ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು ?

– ರಗುನಂದನ್.

banu_sky_blue_1

ನಮ್ಮ ಮೇಲಿರುವ ತಿಳಿಯಾಗಸದ ಬಣ್ಣ ನೀಲಿಯಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಶಯ. ಅದು ಬೆಳಿಗ್ಗೆ ಮತ್ತು ನಡೊತ್ತಿನಲ್ಲಿ ನೀಲಿಯಾಗಿರುತ್ತದೆ ಮತ್ತು ಹೊತ್ತು ಮುಳುಗುತ್ತಿದ್ದಂತೆ ಕೆಂಪು, ಕಿತ್ತಳೆ ಬಣ್ಣವಾಗಿ ಮಾರ‍್ಪಾಡುಗುವುದನ್ನು ನಾವು ದಿನಾಲು ಕಂಡಿರುತ್ತೇವೆ. ಬೆಳಿಗ್ಗೆ ಬಾನು ಯಾಕೆ ನೀಲಿಯಾಗಿರುತ್ತದೆ ಮತ್ತು ಬಯ್ಗಿನ (ಸಂಜೆಯ) ಹೊತ್ತಿಗೆ ಏಕೆ ಕೆಂಪಾಗುತ್ತದೆ ಎಂದು ಯಾವಾತ್ತಾದರೂ ಯೋಚಿಸಿದ್ದೀರ?

ಇದಕ್ಕೆ ಉತ್ತರ ಸುಳುವಾಗಿಲ್ಲ. ಈ ಪ್ರಶ್ನೆಯ ಬಗ್ಗೆ ಹಲವಾರು ಅರಿಮೆಗಾರರು ತಲೆ ಕೆಡಿಸಿಕೊಂಡಿದ್ದಾರೆ. ಬಾನಿನ ನೀಲಿ ಬಣ್ಣದ ಹಿಂದಿನ ಅರಿಮೆ ಏನು ಎಂಬುದನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ನೇಸರನು ಹೊರಸೂಸುವ ಬೇರೆ ಬೇರೆ ತೆರನಾದ ಕದಿರುಗಳು(rays) ಬೂಮಿಯ ಸುತ್ತಾವಿಯನ್ನು(atmosphere) ದಾಟಿ ನೆಲದ ಮೇಲೆ ಬೀಳುತ್ತವೆ. ಬರಿ ಬೆಳಕೊಂದೆ ಅಲ್ಲದೆ ಮಿನ್ಸೆಳೆತದ ಅಲೆಸಾಲಿನ(electromagnetic spectrum) ಬೇರೆ ಬೇರೆ ಕದಿರುಗಳನ್ನೂ ಕೂಡ ನೇಸರನೆಂಬ ಬೆಂಕಿಯುಂಡೆ ಹೊರಹಾಕುತ್ತದೆ. ಆದರೆ ಬೂಮಿಯ ಮೇಲಿನ ಉಸಿರಿಗಳಿಗೆ ಕುತ್ತು ಎನಿಸುವ ಕದಿರುಗಳನ್ನು ಒಜೋನ್ (ozone) ಪದರ ಹೀರಿಕೊಳ್ಳುತ್ತದೆ. ಎತ್ತುಗೆ- ಕಡುನೀಲಿ ಕದಿರುಗಳು(ultra violet rays). ಹಾಗಾಗಿ ಮನುಶ್ಯನ ಕಣ್ಣಿಗೆ ಕಾಣುವ ಬೆಳಕಿನ ಕದಿರುಗಳ ಮೂಲಕ ನಾವು ನಮ್ಮ ಸುತ್ತಮುತ್ತವನ್ನು ನೋಡಬಹುದಾಗಿದೆ. ನಮಗೆ ತಿಳಿದಿರುವಂತೆ ಬೆಳಕು ಕೂಡ ಬೇರೆ ಬೇರೆ ಬಣ್ಣಗಳಿಂದ ಕೂಡಿದೆ ಮತ್ತು ಎಲ್ಲಾ ಬಣ್ಣಗಳಿಗೆ ಅದರದೇ ಆದ ಅಲೆಯಗಲ(wavelength) ಕೂಡ ಇರುತ್ತದೆ.

banu_sky_blue_2

ಬೂಮಿಯ ಸುತ್ತಾವಿ

ಬೂಮಿಯ ಸುತ್ತ ಇರುವ, ಇಂಗ್ಲಿಶಿನಲ್ಲಿ ಅಟ್ಮೊಸ್ಪಿಯರ್ ಎನ್ನುವ ಗಾಳಿಪದರದಲ್ಲಿ ಸಾಮಾನ್ಯವಾಗಿ ಆವಿ – ಅನಿಲಗಳು, ನೀರಿನ ಹನಿಗಳು ಮುಂತಾದವುಗಳು ಇರುತ್ತವೆ. ಆವಿಗಳಲ್ಲಿ ಹೆಚ್ಚಾಗಿ ನಯ್‌ಟ್ರೋಜನ್(78%) ಮತ್ತು ಆಕ್ಸಿಜನ್(21%) ಇರುತ್ತದೆ. ಇದರ ಜೊತೆ ಕಸದ ತುಣುಕುಗಳು, ಕಡಲಿನ ಉಪ್ಪು, ದೂಳು ಕೂಡ ಈ ಪದರದಲ್ಲಿ ಇರುತ್ತದೆ. ಇವುಗಳು ಕಡುಚಿಕ್ಕದಾದ ಕಾರಣ ನಮ್ಮ ಕಣ್ಣಿಗೆ ಕಾಣಸಿಗುವುದಿಲ್ಲ. ಬೂಮಿಯ ಗಾಳಿಪದರದ ಆಚೆ ಇರುವುದು ಬಾನಂಗಳ(space). ಬೂಮಿಯ ಸುತ್ತಾವಿ ನೆಲದ ಹತ್ತಿರ ದಟ್ಟವಾಗಿರುತ್ತದೆ(dense) ಮತ್ತು ಬಾನಂಗಳದೆಡೆಗೆ ಚಾಚುತ್ತಿದ್ದಂತೆ ಗಾಳಿಯ ದಟ್ಟಣೆ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೇ ಗಾಳಿಪದರದ ಒತ್ತಡ(atmospheric pressure) ಎನ್ನುತ್ತೇವೆ.

ಬೆಳಕಿನ ಅಲೆಗಳು

ಬೆಳಕು ಒಂದು ಬಗೆಯ ಹುರುಪು/ಶಕ್ತಿ. ಬೆಳಕು ಅಲೆಗಳಾಗಿ ಕೂಡ ಹರಿಯಬಹುದು ಇಲ್ಲವೇ ತುಣುಕುಗಳಾಗಿ ಕೂಡ ಹರಿಯಬಹುದು. ಅಲೆಗಳಾಗಿ ತೆಗೆದುಕೊಂಡರೆ ಬೆಳಕು ಮಿನ್ಕೆಯ(electric) ಮತ್ತು ಸೆಳೆತದ(magnetic) ಅಲೆಗಳಾಗಿ ಹರಿಯುತ್ತದೆ. ಹೀಗೆ ಅಲೆಗಳಾಗಿ ಹರಿಯುವ ಕಾರಣದಿಂದ ಬೆಳಕಿಗೆ ಒಂದು ಅಲೆಯಗಲ ಎಂದು ಇರುತ್ತದೆ. ಬೆಳಕಿನ ಅಲೆಯಗಲ 400nm ಇಂದ 750nm ವರೆಗೂ ಇರುತ್ತದೆ. ಮಿನ್ಸೆಳೆತ ಅಲೆಸಾಲಿನ ಬೇರೆ ಬೇರೆ ಕದಿರುಗಳಿಗೆ ಒಂದೊಂದು ಅಲೆಯಗಲದ ಬೆಲೆ ಇರುತ್ತದೆ. ಕದಿರುಗಳ ಹರಿಯುವಿಕೆಯ ದೆಸೆಯಿಂದ ಎಲ್ಲಾ ಅಲೆಗಳಿಗೆ ಹುರುಪು ಕೂಡ ಇರುತ್ತದೆ.

ಅಲೆಯಗಲ ಹೆಚ್ಚಿದ್ದು ಸಲದೆಣಿಕೆ (frequency) ಕಡಿಮೆ ಇದ್ದರೆ ಆ ಕದಿರಿಗೆ ಕಡಿಮೆ ಹುರುಪಿರುತ್ತದೆ. ಅಲೆಯಗಲ ಕಡಿಮೆಯಿದ್ದು ಸಲದೆಣಿಕೆ ಹೆಚ್ಚಿದ್ದರೆ ಆ ಕದಿರಿಗೆ ಹೆಚ್ಚು ಹುರುಪಿರುತ್ತದೆ. ಮಳೆಬಿಲ್ಲಿನಲ್ಲಿ ಕಾಣುವಂತೆ ನೀಲಿ ನೇರಳೆ ಬಣ್ಣಗಳು ಒಂದೆಡೆ ಇದ್ದರೆ ಕೆಂಪು ಕಿತ್ತಳೆಗಳು ಇನ್ನೊಂದೆಡೆ ಇರುತ್ತದೆ. ನೀಲಿ ಬಣ್ಣಕ್ಕೆ ಹೆಚ್ಚು ಸಲದೆಣಿಕೆ/ಕಡಿಮೆ ಅಲೆಯಗಲ ಇರುತ್ತದೆ ಮತ್ತು ಕೆಂಪಿಗೆ ಕಡಿಮೆ ಸಲದೆಣಿಕೆ/ಹೆಚ್ಚು ಅಲೆಯಗಲ ಇರುತ್ತದೆ. ಈ ಎಲ್ಲಾ ಅಲೆಗಳು 3 X 108 m/s ಬಿರುಸಿನಲ್ಲಿ (speed) ಹರಿಯುತ್ತವೆ.

ನೇಸರನ ಬೆಳಕು ಗಾಳಿಪದರದ ಮೂಲಕ ಬರುತ್ತಿದ್ದಂತೆ ಸುತ್ತಾವಿಯ ಬೇರೆ ಬೇರೆ ವಸ್ತುಗಳೊಡನೆ ಬೆಳಕಿನ ತಿಕ್ಕಾಟ ಏರ‍್ಪಡುತ್ತದೆ. ಕಸದ ತುಣುಕುಗಳು ಮತ್ತು ನೀರಿನ ಹನಿಗಳು ಬೆಳಕಿನ ಅಲೆಯಗಲಕ್ಕಿಂತ ದೊಡ್ಡದಾಗಿರುವ ಕಾರಣ ಅದಕ್ಕೆ ಡಿಕ್ಕಿ ಹೊಡೆದು ಬೇರೆ ದಿಕ್ಕಿನೆಡೆಗೆ ಸಾಗುತ್ತದೆ. ಬೆಳಕಿನ ಎಲ್ಲಾ ಬಣ್ಣಗಳು ಒಂದೇ ಬಗೆಯಲ್ಲಿ ಸಾಗುಹೋಗುವುದರಿಂದ ಡಿಕ್ಕಿಯ ಬಳಿಕವೂ ಬೆಳಕಿನ ಬಣ್ಣ ಹಾಗೆಯೇ ಉಳಿಯುತ್ತದೆ. ಹಾಗಾಗಿ ಬಿಳಿ ಬಣ್ಣ ಬಿಳಿಯಾಗಿಯೇ ಇರುತ್ತದೆ.

ಆದರೆ, ಬೆಳಕು ತನ್ನ ಅಲೆಯಗಲಕ್ಕಿಂತ ಚಿಕ್ಕದಾದ ಅಂದರೆ ಆವಿಯ ಅಣುಕೂಟಗಳಿಗೆ (gas molecules) ಡಿಕ್ಕಿ ಹೊಡೆದಾಗ ಬೆಳಕಿನ ಚದುರುವಿಕೆಯಾಗುತ್ತದೆ(scattering). ಬೆಳಕು ಚದುರಿದಾಗ ಅದರೊಳಗೆ ಇರುವ ಬಣ್ಣಗಳೂ ಕೂಡ ಚದುರುತ್ತವೆ. ಆದರೆ ಬೆರಗಿನ ವಿಶಯವೆಂದರೆ ಎಲ್ಲಾ ಬಣ್ಣಗಳು ಒಂದೇ ತೆರನಾಗಿ ಚದುರುವುದಿಲ್ಲ.

ಕಡಿಮೆ ಅಲೆಯಗಲಗಳುಳ್ಳ ಬಣ್ಣಗಳು (ನೀಲಿ,ನೇರಳೆ) ಹೆಚ್ಚು ಚದುರುತ್ತವೆ ಮತ್ತು ಹೆಚ್ಚು ಅಲೆಯಗಲಗಳುಳ್ಳ ಬಣ್ಣಗಳು(ಕೆಂಪು,ಕಿತ್ತಳೆ) ಕಡಿಮೆ ಚದುರುತ್ತವೆ. ಇದನ್ನು ರೇಯ್ಲೀ ಎಂಬಾತ ಮೊದಲು ತೋರಿಸಿಕೊಟ್ಟಿದ್ದರಿಂದ ಇದಕ್ಕೆ ರೇಯ್ಲೀ ಚದುರುವಿಕೆ (Rayleigh Scattering) ಎನ್ನುತ್ತಾರೆ. ಆವಿಯ ಅಣುಕೂಟಗಳು ನೀಲಿ ಮತ್ತು ನೇರಳೆ ಬಣ್ಣಗಳನ್ನು ಸುಳುವಾಗಿ ಹೀರಿಕೊಳ್ಳುತ್ತವೆ. ಆದರೆ ಕೆಂಪು ಮತ್ತು ಕಿತ್ತಳೆಯನ್ನು ಅಶ್ಟು ಸುಳುವಾಗಿ ಹೀರಿಕೊಳ್ಳುವುದಿಲ್ಲ ಮತ್ತು ಅದು ಪದರ ಮೂಲಕ ಹಾದುಹೋಗಿಬಿಡುತ್ತವೆ.

ಆವಿಯ ಅಣುಕೂಟಗಳು ಹೀಗೆ ಕಡಿಮೆ ಅಲೆಯಗಲದ ಬಣ್ಣಗಳನ್ನು(ನೀಲಿ,ನೇರಳೆ) ಹೀರಿಕೊಂಡ ಬಳಿಕ ಅವು ಎಲ್ಲಾ ದಿಕ್ಕುಗಳಲ್ಲಿ ಚದುರಲು ಮೊದಲಾಗುತ್ತವೆ. ಹೀಗೆ ಎಲ್ಲಾ ದಿಕ್ಕಿನಲ್ಲಿ ಚದರುವ ಕಾರಣ ಬಾನಿನ ಬಣ್ಣ ನೀಲಿಯಾಗಿ ಕಾಣುತ್ತದೆ. ಆದರೆ ನೀಲಿಯೇ ಏಕೆ ನೇರಳೆ ಬಣ್ಣ ಯಾಕಲ್ಲ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು.

ಮನುಶ್ಯನ ಕಣ್ಣುಗಳು ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳಿಗೆ ಹೆಚ್ಚು ನಾಟುವ ಹಾಗೆ ಏರ‍್ಪಾಟಾಗಿವೆ. ಹಾಗಾಗಿ ನೀಲಿ-ನೇರಳೆ ಬಣ್ಣದ ಬೆರೆತ ಇದ್ದರೂ ಕೂಡ ಕಣ್ಣು ಅದನ್ನು ನೀಲಿಯೆಂದೆ ಗ್ರಹಿಸುತ್ತದೆ. ಹಾಗಾಗಿ ಬಾನು ನಮಗೆ ನೀಲಿಯಾಗಿ ಕಾಣುತ್ತದೆ.

banu_sky_blue_3

ಇಳಿಸಂಜೆಯ ಹೊತ್ತಿಗೆ ಬಾನು ಕೆಂಪಾಗುವುದನ್ನು ನಾವು ಕಂಡಿರುತ್ತೇವೆ. ಬೂಮಿಯು ತನ್ನ ಸುತ್ತ ತಿರುಗುತ್ತಿದ್ದಂತೆ ಬೆಳಿಗ್ಗೆ ನೇಸರನ ಎದುರಿಗಿದ್ದ ಬೂಮಿಯ ಬದಿಯು ಸಂಜೆಗೆ ನೇಸರನಿಂದ ದೂರ ಸರಿಯುತ್ತದೆ. ಮೇಲಿನ ತಿಟ್ಟದಲ್ಲಿ ಕಾಣುವಂತೆ ಸಂಜೆಯ ಹೊತ್ತಿಗೆ ನೇಸರನ ಕದಿರುಗಳು ಬೆಳಗಿನ ಹೊತ್ತಿನಂತೆ ನೇರವಾಗಿ ಬೂಮಿಯ ಮೇಲೆ ಬೀಳುವುದಿಲ್ಲ. ಅದು ನಾವು ಇರುವ ನೆಲವನ್ನು ತಲುಪಬೇಕಾದರೆ ಬೆಳಗಿನ ಹೊತ್ತಿಗಿಂತ ಹೆಚ್ಚು ದೂರ ಸಾಗಬೇಕಾಗುತ್ತದೆ. ಹೀಗೆ ಸಾಗುವಾಗ ಮೊದಲು ಚದರುವ ಕಡಿಮೆ ಅಲೆಯಗಲದ ನೀಲಿ ಬಣ್ಣವನ್ನು ಸುತ್ತಾವಿ ಆಗಲೇ ಹೀರಿಕೊಂಡಿರುತ್ತದೆ. ಮಿಕ್ಕ ಬಣ್ಣಗಳು ಸುತ್ತಾವಿಯನ್ನು ದಾಟಿ ನಮ್ಮನ್ನು ತಲುಪುತ್ತವೆ. ಈ ಬಣ್ಣಗಳು ಹೆಚ್ಚು ಅಲೆಯಗಲವುಳ್ಳವಾದ್ದರಿಂದ ನಮಗೆ ಸಂಜೆಯ ಬಾನು ಕೆಂಪು ಕಿತ್ತಳೆ ಬಣ್ಣವಾಗಿ ಕಾಣುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. “ಮನುಶ್ಯನ ಕಣ್ಣುಗಳು ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳಿಗೆ ಹೆಚ್ಚು ನಾಟುವ ಹಾಗೆ ಏರ‍್ಪಾಟಾಗಿವೆ. ಹಾಗಾಗಿ ನೀಲಿ-ನೇರಳೆ ಬಣ್ಣದ ಬೆರೆತ ಇದ್ದರೂ ಕೂಡ ಕಣ್ಣು ಅದನ್ನು ನೀಲಿಯೆಂದೆ ಗ್ರಹಿಸುತ್ತದೆ. ಹಾಗಾಗಿ ಬಾನು ನಮಗೆ ನೀಲಿಯಾಗಿ ಕಾಣುತ್ತದೆ.”

    ಬೆಳಕಿನ ಕಿರಣದಲ್ಲಿ ಹೆಚ್ಚಿನ ಆವರ್ತನದ(ಅಥವ ಕಡಿಮೆ ತರಂಗಾತರದ) ಅಂಶಗಳು ಆಗಸದ ಆವಿಯಲ್ಲಿ ಹಚ್ಚಿನ ಪ್ರಮಾಣದಲ್ಲಿ ಚದುರಿ ಹೋಗುವುದರಿಂದ ಹೆಚ್ಚು ಚದುರಿದ ಬಣ್ಣದ್ದಾಗಿದ್ದರೆ, ನೇರಳೆಯ ಅಂಶಗಳು ಹೆಚ್ಚು ಚದುರಿ ಆಕಾಶವು ನೇರಳೆಯಾಗಿ ಕಾಣದೆ ನೀಲಿಯಾಗಿ ಕಾಣುವುದೇಕೆ? ಅದು ನಮ್ಮ ದೃಷ್ಟಿಯ ಮಿತಿ ಎಂದು ಹೇಳಿದರೆ ನಿಮ್ಮ ಮೇಲಿನ ಚಿತ್ರದ( ತರಂಗ ಗುಚ್ಛದ)ಲ್ಲಿ ನೇರಳೆಯು ಗೋಚರವಾಗುತ್ತಿದೆಯಲ್ಲ; ಅದು ಹೇಗೆ?

    ಸಂಜೆಯಾಗುತ್ತಾ ಹೋದಂತೆ ಬೆಳಕು ಬಹುದೂರ ವಾತಾವರಣದಲ್ಲಿ ಸಾಗುವುದರಿಂದ ಹೆಚ್ಚಿನ ಆವರ್ತನದ(ಅಥವ ಕಡಿಮೆ ತರಂಗಾತರದ) ಅಂಶಗಳು ಚದುರುತ್ತಾ ಹೋಗುವುದರಿಂದ ಬೆಳ್ಳಿಯ ಬೆಳಕಿನ ನಂತರ ಹೊನ್ನಿನ ಬಣ್ಣವು, ನಂತರ ಕಂದು ಬಣ್ಣವು ಆ ನಂತರ ಕೆಂಪು ಬಣ್ಣವು ಕಾಣಿಸಿಕೊಳ್ಳುತ್ತದೆ; ಆದರೆ ಹೊನ್ನಿನ ಬಣ್ಣ ಕಾಣುವ ಮುನ್ನ ಹಸಿರು ಬಣ್ಣವೇಕೆ ಎಂದಿದೂ ಕಾಣುವುದಿಲ್ಲ?

    ಸೂರ್ಯನು ನೆತ್ತಿಯ ಮೇಲಿರುವಾಗ ಸಣ್ಣ ಗಾತ್ರದ್ದಾಗಿಯೂ ದಿಗಂತದತ್ತ ಸಾಗಿದಂತೆ ದೊಡ್ಡದಾಗುತ್ತಾ ಹೋಗುವುದನ್ನು ವಿವರಿಸಿಲ್ಲ. ದಯಮಾಡಿ ವಿವರಿಸಿ.

    banu_sky_blue_3

  2. Raghu Nandan says:

    ೧. ನೇರಳೆ ಬಣ್ಣ ಇಲ್ಲವೇ ಇಲ್ಲ ಎಂದಲ್ಲ. ಒಮ್ಮೊಮ್ಮೆ ಹೊತ್ತು ಮುಳುಗುವ ಕಾಲದಲ್ಲಿ ನೀಲಿ+ನೇರಳೆ ಬೆರೆತ ಬಾನನ್ನು ನಾವು ಕಾಣಬಹುದು.
    ೨. ಈ ಬರಹದ ಚಿತ್ರದಲ್ಲಿ ಇರುವ ನೇರಳೆ ಸೂರ‍್ಯನ ಕಿರಣದ್ದಲ್ಲ. ಈ ಬರಹದಲ್ಲಿ ಹೇಳಿರುವ ಬೆಳಕು ನೇಸರನಿಂದ ಬರುವಂತದ್ದು.
    ೩. ನೇಸರನ ಬೆಳಕಿನಲ್ಲಿ ಎಲ್ಲಾ ಬಣ್ಣಗಳು ಒಂದೇ ತೀವ್ರತೆ(intensity) ಹೊಂದಿರುವುದಿಲ್ಲ. ಈ ಬರಹದಲ್ಲಿ ಎರಡನೇ ಚಿತ್ರ ನೋಡಿ- ನೀಲಿಗೆ ಹೆಚ್ಚು intensity ಇರುವುದು (ಕೆಂಪು ಮತ್ತು ಹಸಿರಿಗಿಂತ ಹೆಚ್ಚು ಕೂಡ)
    http://math.ucr.edu/home/baez/physics/General/BlueSky/blue_sky.html
    ೪. ದ್ರುಶ್ಟಿಯ ಮಿತಿ ಎಂದರೆ ಹೀಗೆ ಅರ‍್ತಯ್ಸಿಕೊಳ್ಳಬಹುದು – ಮನುಶ್ಯನ ಕಣ್ಣಪೊರೆ(retina)ದಲ್ಲಿ ಇರುವ ಬೆಣೆಗಳು(cones) ಮುಕ್ಯವಾಗಿ ಮೂರು ಬಣ್ಣಗಳಿಗೆ ಹೆಚ್ಚಾಗಿ ಸ್ಪಂದಿಸುತ್ತವೆ. ಅವು ಕೆಂಪು, ಹಸಿರು ಮತ್ತು ನೀಲಿ. ಈ ಬಣ್ಣಗಳ ಅಲೆಯುದ್ದದ ಹತ್ತಿರ ಇರುವ ಬಣ್ಣಗಳೂ ಕೂಡ ಮನುಶ್ಯನ ಕಣ್ಣಿಗೆ ಕಾಣುವಾಗ ಅದರೊಡನೆ ಬೆರೆತು ಕಾಣುತ್ತದೆ. ಉದಾಹರಣೆಗೆ – ಕೆಂಪು(640nm) ಮತ್ತು ಹಸಿರು(540nm) ಸೇರಿದಾಗ ಹಳದಿ(580nm) ಆಗಿ ಕಾಣುತ್ತದೆ. ಅದೇ ಬಗೆಯಲ್ಲಿ ನೀಲಿ-ನೇರಳೆ(ಕೊಂಚ ಹಸಿರು ಸೇರಿದಂತೆ- ನಿಮ್ಮ ಎರಡನೇ ಪ್ರಶೆಯಂತೆ) ನಮ್ಮ ಕಣ್ಣುಗಳಿಗೆ ನೀಲಿಯಾಗಿಯೇ ಕಾಣುತ್ತದೆ. ಈ ಅರಕೆ ಹಾಳೆ(Research paper) ಒಮ್ಮೆ ನೋಡಿರಿ –
    http://scitation.aip.org/content/aapt/journal/ajp/73/7/10.1119/1.1858479
    ೫. ನಿಮ್ಮ ಮೂರನೇ ಪ್ರಶ್ನೆ ಬಗ್ಗೆ ಕೊಂಚ ಯೋಚಿಸಬೇಕು – ಒಂದು ಬರಹ ಮಾಡುವ ಅದರ ಬಗ್ಗೆ.
    ೬. ಎಲ್ಲಕ್ಕಿಂತ ಹೆಚ್ಚಾಗಿ ನೀಲಿ ಎಂಬುದನ್ನು ನಾವು ಹೇಗೆ define ಮಾಡ್ತೀವಿ ಅನ್ನುವುದರ ಮೇಲೆ ನಿಂತಿದೆ. ರಶ್ಯನ್ ನುಡಿಯಲ್ಲಿ ನಾಲ್ಕು ಬೇರೆ ಬೇರೆ ನೀಲಿಗಳಿವೆ !

    -ರಗು

  3. Raghu Nandan says:

    ೧. ಯಾವಾಗಲೂ ಬರಿ ನೀಲಿ ಬಣ್ಣವೇ ಇರುವುದಿಲ್ಲ. ನೀಲಿ-ನೇರಳೆ ಬರೆತ ಕೂಡ ಇರಬಹುದು.
    ೨. ಮೇಲಿನ ಚಿತ್ರದಲ್ಲಿ ಇರುವ ನೇರಳೆ ಕಾಣುತ್ತದೆ. ಆದರೆ ಸೂರ‍್ಯನ ಬೆಳಕಿನಲ್ಲಿ ನೇರಳೆಗಿಂತ ನೀಲಿ ಹೆಚ್ಚು ತೀವ್ರತೆ ಹೊಂದಿರುತ್ತದೆ. ಸೂರ‍್ಯನ ಬೆಳಕು ಹಸಿರಿನ ಗಡುವಿನಲ್ಲಿ ಹೆಚ್ಚು ತೀವ್ರತೆ ಹೊಂದಿರುತ್ತದೆ.
    ೩. ದ್ರುಶ್ಟಿಯ ಮಿತಿ ಎಂಬುದನ್ನು ಹೀಗೆ ಅರ‍್ತಯ್ಸಿಕೊಳ್ಳಬಹುದು – ಮನುಶ್ಯನ ಕಣ್ಣಿನಲ್ಲಿರುವ ಕಣ್ಪೊರೆ(retina)ಯ ಬೆಣೆಗಳು(cones) ಮೂರು ಮುಕ್ಯ ಬಣ್ಣಗಳಿಗೆ ಹೆಚ್ಚು ನಾಟುತ್ತದೆ/ಸ್ಪಂದಿಸುತ್ತದೆ – ಕೆಂಪು, ಹಸಿರು ಮತ್ತು ನೀಲಿ
    ೪. ಮೇಲಿನ ಎರಡೂ ಕಾರಣಗಳಿಂದ ನೀಲಿ+ನೇರಳೆ ಮಿಶ್ರಣ ನೀಲಿಯಾಗಿಯೇ ಕಾಣುತ್ತದೆ.
    ೫. ಕೆಂಪು ಮತ್ತು ಹಸಿರು ಸೇರಿ ಹಳದಿ ಬಣ್ಣ ಆಗುತ್ತದೆ. ಅಂದರೆ ಹೊಸ ಬಣ್ಣ ಮೊದಲೆರಡರ ಅಲೆಯುದ್ದವನ್ನು ನೆಚ್ಚಿರುತ್ತದೆ. ನೀಲಿ ಮತ್ತು ನೇರಳೆ ಸೇರಿದಾಗ ನೀಲಿಯ ಕಡೆ ಹೆಚ್ಚು ಅಲೆಯುದ್ದ ಬರಬಹುದು.
    ೬. ನೇಸರ ಯಾಕೆ ಮುಳುಗುವಾಗ ದೊಡ್ಡದಾಗಿ ಕಾಣುತ್ತದೆ ಎಂಬುದಕ್ಕೆ ಹಲವು ಕಾರಣಗಳಿವೆ – ಮುಂದೆ ಒಂದು ಬರಹ ಮಾಡುತ್ತೇನೆ.

ಅನಿಸಿಕೆ ಬರೆಯಿರಿ:

%d bloggers like this: