ಕಾಣೆಯಾಗುತ್ತಿರುವ ಗುಬ್ಬಚ್ಚಿ

ಸುನಿತಾ ಹಿರೇಮಟ.

Indian_Sparrowಎಶ್ಟೇ ನಿದ್ದೆಯಲ್ಲಿದ್ದರು ಎಬ್ಬಿಸಿ ಕೇಳಿ ಮೆಚ್ಚಿನ ಹಕ್ಕಿ ಯಾವುದು ಅಂತ, ತಟ್ಟನೆ ಹೇಳೋದು ಗುಬ್ಬಚ್ಚಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂತರಾ ಮುದ. ಬದುಕಿಗೆ ತೀರಾ ಹತ್ತಿರವಾಗೊ ಒಡನಾಡಿ. ಅಂತಾದ್ದೇನಿದೆ ಗುಬ್ಬಚ್ಚಿಯಲ್ಲಿ ಅಂದ್ರಾ, ನಿಜ, ಅದು ಕೋಗಿಲೆ ಹಾಗೆ ಹಾಡಲಾರದು, ಗಿಣಿ ಹಾಗೆ ಉಲಿಯಲಾರದು, ಇನ್ನು ನವಿಲಿನ ನಾಟ್ಯವಂತು ಅದಕ್ಕೆ ಗೊತ್ತಿಲ್ಲ. ಆದರೂ ಗುಬ್ಬಿ ಹಾಗೆ ನನ್ನ ಸೆಳೆದ ಹಕ್ಕಿ ಇನ್ನೊಂದಿಲ್ಲ.

ಅವ್ವ ತಾತ ಹೇಳಿದ ಕತೆಗಳಲ್ಲಿ ನಾಯಕಿಯೇ ಈ ಗುಬ್ಬಕ್ಕ. ಕಾಗಕ್ಕ ಗುಬ್ಬಕ್ಕನ ಕತೆಯಲ್ಲಂತು ಗುಬ್ಬಕ್ಕನೇ ಪ್ರದಾನ ನಾಯಕಿ. ಇಂದಿನ ಯಾವುದೆ 70 ಎಂ. ಎಂ. ಚಿತ್ರಗಳು ಇದಕ್ಕೆ ಸರಿಸಾಟಿಯಾಗಲ್ಲ. ಹಿರಿಯರ ಕಾಲದಿಂದಲೂ ಮನುಶ್ಯರ ಜೊತೆಗಿರುವ ಗುಬ್ಬಚ್ಚಿಗಳಿಗೂ ನಮ್ಮ ಬಾಲ್ಯಕ್ಕೂ ಬಿಡದ ನಂಟು. ಚಿಂವ್… ಚಿಂವ್… ಎನ್ನುತ್ತ, ಪುರ‍್ರನೆ ಹಾರುವ ಅದರ ಸಡಗರವನ್ನು ನೊಡೋದೇ ಕಣ್ಣಿಗೆ ಹಬ್ಬ. ಹಳ್ಳಿ ಕಡೆ ಒಮ್ಮೆ ಹೊರಳುವುದಾದರೆ, ಅಲ್ಲಿ ಊರಿಗೊಂದು ಕಟ್ಟೆ ಇರುತ್ತಿತ್ತು ಆಲದ ಮರವೋ ಇಲ್ಲ ಬೇವು-ಆಲ ಎರಡು ಒಂದೆಡೆ ಬೆಳೆಸಿ ಕಟ್ಟಿದ ದೊಡ್ಡ ಕಟ್ಟೆ. ಸಂಜೆಯ ಹೊತ್ತಿಗೆ ಊರವರು ಸೇರಿ ಕಟ್ಟೆಯ ಮೇಲೆ ಸುದ್ದಿ ಮಾಡಿದರೆ ಇನ್ನು ಗುಬ್ಬಿಗಳು ಚಿಕ್ – ಚಿಕ್, ಚಿಂವ್… ಚಿಂವ್… ಎಂದು ನಾವೇನು ಕಡಿಮೆಯಿಲ್ಲ ಮಾತಿನಲ್ಲಿ ಎಂದು ಗುಂಪು ಗೂಡುತ್ತಿದ್ದವು. ಇನ್ನು, ಮನೆಗೂ ಗುಬ್ಬಚ್ಚಿಗಳಿಗೂ ಎಡೆಬಿಡದ ನಂಟಸ್ತನ. ಮನೆ ಇಲ್ಲದೆ ಗುಬ್ಬಚ್ಚಿ ಇಲ್ಲ. ಗುಬ್ಬಚ್ಚಿಗಳಿಲ್ಲದ ಮನೆಯೂ ಇಲ್ಲ.

ಗುಬ್ಬಚ್ಚಿ ಎನ್ನುವುದು ಕೇವಲ ಒಂದು ಹಕ್ಕಿಯಾಗಿರಲಿಲ್ಲ ನಮ್ಮ ಮನೆಯ ಕೂಸಿನಂತೆಯೇ ನಮ್ಮೊಡನೆಯೇ ಬೆಳೆಯುತ್ತಿತ್ತು. ನಾವಾಡುವಾಗ, ಅಳುವಾಗ, ಉಣ್ಣುವಾಗ, ಒಂದಲ್ಲಾ ಒಂದು ರೀತಿ ಗೆಳೆಯನಾಗಿ ಸುತ್ತಮುತ್ತಲೂ ಗಿರಕಿ ಹೊಡೆಯುತ್ತಿತ್ತು. ಮನೆಯ ಒಳಹೊರಗೆ ಆಡಿಕೊಂಡಿರುವ ಸಣ್ಣ ಮಕ್ಕಳಂತೆ ಗುಬ್ಬಿಗಳು ನಮ್ಮ ದಿನದ ಬಾಗವಾಗಿದ್ದವು. ನಮ್ಮ ಬದುಕಿನ ಸಂತಸವನ್ನು ಹೆಚ್ಚಿಸಿದ್ದವು. ಈಗೀಗ ಗುಬ್ಬಿಯ ಮಾತೆತ್ತಿದರೆ ಏನೂ ನೆನಪಾಗಲ್ಲ, ನೆಚ್ಚಿನ ವಚನ ಹೇಳ್ಬೇಕು ಅನ್ಸಲ್ಲ, ಅಂಚೆ ಚೀಟಿಗಳ ಸಂಗ್ರಹ ಒಂದ್ಸಲ ಹಣಕ್ ಬೇಕು ಅನ್ಸಲ್ಲ, ಇನ್ನೇನು ಮಾಡಬೇಕು ಅನ್ಸಲ್ಲ. ಎಲ್ಲಾದರು ಕಾಣಿಸಿದರೆ ಸಾಕು, ಅವುಗಳು ಕುಂತಲ್ಲೆ ಮಾಡುವ ಆ ಟಿಂಗ್ ಟಿಂಗ್ ಕುಣಿತ ನೋಡೋ ಆಸೆ, ಚಿಂವ್… ಚಿಂವ್… ಗುಸುಗುಸು ಸುದ್ದಿ ಕೇಳೊ ಅಸೆ, ಮತ್ತೆಲ್ಲಿ ಆ ಹೊತ್ತು ಸಿಗುವುದೋ, ಇಲ್ಲವೋ ಅನ್ನುವ ತಳಮಳ.

ಹಳ್ಳಿ ಜೀವನ ಪಟ್ಟಣದ ಬಣ್ಣ ಬಳಿದುಕೊಂಡಿದೆ. ಮಳೆ ಇಲ್ಲದೆ, ಹಂಗೂ ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತರು ಪಡುತ್ತಿರುವ ಪಾಡು ಹೇಳಕ್ಕಾಗಲ್ಲ. ಇರುವ ಕೆಲಹೊಲಗಳನ್ನು ಬೀಳುಬಿಟ್ಟು. ಇನ್ನು ಹಲವು ಬೂಮಿಯನ್ನು ಬಹುಮಹಡಿ ಅಂಗಳವನ್ನಾಗಿಸಿ, ಬೆಳವಣಿಗೆ ಎನ್ನುವ ಬೂತಕ್ಕೆ ಹಳ್ಳಿಗಳನ್ನು ಬಲಿ ಕೊಟ್ಟು, ನಗರಗಳ ವಿಸ್ತರಣೆಗೆ ತಮ್ಮನ್ನ ತಾವೆ ಬಲಿ ಕೊಡುತ್ತಿರುವ ಹಳ್ಳಿಗಳಿಗೆ ಏನ್ ಹೇಳ್ ಬೇಕೊ. ಇದೇ ವೇಳೆ ತಮ್ಮ ಹಕ್ಕಿಗಾಗಿ ಈ ಹಕ್ಕಿಗಳು ಹೋರಾಡಲಾರದೆ, ತಮ್ಮ ದನಿಗೆ ದನಿ ಗೂಡಿಸುವವರಿಲ್ಲದೆ, ಗುಬ್ಬಿಗಳು ಜೊತೆಗೆ ಬೇರೆ ಬೇರೆ ಹಕ್ಕಿ ಪಿಕ್ಕಿಗಳು ಕಾಣಿಸೋದೆ ಇಲ್ಲ. ನನ್ನ ಕಣ್ಣಂಚಿನ ಹನಿ ಹಾಗೆ.

ಸಲೀಂ ಆಲಿ ನನ್ನ ನೆಚ್ಹಿನ ಪಕ್ಶಿಪ್ರೇಮಿಗಳಲ್ಲಿ ಒಬ್ಬರು. ಅವರೇ ಒಂದೆಡೆ ಹೇಳುವಂತೆ “ನಮಗೆ ಹೆಚ್ಚು ಚಿರಪರಿಚಿತವಾಗಿರುವ ಹಕ್ಕಿ ಎಂಬುದಕ್ಕೆ ಅನುಮಾನವೇ ಇಲ್ಲ” ಎಂದು ಗುಬ್ಬಚ್ಚಿಯನ್ನು ವರ‍್ಣಿಸುತ್ತಾರೆ. ಗುಬ್ಬಚ್ಚಿಗಳಲ್ಲಿ ಹೆಣ್ಣು ಮತ್ತು ಗಂಡುಗಳಿಗೆ ವ್ಯತ್ಯಾಸ ಗುರುತಿಸಬಹುದು. ಸ್ನೇಹಿತನಂತೆ ನಮ್ಮ ನಡುವೆ ಹಾರಾಡುತ್ತಿದ್ದ ಗುಬ್ಬಚ್ಚಿ ತನ್ನ ಮೈ ಬಣ್ಣಕ್ಕಿಂತ ತನ್ನ ಮತ್ತು ತನ್ನ ಬಳಗದವರ ನಡವಳಿಕೆಯಿಂದ ಅದು ಬೇರೆ ಅನ್ನಿಸುತ್ತಲೆ ಇರಲಿಲ್ಲ. ಸಲೀಂ ಆಲಿಯವರೇ ಹೇಳುವಂತೆ ಸಾದಾರಣ ಮೈಬಣ್ಣದ ಗುಬ್ಬಿಗೆ ಕೀಳರಿಮೆ ಇರಬೇಕಾಗಿತ್ತು. ಆದರೂ ನವಿಲಿಗೆ ಇರಬೇಕಾದಶ್ಟು ಆತ್ಮವಿಶ್ವಾಸವಿದೆ ಎನ್ನುತ್ತಾರೆ. ಮನುಶ್ಯರ ಒಡನಾಟದಲ್ಲಿ ಬದುಕಿ ಬಾಳುವ ಗುಬ್ಬಚ್ಚಿಗಳು ನಮ್ಮ ಪುರಾಣಗಳಲ್ಲಿ, ಜನಪದದಲ್ಲಿ, ಕಾವ್ಯಗಳಲ್ಲಿ ಸಹಜವಾಗಿ ಬೆರೆತು ಹೋಗಿವೆ.

ಹೌಸ್ ಸ್ಪಾರೊ ಅತವಾ ನಮ್ಮ ಗುಬ್ಬಚ್ಚಿ ವಿಶ್ವಾದ್ಯಂತ ಕಾಣಸಿಗುವ ಪಕ್ಶಿ. ಗುಬ್ಬಚ್ಚಿಗಳ ಸಂಕ್ಯೆ ಇಳಿಮುಕವಾಗಿರುವುದು ಬಾರತದಲ್ಲಶ್ಟೇ ಅಲ್ಲ ಜಗತ್ತಿನಾದ್ಯಂತ ಇವುಗಳ ಎಣಿಕೆ ಗಣನೀಯವಾಗಿ ಕಡಿಮೆಯಾಗಿದೆ. ಅದರಲ್ಲೂ ಮುಕ್ಯವಾಗಿ ಪಟ್ಟಣ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣುವುದೇ ಇಲ್ಲ. ಹಾಗೆಂದು ಎಲ್ಲ ಪಟ್ಟಣಗಳಿಂದಲೂ ಇವು ಮರೆಯಾಗಿವೆ ಎಂದಲ್ಲ. ಇವು ಅಪರೂಪಕ್ಕೆ ಅಲ್ಲಿ ಇಲ್ಲಿ ಕಾಣುತ್ತವೆ.

ಗುಬ್ಬಚ್ಚಿಗಳ ಎಣಿಕೆ ಹೀಗೆ ಕಡಿಮೆಯಾಗಲು ಕಾರಣವಾದರೂ ಏನು?

  • ಕೆಲವು ವಿಜ್ನಾನಿಗಳ ಪ್ರಕಾರ ನಾವು ಬಳಸುವ ಇಂದನಗಳಲ್ಲಿರುವ ರಾಸಾಯನಿಕಗಳಿಂದ ಇವುಗಳ ಎಣಿಕೆ ಕಡಿಮೆಯಾಗುತ್ತಿದೆ. ರಾಸಾಯನಿಕಗಳಿಂದ ಆಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿ ಬೇಕಾದ ಕೀಟಗಳನ್ನು ಕೊಲ್ಲುತ್ತದೆ ಎಂಬುದು ಅವರ ವಾದ. ಬೆಳೆದ ಗುಬ್ಬಚ್ಚಿಗಳಿಗೆ ದವಸ ದಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ ಮುನ್ನು (protein) ಇರುವ ಕೀಟಗಳೇ ಬೇಕು. ಈ ಕೀಟಗಳನ್ನು ಸೀಸರಹಿತ ಪೆಟ್ರೋಲಿನ ಹೊಗೆ ಸಾಯಿಸಿಬಿಡುವುದರಿಂದ ಮರಿಗಳು ಪೌಶ್ಟಿಕ ಆಹಾರವಿಲ್ಲದೆ ಸಾಯುತ್ತಿವೆ ಎಂಬುದು ಈ ವಾದದ ಸಾರಾಂಶ
  • ಮರ ಗಿಡಗಳು ಬೇರು ಕಳೆದುಕೊಳ್ಳುತ್ತಿವೆ. ನೆರಳು ದೂರವಾಗುತ್ತಿದೆ. ಎಲ್ಲಿಯೂ ತೋಟಗಳಿಲ್ಲ, ಅಂಗಳವಿರುವ ಮನೆಗಳಂತು ಕಾಣಿಸೊದೆ ಇಲ್ಲ. ಮನೆ-ಕಚೇರಿ ವಿನ್ಯಾಸದಲ್ಲಿ ಬದಲಾಗಿ, ಬಹುಮಹಡಿ ಬೆಟ್ಟದಂತಹ ಕಾಂಕ್ರಿಟ್ ಕಾಡು ಆದ ಮೇಲೆ ನನ್ನ ಗುಬ್ಬಚ್ಚಿಗಳ ಗೂಡಿಗೆ ಜಾಗವೇ ಇಲ್ಲ
  • ನಗರಗಳ ಮಾತಿರಲಿ, ಹಳ್ಳಿ ಹಳ್ಳಿಗಳಲ್ಲು ಗುಬ್ಬಚ್ಚಿಗಳು ಹಾರಾಡೋದು ಕಾಣ್ಸೋದು ಕಮ್ಮಿ. ಬಡಾವಣೆಗಳಲ್ಲಿ ಸಾಲಾಗಿ ತಲೆ ಎತ್ತಿರುವ ಪೋನ್ ಗೋಪುರಗಳು ಸೂಸುವ ಕಾಣದ ವಿಕಿರಣಗಳ ಏಟಿಗೆ ತತ್ತರಿಸಿ ಹೋಗಿವೆ
  • ಕೇವಲ ಇದೊಂದೇ ಕಾರಣದಿಂದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿದೆ ಎಂದು ಹೇಳುವುದು ಕಶ್ಟ. ಕಳೆದ ದಶಕದಿಂದ ಬದಲಾಗುತ್ತಿರುವ ನಮ್ಮ ಜೀವನ ಶೈಲಿಯ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿರಬಹುದು
  • ಬದಲಾಗುತ್ತಿರುವ ನಮ್ಮ ಮನೆಗಳು. ಹಿಂದೆ ನಾಡಶೈಲಿಯಲ್ಲಿ ಕಟ್ಟಿದ ಮನೆಗಳು ಈ ಮನೆಗಳ ಸೂರಿನಡಿಯಲ್ಲಿ ಆರಾಮವಾಗಿ ಗೂಡು ಕಟ್ಟಿಕೊಂಡು ಮರಿಮಾಡಲು ಸಾಕಶ್ಟು ಜಾಗವಿರುತ್ತಿತ್ತು. ಆದ್ರೆ ನಾವೇ ಹೇಳುವ ಇಂದಿನ ಶೈಲಿಯ ಕಾಂಕ್ರಿಟ್, ಗುಬ್ಬಚ್ಚಿಗೆ ಗೂಡು ಕಟ್ಟುವಲ್ಲಿ ನೆರವಾಗಿಲ್ಲ. ಈಗ ಮನೆಗಳ ವಿನ್ಯಾಸ ಹೇಗಿದೆ ಎಂದರೆ ಗುಬ್ಬಚ್ಚಿಗಳು ಮನೆಯೊಳಗೆ ಬರುವುದಿರಲಿ, ಮನೆ ಹೊರಗೂ ಕಾಣಿಸಲ್ಲ
  • ಕೆಲವು ಹಳ್ಳಿಗಳಲ್ಲಿ ಅಶ್ಟೋ ಇಶ್ಟೋ ನಡೆಯುತ್ತಿರುವ ಒಕ್ಕಲಿನಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿದೆ. ಹೊಲಗಳಲ್ಲಿ ಗುಬ್ಬಚ್ಚಿಗಳ ಆಹಾರವಾಗಿದ್ದ ಹುಳಗಳು ಕಡಿಮೆಯಾಗಿವೆ. ಹಳ್ಳಿಯ ಮನೆಗಳಲ್ಲಿ ಆಹಾರವೂ ಕಡಿಮೆಯಾಗಿದೆ. ಆಹಾರದಾನ್ಯ ಬೆಳೆಯುವ ಪ್ರಮಾಣವೂ ಕಡಿಮೆಯಾದ ಬಳಿಕ ಕಾಳು ಚೆಲ್ಲುವ ಔದಾರ‍್ಯವಂತು ಇಲ್ಲವೇ ಇಲ್ಲ. ಗುಬ್ಬಚ್ಚಿಗಳಿಗೆ ದಿನನಿತ್ಯದ ಆಹಾರದ ಕೊರೆತೆಯೂ ಅವುಗಳ ಸಂತತಿ ಕಡಿಮೆಯಾಗಲು ಒಂದು ಪ್ರಮುಕ ಕಾರಣವೆನಿಸದೆ ಇರದು.

ಕಾಣೆಯಾಗುತ್ತಿರುವ ಗುಬ್ಬಚ್ಚಿಗಳ ಜೊತೆ ಕಾಣೆಯಾಗುತ್ತಿರುವ ಇನ್ನೂ ಅನೇಕ ಪಕ್ಶಿಗಳ ಬಗ್ಗೆ ನಾವು ಚಿಂತಿಸಬೇಕು. ಹಳ್ಳಿಗಳ ಕಡೆ ಹೋದರೆ ಬಹುಪಾಲು ಈಚಲು ಮರಗಳಲ್ಲಿ ಮತ್ತು ಕೊಳಗಳ ಮೇಲೆ ಚಾಚಿದ ಜಾಲಿಮರದ ಕೊಂಬೆಗಳಿಗೆ ನೇತುಬಿದ್ದಿರುವ ಗೀಜಗನ ಗೂಡು ಕಂಡು ಬರುತ್ತಿತ್ತು. ಇತ್ತೀಚೆಗೆ ಈ ಗೀಜಗನ ಗೂಡುಗಳು ಇಲ್ಲವೇ ಇಲ್ಲ. ಗುಬ್ಬಿ, ಹೆಸರೇ ಸೂಚಿಸುವಂತೆ ಈ ಹಕ್ಕಿಯು ಪ್ರಪಂಚದಲ್ಲೇ ಅತೀ ಸಣ್ಣ ಹಕ್ಕಿ. ಅದನ್ನು ಚಿಟಗುಬ್ಬಿ, ಗುಬ್ಬಚ್ಚಿ ಎಂದು ಪ್ರೀತಿಯಿಂದ ಕರೆಯುವುದಕ್ಕೆ ಕಾರಣ, ಮನುಶ್ಯನಿಗೆ ಹೆದರದೇ ಸಮೀಪ ಸುಳಿಯುವ, ಗೂಡು ಕಟ್ಟುವ, ಮನೆಯೊಳಗೆ ಬಂದು ಸಂಸಾರ ಮಾಡುವ ಅದರ ನಿರುಪದ್ರವಿ ಗುಣ. ನೋಡಲು ಚೆಂದ, ಹಿಡಿದರೆ ಮುಶ್ಟಿಯೊಳಗೆ ಮುಚ್ಚಬಹುದಾದ ಗುಬ್ಬಿ.

ಇಂದಿನ ಮಕ್ಕಳ ಬಾಲ್ಯದ ಜೊತೆಗೆ ಗುಬ್ಬಚ್ಚಿಗಳ ಜೊತೆಯಿಲ್ಲ. ಚಿಂವ್ ಚಿಂವ್ ಸದ್ದು ಈಗಿನ ಮಕ್ಕಳಿಗೆ ಅಶ್ಟೇನು ಪರಿಚಿತವಾಗಿಲ್ಲ. ಅಜ್ಜಿ ಹೇಳುತ್ತಿದ್ದ ಗುಬ್ಬಚ್ಚಿಯ ಕತೆಗಳು ಎಲ್ಲಿ ಹೋದವು ಎಂದು ಚಿಂತಿಸುವಾಗಲೇ, ಮಕ್ಕಳು ಹೆತ್ತವರಿಂದ ದೂರವಾಗುವ ಈ ಕಾಲದಲ್ಲಿ ಅಜ್ಜಿ ಎಲ್ಲಿ ಬರಬೇಕು, ಅಜ್ಜಿ ಕತೆ, ಕತೆಯಲ್ಲಿ ಬರುವ ಗುಬ್ಬಿಗಳೆಲ್ಲಿ ಬರಬೇಕು ಅಂತ ಮನ ಮುದುಡಿತು. ಇನ್ನು ಗುಬ್ಬಚ್ಚಿಗಳದ್ದು ದೂರವಾಗಿರುವ ಮಕ್ಕಳ ಕತೆಯಲ್ಲ, ನಾವೇ ದೂರಕ್ಕಟ್ಟಿದ ಚಿಟಗುಬ್ಬಿಯ ವ್ಯತೆ.

(ಚಿತ್ರ ಸೆಲೆ: ವಿಕಿಮೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. samad66 says:

    ತುಂಬಾ ಪ್ರಸ್ತುತ ಲೇಖನ. ಕೆಲವು ಸ್ಪಷ್ಟನೆಗಳು;
    ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಕೆಲವು ಕಾರಣಗಳು
    1.ಸದಾ ಮನೆಯಲ್ಲೇ ಸುಳಿದಾಡುತ್ತಿದ್ದ ಗುಬ್ಬಿಗೆ ಹೌಸ್ ಸ್ಪಾರೋ ಎನ್ನುತ್ತಾರೆ. ಹೆಣ್ಣು ಮಕ್ಕಳು ಕಾಳು ಕಡಿ ಹಸನು ಮಾಡವಾಗ ಗುಬ್ಬಿಗಳು ಅವರ ಪಕ್ಕದಲ್ಲೇ ಕುಳಿತು ಕಾಳು, ಹುಳಗಳನ್ನು ತಿನ್ನುತ್ತಿದ್ದವು.
    2. ಹಳ್ಳಿಗಳಲ್ಲಿ ಮಾಳಿಗೆ ಮನೆಯಲ್ಲಿ ಮಣ್ಣನ್ನು ತೆಗೆದು ಅದರಲ್ಲಿ ಗೂಡು ಕಟ್ಟುತ್ತಿದ್ದವು. ಗುಡಿಸಲುಗಳಲ್ಲಿ ವಾಸಿಸುತ್ತಿದ್ದವು. ಆದರೆ ಇಂದು ಕಾಂಕ್ರೀಟ್ ಮನೆಗಳು, ಕಿಟಿಕಿಗಳಿಗೂ ಸೊಳ್ಳೆ ಜಾಲರಿ ಹಾಕಿದರೆ ಗುಬ್ಬಿ ಮನೆಯೊಳಗೆ ಬರಲು ಸಾಧ್ಯವೇ?
    3. ಇಂದು ಎಲ್ಲಿ ಗುಡಿಸಲುಗಳಿದ್ದಾವೋ ಅಲ್ಲಿ, ಮತ್ತೆ ಗುಡಿಸಲುಗಳಿರಿವು 5 ಸ್ಟಾರ್ ರೆಸಾರ್ಟ್ ಗಳಲ್ಲಿ ಗುಬ್ಬಿಗಳು ಯಥೇಚ್ಛವಾಗಿವೆ.
    4. ಊರಲ್ಲಿ ಜಾಗವಿಲ್ಲ ಎಂದು ಹಳ್ಳಿಗಳ ಸುತ್ತಮುತ್ತ, ಕಾಡಿನಲ್ಲಿರುವ ಮುಳುಗಿಡಗಳಲ್ಲಿ ಗುಬ್ಬಿಗಳು ಗೂಡು ಕಟ್ಟುತ್ತಿವೆ.
    5. ಚರವಾಣಿ ಸ್ಥಂಭಗಳಿಂದ ಗುಬ್ಬಿಗಳು ಕಡಿಮೆಯಾಗುತ್ತಿವೆ ಎನ್ನುವುದು ಇಡೀ ದೇಶದಲ್ಲಿ ಹರಡಿರುವ ಸಾರ್ವತ್ರಿಕ ಮಿಥ್ಯೆ. ಇದರ ಕುರಿತು ಯಾವುದೇ ಸಂಶೋಧನೆಗಳ ಪುರಾವೆ ಇಲ್ಲ.
    6. ಗುಬ್ಬಿಗಿಂತ ಚಿಕ್ಕದಾದ ನೂರಾರು ಹಕ್ಕಿಗಳು ಭಾರತದಲ್ಲಿವೆ. ಭಾರತದ ಅತಿ ಚಿಕ್ಕ ಹಕ್ಕಿ “ನಸುಗೆಂಪು ಕೊಕ್ಕಿನ ಪುಷ್ಟ ಕುಟುಕ” -ಪೇಲ್ ಬಿಲ್ಡ್ ಫ್ಲವರ್ ಪೆಕರ್-ನಮ್ಮ ಹೆಬ್ಬೆರಳಿನಷ್ಟಿದೆ.
    7. ನೀವಿರುವಲ್ಲಿಯೇ ಗುಬ್ಬಿಗಳು ಬಂದು ಗೂಡು ಕಟ್ಟಬೇಕೆಂದರೆ, ಬಿದಿರಿನ ಕೊಳವೆ, ಗುಬ್ಬಿ ಮನೆಗಳನ್ನು ಮನೆಯ ಸುತ್ತ ಇರಿಸಿ, ಸಾಕು.
    8. ಅಮೇರಿಕಾದಲ್ಲಿ ಗುಬ್ಬಿಯನ್ನು ಬೆಳೆಯನ್ನು ನಾಶಮಾಡುವ ಒಂದು ಪೀಡೆ ಎಂದು ಪರಿಗಣಿಸಿ, ಅದನ್ನು ಕೊಲ್ಲುವ ಅನೇಕ ವಿಧಾನಗಳು ಚಾಲ್ತಿಯಲ್ಲಿವೆ.

    ಧನ್ಯವಾದಗಳು.

  2. HM Sunita says:

    ನಿಮ್ಮ ಸ್ಪಷ್ಟನೆಗಳಿಗೆ ದನ್ಯವಾದಗಳು

ಅನಿಸಿಕೆ ಬರೆಯಿರಿ:

Enable Notifications OK No thanks