ಇ-ಕಾಮರ‍್ಸ್: ನುಡಿಯ ಕೊಡುಗೆ ಕಡೆಗಣಿಸದಿರಿ
ಇತ್ತೀಚೆಗಶ್ಟೇ ಅಂದರೆ ಅಕ್ಟೋಬರ್ 6 2014 ರಂದು, ಇ-ಕಾಮರ‍್ಸ್ ಸಂಸ್ತೆಯಾದ ಪ್ಲಿಪ್ ಕಾರ‍್ಟ್ ನ ‘ಬಿಗ್ ಬಿಲಿಯನ್ ದಿನ’ ದ ಮಾರಾಟ ಬಹಳ ಸುದ್ದಿ ಮಾಡಿತ್ತು. ಹೆಚ್ಚೆಚ್ಚು ಕೊಳ್ಳುಗರನ್ನು ತನ್ನತ್ತ ಸೆಳೆಯುತ್ತಾ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಪ್ಲಿಪ್ ಕಾರ‍್ಟ್ ಈ ಹಮ್ಮುಗೆ ಹಮ್ಮಿಕೊಂಡಿತ್ತು. ಕೊಳ್ಳುಗನಿಗೆ ಕಡಿಮೆ ದರದಲ್ಲಿ ವಸ್ತುಗಳನ್ನು ತನ್ನ ಮಿಂದಾಣದ (website) ಮೂಲಕ ಮಾರಾಟ ಮಾಡುತ್ತಾ, ತಾನು ಅಂದುಕೊಂಡಿದ್ದ ನೂರು ಮಿಲಿಯನ್ ಡಾಲರ್ ( ಸುಮಾರು ಆರು ನೂರು ಕೊಟಿ ರೂಪಾಯಿಗಳು ) ವಹಿವಾಟಿನ ಗುರಿಯನ್ನು ಕೇವಲ 10 ತಾಸಿನಲ್ಲಿ ಮುಟ್ಟಿತು ಎಂದು ತಿಳಿದುಬಂದಿದೆ. ಬಾರತದಲ್ಲಿ ಈಗೀಗ ಇ-ಕಾಮರ‍್ಸ್ ವಲಯದಲ್ಲಿ ಹೆಚ್ಚೆಚ್ಚು ಪೈಪೋಟಿ ಕಂಡುಬರುತ್ತಿದ್ದು, ಇದರಲ್ಲಿ ಹಿಂದುಳಿಯಲು ಬಯಸದ ಇ-ಕಾಮರ‍್ಸ್ ಸಂಸ್ತೆಗಳು ಈಗ ಇಂತದೇ ಹಮ್ಮುಗೆಗಳನ್ನು ಹಾಕಿಕೊಳ್ಳುತ್ತಿವೆ. ಅಮೆಜಾನ್ ಸಂಸ್ತೆಯು ದೀಪಾವಳಿ ಹಬ್ಬಕ್ಕೆ ಕೊಡುಗೆಯಾಗಿ ಅಕ್ಟೋಬರ್ 10 ರಿಂದ 16 ರ ವರೆಗೆ ಹಮ್ಮಿಕೊಂಡಿರುವ ‘ಮಾರಾಟದ ವಾರ’ ಕೊಳ್ಳುಗರನ್ನು ಸೆಳೆಯುತ್ತಿದೆ. ಸಂಸ್ತೆಗಳ ನಡುವಿನ ಇಂತ ಪೈಪೋಟಿಯಿಂದ ಕೊಳ್ಳುಗರಿಗೆ ಹಬ್ಬವೇ ಸೈ!
ಕೊಳ್ಳುಗರಿಗೇನೋ ಬೇರೆ ಬೇರೆ ಸಂಸ್ತೆಗಳು ಅನೇಕ ಕೊಡುಗೆಗಳನ್ನು ನಾ ಮುಂದು-ತಾ ಮುಂದು ಎಂದು ನೀಡುತ್ತಿವೆ. ಇದು ಬಾರತದ ಇ-ಕಾಮರ‍್ಸ್ ವಲಯದಲ್ಲಿನ ಒಟ್ಟಾರೆ ವಹಿವಾಟಿನ ಮೊತ್ತದ ಬಗ್ಗೆ ಕುತೂಹಲ ಮೂಡಿಸುವುದು ಸಹಜ. ಹಾಗೆಯೇ, ಬಾರತದಲ್ಲಿನ ಇ-ಕಾಮರ‍್ಸ್ ವಹಿವಾಟು ಬೇರೆ ಬೇರೆ ನಾಡುಗಳಿಗೆ ಹೋಲಿಸಿದರೆ ಎಶ್ಟಿರಬಹುದು ಎಂಬ ಯೋಚನೆಯೂ ಬರದೇ ಇರದು. ಈ ಕೇಳ್ವಿಗಳಿಗೆ ಉತ್ತರವೆಂಬಂತೆ, ಬಾರತದಲ್ಲಿನ ಇ-ಕಾಮರ‍್ಸ್ ವಹಿವಾಟನ್ನು, ಇ-ಕಾಮರ‍್ಸ್ ಸೇವೆಯನ್ನು ಹೆಚ್ಚಾಗಿ ಬಳಸುವ ನಾಡುಗಳಲ್ಲಿನ ವಹಿವಾಟಿಗೆ ಹೋಲಿಸಿ ಎಕನಾಮಿಕ್ ಟೈಮ್ಸ್ ಸುದ್ದಿಹಾಳೆ ಚಿಕ್ಕದಾದ ವರದಿಯೊಂದನ್ನು ಪ್ರಕಟಿಸಿದೆ. 2013 ರಲ್ಲಿನ ಅಂಕಿ-ಅಂಶಗಳನ್ನು ಬಳಸಿ ಹೊರತಂದಿರುವ ಆ ಚುಟುಕು ವರದಿಯ ಪ್ರಕಾರ ಬಾರತ ಮತ್ತು ಉಳಿದ ನಾಡುಗಳಲ್ಲಿನ ವಹಿವಾಟು ಇಂತಿದೆ.
ಬೇರೆ ಬೇರೆ ನಾಡುಗಳಲ್ಲಿನ ಮಂದಿಯ ಕೊಳ್ಳುವ ಕಸುವು (purchasing power) ಒಂದೇ ರೀತಿ ಇರದಿದ್ದರೂ, ಮಂದಿಯೆಣಿಕೆ (population) ಹೆಚ್ಚಿದ್ದಾಗ ಸ್ವಾಬಾವಿಕವಾಗಿಯೇ ಹೆಚ್ಚು ಕೊಳ್ಳುಗರಿದ್ದು, ಅವರಿಂದ ಹೆಚ್ಚು ವಹಿವಾಟಾಗುವುದೆಂದು ಊಹಿಸಬಹುದು. ಆದರೆ, ಮಂದಿಯೆಣಿಕೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ತಾನ ಪಡೆದಿರುವ ಬಾರತ ಇ-ಕಾಮರ‍್ಸ್ ನ ವಹಿವಾಟಿನಲ್ಲಿ, ತನಗಿಂತ ಕಡಿಮೆ ಮಂದಿಯೆಣಿಕೆ ಹೊಂದಿರುವ ನಾಡುಗಳಿಗಿಂತಲೂ ಹಿಂದಿದೆ ಎಂದು ಮೇಲೆ ಕೊಟ್ಟಿರುವ ಪಟ್ಟಿಯಿಂದ ಗೊತ್ತಾಗುವುದು. ಎತ್ತುಗೆಗೆ, ಬಾರತದ ಮಂದಿಯೆಣಿಕೆಯಲ್ಲಿನ ಹೆಚ್ಚು ಕಮ್ಮಿ ಶೇ 10 ರಶ್ಟಿರುವ ಜಪಾನ್ ನಲ್ಲಿ ಇ-ಕಾಮರ‍್ಸ್ ವಹಿವಾಟು ಎಂಟೂವರೆ ಲಕ್ಶ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಬಾರತಕ್ಕಿಂತ ತುಸು ಹೆಚ್ಚೇ ಮಂದಿಯೆಣಿಕೆ ಹೊಂದಿರುವ ಚೀನಾದಲ್ಲಿನ ವಹಿವಾಟು ಸುಮಾರು ಹನ್ನೊಂದು ಲಕ್ಶ ಹದಿನಾರು ಸಾವಿರ ಕೋಟಿ ರೂ ಎಂದು ಹೇಳಲಾಗುತ್ತದೆ. ಹಾಗಾದರೆ ಬಾರತದಲ್ಲಿ ವಹಿವಾಟು ಕಡಿಮೆ ಯಾಕಿದೆ ಎಂಬ ಕೇಳ್ವಿ ಸಹಜ.
ಅದರ ಹಿಂದೆ ಬೇರೆ ಬೇರೆ ಕಾರಣವಿದ್ದರೂ, ಬಾರತದಲ್ಲಿನ ಇ-ಕಾಮರ‍್ಸ್ ಸಂಸ್ತೆಗಳು, ಬಾರತದಲ್ಲಿನ ಕೊಳ್ಳುಗರನ್ನು ಅವರ ನುಡಿಯಲ್ಲೇ ತಲುಪದೇ, ಅವರನ್ನು ಸೆಳೆಯಲು ಇಂಗ್ಲೀಶ್ ನುಡಿಯ ಮೊರೆ ಹೋಗಿರುವುದೂ ಒಂದು ಮುಕ್ಯವಾದ ಕಾರಣವಾಗಿದೆ. ಅದಕ್ಕೆ ಇಂಬು ಕೊಡುವಂತ ಈ ವಿಶಯವನ್ನು ಗಮನಿಸಿ. ಅಮೆಜಾನ್ ಸಂಸ್ತೆಯು ತನ್ನ ಮಿಂದಾಣವನ್ನು – ಜಪಾನಿನಲ್ಲಿ ಜಪಾನೀ ನುಡಿಯಲ್ಲಿ, ಜರ‍್ಮನಿಯಲ್ಲಿ ಜರ‍್ಮನ್ ನುಡಿಯಲ್ಲಿ, ಚೀನಾದಲ್ಲಿ ಚೈನೀಸ್ ನುಡಿಯಲ್ಲಿ ನೀಡಿದೆ. ಆಯಾ ನಾಡಿನ ಜನರ ನುಡಿಯಲ್ಲೇ ಮಾಹಿತಿ ಮತ್ತು ಸೇವೆಯನ್ನು ನೀಡುವ ಯೋಚನೆ ಮತ್ತು ಯೋಜನೆ, ಹೆಚ್ಚು ಮಂದಿಯನ್ನು ತಲುಪಬಹುದಾಗಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.
ಬಾರತವು ಹಲವಾರು ನುಡಿಯಾಡುವ ಮಂದಿಯ ದೇಶವಾಗಿದ್ದು, ನುಡಿಗಳ ಮೇಲೆಯೇ ಹಲವಾರು ರಾಜ್ಯಗಳನ್ನು ಬಾರತದಲ್ಲಿ ಮಾಡಲಾಗಿದೆ. ಬಾರತದಲ್ಲಿ ಇಂಗ್ಲೀಶ್ ಬಲ್ಲವರ ಎಣಿಕೆ ಹೆಚ್ಚೇನಿಲ್ಲ. ಆದರೂ ಈ ಸಂಸ್ತೆಗಳು ಕೊಳ್ಳುಗರನ್ನು ತಲುಪಲು ಇಂಗ್ಲೀಶನ್ನೇ ಬಳಸುತ್ತಿರುವುದನ್ನು ನೋಡಿದರೆ, ಇಂಗ್ಲೀಶ್ ಬರದವರ ಕಡೆ ದುಡ್ಡಿಲ್ಲ ಅತವಾ ಇಂಗ್ಲೀಶ್ ಬರದವರು ಇಂಟರ‍್ನೆಟ್ ಬಳಸುವುದಿಲ್ಲ ಅಂತ ತಿಳಿದಿದ್ದಾರೇನೋ ಎಂದೆನಿಸುತ್ತದೆ. ವಹಿವಾಟು ಹೆಚ್ಚಿಸಿಕೊಳ್ಳಲು ಹೆಚ್ಚೆಚ್ಚು ಮಂದಿ ಮಾರಾಟದಲ್ಲಿ ಪಾಲ್ಗೊಳ್ಳುವ ಹಾಗೆ ಮಾಡಬೇಕು. ಹಾಗೆ ಮಾಡಬೇಕಾದರೆ ಅವರವರ ನುಡಿಯಲ್ಲೇ ಅತವಾ ಪ್ರಾದೇಶಿಕ ನುಡಿಗಳಲ್ಲೇ ಮಿಂದಾಣ ಕಟ್ಟಿ ಹೆಚ್ಚು ಮಂದಿಯನ್ನು ಸೆಳೆಯುವುದು ಜಾಣತನ. ಇದನ್ನು ಆ ಸಂಸ್ತೆಗಳು ಬೇಗನೆ ತಿಳಿದರೆ ಅವರಿಗೇ ಒಳಿತು!
( ಮಾಹಿತಿ ಸೆಲೆ: epaperbeta.timesofindia.com, en.wikipedia.org, livemint.com, domain-b.com )
( ಚಿತ್ರ ಸೆಲೆ: epaperbeta.timesofindia.com )
ಇತ್ತೀಚಿನ ಅನಿಸಿಕೆಗಳು