ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

ಸುನಿತಾ ಹಿರೇಮಟ.

Grain_millet,_early_grain_fill,_Tifton,_7-3-02ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ ನೋಡಿ, ತಾಟಿನ ಸುತ್ತಾ ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಅಗಸಿ ಚಟ್ನಿ, ಬ್ಯಾಡಗಿ ಮೆಣಸಿನಕಾಯಿ ಚಟ್ನಿ, ಎಳೆಯ ಉಳ್ಳಾಗಡ್ಡಿ, ಹಸಿ ಮೆಂತ್ಯಾ ಸೊಪ್ಪು, ಗಟ್ಟಿಮೊಸರು, ಸೌತೆಕಾಯಿ, ಉದ್ದನೆ ಹಸಿ ಮೆಣಸಿನಕಾಯಿ, ಬದನೆಕಾಯಿ ಎಣ್ಣಗಾಯಿ, ಮಡಿಕಿ ಉಸುಳಿ, ತಾಟಿನೊಳಗ ಜೋಳದ ರೊಟ್ಟಿ ಮತ್ತು ಕಡಕ್ ಸಜ್ಜೆ ರೊಟ್ಟಿ. ಮತ್ತೂ ಬೇಕಾದ್ರ ಕರಿಂಡಿ ಸಪ್ಪನ ಬ್ಯಾಳಿ, ಏನೇನಿಲ್ಲ ಹೇಳ್ರಿ… ಒಂದೇ ಎರೆಡೇ… ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲವೂ ಇವೆ. ಎಲ್ಲವೂ ಬಣ್ಣ ಬಣ್ಣದ್ದು, ನಮ್ಮ ಪ್ರಕ್ರುತಿಯಲ್ಲಿ ದೊರೆಯುವ ಸಹಜ ಬಣ್ಣಗಳು. ಯಾವುದೇ ಕಾರ‍್ಕಾನೆಯಲ್ಲಿ ತಯಾರಾದುವಲ್ಲ ಅಶ್ಟೆ ಅಲ್ಲ ನಮ್ಮ ಆದುನಿಕ ಜಗತ್ತು ಹೇಳುವ ಪ್ರೊಟೀನ್, ಕಾರ‍್ಬೋಹೈಡ್ರೇಟ್, ವಿಟಮಿನ್, ಕನಿಜಾಂಶ ಇತ್ಯಾದಿ ಎಲ್ಲವು ಬೇಕಾದಶ್ಟು ಪ್ರಮಾಣದಲ್ಲಿರುವ ಪೌಶ್ಟಿಕಾಂಶವುಳ್ಳ ಒಳ್ಳೆಯ ಊಟ.

ಇಶ್ಟೆಲ್ಲಾ ಮಣೆ ಹಾಕಿದ್ದು ನಮ್ಮ ಸಜ್ಜೆಗಾಗಿ, ಸಜ್ಜೆ ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ. ವಿಶ್ವದೆಲ್ಲೆಡೆ ಅತ್ಯಂತ ವ್ಯಾಪಕವಾಗಿ ಬೆಳೆಯಲಾಗುವ ಬೆಳೆ. ಪುರಾತನ ಕಾಲದಿಂದಲೂ ಆಪ್ರಿಕಾ ಮತ್ತು ಬಾರತೀಯ ಉಪಕಂಡದಲ್ಲಿ ಬೆಳೆಯಲಾದ ಸಜ್ಜೆಯು ಆಪ್ರಿಕಾದಲ್ಲಿ ಉತ್ಪತ್ತಿಯಾಗಿ ಬಳಿಕ ಬಾರತದಲ್ಲಿ ಪ್ರವೇಶ ಮಾಡಿತೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಪಂಜಾಬ್, ರಾಜಸ್ತಾನ, ಉತ್ತರಪ್ರದೇಶ, ಗುಜರಾತ್, ಮಹಾರಾಶ್ಟ್ರ, ಕರ‍್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮಳೆಕೊರತೆಯ ಪ್ರದೇಶಗಳಲ್ಲಿ ಈ ಬೆಳೆ ಪದ್ದತಿ ರೂಡಿಯಲ್ಲಿದೆ. ಕರ‍್ನಾಟಕ ರಾಜ್ಯಾದ್ಯಂತ ಸಜ್ಜೆಯನ್ನು ಬೆಳೆಯಲಾಗುತ್ತಿದೆ.

PennisetumGlaucumಸಜ್ಜೆಯ ಸುಮಾರು 6000 ವಿವಿದ ತಳಿಗಳು ಜಗತ್ತಿನೆಲ್ಲೆಡೆ ಕಾಣಸಿಗುತ್ತವೆ. ಸಜ್ಜೆ ಏಕದಳದಾನ್ಯದ, ಹುಲ್ಲು ಕುಟುಂಬದ ಜಾತಿಗೆ ಸೇರಿದೆ. ಸಜ್ಜೆಯ ಗಿಡವು ಸಾಮಾನ್ಯವಾಗಿ 4 ರಿಂದ 10 ಅಡಿ ಎತ್ತರವಾಗಿರುತ್ತವೆ. ಎಲೆಗಳು ತುಸು ನೇರಳೆ ಬಣ್ಣದಿಂದ ಕೂಡಿದ ಹಸಿರು ಬಣ್ಣದ್ದಾಗಿವೆ. ತೆನೆಯು ಚೂಪಾಗಿದ್ದು ಹೊರಮೈ ಹುಲ್ಲು-ಹುಲ್ಲಾಗಿರುತ್ತದೆ. ಕಾಳುಗಳ ಬಣ್ಣ ಮೂರು ನಾಲ್ಕು ಬಣ್ಣಗಳಲ್ಲಿದ್ದು ಹಸಿರು, ಬೂದು ಮಿಶ್ರಿತ ಹಸಿರು, ಕೆಂಪು ಮಿಶ್ರಿತ ಹಸಿರು ಇರುತ್ತವೆ. ಕಾಳುಗಳು ಒಂದೆಡೆ ಗುಂಡಗಿದ್ದು ಇನ್ನೊಂದೆಡೆ ಚೂಪಾಗಿದೆ.

ಈ ಬೆಳೆಯನ್ನು ಒಣ ಬೂಮಿ ಮತ್ತು ಕಡಿಮೆ ಮಳೆ ಬೀಳುವ ಪ್ರದೆಶಗಳಲ್ಲಿ ಬೆಳೆಯಬಹುದಾಗಿದೆ. ಅತೀ ಹೆಚ್ಹು ಬಿಸುಪಿರುವ ಅಂದರೆ ಸರಿ ಸುಮಾರು 25-35 ಡಿಗ್ರಿ ಬಿಸುಪು ಹಾಗು ವರುಶಕ್ಕೆ 40-50 ಸೆಂಟಿಮೀಟರ್ ಮಳೆಯಾಗುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದಾಗಿದೆ. ಅತೀ ಹೆಚ್ಚು ಮಳೆ ಈ ಬೆಳೆಗೆ ಸರಿಯಾದುದಲ್ಲ. ನೀರಾವರಿಯಂತು ಬೇಕಾಗೇ ಇಲ್ಲ. ನೀರಾವರಿ ಇದ್ದಲ್ಲಿ ವರ‍್ಶದ ಎಲ್ಲಾ ತಿಂಗಳಲ್ಲೂ ಬೆಳೆಯಬಹುದು. ಸಾಮಾನ್ಯವಾಗಿ ಎಲ್ಲ ರೀತಿಯ, ಅದರಲ್ಲೂ ಮುಕ್ಯವಾಗಿ ಕಡಿಮೆ ಪಲವತ್ತತೆ ಇರುವ ಮಣ್ಣಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕೆಂಪು ಮಣ್ಣಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ. ಮರುಳು ಮಿಶ್ರಿತ, ಕೆಂಪು ಮತ್ತು ಕಪ್ಪು ಮಣ್ಣಲ್ಲಿ ಬೆಳೆಯಬಹುದು. ಕಡಿಮೆ ಬೆಳಕು ಬೀಳುವ ಪ್ರದೇಶದಲ್ಲೂ ಇದು ಉತ್ತಮ ಇಳುವರಿ ಕೊಡಬಲ್ಲದು.

ಮಿಶ್ರ ತಳಿಯಾಗಿಯೂ ವರುಶದ ಮೇ ತಿಂಗಳಿನಿಂದ ಸೆಪ್ಟೆಂಬರವರೆಗಿನ ಸಮಯ ಬಿತ್ತಬಹುದಾಗಿದ್ದು, ಮುಂದಿನ ಅಕ್ಟೋಬರ್ ಹಾಗು ಮಾರ‍್ಚ್ ತಿಂಗಳ ಅವದಿಯಲ್ಲಿ ಕೊಯ್ಲು ಮಾಡಬಹುದಾಗಿದೆ.ಸಜ್ಜೆಯನ್ನು ಮಳೆ ಮತ್ತು ನೀರಾವರಿ ಆಶ್ರಿತವಾಗಿಯೂ ಬೆಳೆಯಬಹುದು. ಬಿತ್ತಿದ ಮೂರುವರೆ ತಿಂಗಳಿಂದ ನಾಲ್ಕು ತಿಂಗಳೊಳಗೆ ಪಸಲು ಕೈಗೆ ಬರುತ್ತದೆ.

ಪೌಶ್ಟಿಕಾಂಶಗಳ ಆಗರವಾದ ಸಜ್ಜೆ ಅತ್ಯುತ್ತಮ ಆಹಾರವಾಗಿದೆ. ಹಲವು ಬಗೆಯ ಔಶದಿಯ ಗುಣ ಸಜ್ಜೆಯಲ್ಲಿ ಅಡಗಿದೆ. ಒಂದು ನೂರು ಗ್ರಾಮ್ ನ ಸಜ್ಜೆಯಲ್ಲಿ ಸಿಗುವ ಪೌಶ್ಟಿಕಾಂಶದ ಮಾಹಿತಿಯನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.sajje

ಸಜ್ಜೆಯಲ್ಲಿ ಬಹಳಶ್ಟು ಔಶದಿಯ ಗುಣಗಳಿವೆ ಆದ್ದರಿಂದ ಇದು ಒಂದು ಒಳ್ಳೆಯ ಆಹಾರ ಕೂಡ ಹೌದು.

  • ಇದು ಸುಲಬವಾಗಿ ಕರಗುವ ಅಹಾರವಾಗಿರುವುದರಿಂದ ಮಲಬದ್ದತೆ ನಿವಾರಣೆಗೆ ಸಜ್ಜೆ ಸಹಕಾರಿ. ಅಲ್ಲದೆ, ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ನಿಯಂತ್ರಿಸಬಹುದು
  • ಸಜ್ಜೆಯಲ್ಲಿ ಪೌಶ್ಟಿಕಾಂಶಗಳು, ವಿಟಮಿನ್‍ಗಳು, ಕನಿಜಾಂಶಗಳು ಹೇರಳವಾಗಿವೆ
  • ಸಜ್ಜೆಯು ಅಂಟಿಲ್ಲದ (Gluten free)  ಕಾಳಾಗಿದ್ದು ಹೊಟ್ಟೆಯ ತೊಂದರೆ ಇರುವವರು ಇದನ್ನು ಊಟವಾಗಿ ಬಳಸುವುದು ಒಳಿತು. ಇದು ಯಾವುದೇ ಅಡ್ಡ ಪರಿಣಾಮಗಳನ್ನು ನೀಡುವುದಿಲ್ಲ.
  • ಇದರಲ್ಲಿರುವ ಗಂಜಿ (Starch) ಪದಾರ‍್ತ ದೇಹಕ್ಕೆ ಶಕ್ತಿ ನೀಡುವಲ್ಲಿ ಬಹಳ ಸಹಕಾರಿ
  • ಪ್ರೊಟೀನ್, ನಾರು ಮತ್ತು ಕನಿಜಾಂಶಗಳ ಆಗರವಾಗಿದೆ. ಇದು ಬೊಜ್ಜನ್ನು ನಿಯಂತ್ರಿಸುವಲ್ಲಿ ಊಟದ ರೂಪದಲ್ಲಿ ಇದು ಬಹಳ ಪರಿಣಾಮಕಾರಿ
  • ಇದಲ್ಲಿರುವ ಕೆಲವು ಗುಣಗಳು ಅತೀ ಹೆಚ್ಚಿನ ಕೊಲೆಸ್ಟರಾಲ್ ಅನ್ನು ಸಹಜವಾಗಿ ನಿಯತ್ರಿಸಬಲ್ಲವು
  • ಮಹಿಳೆ ಮತ್ತು ಮಕ್ಕಳಲ್ಲಿ ಕಾಣುವ ನಿತ್ರಾಣ ಮತ್ತು ರಕ್ತಹೀನತೆಗೆ ಇದು ರಾಮಬಾಣ

ಸಜ್ಜೆಯಲ್ಲಿ ಅಡಗಿರುವ ಕಬ್ಬಿಣ ಮತ್ತು ಅಂಟಿಲ್ಲದ ಗುಣವಿರುವುದರಿಂದ ಇದು ವಿಶ್ವಾದ್ಯಂತ ಉತ್ತಮ ಅಹಾರ ಮೂಲವಾಗಿದೆ. ಮನುಶ್ಯರ ಊಟದಲ್ಲಿ ಇವು ಮುಕ್ಯಪಾತ್ರ ವಹಿಸುತ್ತವೆ. ಪ್ರಾಣಿಗಳ ಮೇವಿಗೂ ಇವು ಬಳಕೆಯಾಗುತ್ತವೆ. ಇದರ ಬೇಸಾಯವು ಸರಳವಾಗಿರುವುದರಿಂದ ಉತ್ತಮ ಪಸಲು ನೀಡಿ ರೈತ ಸ್ನೇಹಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, fao.org, pfaf.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: