ಅನುಕಂಪ ಅತಿಯಾದಾಗ

– ಸಿ.ಪಿ.ನಾಗರಾಜ.


ಒಂದು ದಿನ ನಡು ಹಗಲಿನ ಮೂರು ಗಂಟೆಯ ಸಮಯದಲ್ಲಿ ಮಯ್ಸೂರಿನಿಂದ ಮಂಡ್ಯಕ್ಕೆ ಒಂದು ಸರ‍್ಕಾರಿ ಬಸ್ ವಾಯುವೇಗದಲ್ಲಿ ಬರುತ್ತಿತ್ತು. ಬಸ್ಸಿನೊಳಗಿದ್ದ ಪಯಣಿಗರಲ್ಲಿ ಬಹುತೇಕ ಮಂದಿ ನಿದ್ದೆಯ ಮಂಪರಿಗೆ ಜಾರಿದ್ದರು. ವೇಗವಾಗಿ ಸಾಗುತ್ತಿರುವ ಬಸ್ಸಿನ ಮೊರೆತ ಮತ್ತು ಬರ‍್ರೋ ಎಂದು ಬೀಸುತ್ತಿರುವ ಗಾಳಿಯ ಹೊಡೆತ ಜೋರಾಗಿತ್ತು. ಹಾದಿಯ ನಡುವೆ ಉಂಟಾದ ಯಾವುದೋ ಅಡಚಣೆಯಿಂದಾಗಿ ಚಾಲಕನು ಬಸ್ಸಿಗೆ ಏಕ್ದಂ ಬ್ರೇಕನ್ನು ಹಾಕಿ…ಬಲಕ್ಕೆ ತುಸು ಎಳೆದು…ಮತ್ತೆ ಎಡಕ್ಕೆ ಬಸ್ಸನ್ನು ತರುತ್ತಿದ್ದಂತೆಯೇ…ಬಸ್ಸಿನ ಒಳಗಡೆ ‘ ದಡ್ ‘ ಎಂಬ ಶಬ್ದ ಕೇಳಿ ಬಂತು. ಅದರ ಜತೆಯಲ್ಲಿಯೇ ‘ ಅಯ್ಯೋ ‘ ಎಂಬ ಸಂಕಟದ ದನಿಯೂ ಹೊರಹೊಮ್ಮಿತು.

ಪಯಣಿಗರ ಸೀಟಿನ ಮೇಲುಗಡೆ ಸಣ್ಣಪುಟ್ಟ ಸಾಮಾನುಗಳನ್ನು ಇಡಲು ಮಾಡಿರುವ ಹಂತದಲ್ಲಿ ಇಟ್ಟಿದ್ದ ಸುಮಾರು ಗಾತ್ರದ ಸೂಟ್ಕೇಸ್ ಉರುಳುವಾಗ ಪಯಣಿಗರೊಬ್ಬರ ತಲೆಗೆ ಬಡಿದು ಕೆಳಕ್ಕೆ ಬಿದ್ದಿತ್ತು. ಅವರ ವಯಸ್ಸು ಸುಮಾರು ಅರವತ್ತರ ಆಜುಬಾಜಿನದಾಗಿತ್ತು. ತಲೆಯ ಕೂದಲೆಲ್ಲಾ ಪೂರಾ ಉದುರಿಹೋಗಿದ್ದುದರಿಂದ, ಅವರ ತಲೆಯು ತಾಮ್ರದ ಚೆಂಬಿನಂತೆ ಹೊಳೆಯುತ್ತಿತ್ತು . ಸೂಟ್ಕೇಸಿನ ಪೆಟ್ಟಿನಿಂದಾಗಿ ತಲೆಯ ಮೇಲೆ ದೊಡ್ಡ ಗುಪ್ಪೆಯೊಂದು ಬುರಬುರನೆ ಊದಿಕೊಂಡಿತ್ತು. ಇದ್ದಕ್ಕಿದ್ದಂತೆ ಉಂಟಾದ ಪೆಟ್ಟಿನಿಂದ ಕಂಗೆಟ್ಟಿದ್ದ ಅವರ ಮೊಗದಲ್ಲಿ ಅಪಾರವಾದ ಯಾತನೆ ಕಂಡು ಬರುತ್ತಿತ್ತು.

ಅಕ್ಕಪಕ್ಕದಲ್ಲಿ ಮತ್ತು ಹಿಂದೆಮುಂದೆ ಕುಳಿತಿದ್ದ ಪಯಣಿಗರಿಗೆ ಅವರ ಸ್ತಿತಿಯನ್ನು ಕಂಡು ಬಹಳ ಅನುಕಂಪ ಉಂಟಾಯಿತು. ಈಗ ತಲಾಗಿ ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಮಾತನಾಡಲು ತೊಡಗಿದರು.

“ಇಶ್ಟು ದೊಡ್ಡ ಸೂಟ್ಕೇಸನ್ನು ಅಲ್ಲಿ ಇಟ್ಟಿದ್ದೋರು ಯಾರು ?”

“ಯಾರದ್ರೀ ಇದು…ಈ ಸೂಟ್ಕೇಸ್ ?”

“ಇಶ್ಟು ದೊಡ್ಡದನ್ನು ಕೆಳಗಡೆ ಇಟ್ಕೊಬೇಕು ಅನ್ನೋ ತಿಳುವಳ್ಕೆ ಇರಬೇಡ್ವೇನ್ರಿ ?”

ಈಗ ಬಸ್ಸು ಮಂದಗತಿಯಲ್ಲಿ ಸಾಗುತ್ತಿತ್ತು. ಕೆಳಗೆ ಬಿದ್ದಿದ್ದ ಸೂಟ್ಕೇಸ್ ಹೇಳುವವರು ಕೇಳುವವರು ಇಲ್ಲದೆ ತಬ್ಬಲಿಯಾಗಿತ್ತು. ಪಯಣಿಗರಲ್ಲಿ ಕೆಲವರ ಅನುಕಂಪ ಮತ್ತು ಕೋಪದ ಪ್ರಮಾಣ ಗಳಿಗೆ ಗಳಿಗೆಗೂ ಏರುತ್ತಿತ್ತು.

“ಪಾಪ…ಎಂತಾ ಏಟಾಯ್ತು ? … ಅಲ್ನೋಡಿ…ಅವರು ಇನ್ನೂ ಹೆಂಗೆ ನೋವು ತಿಂತಾವರೆ ?”

“ಇಶ್ಟೆಲ್ಲಾ ಆದ್ರೂ…ಆ ಸೂಟ್ಕೇಸ್ ನಂದು ಅಂತ ಯಾರೂ ಹೇಳ್ತ ಇಲ್ವಲ್ಲ !”

“ಯಾವ ಬೋಳಿಮಗಂದೋ ಕಾಣನಲ್ಲ…ಅವನ್ತಲೆ ಮ್ಯಾಲೆ ಬಿದ್ದಿದ್ರೆ…ಆಗ ಗೊತ್ತಾಗೂದು ಎಂತಾ ನೋವಾಯ್ತದೆ ಅಂತ ಆ ನನ್ ಮಗನಿಗೆ”

ಬಯ್ಗುಳಗಳ ಚಾಟಿ ಏಟುಗಳು ಬೀಳಲು ತೊಡಗಿದವು . ಸೂಟ್ಕೇಸ್ ತನ್ನದೆಂದು ಯಾರೊಬ್ಬರೂ ಮುಂದೆ ಬರಲಿಲ್ಲವಾದುದರಿಂದ, ಪಯಣಿಗರಲ್ಲಿ ಕೆಲವರು ಮತ್ತಶ್ಟು ಕೆರಳಿದರು. ಆ ಸೂಟ್ಕೇಸ್ ಅನ್ನು ನೋಡಿದಂತೆಲ್ಲಾ…ಅವರ ಕೋಪ ಇಮ್ಮಡಿಗೊಳ್ಳತೊಡಗಿತು.

“ಯಾವೋನು ನಂದು ಅಂತ ಹೇಳ್ತಾಯಿಲ್ಲ…ಅದನ್ನ ಎತ್ತಿ ಬಸ್ಸಿನಿಂದ ಆಚೆಗೆ ಎಸೀರಿ ”

“ಎತ್ತಿ ಬಿಸಾಕ್ರಿ ಆಚೆಗೆ”

“ಏನ್ ನೋಡ್ತಾ ಇದೀರಿ…ತೂದ್ ಬಿಸಾಕ್ರಿ ಆಚೇಗೆ” ಎಂಬ ಮಾತಿನ ಕಿಡಿಗಳು ಹೆಚ್ಚಾಗುತ್ತಿದ್ದಂತೆಯೇ, ಅದನ್ನು ಎತ್ತಿ ಹೊರಕ್ಕೆ ಎಸೆಯಲೆಂದು ಒಬ್ಬ ಎದ್ದು ಬಂದು ಸೂಟ್ಕೇಸಿನ ಹಿಡಿಗೆ ಕಯ್ ಹಾಕಿದ. ಪೆಟ್ಟು ತಿಂದು ಇದುವರೆಗೂ ಮೂಕರಾಗಿ ನೋವನ್ನು ತಿನ್ನುತ್ತಿದ್ದ ಬೋಳುತಲೆಯ ವ್ಯಕ್ತಿಯು…ಸೂಟ್ಕೇಸನ್ನು ಬಿಗಿಯಾಗಿ ಹಿಡಿದುಕೊಂಡು… ಮೆಲ್ಲನೆಯ ದನಿಯಲ್ಲಿ ಹೇಳಿದರು.

“ಇದು ನಂದೆ ಕಣ್ರಪ್ಪ!”.

(ಚಿತ್ರಸೆಲೆ: cathrynjakobsonramin.com )

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. ಎಂ.ಎಸ್.ರವೀಗೌಡರ ಮಾತ್ಗಾರ ಮಲ್ಲಣ್ಣ ನೆನೆಪಾಯ್ತು.

ಅನಿಸಿಕೆ ಬರೆಯಿರಿ: