ಬಾರೋ ಬಾರೋ ಗಣಪ್ಪ

ಅನ್ನದಾನೇಶ ಶಿ. ಸಂಕದಾಳ.

ganapa-padya

ಇವತ್ತ “ಗಣೇಶನ ಹಬ್ಬ“.  ಈ ಕಡೆ ಗಣೇಶಗ ವಿನಾಯಕ, ಗಣಪತಿ ಅಂತ ಕರೀತಾರ. ಉತ್ತರ ಕರ‍್ನಾಟಕದ ಕಡೆ ಗಣಪತಿ ಅನ್ನೋದಕಿಂತ “ಗಣಪ್ಪ” ಅಂತ ಕರಿಯೂದ ಹೆಚ್ಚು. ಹಬ್ಬಕ್ಕ ಮನ್ಯಾಗ ಗಣಪತಿ ಕುಂದ್ರುಸು ಪದ್ದತಿ ಇರೋರಿಗೆ, ಅಕ್ಕಪಕ್ಕದ ಮನಿಯೋರು “ಗಣಪ್ಪ ಬಂದಿಲ್ಲನು ಇನ್ನು, ಯಾವಾಗ ಬರ‍್ತಾನ” ಅಂತ ಕೇಳೋದು ಕಾಮನ್ನು. ಸಣ್ಣ ಮಕ್ಕಳಿಂದ ಹಿಡಿದು ದೊಡ್ದೋರಿಗೆಲ್ಲ ಈ ಗಣಪ್ಪ ಅಚ್ಚುಮೆಚ್ಚು. ಗಣಪ್ಪನ ಬಗ್ಗೆ ಚಂದಂದು ಕತಿ, ಹಾಡು ಮಕ್ಕಳಿಗೆ ಹೇಳಿಕೊಡೋದು ಅಲ್ಲೆ ರೂಡಿ. ಹಿರಿಯಾರು ಮನಿಯಾಗಿನ ಸಣ್ಣ ಹುಡುಗ್ರಿಗೆ ಗಣಪ್ಪನ ಬಗ್ಗೆ ತಿಳಿಸಾಕ ಹೇಳೋ ಈ ಸಾಲುಗಳು ಸಣ್ಣ ಮಕ್ಕಳ ಬಾಯಾಗ ಕೇಳಾಕ ಬಾರೀ ಚಂದ.

ಬಾರೋ ಬಾರೋ ಗಣಪ
ಎಶ್ಟು ಚೆಂದ ನೀನಪ್ಪ
ಈಟೀಟ ಕಣ್ಣು ನಿನಗಪ್ಪ

ಇಲಿಯ ಮ್ಯಾಲೆ ಕುಂತೆಪ್ಪ
ಬಕ್ತರ ಮನಿಗೆ ಹೊಂಟ್ಯೆಪ್ಪ
ಹಾದ್ಯಾಗ ಬಂದನು ಹಾವಪ್ಪ

ಅಂಜಿ ಸರಿದನು ಇಲಿಯಪ್ಪ
ಬಿದ್ದು ಬಿಟ್ಟನು ಗಣಪ
ನೋಡಿ ನಕ್ಕನು ಚಂದಪ್ಪ
ಶಾಪ ಕೊಟ್ಟನು ಗಣಪ

ಪೂಜೆ ಮಾಡ್ತೀನಿ ಕುಂದ್ರಪ್ಪ
ಬುದ್ದಿ ಕೊಡೋ ನಮ್ಮಪ್ಪ

ಮಕ್ಕಳು ಸಣ್ಣೋರಿದ್ದಾಗನ, ಅವರಿಗೆ  “ಗಣಪ್ಪನ ಬಗ್ಗೆ ತಿಳಿದಿರಲಿ, ಅವನ ಬಗ್ಗೆ ಬಯ-ಬಕ್ತಿ ಇರಲಿ” ಅನ್ನೂ ಉದ್ದೇಶ ಮನಿ ಹಿರಿಯಾರದು.

ಅಂದಂಗ ಹೇಳೂದ ಮರ‍್ತಿದ್ದೆ. ನಿಮಗೂ ನಿಮ್ಮ ಮನಿಯವ್ರಿಗೂ ಗಣಪ್ಪನ ಹಬ್ಬದ ಸವಿ ಹಾರೈಕೆಗಳು. ಗಣಪ್ಪ ಎಲ್ರಿಗೂ ಒಳ್ಳೇದು ಮಾಡ್ಲಿ 🙂

(ಚಿತ್ರ ಸೆಲೆ:  aravindb1982.hubpages.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: