಆಯಾ ಕಾಲಕ್ಕೆ ತಕ್ಕಂತೆ ಒಂದಲ್ಲ ಒಂದು ಸೊಪ್ಪುಗಳು ಸಿಗುತ್ತಲೇ ಇರುತ್ತವೆ. ನಮ್ಮ ಎಂದಿನ ಊಟದಲ್ಲಿ ಸೊಪ್ಪನ್ನು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಯಾರಿಗಾದರು ಮನೆಯಂಗಳದಲ್ಲಿ ಅವುಗಳನ್ನು ಬೆಳೆಸುವ ಮನಸಾದಲ್ಲಿ, ಇಂದಿನ ದುಬಾರಿ ಕಾಲದಲ್ಲೂ ಮನೆಯಂಗಳದ ಹಸಿರ ಸಿರಿಯಾಗಬಲ್ಲವು ಈ ಸೊಪ್ಪುಗಳು.

(ಚಿತ್ರ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Savita kulakarni says:

    ಒಳ್ಳೆಯ ಮಾಹಿತಿ

  2. ಮಾರಿಸನ್ ಮನೋಹರ್ says:

    ಹುಣಸೆ ಮರದ ಚಿಗುರಿನಿಂದಲೂ ಚಟ್ನಿ ಮಾಡುತ್ತಾರೆ, ಚೆನ್ನಾಗಿರುತ್ತೆ.

  1. 16/09/2014

    […] ಸೊಪ್ಪುಗಳ ಬಗ್ಗೆ ನಾ ಮಾತಾಡ್ತಿದಿನಿ ಅಂತ ಗೊತ್ತಾದ ಕೂಡ್ಲೆ ಅಲ್ಲೆ ಪುಟ್ಟಿಯೊಳಗಿನ ಗೆಣಸು, ಬಟಾಟೆ ನನ್ನನ್ನು ಕೂಗಿ ಕರೆದಂತಾಯುತು, ಬಗ್ಗಿ ನೋಡಿದರೆ ಅಲ್ಲೆ ಇದ್ದ ಮೂಲಂಗಿ ಗಜ್ಜರಿ ಕೂಡ ನಮ್ ಕಡೆ ಕೂಡ ಒಂದ್ಸಲ ಹಣಕ್ರಿ ಅಂತ ಕುಣಿತಾ ಇದ್ದುವು ಸರಿ ಅವನ್ನು ಒಂದ್ಸಲ ಮಾತಾಡ್ಸುಣು ಅಂತ ಪುಟ್ಟಿನ ಎತ್ಕೊಂಡ್ರೆ ಏನೇನ್ ಅದಾವ್ ಅಂತೀರಿ,  ಬೆಳ್ಳಗಿನ ಮೂಲಂಗಿ, ಕೆಂಪಗಿನ ಬೀಟ್ ರೂಟ್, ಕೇಸರಿ ಬಣ್ಣದ ಗಜ್ಜರಿ, ಬೆಳ್ಳಗಿನ ಬಟಾಟೆ(ಆಲೂ), ಬೆಳ್ಳುಳ್ಳಿ, ಗುಲಾಬಿ ಬಣ್ಣದ ಉಳ್ಳಾಗಡ್ಡಿ ಹೀಗೆ ಇನ್ನು… ಕರೆ ಅನುಸ್ತು, ಪಲ್ಲೆಗಳು ಅಂದ್ರ ನೆಲದ ಮೇಲೆ ಬೆಳೆಯೋ ಸೊಪ್ಪುಗಳ ಹಂಗೆ, ನೆಲದ ಕೆಳಗೆ ಬೆಳೆಯೋ ಈ ಎಲ್ಲ ಗೆಡ್ಡೆ ಗೆಣಸು ಕೂಡ ಬಹಳ ಅದಾವೆ ಅಂತ. […]

ಅನಿಸಿಕೆ ಬರೆಯಿರಿ:

%d bloggers like this: