ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು
ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ ಮತ್ತು ಕೊಂಕಣವನ್ನು ಆಳಿದರು. ಇವರ ಆಡಳಿತದ ಹಳಮೆಯ ಹರವು ಇಂದಿಗೆ ಸರಿ ಸುಮಾರು 1500-1700 ವರುಶಗಳ ಹಿಂದೆ ಹೋಗುತ್ತದೆ. ಕನ್ನಡದ ಕದಂಬ ನಾಡನ್ನು ಕಟ್ಟಿದ ಮಯೂರಶರ‍್ಮ ಮತ್ತು ಕಾಕುಸ್ತವರ‍್ಮನ ಕಾಲದಲ್ಲಿ ಕದಂಬರ ಹಿರಿಮೆ ಉತ್ತುಂಗಕ್ಕೇರಿತ್ತು.
ಅಪಾರ ಬುದ್ದಿಮತ್ತೆ ಮತ್ತು ಗಟ್ಟಿಗತನವನ್ನು ಹೊಂದಿದ ಮಯೂರಶರ‍್ಮನು ನಮ್ಮ ಕುಲಕೋಟಿ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ ಇದೆ. ಕದಂಬರು ದೊಡ್ಡ ಅರಸುಮನೆತನವಾಗಿ ಬೆಳೆದಿದ್ದರಿಂದ ಬಡಗಣ ಬಾರತದ ‘ಗುಪ್ತ’ ಅರಸುಮನೆತನದ ದೊರೆಗಳು ಇವರೊಂದಿಗೆ ಮದುವೆ ಸಂಬಂದ ಇಟ್ಟುಕೊಂಡಿದ್ದುದ್ದು, ಆ ಹೊತ್ತಿಗೆ ಕನ್ನಡಿಗರಾದ ಕದಂಬರ ಹರವು ಎಶ್ಟಿತ್ತು ಎಂಬುದನ್ನು ಹೇಳುತ್ತದೆ. ಕದಂಬರು ಕನ್ನಡ ಮತ್ತು ಕನ್ನಡಿಗತನಕ್ಕೆ ಹಾಕಿಕೊಟ್ಟ ಬುನಾದಿ ಯಾವತ್ತು ಮರೆಯಲಾಗದು. ಬನವಾಸಿಯ ಕದಂಬರ ಬಳಿಕ ಇವರಿಂದ ಹುರುಪು ಪಡೆದ ಇನ್ನಿತರ ಕದಂಬ ಅರಸುಮನೆತನವಾದ ‘ಗೋವೆಯ ಕದಂಬರು’ ಮತ್ತು ‘ಹಾನಗಲ್ಲಿನ ಕದಂಬರ’ ವಿವರಗಳನ್ನು ಹಳಮೆಯಲ್ಲಿ ಕಾಣಬಹುದಾಗಿದೆ. ಇವರುಗಳ ಹೊತ್ತಿನ ಆಡಳಿತ ಮತ್ತು ಆ ನೆಲದ ಮಂದಿಯ ನುಡಿ ಕನ್ನಡವೇ ಆಗಿತ್ತು.
ಕದಂಬರು ಬೆಳೆದ ಬಗೆ :
ಕದಂಬರು ಈ ಕನ್ನಡ ನಾಡು ನುಡಿಯನ್ನು ಕಟ್ಟಿದ ಮತ್ತು ಬೆಳೆಸಿದ ಬಗೆಯನ್ನು ಈಗಿನ ಕನ್ನಡಿಗರು ನೆತ್ತರು, ನೆತ್ತರು ಕಣಗಳಲ್ಲಿ ನೆನಪಿಟ್ಟುಕೊಳ್ಳಬೇಕು. ಕದಂಬರು ನಾಡನ್ನು ಕಟ್ಟುವುದಕ್ಕೂ ಮುಂಚೆ ದ್ರಾವಿಡ ನುಡಿಯಾದ ಕನ್ನಡವು ಮಂದಿಯ ಆಡುನುಡಿಯಾಗಿತ್ತು. ಇವರಿಗಿಂತ ಮುಂಚೆ ಇದ್ದ ಚುಟುಗಳು ಶಾತವಾಹನರ ಸಾಮಂತರಾಗಿ ಇದೆ ಬನವಾಸಿಯಲ್ಲಿ ಆಡಳಿತ ನಡೆಸಿದ್ದರು ಆದರೆ ಅವರುಗಳು ಕದಂಬರಂತೆ ಗಟ್ಟಿಗರಾಗಿರಲಿಲ್ಲ. ಆ ಹೊತ್ತಿನಲ್ಲಿ ನಡೆದ ಹಳಮೆಯ ಸಂಗತಿಗಳು ಕನ್ನಡದ ಕದಂಬ ನಾಡನ್ನು ಕಟ್ಟುವಂತೆ ಹುರುಪಿಸಿದವು. ಆ ಹೊತ್ತಿನಲ್ಲಿ, ಶಾತವಾಹನರ ಹದಗೆಟ್ಟ ಆಡಳಿತದಿಂದ ಕನ್ನಡ ಮಂದಿಯ ಮೇಲೆ ಒತ್ತಡ ಹೆಚ್ಚುತ್ತಾ ಹೋಗಿತ್ತು, ಅದೇ ರೀತಿಯಲ್ಲಿ ಶಾತವಾಹನರ ಸಾಮಂತರಾದ ತಮಿಳು ಪಲ್ಲವರು ಕನ್ನಡ ನೆಲವನ್ನು ಕಬಳಿಸಿ ಕನ್ನಡಿಗರನ್ನು ಕೊನೆಗೊಳಿಸುವ ಸಂಚನ್ನು ನಡೆಸುತ್ತಲೇ ಇದ್ದರು. ಈ ಹೊತ್ತಿನಲ್ಲಿ ಕನ್ನಡ ಹಾಗು ಕನ್ನಡಿಗರ ಹಿತ ಕಾಪಡಲು ಹುಟ್ಟಿದ್ದೇ ಕದಂಬರು.
ಕದಂಬರ ಹಳಮೆಯ ಬಗ್ಗೆ ಬೆಳಕು ಚೆಲ್ಲುವ ಕಲ್ಬರಹಗಳೆಂದರೆ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಕಲ್ಬರಹಗಳು. ಈ ಕಲ್ಬರಹಗಳೇ ಕನ್ನಡದ ಮತ್ತು ಕದಂಬರ ಹಿರಿಮೆಯನ್ನು ಸಾರಿ ಸಾರಿ ಹೇಳುತ್ತವೆ. ತಾಳಗುಂದದ ಕಲ್ಬರಹ ಮತ್ತು ಆ ಹೊತ್ತಿನ ಹಲವಾರು ಕಲ್ಬರಹಗಳು ಹೇಳುವಂತೆ ಕದಂಬರು ನಾಡನ್ನು ಕಟ್ಟುವ ಮೊದಲು ಕನ್ನಡ ನುಡಿಯನ್ನಾಡುವ ದ್ರಾವಿಡರಾಗಿದ್ದರು. ಬನವಾಸಿಯಿಂದ 35 ಕಿ.ಮಿ ದೂರವಿರುವ ಇಂದಿನ ಶಿಕಾರಿಪುರದ ತಾಳಗುಂದದಲ್ಲಿ ಸರಿಸುಮಾರು ಕ್ರಿ.ಶ 346ಕ್ಕೂ ಮುಂಚೆ ಹುಟ್ಟಿ ಬೆಳೆದ ಮಯೂರಶರ‍್ಮ ಅಪಾರ ಬುದ್ದಿ ಮತ್ತೆಯನ್ನು ಹೊಂದಿದ್ದ, ಅದೇ ರೀತಿಯಲ್ಲಿ ಕ್ಶತ್ರಿಯರ ಕೆಚ್ಚೆದೆಯನ್ನು ಮೈಗೂಡಿಸಿಕೊಂಡಿದ್ದ. ಆತನ ನೆತ್ತರಲ್ಲಿ ಕನ್ನಡತನವಿತ್ತು, ಮೈ ಮನವೆಲ್ಲ ಕನ್ನಡ ನಾಡಿಗಾಗಿ ಹಂಬಲಿಸುತ್ತಿತ್ತು. ಕದಂಬರ ಅರಸು ಶಾಂತಿವರ‍್ಮನ ಕಾಲದ ತಾಳಗುಂದದ ಕಲ್ಬರಹವು ಕದಂಬ ಅರಸುಮನೆತನವನ್ನು ಕಟ್ಟಿಬೆಳೆಸಿದ ಬಗೆಯನ್ನು ವಿವರಿಸುತ್ತದೆ.
ಮಯೂರಶರ‍್ಮನು ತನ್ನ ಅಜ್ಜ ಮತ್ತು ಗುರು ವೀರಶರ‍್ಮನೊಂದಿಗೆ ಕ್ರಿ.ಶ. 345 ರಲ್ಲಿ ಕಲಿಕೆಗೊಸ್ಕರ ಕಂಚಿಗೆ ಹೋಗುತ್ತಾನೆ. ಈಗಿನ ಚೆನ್ನೈ ಹತ್ತಿರದ ಕಂಚಿ ಆ ಕಾಲದಲ್ಲಿ ಕಲಿಕೆಗೆ ಹೆಸರುವಾಸಿಯಾಗಿತ್ತು. ಶಾತವಾಹನರ ಸಾಮಂತರಾಗಿದ್ದ ಪಲ್ಲವರು ಕಂಚಿಯನ್ನು ನಡುವಾಗಿಸಿಕೊಂಡು ಆಡಳಿತ ನಡೆಸುತ್ತಿದ್ದರು. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಕಲ್ಬರಹದಲ್ಲಿ ಹೇಳಿರುವಂತೆ ಮಯೂರಶರ‍್ಮನ ಅಜ್ಜ ವೀರಶರ‍್ಮನು ಅವನಿಗೆ ಸ್ವಂತ ಗುರುವಾಗಿದ್ದು ಅವನ ತಂದೆ ಬಂದುಸೇನನು ಕ್ಶತ್ರಿಯ ಚಳಕಗಳನ್ನು ಮೈಗೂಡಿಸಿಕೊಂಡಿದ್ದನು.
ತಮಿಳು ಪಲ್ಲವರ ಆಡಳಿತದಲ್ಲಿದ್ದ ಕಂಚಿಯಲ್ಲಿ ಕನ್ನಡಿಗನಾದ ಮಯೂರಶರ‍್ಮನನ್ನು ಪಲ್ಲವರ ಕಾವಲುಗಾರರು ಒಮ್ಮೆ ಟೀಕಿಸಿಸುತ್ತಾರೆ. ಇದರಿಂದ ಅವರೊಡನೆ ಹೊಡೆದಾಟವಾಗಿ ಅವರಿಂದ ಮಯೂರಶರ‍್ಮನು ಹೀಯಾಳಿತನಾಗುತ್ತಾನೆ. ಇದರಿಂದ ಕೋಪಗೊಂಡು ಪಲ್ಲವರಿಗೆ ಮುಯ್ಯಿ ತೀರಿಸಿಸಲು ಕಂಚಿಯನ್ನು ಬಿಟ್ಟು ಬರುತ್ತಾನೆ. ಕನ್ನಡಿಗರಿಗಾಗಿಯೇ ಗಟ್ಟಿಯಾದ ನಾಡನ್ನು ಕಟ್ಟಬೇಕೆಂಬ ಹಟ, ಕನ್ನಡಿಗರು ಆ ಹೊತ್ತಿನಲ್ಲಿ ಅನುಬವಿಸುತ್ತಿದ್ದ ನೋವನ್ನು ನೀಗಿಸಬೇಕೆಂಬ ಕಾಳಜಿ, ಪಲ್ಲವರು ಇಲ್ಲವೇ ಹೆರಗಿನ ಯಾವ ಅರಸರ ಅಡಿಯಾಳಾಗಿ ಕನ್ನಡಿಗರು ಬದುಕುವಂತಾಗಬಾರದು ಎಂಬ ಕಿಚ್ಚು, ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ಮಯೂರಶರ‍್ಮನಿಗೆ ಪಲ್ಲವರು ಮಾಡಿದ ಈ ಅವಮಾನ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಹೀಗಾಗಿ ಹೊಸ ನಾಡು ಕಟ್ಟುವ ಕೆಲಸಕ್ಕೆ ಕೈ ಹಾಕುತ್ತಾನೆ. ಹೋರಾಟದ ಚಳಕ ಮತ್ತು ಕಾಳಗ ಕಲೆಯನ್ನು ಕಲಿಯುತ್ತಾನೆ. ಅಪಾರವಾದ ಕನ್ನಡಿಗರನ್ನು ಹುರಿದುಂಬಿಸಿ, ಅವರನ್ನೆಲ್ಲ ಕಟ್ಟಿಕೊಂಡು ಶ್ರೀಶೈಲದಲ್ಲಿ ಒಂದು ಕನ್ನಡಿಗರ ಕಾದಾಡುವ ಪಡೆಯನ್ನು ಕಟ್ಟುತ್ತಾನೆ.
ಇದೇ ಹೊತ್ತಿನಲ್ಲಿ ಪಲ್ಲವರ ರಾಜ ವಿಶ್ಣುಗೋಪ ಮತ್ತು ಬಡಗಣ ಬಾರತದ ರಾಜ ಸಮುದ್ರಗುಪ್ತನ ನಡುವೆ ನಡೆದ ಕಾಳಗದಲ್ಲಿ ಪಲ್ಲವರು ಮಂಕಾಗಿದ್ದರು. ಈ ವೇಳೆಯನ್ನು ಸರಿಯಾಗಿ ಉಪಯೋಗಿಸಿಕೊಂಡ ಮಯೂರಶರ‍್ಮನು ಶ್ರೀಶೈಲದಲ್ಲಿ ವಿಶ್ಣುಗೋಪನನ್ನು ಸೆದೆಬಡಿಯುತ್ತಾನೆ. ತದನಂತರದಲ್ಲಿ ತನ್ನ ಊರಾದ ಬನವಾಸಿಗೆ ತೆರಳಿ ಕನ್ನಡದ ಕದಂಬ ನಾಡನ್ನು ಕಟ್ಟುವುದರಲ್ಲಿ ನಿರತನಾಗುತ್ತಾನೆ. ಈ ರೀತಿಯಾಗಿ ತೆಂಕಣಬಾರತದಲ್ಲಿ ಕನ್ನಡ ನಾಡೊಂದು ಗಟ್ಟಿಯಾಗಿ ಬೇರೂರಿತು. ಕದಂಬರ ಹೆಸರಿನಳವಡಿಕೆ ತೆಂಕಣ ಬಾರತದಲ್ಲಿ ಕಂಡುಬರುವ ಕಾಡಂಬಿ ಮರವನ್ನು ಪೂಜಿಸುವ ವೈದಿಕರಿಂದಲು ಹಾಗು ಇಂದಿನ ಕೇರಳ, ತಮಿಳುನಾಡು ಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಕಾದಾಟದಲ್ಲಿದ್ದ ಅಚ್ಚಕನ್ನಡದ ಕಡಂಬು ಎಂಬ ಬುಡಕಟ್ಟಿನವರಿಂದಲೂ ಬಂದಿದೆ ಎಂಬ ಅರಿವನ್ನು ಮಂಡಿಸಲಾಗಿದೆ. ಕ್ರಿಸ್ಣವರ‍್ಮನ ಹೊತ್ತಿನ ಕಲ್ಬರಹಗಳಲ್ಲಿ ಕದಂಬರು ನಾಗರ ಪೀಳಿಗೆಯವರೆಂದು ಹೇಳಲಾಗಿದೆ.
ಮಯೂರಶರ‍್ಮನ ಮಗ ಕಂಗವರ‍್ಮ 365 ರಲ್ಲಿ ಪಟ್ಟವೇರಿದ. ವಾಕಟಕರ ಅರಸು ಪ್ರುತ್ವಿಸೇನನಿಂದ ಕಾಳಗದಲ್ಲಿ ಸೋತನಾದರು ತನ್ನ ಕದಂಬ ನಾಡನ್ನು ಉಳಿಸಿಕೊಳ್ಳುವಲ್ಲಿ ಗೆದ್ದವನಾಗಿದ್ದ. ಇವನ ಮಗ ಬಗೀರತನು ತಂದೆ ಕಳೆದುಕೊಂಡ ನೆಲವನ್ನು ಮರಳಿ ಪಡೆದುಕೊಂಡ ಎಂದು ಹಳಮೆಯಲ್ಲಿ ಹೇಳಲಾಗಿದೆ. ಬಗೀರತನ ಮಗ ರಗು ಪಲ್ಲವರೊಂದಿಗಿನ ಕಾಳಗದಲ್ಲಿ ಮಡಿದನು. ಅವನ ನಂತರ ಪಟ್ಟಕ್ಕೆ ಬಂದವನೇ ಕನ್ನಡಿಗರ ನೆತ್ತರಲ್ಲಿ ಮೊದಲಿಗನಾಗಿ, ಕದಂಬ ಕುಲದಲ್ಲೆ ತುಂಬಾ ಗಟ್ಟಿಗನಾದ ಮತ್ತು ಆಡಳಿತದಾಹಿ ಅರಸು ಎಂದು ಹೆಸರಾದ ಕಾಕುಸ್ತವರ‍್ಮ. ಇವನು ಬಡಗಣದ ಗುಪ್ತರು ಮತ್ತು ಬಟಾರಿಗಳು, ತೆಂಕಣ ಕನ್ನಡದ ಅಳೂಪರು ಮತ್ತು ಗಂಗವಾಡಿಯ ಪಡುವಣ ಗಂಗ ಮನೆತನಗಳೊಂದಿಗೂ ತನ್ನ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದನು.
ಕಾಕುಸ್ತವರ‍್ಮನ ನಂತರ ಬಂದವರಲ್ಲಿ, 485 ರಲ್ಲಿ ಪಟ್ಟವೇರಿದ ರವಿವರ‍್ಮ ಒಬ್ಬನೇ ನಾಡಿನ ನೆಲದ ಹರವನ್ನು ಹೆಚ್ಚಿಸಿದ್ದ. ಅವನ ಆಡಳಿತದ ಹೊತ್ತಿನಲ್ಲಿ ಪಲ್ಲವರೊಂದಿಗೆ ಸಣ್ಣಪುಟ್ಟ ಕಾಳಗಗಳು ನಡೆದಿದ್ದವು. ನರ‍್ಮದಾ ನದಿಯ ದಂಡೆಯವರೆಗೂ ಹಬ್ಬಿದ್ದ ವಾಕಟಕರನ್ನು ಸೋಲಿಸಿದ್ದು ಇವನ ಹೆಗ್ಗಳಿಕೆ. ಕದಂಬರ ನಾಡಿನ ಎಲ್ಲೆ ಇಂದಿನ ಬಹುತೇಕ ಕರ‍್ನಾಟಕ, ಗೋವಾ ಮತ್ತು ಇಂದಿನ ಮಹಾರಾಶ್ಟ್ರದ ತೆಂಕಣವನ್ನು ಒಳಗೊಂಡಿತ್ತು. ಕದಂಬರ ವಿಶ್ಣುವರ‍್ಮನ, ಬೀರೂರಿನ ಕಲ್ಬರಹದಲ್ಲಿ ಶಾಂತಿವರ‍್ಮನನ್ನು “ಸಮಸ್ತ ಕರ‍್ನಾಟಕದ ಒಡೆಯ” ಎಂದು ಬಿರುದಿಸಲಾಗಿದೆ.
ಕದಂಬರ ಅರಸರುಗಳು ಮತ್ತು ಆಳ್ವಿಕೆಯ ಕಾಲ:
ಕದಂಬರ ಆಡಳಿತ:
ಕದಂಬರು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಕನ್ನಡಿಗರಾದ ನಾವು ಯಾವತ್ತು ಮರೆಯುವಂತಿಲ್ಲ. ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಕಲ್ಬರಹವೆಂದು ಹೆಸರಾಗಿರುವ ಹಲ್ಮಿಡಿ ಕಲ್ಬರಹದಲ್ಲಿ (ಕ್ರಿ.ಶ 450) ಕದಂಬರು ಆಡಳಿತಾತ್ಮಕ ನುಡಿಯಾಗಿ ಕನ್ನಡವನ್ನು ಹೇಗೆ ಬಳಸಿದ್ದರು ಮತ್ತು ಆ ಹೊತ್ತಿನಲ್ಲಿ ಕನ್ನಡ ಎಶ್ಟು ಮುಂದುವೆರೆದಿತ್ತು ಎಂದು ತಿಳಿಯಬಹುದು. ಅವರ ಆಳ್ವಿಕೆಯ ಮೊದಲ ಬಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯಲ್ಲಿ ಟಂಕಿಸಿದ ವೀರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ. ಅರಸು ಬಗೀರತನ ಕಾಲದ (ಕ್ರಿ.ಶ. 390-415) ಶ್ರೀ ಮತ್ತು ಬಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಸರಿಸುಮಾರು 400ರ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ನುಡಿಯಾಗಿತ್ತು ಎಂಬುದನ್ನು ಸಾರಿ ಸಾರಿ ಹೇಳುತ್ತವೆ.
ಕನ್ನಡ ನಾಡಿನಲ್ಲಿ ಮೊಟ್ಟಮೊದಲಾಗಿ ಆಡಳಿತ ನಡೆಸಿದ ಕದಂಬರು ಈಗಿನ ಇಡೀ ಕನ್ನಡಿಗ ಮತ್ತು ಕರ‍್ನಾಟಕಕ್ಕೇ ಮಾದರಿಯಾಗಿದ್ದಾರೆ. ಕದಂಬರು ಕನ್ನಡ ನುಡಿಗೆ, ಕಲೆಗೆ, ಶಿಲ್ಪಕಲೆಗೆ ಮತ್ತು ಕನ್ನಡಿಗರಾಗಿ ಬದುಕುವ ಕಲೆಯನ್ನು ಕರ‍್ನಾಟಕ ಮತ್ತು ಕನ್ನಡಿಗರಿಗೆ ಕೊಡುಗೆಯನ್ನಾಗಿ ನೀಡಿದ್ದರು. ಶಾತವಾಹನ ಅರಸರಂತೆ ಕದಂಬರೂ ತಮ್ಮನ್ನು ದರ‍್ಮದ ಅರಸುಗಳು ಎಂದು ಕರೆದುಕೊಳ್ಳುತ್ತಿದ್ದರು. ದರ‍್ಮ ಅಂದರೆ ನ್ಯಾಯ, ನೀತಿ, ಆಡಳಿತ ಎಂಬುದರ ಬಗೆ. ಕಲ್ಬರಹಗಳ ಅರಿಮೆಯಿಂದ ಆ ಕಾಲದ ಅನೇಕ ಹುದ್ದೆಗಳನ್ನು ಪತ್ತೆ ಹಚ್ಚಲಾಗಿದೆ. ಪ್ರದಾನ = ಮುಕ್ಯಮಂತ್ರಿ, ಮನೆವೆರ‍್ಗಡೆ= ಪರಿಚಾರಕ, ತಂತ್ರಪಾಲ= ನೆರವಿಗ, ವಿದ್ಯಾವ್ರುದ್ದ= ಮೇಲರಿಗರು, ದೇಶಾಮಾತ್ಯ=ಮಾಂಜರಿಗ, ರಹಸ್ಯಾದ್ಯಕ್ಶ = ಕಾಸಗಿ ನೆರವಿಗ, ಸರ‍್ವಕಾರ‍್ಯಕರ‍್ತ=ಮೇಲ್ನೆರವಿಗ, ದರ‍್ಮದ್ಯಕ್ಶ = ಹಿರಿ ತೀರ‍್ಪುಗಾರ, ಬೋಜಕ ಮತ್ತು ಆಯುಕ್ತ =ಇತರ ಅದಿಕಾರಿಗಳು, ಇತ್ಯಾದಿ.
ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು. ಕದಂಬ ಅರಸುಮನೆತನದ ಆಡಳಿತದಲ್ಲಿ ಅರಸನ ಮಗ(ಪಟ್ಟದರಸ) ಆಡಳಿತದಲ್ಲಿ ಅರಸನಿಗೆ ನೆರವು ನೀಡುತ್ತಿದ್ದ. ಅರಸನ ಇತರ ಮಕ್ಕಳುಗಳು ಬೇರೆ ಬೇರೆ ನಾಡಿನ ನೆಲ ಮತ್ತು ಎಲ್ಲೆಗಳಲ್ಲಿ ನಾಡಾಳ್ವರರಾಗಿ (ರಾಜ್ಯಪಾಲರುಗಳಾಗಿ) ನೇಮಕವಾಗುತ್ತಿದ್ದರು. ಕಾಕುಸ್ತವರ‍್ಮನು ತನ್ನ ಮಗ ಕ್ರಿಶ್ಣನನ್ನು ತ್ರಿಪರ‍್ವತಾಹ ಎಂಬ ನೆಲದ ನಾಡಾಳ್ವರನನ್ನಾಗಿ ನೇಮಿಸಿದ್ದನು. ಮುಂದೆ ಇದು ಕದಂಬ ಅರಸುಮನೆತನದ ಬೇರೆ ಬೇರೆ ಕವಲುಗಳಾಗಿ ಒಡೆಯಿತು.
ರಾಜ್ಯವನ್ನು ಮಂಡಲ ಮತ್ತು ದೇಶ (ನಾಡು) ಎಂದು ಹಂಚಿಸಲಾಗಿತ್ತು. ಅನೇಕ ವಿಶಯ (ಜಿಲ್ಲೆ) ಗಳಿಂದ ಒಂದು ಮಂಡಲವಾಗುತ್ತಿತ್ತು. ಒಟ್ಟು ಒಂಬತ್ತು ವಿಶಯಗಳನ್ನು ಗುರುತಿಸಲಾಗಿದೆ. ಮಹಾಗ್ರಾಮ (ತಾಲೂಕು) ಮತ್ತು ದಶಗ್ರಾಮ(ಹತ್ತು ಹಳ್ಳಿಯ ಹೋಬಳಿ) ಇತರ ಕವಲುಗಲಾಗಿದ್ದವು. ಕ್ರುಶಿಯಿಂದ ಬಂದಿದ್ದರಲ್ಲಿ ಆರರಲ್ಲೊಂದು ತುಣುಕನ್ನು ಸುಂಕವೆಂದು ತೆರಿಗೆ ವಿದಿಸಲಾಗುತ್ತಿತ್ತು. ಸುಂಕವನ್ನು ಪೆರ‍್ಜುಂಕ (ಹೊರೆಯ ಮೇಲಿನ ಸುಂಕ), ವಡ್ಡರಾವುಲ (ಅರಸುಮನೆತನದ ಕಾವಲಿಗಾಗಿ ಎಲ್ಲರ ಸುಂಕ), ಬಿಲ್ಕೋಡ (ಮಾರಾಟ ತೆರಿಗೆ), ಕಿರುಕುಳ (ನೆಲ ಕಂದಾಯ), ಪಣ್ಣಾಯ (ಅಡಿಕೆಯ ಮೇಲಿನ ಸುಂಕ), ವ್ಯಾಪಾರಿಗಳು ಮತ್ತು ಮತ್ತಿತರರ ಮೇಲೆ ಕೆಲಸದ ಇತರೆ ಸುಂಕ ವಸೂಲು ಮಾಡಲಾಗುತ್ತಿತ್ತು. ವಿದಿಸಿದ ಸುಂಕವನ್ನೆಲ್ಲ ನಾಡಿನ ಮಂದಿಯ ಒಳಿತಿಗಾಗಿಯೇ ಮೀಸಲಿಡಲಾಗುತ್ತಿತ್ತು ಅನ್ನುವುದು ಕದಂಬರ ಆಡಳಿತದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ತೋರಿಸುತ್ತದೆ.
ಮುಂದಿನ ಬರಹದಲ್ಲಿ ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆಯನ್ನು ಅರಿಯೋಣ.
(ಮಾಹಿತಿ ಸೆಲೆ: kannadakannadiga, wikipedia, nammakannadanadu)
(ಚಿತ್ರ ಸೆಲೆ: wikipedia)
2 Responses
[…] ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ […]
[…] ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ […]