ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

ಪ್ರವೀಣ ಪಾಟೀಲ.

image2

ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ ವಿಂಡೋಸ್ ನ ಸದ್ಬಳಕೆ ಮಾಡಿದ್ದಾರೆ. ವಿಂಡೋಸ್ ಹುಟ್ಟಿದಾಗಿನಿಂದ ಹಿಡಿದು ಇಲ್ಲಿಯವರೆಗಿನ ಪಯಣ ಏರು-ಪೇರುಗಳಿಂದ ಕೂಡಿದೆ. ಇವತ್ತು ಸಾದನಗಳು ಮಂದಿಯ ಎಣಿಕೆಯನ್ನು ಮೀರಿವೆ. ಕೂಡುಕೊಳ್ಳುವಿಕೆ(Connectivity) ಮಾಹಿತಿ ಚಳಕದ ಉಸಿರಾಗಿದೆ. ಸ್ತಿರತೆ ಮತ್ತು ಬದಲಾವಣೆಯ ಜಗ್ಗಾಟದಿಂದ ಕೂಟಗಳು ನರಳಾಡುತ್ತಿವೆ. ಇದೆಲ್ಲರ ನಡುವೆ ವಿಂಡೋಸ್ ನ ಮರುಹುಟ್ಟಿನ ಅವಶ್ಯಕತೆ ಎಂದಿಗಿಂತಲೂ ಹೆಚ್ಚಾಗಿತ್ತು.

ಮುಂದೆ ಬರುವ ವಿಂಡೋಸ್ ಕೊಳ್ಳುಗರಿಗೆ ಇನ್ನು ಹೆಚ್ಚು ಹೊಸ ಗುಣಗಳನ್ನು ಪರಿಚಯಿಸಿ ನಿತ್ಯ ಬದುಕಿನ ಕೆಲಸಗಳನ್ನು ಸಲೀಸಾಗಿ ಮಾಡುವಂತಾಗಿರಬೇಕು ಮತ್ತು ಕೂಟಗಳಿಗೆ ಹೆಚ್ಚಿನ ಬಲ ಕೊಡುವಂತಾಗಿರಬೇಕು. ಇಂತಹ ಪರಿಸ್ತಿತಿಯಲ್ಲಿ ತೋರ‍್ಪಡಿಸಿದ ವಿಂಡೋಸ್ 10 ಈ ಸವಾಲುಗಳನ್ನೆದೆರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಅಂತ ಹೇಳಬಹುದು. ಕೊಳ್ಳುಗರಿಗೆ ಆಟ, ಕೆಲಸ ಹಾಗೂ ಕೂಡುಕೊಳ್ಳುವಿಕೆಯ ಹೊಸ ಅನುಬವ ಕೊಡುವಂತಹ ಗುಣಗಳನ್ನು ಹೊಂದಿದೆ. ಕೊಳ್ಳುಗರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದೆ. ವಿಂಡೋಸ್ 10 ವಿವಿದ ಸಾದನಗಳ ಮೇಲೆ ಅಳವಡಿಸಬಹುದು. ಅಲೆಯುಲಿಯಿಂದ ಹಿಡಿದು ಟಿವಿಯಂತಹ ಸಾದನಗಳಲ್ಲಿಯೂ ಕೂಡ ಇದನ್ನು ಅಳವಡಿಸಬಹುದು.

ಬಳಕ ತಯಾರಕರೂ ಕೂಡ ಎಲ್ಲ ಸಾದನಗಳಿಗೆ ಒಂದೇ ನೆಲೆಗಟ್ಟಿನಲ್ಲಿ (Platform) ಬಳಕಗಳನ್ನು ಸಿದ್ದಪಡಿಸಬಹುದು. ಇಶ್ಟೆಲ್ಲ ಗುಣಗಳನ್ನು ಹೊಂದಿರುವ ವಿಂಡೋಸ್ 10, ಸದ್ಯಕ್ಕೆ ಚಳಕ ಕಾತುರರು ಮಾತ್ರ ಬಳಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಮಂದಿಯ ಸಲಹೆಗಳನ್ನು ಪಡೆದು ತಮ್ಮ ಏರ‍್ಪಾಟನ್ನು ಮತ್ತಶ್ಟು ಬಲಪಡಿಸುವ ದಾರಿಯಲ್ಲಿ ಕೆಲಸ ಮಾಡುತ್ತಾರೆ. ಮೈಕ್ರೊಸಾಪ್ಟ್ ನ ಈ ಹೊಸ ಏರ‍್ಪಾಟನ್ನು ಒರೆಹಚ್ಚಲು ಬಯಸುವ ಕಾತುರರು ಮೈಕ್ರೊಸಾಪ್ಟ್ ಮಿಂಬಲೆಗೆ ಬೇಟಿ ಕೊಟ್ಟು, ವಿಂಡೋಸ್ 10 ಹಿನ್ನೋಟದ ಕಡತವನ್ನು ತಮ್ಮ ಎಣ್ಣುಕದಲ್ಲಿ ಇಳಿಸಿಕೊಂಡು, ಅಳವಡಿಸಿಕೊಂಡು ಹೊಸ ಅನುಬವವನ್ನು ಸವಿಯಬಹುದು. ಇನ್ನೂ ಪೂರ‍್ಣರೀತಿಯ ಏರ‍್ಪಾಟು ಸಿದ್ದವಾಗದ ಕಾರಣ ಬಳಕಗಳು ಸರಿಯಾಗಿ ಕೆಲಸ ಮಾಡದಿರುವ ಸಾದ್ಯತೆಗಳಿವೆ. ಹಾಗಾಗಿ ಇದನ್ನು ಬಳಸುವ ಬಳಕೆದಾರರು ಎಚ್ಚರವಹಿಸಬೇಕು.

(ಚಿತ್ರ ಸೆಲೆ: exremetech)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.