ಬುದ್ದ, ಪಾಣಿನಿ ಮತ್ತು ಕನ್ನಡದ ನುಡಿಹಮ್ಮುಗೆ

ಕಿರಣ್ ಬಾಟ್ನಿ.

Budda Panini

ಗೌತಮಬುದ್ದನು ಸಂಸ್ಕ್ರುತವನ್ನು ಬಳಸದೆ ಪಾಲಿಯನ್ನು ಬಳಸಿದ್ದೇಕೆಂಬ ಪ್ರಶ್ನೆ ನನ್ನನ್ನು ಹಲವಾರು ದಿನಗಳಿಂದ ಕಾಡುತ್ತಿತ್ತು. ಆತ ವೈದಿಕ ದರ‍್ಮದಿಂದ ದೂರ ಸರಿದದ್ದರಿಂದ ವೇದಗಳ ನುಡಿಯನ್ನೂ ಕೈಬಿಟ್ಟನೆಂದು ಕೇಳಿದ್ದೆ; ಸಂಸ್ಕ್ರುತವನ್ನು ಮೇಲ್ಜಾತಿಯವರು ಮಾತ್ರ ಬಳಸುತ್ತಿದ್ದರಿಂದ, ಹಾಗೂ ಮೇಲ್ಜಾತಿ-ಕೆಳಜಾತಿಯೆಂಬ ಏರ‍್ಪಾಡನ್ನೇ ಆತ ಒಪ್ಪದೆ ತನ್ನ ಹೊಸ ’ದಮ್ಮ’ಕ್ಕೆ ಎಲ್ಲರನ್ನೂ ಸೇರಿಸಿಕೊಳ್ಳಲು ಹೊರಟಿದ್ದರಿಂದ, ಮಗದರಾಜ್ಯದ ಹುಲುಜನರ ನುಡಿಯಾದ ಮಾಗದಿ ಇಲ್ಲವೇ ಪಾಲಿಯನ್ನು ಬಳಸಿದನೆಂದು ಕೂಡ ಕೇಳಿದ್ದೆ. ಇವೆಲ್ಲ ಒಪ್ಪುವಂತಿದ್ದರೂ ಏಕೋ ನನ್ನ ಪ್ರಶ್ನೆಯನ್ನು ಪೂರ‍್ತಿ ಉತ್ತರಿಸದೆ ಹೋಗಿದ್ದವು. ಆದ್ದರಿಂದ ಇನ್ನಶ್ಟು ತಿಳಿಯಲು ಅಶ್ವಗೋಶನ ’ಬುದ್ದಚರಿತ’, ಹಲವಾರು ’ತಿಪೀಟಕ’ ಸೂತ್ತಗಳು, ಹಾಗೂ ಹಳಮೆಯರಿಮೆಯ ಪುರಾವೆಗಳನ್ನು ಕೆದಕಿದೆ.

ಬುದ್ದನ ಕಾಲಕ್ಕಾಗಲೇ ವೇದಗಳ ನುಡಿಯಾದ ಹಳಸಂಸ್ಕ್ರುತವನ್ನು ಬಳಸುವವರಿರಲಿಲ್ಲವೆಂಬುದಂತೂ ನಿಜ. ತಾನು ಮಾಗದಿ ಇಲ್ಲವೇ ಪಾಲಿಯಲ್ಲಿ ಹೇಳಿಕೊಟ್ಟ ದಮ್ಮವನ್ನು ಹಳಸಂಸ್ಕ್ರುತಕ್ಕೆ ನುಡಿಮಾರುವುದೂ ಪೆದ್ದತನವಾದೀತು ಎಂದು ಬುದ್ದನೇ ಹೇಳಿರುವನೆನ್ನುತ್ತಾರೆ. ಆಗ ಆ ನುಡಿಯನ್ನು ಬುದ್ದನು ’ಹಳಸಂಸ್ಕ್ರುತ’ವೆಂದು ಕರೆದಿದ್ದನೆಂದು ನಾನು ಹೇಳುತ್ತಿಲ್ಲ, ಏಕೆಂದರೆ ಆಗ ’ಹೊಸಸಂಸ್ಕ್ರುತ’ವೆಂಬುದು ಇತ್ತೆಂಬುದಕ್ಕೇ ಪುರಾವೆಯಿಲ್ಲ. ಹೊಸಸಂಸ್ಕ್ರುತ, ಇಲ್ಲವೇ ಇಂದು ಯಾವುದನ್ನು ’ಶಾಸ್ತ್ರೀಯ ಸಂಸ್ಕ್ರುತ’ ಎಂದು ಕರೆಯುತ್ತೇವೋ ಅದು, ಹುಟ್ಟಿಕೊಂಡಿದ್ದೇ ಪಾಣಿನಿಯ ನಂತರ. ಬುದ್ದನ ಪರಿನಿಬ್ಬಾಣಕ್ಕೆ ಮೊದಲು ಪಾಣಿನಿ ಹುಟ್ಟಿದ್ದನೆಂದು ಕಡಾಕಂಡಿತವಾಗಿ ಹೇಳಲು ಬರುವುದಿಲ್ಲವಾದ್ದರಿಂದ ಬುದ್ದನಿಗೆ ಹೊಸಸಂಸ್ಕ್ರುತದ ಪರಿಚಯವಿತ್ತೆಂದು ಹೇಳಲೂ ಬರುವುದಿಲ್ಲ.

ಸಾಮಾಜಿಕ ಕಾರಣಗಳಿಗಾಗಿ ಹಳಸಂಸ್ಕ್ರುತ ಬೇಡವೆನಿಸುವ ಪರಿಸ್ತಿತಿಯಿಲ್ಲದಿದ್ದರೆ ಬುದ್ದ ಅದನ್ನು ಬಳಸುತ್ತಿದ್ದನೇ? ಬಳಸಬಲ್ಲವನಾದರೂ ಆಗಿದ್ದನೇ? ಈ ಪ್ರಶ್ನೆಗಳಿಗೂ ಕಡಾಕಂಡಿತವಾಗಿ ಉತ್ತರವನ್ನು ಕೊಡುವುದು ಕಶ್ಟ, ಆದರೆ ಊಹಿಸಬಹುದು. ಆ ಕಾಲದಲ್ಲಿ ಆಡುಮಾತಿನಲ್ಲಿ ಹಳಸಂಸ್ಕ್ರುತವನ್ನು ಯಾರೂ ಬಳಸುತ್ತಿರಲಿಲ್ಲವಶ್ಟೇ ಅಲ್ಲ, ಅದರಲ್ಲಿ ಕಟ್ಟಣೆಯ ಕೆಲಸವನ್ನು ಯಾರೂ ನಡೆಸುತ್ತಿರಲಿಲ್ಲವೆನ್ನಬಹುದು. ಎಂದರೆ, ಯಾರೂ ಹಳಸಂಸ್ಕ್ರುತವನ್ನು ಬಳಸಿಕೊಂಡು ಹೊಸದೇನನ್ನೂ ರಚಿಸುತ್ತಿರಲಿಲ್ಲವೆನ್ನಬಹುದು, ರಚಿಸುವ ಅಳವೂ ಅವರಿಗೆ ಇರಲಿಲ್ಲವೆನ್ನಬಹುದು. ಹೌದು, ಕೆಲವು ಬ್ರಾಹ್ಮಣರು ವೇದಗಳನ್ನು ಇದ್ದದ್ದಿದ್ದಂತೆ ಹೇಳುತ್ತಿದ್ದರು ಮತ್ತು ಅದನ್ನು ಅರಿತುಕೊಳ್ಳುತ್ತಿದ್ದರೆನ್ನಬಹುದು, ಆದರೆ ಅದು ಕಟ್ಟಣೆಯ ಕೆಲಸವಲ್ಲ; ಬಾಯಿಪಾಟ ಕಟ್ಟಣೆಯಲ್ಲ. ಆದ್ದರಿಂದ ಬುದ್ದನಿಗೂ ಹಳಸಂಸ್ಕ್ರುತದಲ್ಲಿ ತನ್ನ ದಮ್ಮವನ್ನು ಹೇಳಿಕೊಡುವ ಅಳವು ಇದ್ದಿರಲಾರದೆಂದು ಊಹಿಸಬಹುದು. ಮಾಗದಿ ಇಲ್ಲವೇ ಪಾಲಿಯನ್ನು ಆತ ಆಯ್ದುಕೊಂಡಿದ್ದಕ್ಕೆ ಸಾಮಾಜಿಕ ಕಾರಣಗಳ ಜೊತೆಗೆ ಈ ಕಾರಣವೂ ಸೇರಿಕೊಂಡಿರುವ ಸಾದ್ಯತೆ ಬಹಳವಿದೆ.

ಈಗ ಏಳುವ ಪ್ರಶ್ನೆಗಳು: ಯಾವ ಕಟ್ಟಣೆಯ ಕೆಲಸಕ್ಕೂ ಬಾರದ ಸಂಸ್ಕ್ರುತಕ್ಕೆ ಪಾಣಿನಿಯೇನಾದರೂ ಹೊಸ ಶಕ್ತಿಯನ್ನು ತುಂಬಿದನೇ? ಅವನ ನಂತರ ಸಂಸ್ಕ್ರುತದಲ್ಲಿ ಅಶ್ಟೆಲ್ಲ ಒಳ್ಳೆಯ ಕಟ್ಟಣೆಯ ಕೆಲಸವು ನಡೆಯಿತಲ್ಲ, ಅದಕ್ಕೆಲ್ಲ ಅವನೇ ಕಾರಣವೆನ್ನಲು ಬರುತ್ತದೆಯೇ? ಡಾ. ಡಿ. ಎನ್. ಶಂಕರಬಟ್ಟರು ಹೇಳುವಂತೆ, ಒಂದು ನುಡಿಯ ಕಟ್ಟಲೆಗಳನ್ನು ಮಿದುಳಿಗೆಟುಕುವಂತೆ ಬರೆದಿಡುವುದೇ ಒಬ್ಬ ಸೊಲ್ಲರಿಗನ ಕೆಲಸ. ಆದರೆ ಪಾಣಿನಿಯು ಬಟ್ಟರ ಈ ಮಾತನ್ನು ಮೀರಿದಂತಹ ಕೆಲಸವನ್ನು ಮಾಡಿರಬಹುದೇ? ಅವನನ್ನು ಬರೇ ಒಬ್ಬ ಸೊಲ್ಲರಿಗನೆಂದು ಕಾಣದೆ ಒಬ್ಬ ನುಡಿಹಮ್ಮುಗೆಗಾರನೆಂದೂ ಹೇಳಬಹುದೇ? ಎಂದರೆ, ಅವನ ಕಾಲದ ಸಂಸ್ಕ್ರುತದ ಕಟ್ಟಲೆಗಳನ್ನು ಬರೆಯುವುದಶ್ಟೇ ಅಲ್ಲದೆ, ಹೊಸಸಂಸ್ಕ್ರುತವನ್ನು ಚಲಾವಣೆಗೆ ತರುವ ನುಡಿಹಮ್ಮುಗೆಯ ಕೆಲಸವನ್ನೂ ಮಾಡಿದನೇ? ಮಾಡಿದನೆನ್ನುವುದಾದರೆ ಹೇಗೆ?

ಪಾಣಿನಿಯನ್ನು ಒಬ್ಬ ನುಡಿಹಮ್ಮುಗೆಗಾರನೆಂದು ನೋಡುವುದರಲ್ಲಿ ತಪ್ಪಿಲ್ಲವೆನಿಸುತ್ತದೆ. ಅವನ ’ಅಶ್ಟಾದ್ಯಾಯಿ’ ಸಂಸ್ಕ್ರುತದಲ್ಲಿ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಬಹಳ ಚೆನ್ನಾಗಿ ತೋರಿಸಿಕೊಡುತ್ತದೆ. ಆ ಕಾಲಕ್ಕೆ ಹೆಚ್ಚು-ಕಡಿಮೆ ಕಟ್ಟಣೆಯ ಮಟ್ಟಿಗಂತೂ ಸತ್ತಂತಿದ್ದ ಸಂಸ್ಕ್ರುತದಲ್ಲಿ ಕಟ್ಟಣೆಯ ಕೆಲಸ ಮುಂದುವರೆಯಲಿ ಎಂಬುದು ಅವನ ತಲೆಯಲ್ಲಿ ಇದ್ದಿರಬಹುದು. ವೇದಗಳನ್ನು ಮೊದಲ ಬಾರಿಗೆ, ಇಲ್ಲವೇ ಆಳವಾಗಿ, ಅರಿತುಕೊಳ್ಳಲು ಹೊರಡುವವರಿಗೂ ಅದರಲ್ಲಿ ಬರುವ ಹಲವು ಪದಗಳು ಪಾಣಿನಿಯ ಕಾಲಕ್ಕೂ ’ಹೊಸ’ ಪದಗಳೇ ಆಗಿದ್ದವು. ಆದರೆ ಅವುಗಳನ್ನೂ ಮೀರಿದಂತೆ, ಎಂದೂ ಬಳಕೆಯಾಗಿರದಂತಹ ಹೊಸ ಪದಗಳನ್ನು ಕಟ್ಟುವುದು ಕೂಡ ಸಂಸ್ಕ್ರುತವು ಬದುಕುಳಿಯಲು ಮುಕ್ಯ ಎಂದು ಪಾಣಿನಿ ಅರಿತಿದ್ದಿರಬಹುದು. ಸಂಸ್ಕ್ರುತದಲ್ಲಿ ಹೊಸ ಪದಗಳನ್ನು (ಇಂದು ನಾವು ಕಂಡುಕೊಂಡಿರುವಂತೆ) ಒಂದು ಗಣಕವು ಕೂಡ ಕಟ್ಟಲಾಗುವ ರೀತಿಯಲ್ಲಿ ಪದಕಟ್ಟಣೆಯ ನಿಯಮಗಳನ್ನು ಪಾಣಿನಿ ಕಂಡುಹಿಡಿರುವುದು ಎಲ್ಲರಿಗೂ ಗೊತ್ತಿರುವ ವಿಶಯ.

ಇಲ್ಲಿ ನನ್ನ ಊಹೆಯೇನೆಂದರೆ, ಪಾಣಿನಿಯು ಪದಕಟ್ಟಣೆಯ ನಿಯಮಗಳನ್ನು ಅಶ್ಟು ಚೆನ್ನಾಗಿ ಕಂಡುಹಿಡಿಯದೆ ಹೋಗಿದ್ದರೆ ಮುಂದೆ ಸಂಸ್ಕ್ರುತದಲ್ಲಿ ಬಂದ ಅತ್ಯಂತ ಸುಂದರವಾದ ಬರವಣಿಗೆಯೆಲ್ಲ ಬರುತ್ತಿರಲಿಲ್ಲವೇನೋ. ’ಅಶ್ಟಾದ್ಯಾಯಿ’ಯನ್ನು ಆರು ವೇದಾಂಗಗಳಲ್ಲಿ ಒಂದಾದ ’ವ್ಯಾಕರಣ’ವಾಗಿ ಸೇರಿಸಿಕೊಂಡು ಮೇಲ್ಜಾತಿಯವರು ಬಾಯಿಪಾಟ ಮಾಡಿದ್ದರಿಂದ ಅವರಲ್ಲಿ ಕೆಲವರಿಗಾದರೂ ಪಾಣಿನಿಯ ನಂತರದ, ಎಂದರೆ ಹೊಸದಾದ, ಸಂಸ್ಕ್ರುತದಲ್ಲಿ ಕಟ್ಟಣೆಯ ಕೆಲಸವನ್ನು ಮಾಡುವ ಅಳವು ಬೆಳೆದಿರಬಹುದು. ಈ ಅಳವು ಬುದ್ದನನ್ನು ಸೇರಿದಂತೆ ಪಾಣಿನಿಯ ಮುಂಚಿನವರಿಗಾರಿಗೂ ಇರಲಿಲ್ಲವೆನ್ನಬಹುದು, ಇದ್ದಿದ್ದರೂ ಕಡೆಗಣಿಸಬಹುದಾದಶ್ಟು ಕಡಿಮೆಯೆನ್ನಬಹುದು.

ಇದೆಲ್ಲದರಿಂದ ಕನ್ನಡದ ನುಡಿಹಮ್ಮುಗೆಯ ಕೆಲಸದಲ್ಲಿ ತೊಡಗಿರುವವರು ಕಲಿಯಬೇಕಾದುದೇನು? ಪದಕಟ್ಟಣೆಯ ಕೆಲಸ ಒಂದು ನುಡಿಯ ಮುಂದುವರೆದ ಬದುಕಿಗೆ ಎಶ್ಟು ಮುಕ್ಯ ಎನ್ನುವುದನ್ನು ಪಾಣಿನಿಯು ಸಂಸ್ಕ್ರುತದ ಮೇಲೆ ಬೀರಿರಬಹುದಾದ ಪರಿಣಾಮದಿಂದ ಅರಿತುಕೊಳ್ಳಬೇಕು. ಸುಮಾರು 2,500 ವರ‍್ಶಗಳ ಹಿಂದೆ ಹೇಗೆ ಪಾಣಿನಿಯು ಹಳಸಂಸ್ಕ್ರುತ ಮತ್ತು ಹೊಸಸಂಸ್ಕ್ರುತಗಳ ನಡುವಿನಲ್ಲಿ ನಿಂತಿದ್ದನೋ ಹಾಗೆ ಇಂದು ನಾವು ಹೊಸಗನ್ನಡ ಮತ್ತು ಎಲ್ಲರಕನ್ನಡಗಳ ನಡುವೆ ನಿಂತಿದ್ದೇವೆ. ಡಾ. ಡಿ. ಎನ್. ಶಂಕರಬಟ್ಟರು ಕನ್ನಡದಲ್ಲಿ ಪದಕಟ್ಟಣೆಯ ನಿಯಮಗಳನ್ನು ತಮ್ಮ ಕೈಲಾದಶ್ಟು ಬರೆದಿಡುತ್ತಿರುವುದು ಗೊತ್ತಿರುವ ವಿಶಯವೇ. ಆದರೆ ಅವರೇ ಹೇಳುವಂತೆ, ಅದು ಬಹಳ ದೊಡ್ಡ ಕೆಲಸ; ಅದನ್ನು ವಯಸ್ಸಾದ ಅವರು ಮುಗಿಸಲು ಸಾದ್ಯವಾಗದೆ ಹೋಗಬಹುದು. ಆದ್ದರಿಂದ ಅವರನ್ನು ಈಗಾಗಲೇ ’ಕನ್ನಡದ ಪಾಣಿನಿ’ ಎಂದು ಕರೆಯುವುದು ತಪ್ಪಾದೀತು – ಅವರಂತೂ ಎಂದಿಗೂ ಒಪ್ಪುವುದಿಲ್ಲ. ಆದರೆ ಅವರಿಗೆ ಗೊತ್ತಿಲ್ಲದೆ ಆ ದಿಕ್ಕಿನಲ್ಲೇ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸ ಎಶ್ಟು ಅರಿದಾದುದೆಂದು ಅರಿತು, ಅದನ್ನು ಮುಂದುವರೆಸಲು ಕನ್ನಡಿಗರು ಮುಂದಾಗದೆ ಹೋದರೆ ಅರಿಮೆ ಮುಂತಾದ ವಲಯಗಳಲ್ಲಿ ಹೆಚ್ಚಾಗಿ ಬಳಕೆಯೇ ಆಗದ ಕನ್ನಡವು ಮುಂದೆಯೂ ಹಾಗೆಯೇ ಉಳಿದು ಕೊನೆಗೆ ಅಳಿದುಹೋಗುವ ಎಲ್ಲ ಗುರುತುಗಳೂ ಕಾಣುತ್ತಿವೆ. ಆದ್ದರಿಂದ ಬನ್ನಿ, ಕನ್ನಡದಲ್ಲಿ ಪದಕಟ್ಟಣೆಯ ಕೆಲಸವನ್ನು ಗಂಬೀರವಾಗಿ ತೆಗೆದುಕೊಳ್ಳೋಣ. ಇದು ನಮ್ಮ ಉಳಿವಿನ ವಿಶಯ.

(ಚಿತ್ರ ಸೆಲೆ: mpsvvujjain.org, rhour.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ನಲ್ಮೆಯ ಕಿರಣ್, ಮೊದಲಿಗೆ ಈ ವಿಶಯದ ಬಗ್ಗೆ ಬರೆದಿರುವುದಕ್ಕೆ ಮೆಚ್ಚುಗೆಯನ್ನು ತಿಳಿಸುತ್ತ ನನ್ನ ಅನಿಸಿಕೆಯನ್ನು ಹಂಚಿಕೊಳ್ಳುತ್ತೇನೆ. ಪದಕಟ್ಟಣೆಯ ಕೆಲಸವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು ಎಂದು ಹೇಳಿರುವುದು ಸರಿಯಾದ ಮಾತೇ. ಬುದ್ಧ “ಬಹುಜನ ಹಿತಾಯ, ಬಹುಜನ ಸುಖಾಯ” ಎಂಬುದರಲ್ಲಿ ನಂಬಿಕೆಯಿಟ್ಟವನು ಹಾಗೂ ಅದನ್ನೇ ತನ್ನ ಹಿಂಬಾಲಕರಿಗೆ ತಿಳಿಸಿಕೊಟ್ಟವನು. ನುಡಿಯ ವಿಶಯದಲ್ಲೂ ಆತ ಅದನ್ನೇ ಪಾಲಿಸಿದ್ದ. ಸಾವಿರಾರು ವರುಶಗಳ ಹಿಂದೆಯೇ ಆತ ಮಾನವರ ಬಗ್ಗೆ ಅಶ್ಟು ದೊಡ್ಡದಾಗಿ ಚಿಂತಿಸಿದ್ದನಲ್ಲ ಎಂದು ನನಗೆ ಸದಾ ಅಚ್ಚರಿಯಾಗುತ್ತದೆ.

    ಇನ್ನು ತಾವು ನೀಡಿರುವ ಚಿತ್ರದಲ್ಲಿರುವ ಹಾಗೆ ಪಾಣಿನಿ ಬರೆಹದ ಮೂಲಕ ತನ್ನ ಸೂತ್ರಗಳನ್ನು ಕಟ್ಟಿಕೊಟ್ಟಿದ್ದನೆಂಬುದಕ್ಕೆ ಯಾವ ಆದಾರವೂ ಇಲ್ಲ. ಈ ಮಾತನ್ನು ಕೇವಲ ನೀವು ನೀಡಿರುವ ಚಿತ್ರದ ಕುರಿತು ಹೇಳುತ್ತಿಲ್ಲ. ವಿಚಿತ್ರವೆಂದರೆ 2004ರಲ್ಲಿ ಬಾರತ ಸರಕಾರದವರು ಹೊರತಂದ ಪಾಣಿನಿಯ ಅಂಚೆಚೀಟಿಯಲ್ಲೂ ಪಾಣಿನಿ ಕೂತು ಬರೆಯುತ್ತಿರುವ ಹಾಗೆ ಚಿತ್ರ ಅಚ್ಚುಮಾಡಿದ್ದಾರೆ. ಕನ್ನಡದ “ನುಡಿ” ಎನ್ನುವ ಸೊಲ್ಲಿನಂತೆ, ಆಗ ಬಾಶೆಯೆನ್ನುವುದು ನುಡಿಯುವುದಕ್ಕಶ್ಟೆ ಸೀಮಿತವಾಗಿತ್ತು. ಅದು ಬರೆಹಕ್ಕೆ ತಿರುಗಿದ್ದು ಬಹಳ ಕಾಲದ ನಂತರವೇ ಎಂಬುದು ನಮಗೆಲ್ಲ ತಿಳಿದ ವಿಶಯವೇ. ನುಡಿಯ ಆ ಪರಂಪರೆಯಲ್ಲೇ ನಾವು ಏನೆಲ್ಲ ಸಾದಿಸಿದ್ದೆವು ನೋಡಿ. ಇನ್ನು ಪದಕಟ್ಟಣೆ ಹಾಗೂ ಅದರ ಮುಂದುವರಿಕೆಗೆ ಇಂದಿನ ಕಾಲದಲ್ಲಿ ನಾವು ಬರೆಹದ ಮೊರೆ ಹೋಗಲೇಬೇಕಾಗಿದೆ. ನಾವು ಹೆಚ್ಚೆಚ್ಚು ಬರೆಹದಲ್ಲಿ ಬಳಸಿದಂತೆ ಅದು ಆ ಬಾಶೆಯ ಒಡಲಿನಲ್ಲಿ ಸೇರಿಕೊಂಡು ಅದರ ಜೀವಾಳವಾಗಿಬಿಡುತ್ತದೆ. ಆ ನಿಟ್ಟಿನಲ್ಲಿ ಹೊನಲು ಮಾಡುತ್ತಿರುವ ಕೆಲಸ ನಮ್ಮ ಹಿನ್ನಡವಳಿಯಲ್ಲಿ ಸೇರುವಂತದ್ದು. ಇದು ಹೀಗೆಯೇ ಮುಂದುವರಿಯಲಿ…

  2. ನನ್ನಿ ಶಶಿ ಅವರೇ. ಆ ಚಿತ್ರದ ಆಯ್ಕೆ ನನ್ನದಲ್ಲ.

ಅನಿಸಿಕೆ ಬರೆಯಿರಿ:

Enable Notifications OK No thanks