ಅಪರೂಪದ ಕಿರುದಾನ್ಯ ಈ ಹಾರಕ

ಸುನಿತಾ ಹಿರೇಮಟ.

haraka

ನರೆದಲಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವದಾನ್ಯವೆಂದೆನಲು
ಮೆರೆವ ರಾಗಿಯ ಕಂಡು ಇದರೊಳು
ಪರಮಸಾರದ ಹೃದಯನಾರೆಂ
ದರಸಿ ಕೇಳಿದನಲ್ಲಿರುತಿಹ ಮಹಾಮುನಿಶ್ವರರ

ರಾಮದಾನ್ಯ ಚರಿತ್ರೆಯು ಕನಕದಾಸರಿಂದ ರಚಿತವಾದ ರೂಪಕ ಕಾವ್ಯವೆಂದೂ ಹೇಳಬಹುದು. ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಶ್ಮಣ, ಹನುಮಂತ ಮುಂತಾದವರೊಂದಿಗೆ ಅಯೋದ್ಯೆಗೆ ಮರಳುವ ಮಾರ‍್ಗದಲ್ಲಿ ಮುನಿಗಳೆಲ್ಲರೂ ಇವರಿಗೆ ಬೇರೆ ಬೇರೆ ದಾನ್ಯಗಳ ಔತಣವೊಂದನ್ನು ನೀಡುತ್ತಾರೆ. ಆಗ ಸಹಜವಾಗಿ ಅವುಗಳ ಬಗ್ಗೆ ಕುತೂಹಲಗೊಂಡವರ ನಡುವೆ ನಡೆವ ಮಾತುಕತೆಯಲ್ಲಿ ಈ ಎಲ್ಲ ದಾನ್ಯಗಳ ಹೆಸರುಗಳು ಬರುತ್ತವೆ. ಈ ಸಿರಿದಾನ್ಯಗಳ ಕಾಲ ಮತ್ತು ಬಳಕೆ ಬಗ್ಗೆ ಬೆಳಕು ಚೆಲ್ಲುತ್ತದೆ

ಸುಮಾರು 3000 ಸಾವಿರ ವರುಶಗಳ ಇತಿಹಾಸವಿರುವ ಹಾರಕ ಬಾರತ ಮೂಲದ್ದು. ಬಾರತದ ರಾಜಸ್ತಾನ, ಉತ್ತರಪ್ರದೇಶ ತಮಿಳುನಾಡು, ಪಶ್ಚಿಮ ಬಂಗಾಳ, ಮದ್ಯ ಪ್ರದೇಶ, ಮತ್ತು ಆಂದ್ರಪ್ರದೇಶಗಳಲ್ಲಿ ಹಾರಕ ಬೆಳೆಯಲಾಗುತ್ತಿದೆ. ಕರ‍್ನಾಟಕದಲ್ಲಿ ಉತ್ತರ ಕರ‍್ನಾಟಕದ ಕೆಲವು ಪ್ರದೇಶಗಳು, ಕೊಪ್ಪಳ, ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳು, ಬೆಂಗಳೂರಿನ ಹಲವೆಡೆ ಹಾರಕದ ಬೆಳೆ ಬಿಟ್ಟರೆ ರಾಜ್ಯದ ಇತರೆಡೆ ಇದರ ಬೆಳೆ ಕಾಣುವುದು ವಿರಳ.

ರಾಸಾಯನಿಕ ಗೊಬ್ಬರ ಬಳಸದೆ, ಹೆಚ್ಚಿನ ಯಾವುದೇ ರೀತಿಯ ಒಕ್ಕಲಿನ ಗಮನವಿಲ್ಲದೆ ಸುಲಬವಾಗಿ ಹಾರಕವನ್ನು ಬೆಳೆಯಬಹುದು. ಹೆಚ್ಚಿನ ನೀರಿನ ಅವಶ್ಯಕತೆ ಇದಕ್ಕೆ ಇಲ್ಲ. ಇದು ಬರಗಾಲ ಎದುರಿಸುವ ಪ್ರದೇಶಗಳಿಗೆ ಒಪ್ಪುವ ಬೆಳೆ. ಕಡಿಮೆ ಮಳೆಗೆ ಬೆಳೆಯುವ, ಒಳ್ಳೆಯ ಪೋಶಕಾಂಶಗಳನ್ನೊಳಗೊಂಡ ಹಾರಕ ಕಡಿಮೆ ಪಲವತ್ತತೆಯ ಮಣ್ಣಿನಲ್ಲೂ ಬೆಳೆಯುವ ಗುಣವುಳ್ಳದ್ದು. ಕಲ್ಲು ಮಿಶ್ರಿತ ಮಣ್ಣು, ಚೌಳು ಮಣ್ಣು, ಕಲ್ಲುಮಿಶ್ರಿತ ಕೆಂಪು ಮಣ್ಣು, ಬಂಜರು ಬೂಮಿಗಳಲ್ಲಿ ಹಾರಕ ಹುಲುಸಾಗಿ ಬೆಳೆಯುತ್ತದೆ. ಐದುತಿಂಗಳ ಬೆಳೆಯಾದ್ದರಿಂದ ರೋಹಿಣಿ ಮಳೆ ಬಿತ್ತನೆಗೆ ಸರಿಯಾದ ಕಾಲ. ಹಾರಕದ ಕಾಳು ಕಾಪಿ ಬಣ್ಣವನ್ನು ಹೋಲುತ್ತದೆ. ಅದರಲ್ಲಿ ಏಳು ಪದರ ಸಿಪ್ಪೆ ಇರುತ್ತದೆ ಎನ್ನುತ್ತಾರೆ. ಸಿಪ್ಪೆ ತೆಗೆದಾಗ ಹಾರಕದಕ್ಕಿ ಸಿಗುತ್ತದೆ.

ಹಾರಕವನ್ನು ಆರ‍್ಕ, ಹಾರ‍್ಕ, ಆರಕ ಅಂತಲೂ ಕರೆಯುತ್ತಾರೆ ಹಾರಕದಲ್ಲಿ ನಾರು, ಕಬ್ಬಿಣಾಂಶ ಸೇರಿದಂತೆ ಹಲವು ಬಗೆಯ ಪೌಶ್ಟಿಕಾಂಶಗಳಿವೆ. ಅದರಲ್ಲೂ ಮುಕ್ಯವಾಗಿ ಇದರ ಸೇವನೆಯಿಂದ ಕ್ಯಾನ್ಸರ್, ಸಕ್ಕರೆರೋಗ ಮತ್ತು ಮಲಬದ್ದತೆಯನ್ನು ನಿಯಂತ್ರಿಸಬಹುದು. ದೇಹಕ್ಕೆ ಪುಶ್ಟಿ ನೀಡುವ ಹೇರಳ ಪೌಶ್ಟಿಕಾಂಶವನ್ನು ಒಡಲಲ್ಲಿ ಇಟ್ಟುಕೊಂಡಿರುವ ನವಣೆ, ಸಾವೆ ಅಕ್ಕಿ ಅನ್ನ ಉಂಡರೆ ಮೊಣಕಾಲು ನೋವುವಿರುವುದಿಲ್ಲ ಎನ್ನುವುದು ಅನುಬವದ ಮಾತು.

100 ಗ್ರಾಮ್ ಹಾರಕದಲ್ಲಿನ ಪೋಶಕಾಂಶಗಳ ವಿವರ ಈ ಕೆಳಕಂಡಂತಿದೆ:

Haaraka

ಉಳಿದ ಕಿರುದಾನ್ಯಗಳಾದ ಸಜ್ಜೆ, ರಾಗಿ, ನವಣೆ, ಸಾವೆ, ಜೋಳ, ಕೊರಲೆ ಮುಂತಾದವುಗಳನ್ನು ನೋಡಿದರೆ ಅಪರೂಪದಲ್ಲಿ ಅಪರೂಪವಾಗುತ್ತಿದೆ ಈ ಹಾರಕ. ಈಗಲೂ ಅಲ್ಲಲ್ಲಿ ಉಳಿದ ದಾನ್ಯಗಳನ್ನು ಬೆಳೆಯಲಾಗುತ್ತಿದೆ ಆದರೆ ಹಾರಕ ಅಪಾಯದಂಚಿಗೆ ತಲುಪಿದೆ. ಊರ ಹಿರಿಯರನ್ನು ಮಾತಿಗೆಳೆದರೆ ಹಾರಕದ ಹೆಸರು ಕೇಳಿದರೆ ಅದರ ರುಚಿ, ಮ್ರುದುತ್ವ, ಔಶದಿ ಗುಣಗಳ ಬಗ್ಗೆ ಮಾತನಾಡುತ್ತರೆ. ಬೇರೆ ಬೇರೆ ಕಾರಣಗಳಿಂದ ಕಿರುದಾನ್ಯಗಳ ಬಳಕೆ ಬದುಕಿನಿಂದ ಮರೆಯಾಗುತ್ತಿದೆ. ಒಂದು ಬೆಳೆ ಒಕ್ಕಲಿನಿಂದ ಕಣ್ಮರೆಯಾಗುತ್ತಿದೆ ಎಂದರೆ ಒಂದು ಸಂಸ್ಕ್ರುತಿಯೇ ಹೊರಟು ಹೋದಂತೆ ಹಾಗಾಗಿ ಸಿರಿದಾನ್ಯ ತಿನ್ನುವವನೇ ಆ ಸಂಸ್ಕ್ರುತಿಯ ಸಿರಿವಂತ ಎಂಬ ಮಾತು ಸತ್ಯ.

(ಚಿತ್ರ ಸೆಲೆ: wikipedia)

(ವಚನಗಳ ಸೆಲೆ: vachanasanchaya)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 17/06/2016

    […] ಅಂದರೆ ನನಗಿಲ್ಲಿ ನೆನಪಾಗುವುದು ಪಂಚದಾನ್ಯ ಹಾರಕ, ಕೊರ‍್ಲೆ, ನವಣೆ, ಬರಗು ಹಾಗು ಸಾಮೆ. […]

ಅನಿಸಿಕೆ ಬರೆಯಿರಿ:

Enable Notifications OK No thanks