ಬರಗು, ಸಾಮೆ, ಊದಲು – ನಮ್ಮ ಸಿರಿದಾನ್ಯಗಳು

ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು.
ಹೊಸಜೋಳ ಅರುವತ್ತುಲಕ್ಷ ಖಂಡುಗ,
ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ,
ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ,
ಹೆಸರು ಮೂವತ್ತಾರುಲಕ್ಷ ಖಂಡುಗ,
ನವಣೆ ಹಾರಕ ಬರಗು ಸಾವೆ ದೂಸಿಗಳೆಂಬ ಧಾನ್ಯ ಐವತ್ತುಲಕ್ಷ ಖಂಡುಗ.
ಹೊಸಸುಗ್ಗಿಯ ವೇಳೆಗೆ ಬಹ ಭತ್ತ ಅಗಣಿತ.
ಮಹಾದಾನಿ ಸೊಡ್ಡಳನ ಆರೋಗಣೆಯ ಅವಸರಕ್ಕೆ
ಅಳವಟ್ಟ ಸಯದಾನ ಇನಿತನವಧರಿಸಯ್ಯಾ, ಸಂಗನಬಸವಣ್ಣಾ.

ಸಾಮೆ
ಸಾಮೆ ನಮ್ಮ ದೇಶದ್ದೆ. ದೇಶದ ಕರ‍್ನಾಟಕ, ತಮಿಳುನಾಡು. ಆಂದ್ರಪ್ರದೇಶ, ಮಹಾರಾಶ್ಟ್ರ, ಜಾರ‍್ಕಂಡ್, ಮದ್ಯ ಪ್ರದೇಶ, ಒರಿಸ್ಸಾ, ಗುಜರಾತ್ ಅಲ್ಲದೆ ಇನ್ನೂ ಹಲವು ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಕರ‍್ನಾಟಕದ ರಾಯಚೂರು, ಕೊಪ್ಪಳ, ತುಮಕೂರು ಮತ್ತು ಇನ್ನಿತರ ಹಲವು ಜಿಲ್ಲೆಗಳಲ್ಲಿ ಸಾಮೆಯನ್ನು ಬೆಳೆಯಲಾಗುತ್ತಿದೆ. ಯಾವುದೆ ಸಾರವಿಲ್ಲದ ಬೂಮಿಯಲ್ಲೂ ಸಾಮೆ ಬೆಳೆಯಬಲ್ಲದು. ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟ ಮತ್ತು ರೊಗ ಬಾದೆ ಇಲ್ಲದೆ ರಾಸಾಯನಿಕ ಹಾಗೂ ಕೀಟನಾಶಕ ಮುಕ್ತವಾಗಿ, ನಿಸರ‍್ಗಕ್ಕೆ ಹಾನಿ ಮಾಡದಂತೆ ಸಾಮೆಯನ್ನು ಬೆಳೆಯಬಹುದು.

ಸಾಮೆ ಅಲ್ಪಾವದಿ ಬೆಳೆಯಾಗಿದ್ದು ಹೆಚ್ಚು ಬೇಸಾಯ ಪದ್ದತಿ ಅಳವಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಸರಳ ಬಿತ್ತನೆ ಮತ್ತು ಕಡಿಮೆ ಗಮನ ಹರಿಸಿ ವರ‍್ಶಕ್ಕೆ ನಾಲ್ಕು ಉತ್ತಮ ಬೆಳೆ ತೆಗೆಯಬಹುದು ಎಂದು ಅನುಬವಿ ರೈತರು ಹೇಳುವ ವಾಡಿಕೆ ಇದೆ. ಸಾಮೆ ಹುಲ್ಲು ಜಾನುವಾರುಗಳಿಗೆ ಒಳ್ಳೆಯ ಮೇವು. ಸಾಮೆಯಲ್ಲಿ ಹಲವು ತಳಿಗಳಿವೆ. ಬಿಳಿ ಸಾಮೆ, ಕರಿ ಸಾಮೆ, ಹಾಲು ಸಾಮೆ, ಅರೆಸಾಮೆ ಎಂದು ಕರೆಯಲ್ಪಡುವ ಸಾಮೆ ತಳಿಗಳು ಇನ್ನೂ ಅಲ್ಲಲ್ಲಿ ಉಳಿದುಕೊಂಡಿವೆ. ಸಾಮೆಯ ಕಾಳು ಅತೀ ಸಣ್ಣದಾಗಿದ್ದುಕಂದು ಬಣ್ಣದಲ್ಲಿದೆ. ಹಳ್ಳಿ ಕಡೆ ಆಹಾರ ಪದ್ದತಿಯಲ್ಲಿ ಸಾಮೆ ಈಗಲು ಬಳಕೆಯಲ್ಲಿದೆ.

ಬರಗು
ಬಾರತದಲ್ಲಿ ಈ ಬೆಳೆಯನ್ನು ಬಿಹಾರ, ಆಂದ್ರಪ್ರದೇಶ, ಉತ್ತರಪ್ರದೇಶ, ಮಹಾರಾಶ್ಟ್ರ, ತಮಿಳುನಾಡು ಮತ್ತು ಕರ‍್ನಾಟಕದ ಕೆಲವು ಬಾಗಗಳಲ್ಲಿ ಕಾಣಬಹುದು. ಕಲ್ಲುಮಿಶ್ರಿತ ಮಣ್ಣು, ಪಾಳುಬಿಟ್ಟ, ಬಂಜರು ನೆಲದಲ್ಲು ಬೆಳೆಯಬಲ್ಲದು. ಬರಗು ತೇವಾಂಶವನ್ನು ಬಳಸಿಕೊಂಡು ಬೇಗ ಬೆಳೆಯುವ ಗುಣ ಹೊಂದಿರುವ ದಾನ್ಯ. ಬೂಮಿಯ ಪಲವತ್ತತೆ ತೀರ ಕಡಿಮೆಯಿದ್ದರೂ , ಹವಾಮಾನದ ಏರುಪೇರುಗಳನ್ನು ಎದುರಿಸಿ ಉತ್ತಮ ಪಸಲು ನೀಡಬಲ್ಲದು. ಇದರ ಕಾಳುಗಳು ಹಳದಿ ಬಣ್ಣದ್ದಾಗಿದ್ದು ಸ್ವಲ್ಪಹೊಳಪಿರುತ್ತವೆ. ಹಳೆ ತಲೆಮಾರಿನ ರೈತರ ಬಾಯಿ ಮಾತಿನಲ್ಲಿ ಇವು ಸುಮ್ಮನೆ ಚೆಲ್ಲಿದರು ಬೆಳೆಯುವ ಸಿರಿದಾನ್ಯ.ಇವುಗಳಿಗೆ ರಾಸಾಯನಿಕದ ಸೋಂಕಿಲ್ಲವಾದ್ದರಿಂದ ಬಹುಕಾಲ ಶೇಕರಿಸಿಡಬಹುದು. ಹಸಿದ ಹೊಟ್ಟೆಗಳನ್ನು ತಣಿಸಲು ಇದೊಂದು ಒಳ್ಳೆಯ ಬೆಳೆ.

ಊದಲು
ಊದಲು ಇದರ ಮೂಲ ದೇಶ ನಮ್ಮ ಬಾರತ. ಈ ದಾನ್ಯಕ್ಕೆ ನಾಲ್ಕು ಸಾವಿರ ವರ‍್ಶಗಳ ಇತಿಹಾಸವಿದೆ. ಈಜಿಪ್ಟ್ನ ಪಿರಾಮಿಡ್ಗಳಲ್ಲಿ ಕಂಡು ಬಂದ ಊದಲು ಅದರ ಪ್ರಾಚೀನತೆಯನ್ನು ಸಾರಿಹೇಳುತ್ತದೆ. ಇದನ್ನು ಬಾರತದಲ್ಲಿ ಉತ್ತರಪ್ರದೇಶ, ಹಿಮಾಲಯದ ಬೆಟ್ಟಗಳಲ್ಲಿ, ಮದ್ಯಪ್ರದೇಶ ಕರ‍್ನಾಟಕ ಹಾಗೂ ತಮಿಳುನಾಡಿನಲ್ಲಿ ಆಲ್ಲಲ್ಲಿ ಕಂಡುಬರುವ ಬೆಳೆ. ಕರ‍್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ . ಬರಗಾಲದಲ್ಲೂ ಹುಲುಸಾಗಿ ಬೆಳೆದು ಒಳ್ಳೆಯ ಬೆಳೆ ಕೊಡುತ್ತದೆ. ದನಕರುಗಳಿಗೆ ಇದು ಒಳ್ಳೆಯ ಮೇವು. ಊದಲು ಸಕ್ಕರೆ ರೋಗಿಗಳಿಗೆ ಸೂಕ್ತವಾದದ್ದು ಎನ್ನುವ ಅನುಬವದ ಮಾತಿದೆ.

kirudaanyagaLu_millets_1_baragu_same_udalu
(ಮಾಹಿತಿ ಮತ್ತು ತಿಟ್ಟ ಸೆಲೆ: vachana.sanchaya.ne, mallmillets.res.in)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.