ಕೆ-ಪಾಪ್ ಹಿಂದಿರುವ ಕೊರಿಯನ್ನರ ದುಡಿತ

ಗಿರೀಶ್ ಕಾರ‍್ಗದ್ದೆ.

doing-the-gangnam-style-dance

ಇತ್ತೀಚೆಗೆ ಗಂಗ್ನಮ್ ಸ್ಟೈಲ್ ಎಂಬ ಕೊರಿಯನ್ ಪಾಪ್ ಹಾಡು ಸಾಕಶ್ಟು ಹೆಸರುವಾಸಿಯಾಯಿತು. ಯೂಟ್ಯೂಬಿನಲ್ಲಿ ಎರ‍್ರಾಬಿರ‍್ರಿ ಹರಿದಾಡಿದ, ನಾಲ್ಕು ನಿಮಿಶ ಹನ್ನೆರಡು ಸೆಕೆಂಡುಗಳ ಈ ವೀಡಿಯೋ ಇಪ್ಪತ್ತು ಕೋಟಿಗೂ ಹೆಚ್ಚುಬಾರಿ ನೋಡಲ್ಪಟ್ಟಿದೆ. ಈ ವೀಡಿಯೋವನ್ನು ನೋಡಲು ಬಳಕೆಯಾದ ಒಟ್ಟು ಸಮಯದ ಬಗ್ಗೆಯಂತೂ ಕುತೂಹಲಕಾರಿಯಾದ ಅಂಕಿಅಂಶಗಳಿವೆ.

ಅಂದಾಜು ನೂರಾನಲ್ವತ್ತು ಮಿಲಿಯನ್ ಗಂಟೆಗಳ ಕಾಲ ಅಂದರೆ ಸುಮಾರು ಹದಿನಾರು ಸಾವಿರ ಮನುಶ್ಯ ವರ‍್ಶಗಳಶ್ಟು ಸಮಯ ಇದನ್ನು ನೋಡುವುದರಲ್ಲಿ ಕಳೆಯಲಾಗಿದೆ. ಇದೇ ಸಮಯವನ್ನು ಒಟ್ಟಾಗಿ ದುಡಿದಿದ್ದರೆ ನಾಲ್ಕು ಗೀಜಾ ಪಿರಮಿಡ್ಡುಗಳನ್ನು ಅತವಾ ಮತ್ತೊಂದು ಇಡಿಯ ವಿಕಿಪಿಡಿಯಾವನ್ನು ಅತವಾ ದುಬಾಯಿಯಲ್ಲಿರುವ ಬುರ‍್ಜ್ ಕಲೀಪಾವನ್ನು ಆರುಬಾರಿ ಕಟ್ಟಬಹುದಿದ್ದಂತೆ. ಹೀಗೆ ಇಶ್ಟೊಂದು ಜನರನ್ನು ಸೆಳೆದ ಈ ಹಾಡು ಹೊರನೋಟಕ್ಕೆ ಎಲ್ಲಿಂದಲೋ ದುತ್ತನೆ ಬಂದು ಹೆಸರುವಾಸಿಯಾಯಿತು ಎಂದು ಅನಿಸುವಂತಿದ್ದರೂ, ಇದು ಯಾವುದೋ ಪವಾಡದಿಂದ ಉಂಟಾದ ಬೆಳವಣಿಗೆಯಲ್ಲ. ಇದರೆ ಹಿಂದೆ ಕೊರಿಯನ್ ಸರ‍್ಕಾರದ ಇಪ್ಪತ್ತು ವರ‍್ಶಗಳ ಸರಿಯಾದ ಹಮ್ಮುಗೆ(ಪ್ಲಾನಿಂಗ್) ಹಾಗೂ ಎಡೆಬಿಡದ ದುಡಿಮೆಯಿದೆ.

ಸುಮಾರು ಐದುಕೋಟಿಯ ಮಂದಿಯೆಣಿಕೆಯಿರುವ ದೇಶವೊಂದು ವರ‍್ಶಕ್ಕೆ ಸುಮಾರು ಇನ್ನೂರಾಮೂವತ್ತೈದು ಮಿಲಿಯನ್ ಡಾಲರ್‍ಗೂ ಹೆಚ್ಚು ಬೆಲೆಯ ಪಾಪ್ ಸಂಗೀತವನ್ನು ಹೊರದೇಶಗಳಿಗೆ ಮಾರುತ್ತಿದೆ. ಇದರ ಹಿಂದೆ ಕೊರಿಯನ್ ಬಾಶಿಕ ಸಮುದಾಯವು ಒಟ್ಟಾಗಿ ಮಾಡಿದ ಇಪ್ಪತ್ತು ವರ‍್ಶಗಳ ದುಡಿಮೆಯಿದೆ. ಕೊರಿಯನ್ ಪಾಪ್ ಸಂಗೀತವನ್ನು ಕಾಸಗಿ ಮತ್ತು ಸರ‍್ಕಾರದ ಸಹಕಾರದೊಂದಿಗೆ ಚೆನ್ನಾಗಿ ಬೆಳೆಸಿ ಮುಂಚೂಣಿಗೆ ತರಬೇಕೆಂಬ ದೊಡ್ಡಮಟ್ಟದ ಪ್ರಯತ್ನವು ತೊಂಬತ್ತರ ದಶಕದಲ್ಲಿ ಶುರುವಾಗಿ 1998ರ ಆಸುಪಾಸಿನಲ್ಲಿ ದ.ಕೊರಿಯಾದ ಅದ್ಯಕ್ಶರಾಗಿದ್ದ ಕಿಮ್ ಡೇ ಜಂಗ್ ಅವರ ಆಡಳಿತದಲ್ಲಿ ಚುರುಕು ಪಡೆಯಿತು.

k-popಪಾಪ್ ಸಂಗೀತದಲ್ಲಿ ಅಮೇರಿಕವು ಹೊಂದಿದ್ದ ಹಿಡಿತವನ್ನು ಸಡಿಲಗೊಳಿಸಿ, ಕೊರಿಯನ್ ಪಾಪ್ (ಕೆ-ಪಾಪ್) ಗೆ ಮಾರುಕಟ್ಟೆಯನ್ನು ಉಂಟುಮಾಡಬೇಕು ಮತ್ತು ಆಗಶ್ಟೇ ಬಳಕೆಗೆ ಬರುತ್ತಿದ್ದ ಮಿಂಬಲೆಯನ್ನು (ಇಂಟರ‍್ನೆಟ್) ಬಳಸಿಕೊಂಡು ಕೊರಿಯಾಕ್ಕೆ ಆದಾಯದ ಮೂಲವಾಗಿಸಬೇಕೆಂಬ ಕನಸು ಕೊರಿಯನ್ನರದಾಗಿತ್ತು. ಇದಕ್ಕೆ ಸರಿಯಾದ ಯೋಜನೆಗಳನ್ನು ಹಾಕಿ ಹತ್ತು ಹನ್ನೆರಡರ ಸಣ್ಣ ವಯಸ್ಸಿನಲ್ಲಿಯೇ ಪ್ರತಿಬೆಗಳನ್ನು ಗುರುತಿಸಿ ಅವರಿಗೆ ತರಬೇತಿಕೊಡುವುದು ಮತ್ತು ಅವರ ಬ್ರ್ಯಾಂಡ್ ಅನ್ನು ಹೆಸರುವಾಸಿ ಮಾಡುವ ಕೆಲಸ ಮಾಡಲಾಯಿತು. ಹೀಗೆ ಇಪ್ಪತ್ತು ವರ‍್ಶಗಳ ಸತತವಾದ ಶಿಸ್ತಿನ ದುಡಿಮೆಯ ಪಲವೇ ಗಾಂಗ್ನಮ್ ಸ್ಟೈಲ್ ಅನ್ನುವ ಹಾಡು, ದಾಕಲೆ ಅನ್ನುವ ಮಟ್ಟಿಗೆ ಸಂಚಲನ ಉಂಟು ಮಾಡಲು ಕಾರಣವಾಯಿತು.

ಅಮೇರಿಕದ ಪಾಪ್ ಸಂಗೀತವು ಇಂಗ್ಲಿಶಿನಲ್ಲಿದ್ದು ಜಗತ್ತಿನಲ್ಲಿ ಕೊರಿಯನ್ ಬಾಶಿಕರಿಗೆ ಹೋಲಿಸಿದರೆ ಮಾರುಕಟ್ಟೆಯ ಗಾತ್ರ ಸಹ ದೊಡ್ಡದು. ಆದರೆ ಕೊರಿಯನ್ ಪಾಪ್ ಸಂಗೀತವು ಯಾವ ಪರಿ ಹರಡಿಕೊಂಡಿತೆಂದರೆ ಇವತ್ತು ಉತ್ತರ ಅಮೇರಿಕ, ದಕ್ಶಿಣ ಅಮೇರಿಕ, ಜಪಾನು, ಚೀನಾ, ಬಾರತ, ಯುರೋಪು, ಮದ್ಯ ಪ್ರಾಚ್ಯ ದೇಶಗಳು ಹೀಗೆ ಎಲ್ಲೆಡೆಯಲ್ಲಿಯೂ ಕೆ-ಪಾಪ್ ಅಬಿಮಾನಿ ಕ್ಲಬ್ಬುಗಳಿವೆ. ಬಾಶೆಯೇ ಅರಿಯದ ದೇಶಗಳ ಜನರೆಲ್ಲಾ ಕೊರಿಯನ್ ಹಾಡುಗಳನ್ನು ಗುನುಗುನಿಸುವಂತೆ ಮಾಡಿದ್ದು ಕೊರಿಯನ್ನರು ತಮ್ಮ ನುಡಿ ಮತ್ತು ತಮ್ಮ ಎಡೆಬಿಡದ ದುಡಿಮೆಯ ಮೇಲಿಟ್ಟ ನಂಬಿಕೆಯ ಪ್ರತಿಪಲ.

ಹೀಗೆ ಕೊರಿಯನ್ ಸಂಗೀತದ ಮಾರುಕಟ್ಟೆಯ ವ್ಯವಹಾರಗಳು ಮತ್ತು ಅಂಕಿಅಂಶಗಳನ್ನು ಮೀರಿದ ಸಂಗತಿಯೊಂದಿದೆ, ಅದೇನೆಂದರೆ ಇಪ್ಪತ್ತು ವರ‍್ಶಗಳ ಹಿಂದೆ ಕೆ-ಪಾಪ್‍ನ ಯೋಜನೆಗಳಿಗೆ ಅಡಿಪಾಯ ಹಾಕಿದ್ದ ಕಿಮ್-ಡೇ-ಜಂಗ್ ಹೇಳಿದ್ದ ಮಾತು,

ಉತ್ತರ ಮತ್ತು ದಕ್ಶಿಣ ಕೊರಿಯಾ ದೇಶಗಳನ್ನು ಮತ್ತೆ ಒಟ್ಟುಮಾಡಬಲ್ಲ ಶಕ್ತಿಯೇನಾದರೂ ಇದ್ದರೆ ಅದು ಕೊರಿಯನ್ ಪಾಪ್ ಸಂಗೀತ. ಇದು ನಿಜವಾಗಿ ಕೊರಿಯನ್ನರು ಒಟ್ಟಾಗಿ ಬಾಳುವಂತಾದರೆ ಇದಕ್ಕಿಂತ ಮಿಗಿಲಾದುದಿಲ್ಲ.

ಕೆ-ಪಾಪ್ ಸಂಗೀತದ ಮರುಹುಟ್ಟು, ಅದು ಜಗತ್ತಿನೆಲ್ಲೆಡೆ ಹರಡಿಕೊಂಡು ಅಮೇರಿಕನ್ ಸಂಗೀತಕ್ಕೆ ಸಾಟಿಯಾಗಿ ನಿಂತ ರೀತಿ, ಕೊರಿಯನ್ನರ ಮಾಡುಗತನ ಹಾಗು ಇದು ಕೊರಿಯನ್ನರನ್ನು ಒಗ್ಗೂಡಿಸಬಲ್ಲ ಶಕ್ತಿಯಾಗಿ ಬೆಳೆದ ಪರಿ ಇವೆಲ್ಲದರ ಬಗ್ಗೆಯೇ ದಿ ಬರ‍್ತ್ ಆಪ್ ಕೊರಿಯನ್ ಕೂಲ್ (The Birth of Korean Cool) ಎಂಬ ಪುಸ್ತಕವೇ ಹೊರಬಂದಿದೆ, ಇದನ್ನು ಯೂನಿ ಹಾಂಗ್ ಎನ್ನುವವರು ಬರೆದಿದ್ದಾರೆ. ಹೀಗೆ ಕೇವಲ ಐದು ಕೋಟಿಯಶ್ಟು ಜನರಿರುವ ದೇಶವೊಂದು ತಮಗೆ ಮಾತ್ರ ಸೀಮಿತವಾಗಿದ್ದ ತನ್ನದೇ ನುಡಿಯಲ್ಲಿ ಸಂಗೀತವನ್ನು ಮಾಡಿ ಅದನ್ನು ಕೊರಿಯನ್ ಬಾಶೆಯೇ ಅರಿಯದ ದೇಶಗಳಿಗೆ ಮಾರುವಂತಹ ಸಾದನೆ ಮಾಡಿದ್ದು ಅಶ್ಟೇ ಎಣಿಕೆಯಲ್ಲಿರುವ ಕನ್ನಡಿಗ ನುಡಿಸಮಾಜಕ್ಕೆ ಮಾದರಿ ಎಂದೇ ಹೇಳಬಹುದು.

(ಮಾಹಿತಿ ಸೆಲೆ: bbc.com

(ತಿಟ್ಟ ಸೆಲೆ: musicvideosdeconstructed)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಒಳ್ಳೆಯ ಬರಹ. ಒಂದು ಸಣ್ಣ ತಿದ್ದುಪಡಿ. 2 ಬಿಲಿಯನ್ ನೋಟಗಳು ಅಂದರೆ ಇನ್ನೂರು ಕೋಟಿ ನೋಟಗಳು. ಬರೀ ಇಪ್ಪತ್ತು ಕೋಟಿಯಲ್ಲ.

ಅನಿಸಿಕೆ ಬರೆಯಿರಿ:

Enable Notifications