ಯಕ್ಶಗಾನ – ಕರುನಾಡ ಸಿರಿಕಲೆ

ಹರ‍್ಶಿತ್ ಮಂಜುನಾತ್.

bayalata
ಕರ‍್ನಾಟಕ! ಮೊದಲಿನಿಂದಲೂ ನಮ್ಮದೇ ಆದ ಹೆಗ್ಗಳಿಕೆಯ ನಡೆನುಡಿಯ ಹಲತನಕ್ಕೆ ಹೆಸರು. ಅದರಲ್ಲೂ ಕರ‍್ನಾಟಕದ ಕರಾವಳಿಯ ಬಾಗ ಬಹಳಶ್ಟು ಬಗೆಯ ಸಾಂಪ್ರದಾಯಿಕ ನಡೆನುಡಿಯ ಮುಂದಾಳ್ತನವನ್ನು ವಹಿಸಿಕೊಂಡು ಮುಂದೆ ಸಾಗುತ್ತಿದೆ. ಕಂಬಳ, ನಾಗಮಂಡಲ, ಕೋಲ, ಬೂತಾರಾದನೆ ಹೀಗೆ ಇವುಗಳ ಜೊತೆಗೆ ಕನ್ನಡಿಗರ ಗಂಡುಕಲೆ ಎಂದು ಕರೆಸಿಕೊಳ್ಳುವ ‘ಯಕ್ಶಗಾನ’ ಇಲ್ಲವೇ ‘ಬಯಲಾಟ’ ಕೂಡ ನಮ್ಮ ನಡೆನುಡಿಯ ಬಾಗವಾಗಿದೆ. ಬಯಲಾಟ ಎಂಬುದು ಯಕ್ಶಗಾನದ ಮೂಲ ಹೆಸರು.

ಇಂದು ಬಯಲಾಟವೂ ಕರ‍್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಕಲೆಗಳ ಬಗೆಗಳಲ್ಲಿ ಒಂದು. ಈಗಾಗಲೇ ಸಾಕಶ್ಟು ಹೊತ್ತಗೆಗಳಿಗೆ ಮತ್ತು ಅರಕೆಯ ಬರಹಗಳಿಗೆ ಬರವಣಿಗೆಯ ವಿಶಯವಾಗಿ, ಕಲೆಯನ್ನು ಆರಾದಿಸುವವರಿಗೆ ಮುಕ್ಯ ನೆಲೆಯಾಗಿ, ನಂಬಿ ಬಂದ ಕಲಾವಿದರಿಗೆ ತುತ್ತು ಅನ್ನದ ದಾರಿಯಾಗಿ, ಕನ್ನಡಿಗರ ಹೆಮ್ಮೆಯಾಗಿ ನಮ್ಮ ಮುಂದೆ ನಿಂತಿದೆ. ಅಂತಹ ಒಂದು ವಿಶಿಶ್ಟ ನಡೆನುಡಿಯ ಹುಟ್ಟಿನ ಮೂಲ, ಪರಂಪರೆ, ನಲ್ಬರಹ, ಹಿನ್ನಡವಳಿ ಮತ್ತು ಬೆಳೆದು ಬಂದ ದಾರಿಯ ಕಡೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನವೇ ಈ ಬರಹ.

ಹಲವು ಬಗೆಗಳನ್ನು ಹೊಂದಿರುವ ಬಯಲಾಟದ ಎಲ್ಲಾ ವಿಶಯಗಳನ್ನು ಒಟ್ಟಾಗಿ ತಿಳಿಸಿಕೊಡುವ ಹೊತ್ತಗೆಗಳು ಇನ್ನೂ ಬಂದಿಲ್ಲ. ಈವರೆಗೆ ಬಂದಿರುವ ಬಹಳಶ್ಟು ಹೊತ್ತಗೆಗಳು ಮತ್ತು ಬರಹಗಳು ಬಯಲಾಟದ ಕಲೆಯ ಕೆಲವು ವಿಚಾರಗಳ ಕುರಿತು ನಡೆಸಿದ ಕಲಿಕೆಯ ಬರಹಗಳು ಮಾತ್ರ. ಇವುಗಳಲ್ಲಿ ಹೆಚ್ಚಿನ ಬರಹಗಳು ಶಿವರಾಮ ಕಾರಂತರ ‘ಯಕ್ಶಗಾನ ಬಯಲಾಟ’ ಕ್ರುತಿಯಿಂದ ಪ್ರಬಾವಿತವಾದದ್ದು. ಈ ಬರಹಗಳಲ್ಲಿಯೂ ಕಾರಂತರ ಬರಹದ ಸಾಕಶ್ಟು ವಿಚಾರಗಳನ್ನು ಆರಿಸಿಕೊಳ್ಳಲಾಗಿದೆ. ಒಂದರ‍್ತದಲ್ಲಿ ಹೇಳುವುದಾದರೆ ಶಿವರಾಮ ಕಾರಂತರ ‘ಯಕ್ಶಗಾನ ಬಯಲಾಟ’ ಹೊತ್ತಗೆಯೇ ಬಯಲಾಟ ಕುರಿತ ಬರಹಗಳ ತಳಹದಿ.

ಸುಮಾರು ಹದಿನಾರನೇ ನೂರೇಡಿನಿಂದ ಆಟ, ದಶಾವತಾರ, ಬಯಲಾಟ ಎಂದು ಹಲವು ಹೆಸರುಗಳಿಂದ ಹೆಸರುವಾಸಿಯಾಗಿರುವ ಕನ್ನಡದ ವಿಶಿಶ್ಟ ನಡೆನುಡಿಯ ಈಗಿನ ಬಳಕೆಯ ಹೆಸರು ಬಯಲಾಟ ಇಲ್ಲವೇ ಯಕ್ಶಗಾನ. ಬಯಲಾಟದ ಬೇರೆ ಬೇರೆ ಪ್ರಾದೇಶಿಕ ರೂಪಗಳು ಮತ್ತು ಬಯಲಾಟದ ಮುಕ್ಯ ಬಗೆಗಳು ಬೆಳೆಸಿದ ನಲ್ಬರಹದ ಬಗೆಗೆ ‘ಕನ್ನಡ ಬಯಲಾಟ ಪ್ರಸಂಗಗಳು’ ಎಂದು ಹೆಸರು. ಕುಣಿತ, ಹಾಡುಗಾರಿಕೆ, ಮಾತುಗಾರಿಕೆ, ಉಡುಗೆ-ತೊಡುಗೆಗಳನ್ನೊಳಗೊಂಡು ತನ್ನದೇ ನಡೆನುಡಿಯಾಗಿರುವ ಬಯಲಾಟವು, ಕರ‍್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಶಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಬಾಗಗಳಲ್ಲಿ, ಮಲೆನಾಡ ಬಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಹರಡಿಕೊಂಡಿದೆ. ಈ ಸಾಂಪ್ರದಾಯಿಕ ನಡೆನುಡಿ, ಎಲ್ಲರ ಮನೆಮಾತಾಗಿ ಕರ‍್ನಾಟಕದ ಸಾಂಪ್ರದಾಯಿಕ ಕಲಾ ಬಗೆಗಳಲ್ಲಿ ಅರಿದಾದುದು ಎಂದೆನಿಸಿಕೊಂಡಿದೆ.

ನಮ್ಮ ತೆಂಕಣ ಇಂಡಿಯಾದ ರಂಗಬೂಮಿಯನ್ನೊಮ್ಮೆ ಗಮನಿಸಿದಾಗ ಕೂಚುಪುಡಿ, ನೆಟ್ವಮೇಳ, ಬಾಗವತ ಮೇಳ, ಬಯಲಾಟ ಮತ್ತು ಕತಕ್ಕಳಿ ಮುಕ್ಯವಾಗಿ ಕಾಣಸಿಗುತ್ತವೆ. ಇವುಗಳಲ್ಲಿ ಕಾಣುವುದು ಹೆಚ್ಚಾಗಿ ಒಂದೇ ರೂಪ ಅಂದರೆ ಹಾಡು ಹೇಳುವುದು ಕುಣಿಯುವುದು ಮತ್ತು ಅದರ ತಿರುಳು ವಿವರಿಸುವುದು. ಒಟ್ಟಾರೆಯಾಗಿ ಹಾಡು, ಕುಣಿತ ಮತ್ತು ತಿರುಳು ವಿವರಣೆಯ ಮೂಲಕ ಕತೆಯನ್ನು ತೋರಿಸುವ ಬಗೆಯೇ ಯಕ್ಶಗಾನ ಇಲ್ಲವೇ ಬಯಲಾಟ.

ಸುಮಾರು ಹದಿನೈದನೇ ನೋರೇಡಿನಲ್ಲಿ ಉತ್ತರ ಕನ್ನಡದಿಂದ ಆದಿಲ್‍ ಶಾಹಿಯ ಅರಮನಗೆ ಆಟದ ಮೇಳಗಳು ಹೋಗಿದ್ದವು ಎಂದು ಹೇಳಲಾಗುತ್ತದೆ. ರೂಡಿಯಲ್ಲಿಯೂ ಕೆಲವು ಬಾಗವತರನ್ನು 1500ರಲ್ಲಿ ಸನ್ಮಾನಿಸಿದ ದಾಕಲೆಗಳು ಸಿಕ್ಕಿವೆ. ಇದನ್ನೆಲ್ಲಾ ನೋಡಿದಾಗ ಸುಮಾರು ಹದಿನಯ್ದನೇ ನೂರೇಡಿನಲ್ಲಿ ಬಯಲಾಟದ ಬಗೆಯಿತ್ತು ಎಂದು ಹೇಳಬಹುದು. ಒಟ್ಟಾರೆಯಾಗಿ ಸುಮಾರು ಅಯ್ದುನೂರು ವರುಶಗಳ ಬರೆದಿಟ್ಟ ಹಿನ್ನಡವಳಿ ಮತ್ತು 800 ವರುಶಗಳ ಕುರುಹಿನ ಹಳಮೆ ಬಯಲಾಟಕ್ಕಿದೆ.

ಇಂಡಿಯಾದ ಬಹಳಶ್ಟು ಕಲೆಗಳು ದಾರ‍್ಮಿಕ ಹಿನ್ನಲೆಯಿಂದ ಹುಟ್ಟಿಕೊಂಡಂತಹವು. ಅಲ್ಲಲ್ಲಿ ಚೌಕಟ್ಟನ್ನು ಮೀರಿ ಮನರಂಜನೆ, ಕುತೂಹಲ ಇಲ್ಲವೇ ಆಸಕ್ತಿಯ ಬಾಗವಾಗಿರಬಹುದು. ಆದರೆ ಇದು ಇಂದಿನ ವರೆಗೂ ದಾರ‍್ಮಿಕ ಹಿನ್ನಲೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಬಯಲಾಟವನ್ನೇ ಹೋಲುವ ಬೇರೆ ಕಲೆಗಳು ಇದಕ್ಕೂ ಮೊದಲು ಇತ್ತು, ಮತ್ತು ಅವುಗಳಿಂದ ಪ್ರಬಾವಿತವಾಗಿ ಬಯಲಾಟ ಹುಟ್ಟಿರಬಹುದು ಎಂಬ ವಾದವು ನಮ್ಮ ನಡುವಿದೆ. ಹಾಗೆಯೇ ಕ್ರಿ.ಶ. 1210 ರಲ್ಲಿ ಸಾಣಗದೇವನ “ಸಂಗೀತ ರತ್ನಾಕರ”ದಲ್ಲಿ ಬಯಲಾಟವನ್ನು ಜಕ್ಕ ಎಂದು ಬರೆದಿದ್ದು ಮುಂದೆ ಅದು ಯಕ್ಕಲಗಾನ ಎಂದು “ಕರೆಯಲ್ಪಟ್ಟಿತು” ಎಂಬ ಅಬಿಪ್ರಾಯವೂ ಇದೆ.

1700 ಬಳಿಕ ಬಯಲಾಟದ ಪ್ರಸಂಗಗಳು ಹೇರಳವಾಗಿ ಬೆಳೆಯತೊಡಗಿದವು. ಹರಿಶ್ಚಂದ್ರ, ನಳ ಚರಿತ್ರೆ, ರುಕ್ಮಿಣಿ ಕಲ್ಯಾಣದಂತಹ ಪ್ರಸಂಗಗಳು ಆ ಹೊತ್ತಿನಲ್ಲಿಯೇ ಕಟ್ಟಿದ್ದು ಎಂಬ ಮಾತಿದೆ. 19ನೇ ನೂರೇಡಿನ ಕೊನೆ ಮತ್ತು 20ನೇ ನೂರೇಡಿನ ಮೊದಲಿನಲ್ಲಿ ಬಹಳಶ್ಟು ಪ್ರಸಂಗಗಳು ಕಟ್ಟಲ್ಪಟ್ಟವು. ಈಗ ಸುಮಾರು 2500 ಪ್ರಸಂಗಗಳು ಬಯಲಾಟದ ಬಗೆಯಲ್ಲಿವೆ. ಅಲ್ಲದೇ ಈ ಪ್ರಸಂಗಗಳಲ್ಲಿ ಸುಮಾರು 5 ರಿಂದ 6 ಲಕ್ಶ ಹಾಡುಗಳನ್ನು ಕಟ್ಟಲಾಗಿದೆ. ವಿಶೇಶವೆಂದರೆ, ಬಯಲಾಟದ ಬಗೆಯನ್ನು ಹೊರತುಪಡಿಸಿದರೆ ಕನ್ನಡದ ಯಾವುದೇ ನಲ್ಬರಹ ಬಗೆಯಲ್ಲಿ ಹಾಡುಗಳನ್ನು ಕಟ್ಟಿಲ್ಲ.

ಪಾತ್ರದಾರಿಗಳು

YakshaManjushaಬಯಲಾಟದ ಪ್ರಸಂಗದಲ್ಲಿ ಬರುವ ಬೇರೆ ಬೇರೆ ಸನ್ನಿವೇಶಗಳನ್ನು ಅಬಿನಯದ ಮೂಲಕ ಆಡಿ ತೋರಿಸುವವರೇ ಪಾತ್ರದಾರಿಗಳು. ನಾಯಕ, ನಾಯಕಿ, ಕಳನಾಯಕ, ಹಾಸ್ಯ ಕಲಾವಿದನ ಪಾತ್ರ ಸೇರಿದಂತೆ ಆಯಾ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಡು ಮತ್ತು ಕುಣಿತದ ಮೂಲಕ ಅಬಿನಯಿಸಿ ಕತೆಯನ್ನು ವಿವರವಾಗಿ ನೋಡುಗರಿಗೆ ಮುಟ್ಟಿಸುವುದು ಪಾತ್ರದಾರಿಗಳ ಮುಕ್ಯ ಕೆಲಸ. ಆದರೆ ಬಹಳಶ್ಟು ಮಂದಿ ಬಯಲಾಟವನ್ನೇ ತಮ್ಮ ಬದುಕಿನ ಕಸುಬನ್ನಾಗಿಸಿರುವುದೂ ಉಂಟು. ನಮಗೆ ತಿಳಿದಿರುವಂತೆ ಸುಮಾರು 3 ಸಾವಿರ ಹವ್ಯಾಸಿ ಕಲಾವಿದರಿದ್ದಾರೆ. ಕೆರೆಮನೆ ಶಂಬು ಹೆಗಡೆ, ಶ್ರೀದರ ಬಂಡಾರಿ, ಕುಂಬ್ಳೆ ಸುಂದರ ರಾವ್, ಶೀನ ಬಂಡಾರಿ, ಕುಂಬ್ಳೆ ಶ್ರೀದರ್ ರಾವ್ ಮತ್ತು ಮಹಾಬಲರಾಯ್ ಇವರೆಲ್ಲ ಬಯಲಾಟದಲ್ಲಿ ಹೆಸರು ಮಾಡಿದ ಕೆಲವು ಕಲಾವಿದರು.

ಉಡುಗೆ ತೊಡುಗೆ

bayalata_makeupಒಂದರ‍್ತದಲ್ಲಿ ಪಾತ್ರದಾರಿಯ ನಟನೆಗೆ ಮೆರುಗು ತುಂಬುವುದೇ ಇದರ ಉಡುಗೆ ತೊಡುಗೆ. ಆಯಾ ಪಾತ್ರಗಳಿಗೆ ತಕ್ಕಂತೆ ಪಾತ್ರದಾರಿಯ ಉಡುಪನ್ನು ತೀರ‍್ಮಾನಿಸಲಾಗುತ್ತದೆ. ಹೆಚ್ಚಾಗಿ ನಾಯಕ ಮತ್ತು ಕಳನಾಯಕನ ಕೀರಿಟವು ಸಾಮಾನ್ಯ ಪಾತ್ರದಾರಿಯ ಕೀರಿಟಕ್ಕಿಂತ ದೊಡ್ಡದಾಗಿರುತ್ತದೆ. ಹಾಗೆಯೇ ಹೆಣ್ಣಿನ ಪಾತ್ರದಾರಿಯ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಆದರೆ ಇವುಗಳಲ್ಲಿ ಬಹಳಶ್ಟು ಬೇರ‍್ಮೆ ಕಾಣುವುದು ತಿಟ್ಟುಗಳ ವಿಚಾರ ಬಂದಾಗ, ಏಕೆಂದರೆ ತೆಂಕುತಿಟ್ಟುಗಳ ಉಡುಪುಗಳು ಬಡಗು ತಿಟ್ಟುಗಳ ಉಡುಪಿಗಿಂತ ತೀರಾ ಬೇರೆಯದಾಗಿರುತ್ತದೆ (ತಿಟ್ಟುಗಳ ಕುರಿತು ಮುಂದಿನ ಬರಹಗಳಲ್ಲಿ ತಿಳಿಯೋಣ).

ಉಡುಪಿನ ಬಳಕೆಯನ್ನು ಬಯಲಾಟದ ಕಲಾವಿದರು ಬೇರೆ ಬೇರೆ ಬಗೆಯಲ್ಲಿ ವಿವರಿಸಿದ್ದಾರೆ. ಕೆಲವರ ಪ್ರಕಾರ ಉಡುಪುಗಳು ಆಯಾ ಪ್ರಾದೇಶಿಕ ರಾಜರು ಆತವಾ ಮಹನೀಯರಿಂದ ಪ್ರಬಾವಿತಗೊಂಡು ಅವರಂತೆಯೇ ಮುಂದುವರಿಸಿರಬಹುದು. ಕೆಲವು ಉಡುಪುಗಳು ತಿಟ್ಟುಗಳಿಂದ ಪ್ರಬಾವಿತಗೊಂಡರೆ ಮತ್ತೆ ಕೆಲವು ಕಲ್ಪನೆಗಳಿಂದ ಕಟ್ಟಿದ ಉಡುಪಿನ ಕಲೆಗಳು.

ಬಾಗವತಿಕೆ

ಬಾಗವತಿಕೆಗೆ ಬಾಗವಂತಿಗೆ, ಹಾಡುಗಾರಿಕೆ ಎಂಬ ಬೇರೆ ಬೇರೆ ಹೆಸರುಗಳಿಗೆ ಇವೆ. ಈ ಹಾಡುಗಾರಿಕೆಯು ಬಯಲಾಟದ ಉಸಿರಿದ್ದಂತೆ ಇಲ್ಲಿ ಪಾತ್ರದಾರಿಗಳು ಕತಾಪ್ರಸಂಗವನ್ನು ಕುಣಿದು, ನಟಿಸಿ ತೋರಿಸುವ ಮೊದಲು ಆ ಸನ್ನಿವೇಶವನ್ನು ಹಾಡುಗಾರರು ಹಾಡುವಂತಹ ಕ್ರಮವಿದೆ, ಇದನ್ನೇ ಹಾಡುಗಾರಿಕೆ ಎನ್ನುವುದು. ಪ್ರಸಂಗದ ದಾರಿತೋರುಕರು ಎಂದು ಆಯಾ ಪ್ರಸಂಗದ ಹಾಡುಗಾರರನ್ನು ಕರೆಯುತ್ತಾರೆ. ಹಾಡುಗಾರರು ಸನ್ನಿವೇಶವನ್ನು ಹಾಡುವ ಹೊತ್ತಲ್ಲಿ ಪಾತ್ರದಾರಿಯು ಕುಣಿತದ ಮೂಲಕ ಅಬಿನಯಿಸುತ್ತಾನೆ. ಅಲ್ಲದೇ ಇಲ್ಲಿ ಹಾಡಿಗೆ ತಕ್ಕಂತೆ ಬಾವನೆಗಳನ್ನು ಮುಕದಲ್ಲಿ ಮೂಡಿಸುವುದು ಅಗತ್ಯವಾಗಿರುತ್ತದೆ. ಬಯಲಾಟ ನಡೆಯುವ ಮೇಲೆ ಹೇಳಿದ ಜಿಲ್ಲೆಗಳಲ್ಲಿ ಸುಮಾರು 1000 ಮಂದಿ ಹಿಮ್ಮೇಳದ ಕಲಾವಿದರಿರಬಹುದು ಎಂಬ ಒಂದು ಲೆಕ್ಕಚಾರವೂ ಇದೆ. ಅವರಲ್ಲಿ ಸುಮಾರು 50-60 ಹೆಸರುವಾಸಿ ಹಾಡುಗಾರರಿದ್ದಾರೆ.

ಹಿಮ್ಮೇಳ

chende maddale talaಹಿಮ್ಮೇಳವೆಂದರೆ ಚಂಡೆ, ಮದ್ದಳೆ, ಜಾಗಟೆ, ತಾಳ ಮುಂತಾದ ಸಂಗೀತದ ವಾದ್ಯಗಳನ್ನು ಬಳಸಿಕೊಂಡು ಹಾಡುಗಾರಿಕೆ, ಕುಣಿತ ಮತ್ತು ಮಾತುಗಾರಿಕೆಗೆ ಸರಿಯಾಗಿ ಇನಿತವನ್ನು ನೀಡುವುದು. ಹಾಡುಗಾರಿಕೆಯನ್ನು ಬಳಸಿಕೊಳ್ಳುವ ಯಾವುದೇ ಒಂದು ಕಲೆ ಪರಿಣಾಮಕಾರಿಯಾಗಿ ಮೂಡಿಬರಬೇಕಾದರೆ ಅಲ್ಲಿ ಸಂಗೀತ ವಾದ್ಯಗಳ ಬಳಕೆ ಬೇಕೆಬೇಕು, ಇದರಿಂದ ಬಯಲಾಟವು ಹೊರತಾಗಿಲ್ಲ. ಹಾಗಾಗಿ ಬಯಲಾಟದಲ್ಲಿ ಹಾಡು ಕುಣಿತದಶ್ಟೇ ಹಿಮ್ಮೇಳವೂ ಅರಿದಾದುದು.

ಮೇಲೆ ಹೇಳಿದ ವಿವರಗಳು ಬಯಲಾಟದ ಎಲ್ಲಾ ಬಗೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ಅಂಶಗಳು. ಇಡೀ ಬಯಲಾಟದಲ್ಲಿ ಮುಕ್ಯವಾಗಿ ಎರೆಡು ಬಗೆಗಳಿವೆ. ಈ ಎರೆಡು ಬಗೆಗಳ ನಡುವೆ ಹಲವಾರು ಬೇರ‍್ಮೆಗಳಿವೆ. ಹಾಗೆಯೇ ಮೊದಲೇ ಹೇಳಿದಂತೆ ಕನ್ನಡಿಗರ ಗಂಡು ಕಲೆ ಅನಿಸಿಕೊಳ್ಳುವುದಕ್ಕೂ ಮೊದಲು ಬಯಲಾಟದ ಹುಟ್ಟು ಹರಿವಿನಲ್ಲಿ ಕೆಲವು ಗೊಂದಲಗಳಿವೆ. ಹಾಗದರೆ ಈ ಬಯಲಾಟ, ಕರ‍್ನಾಟಕಕ್ಕೂ ಮೊದಲು ಎಲ್ಲಿ ಹುಟ್ಟಿಕೊಂಡಿತ್ತು? ಕರ‍್ನಾಟಕದ ಕಡೆಗೆ ಎಲ್ಲಿಂದ ಮತ್ತು ಹೇಗೆ ಹರಿಯಿತು? ಅವುಗಳ ಬಗೆಗಳೇನು? ಹೀಗೆ ಹಲವಾರು ವಿಶಯಗಳನ್ನು ಮುಂದಿನ ಬರಹದಲ್ಲಿ ಅರಿಯೋಣ.

(ಚಿತ್ರ ಸೆಲೆ: traveltalkindia, nripulse.com, dreamcolors.in, yakshadhwani)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: