ಕನ್ನಡಿಗರ ಹೆಮ್ಮೆಯ ಹಲ್ಮಿಡಿ ಕಲ್ಬರಹ

– ಕಿರಣ್ ಮಲೆನಾಡು.
ಕಲ್ಬರಹಗಳ ಬಗ್ಗೆ ನಾವು ಕನ್ನಡಿಗರು ಹೆಮ್ಮೆಪಡುವ ಸಂಗತಿ ಏನೆಂದರೆ, ಇಂಡಿಯಾದಲ್ಲಿ ಈವರೆಗೆ ಒಟ್ಟು ಒಂದು ಲಕ್ಶಕ್ಕೂ ಹೆಚ್ಚು ಕಲ್ಬರಹಗಳು(Inscriptions) ಸಿಕ್ಕಿವೆ, ಅವುಗಳಲ್ಲಿ ನೂರಕ್ಕೆ 30ರಶ್ಟು ಬಾಗ ಕನ್ನಡದಲ್ಲಿವೆ! ಇವುಗಳಲ್ಲಿ ‘ಹಲ್ಮಿಡಿ ಕಲ್ಬರಹ‘ವು ಒಂದು. ‘ಹಲ್ಮಿಡಿ ಕಲ್ಬರಹ’ದ ಬಗ್ಗೆ ಆಗಾಗ್ಗೆ ಕೇಳುತ್ತಲಿರುತ್ತೇವೆ ಹಾಗೆಯೇ ಇದು ಕನ್ನಡದ ಮೊಟ್ಟಮೊದಲ ಕಲ್ಬರಹವೆಂದಶ್ಟೆ ಗೊತ್ತು. ಅದರಿಂದ ಮುಂದುವರಿದು ‘ಹಲ್ಮಿಡಿ ಕಲ್ಬರಹ’ದ ಹಿನ್ನೆಲೆ ಮತ್ತು ಇದರ ಹಿರಿಮೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕನ್ನಡದ ಹಳಮೆಯರಿಮೆಯಲ್ಲಿ ತಿಳಿದುಬಂದಂತೆ ಈ ‘ಹಲ್ಮಿಡಿ ಕಲ್ಬರಹ’ವು ಕನ್ನಡದ ಮೊಟ್ಟಮೊದಲ ಕಲ್ಬರಹವಾಗಿದೆ. ಈ ಕದಂಬರ ಕಲ್ಬರಹವು ಕ್ರಿ.ಶ. 450ರ ಹೊತ್ತಿಗೆ ಸೇರಿದ್ದಾಗಿದೆ. ಕಲ್ಬರಹದಲ್ಲಿ ದೊರೆತಿರುವ ಒಳ ತಿರುಳುಗಳ ಮೇಲೆ ಈ ಕಲ್ಬರಹದ ಹೊತ್ತನ್ನು ಹಳಮೆಯರಿಗರು ಗುರುತಿಸಿದ್ದಾರೆ.

ಹಲ್ಮಿಡಿ ಕಲ್ಬರಹ ಎಲ್ಲಿದೆ?
‘ಹಲ್ಮಿಡಿ’ ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ 13 ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯಲ್ಲಿ ದಾರಿತೋರುಕ ಹಲಗೆ ಕಾಣುತ್ತದೆ, ಅಲ್ಲಿಂದ ಒಳಗೆ 6 ಕಿ.ಮೀ. ತೆರಳಿದರೆ ‘ಹಲ್ಮಿಡಿಯ ಕಲ್ಬರಹ’ದ ಊರನ್ನು ತಲುಪಬಹುದು. ಕದಂಬರ ಈ ಕಲ್ಬರಹವು ‘ಹಲ್ಮಿಡಿ’ ಎಂಬ ಈ ಊರಿನಲ್ಲಿ ದೊರೆತದ್ದರಿಂದ ಇದನ್ನು ‘ಹಲ್ಮಿಡಿ ಕಲ್ಬರಹ’ವೆಂದು ಹಳಮೆಯರಿಗರು ಹೆಸರಿಟ್ಟಿದ್ದಾರೆ. ಈಗ ಕಲ್ಬರಹವನ್ನು ಬೆಂಗಳೂರಿನ ರಾಜ್ಯ ಪಳೆಯುಳಿಕೆ ಕಾಪುಮನೆಯಲ್ಲಿ ಇಡಲಾಗಿದೆ. ಈಗ ಈ ಊರಿನಲ್ಲಿ ಹಳೆ ಕಲ್ಬರಹದ ಎರಕ ಹೊಯ್ದ (Molded) ಪಡಿಯಚ್ಚನ್ನಿಡಲಾಗಿದೆ.

ಈ ಕಲ್ಬರಹ ದೊರೆತದ್ದು ಇದೇ ಊರಿನ ವೀರಬದ್ರೇಶ್ವರ ದೇಗುಲದ ಆವರಣದಲ್ಲಾದ್ದರಿಂದ ಈ ದೇಗುಲದ ಪಕ್ಕದಲ್ಲಿ ಜಿಲ್ಲಾ ಸಾಹಿತ್ಯ ಪರಿಶತ್ತು ಮತ್ತು ಹಲವು ಒಕ್ಕೂಟಗಳ ನೆರವಿನಿಂದ ಒಂದು ನೆನೆಗಲ್ಲನ್ನು ಕಟ್ಟಿಸಿದ್ದಾರೆ. ಈಗಿನ ‘ಹಲ್ಮಿಡಿ’ ಊರಿಗೆ ಮೊದಲು ‘ಪಲ್ಮಿಡಿ’ ಎಂಬ ಹೆಸರು ಇತ್ತೆಂದು ಈ ಕಲ್ಬರಹದಿಂದ ತಿಳಿಯಬಹುದಾಗಿದೆ. ಈ ಕಲ್ಬರಹದ ತಿರುಳನ್ನು ಹೊಸಗನ್ನಡ ನುಡಿಯಲ್ಲಿ ಕೆತ್ತಿಸಿ ಪಳೆಯುಳಿಕೆಯನ್ನು ಕಾಪುಮನೆಯಲ್ಲಿ ಕಾಪಾಡಲಾಗಿದೆ.

ಹಲ್ಮಿಡಿ ಕಲ್ಬರಹ ಮತ್ತು ಕಲ್ಬರಹದ ಪಡಿಯಚ್ಚು

ಹಲ್ಮಿಡಿ ಕಲ್ಬರಹ ಮತ್ತು ಕಲ್ಬರಹದ ಪಡಿಯಚ್ಚು

ಕನ್ನಡದ ಕದಂಬ ಲಿಪಿ ಮತ್ತು ಕಲ್ಬರಹ:
ತಿಟ್ಟದಲ್ಲಿ ಕಾಣುವ ಈ ಕನ್ನಡ ಲಿಪಿಯನ್ನು ಕದಂಬರ ಕಾಲದ ಕನ್ನಡ ಲಿಪಿಯೆಂದು ಹೇಳಲಾಗಿದೆ. ಕಲ್ಬರಹದಲ್ಲಿ ಒಟ್ಟು ಹದಿನೈದು ಸಾಲುಗಳಿವೆ. ಹಿನ್ನಡವಳಿಯರಿಗರು ಈ ಹಳೆಗನ್ನಡ ಲಿಪಿಗೆ ‘ಕದಂಬ ಲಿಪಿ‘(Kadamba Inscription) ಎಂದು ಹೆಸರನ್ನಿಟ್ಟಿದ್ದಾರೆ. ಈ ಕದಂಬ ಲಿಪಿಯು ನಡುಗನ್ನಡ ಮತ್ತು ಹೊಸಗನ್ನಡ ಲಿಪಿಯ ತಳಹದಿ ಎನ್ನಬಹುದು. ಅದೇ ರೀತಿಯಲ್ಲಿ ಕದಂಬ ಲಿಪಿಯಿಂದ ತೆಲುಗು ಲಿಪಿ ಕೂಡ ಹುಟ್ಟಿತೆಂದು ಹಳಮೆಯರಿಗರ ಅನಿಸಿಕೆ. ಕದಂಬರ ಕಾಲದ ಕನ್ನಡವನ್ನು ‘ಪಡುವಣ ಹಳಗನ್ನಡ’ವೆಂದು ಹೇಳಲಾಗುತ್ತದೆ. ಕದಂಬರ ಕಾಲದ ಕನ್ನಡ ಲಿಪಿ ಹಳಗನ್ನಡದ ಲಿಪಿಗಿಂತಲೂ ಕೊಂಚ ಬೇರೆಯಾಗಿ ಕಂಡುಬರುತ್ತದೆ. ಇದಲ್ಲದೆ ಕದಂಬರ ಲಿಪಿಯಲ್ಲಿ ತಡಗಣಿ(ಸುಮಾರು ಕ್ರಿ.ಶ. 500), ತಮಟಕಲ್ಲು(ಸುಮಾರು ಕ್ರಿ.ಶ. 500) ಕಲ್ಬರಹಗಳನ್ನೂ ಕಾಣಬಹುದು.

ಕಲ್ಬರಹದ ಹಿನ್ನೆಲೆ ಮತ್ತು ಹಿರಿಮೆ:
ಹಳಮೆಯಿಂದ ತಿಳಿದುಬಂದಂತೆ ಶಾತವಾಹನ ಅರಸುಮನೆತನದ ನಂತರ ಪಟ್ಟಕ್ಕೆ ಬಂದ ಮಯೂರಶರ‍್ಮನಿಂದ ಕಟ್ಟಲ್ಪಟ್ಟ ಕದಂಬರು ಕನ್ನಡವನ್ನು ನಾಡಿನ ನುಡಿಯನ್ನಾಗಿಸಿ ಕನ್ನಡಿಗರಿಗೆ ಕೊಡುಗೆಯನ್ನು ನೀಡಿದರು. ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡ ಕದಂಬರು ಬಳಿಕ ತಮ್ಮ ಆಳ್ವಿಕೆಯ ಹರವನ್ನು ತೆಂಕಣ ಒಳನಾಡಿನವರೆಗೆ ಹೆಚ್ಚಿಸಿಕೊಂಡರು. ಅಲ್ಲಲ್ಲಿ ಸಾಮಂತರನ್ನೂ, ಮೇಲುಗರನ್ನು ಇಟ್ಟುಕೊಂಡು ತಮ್ಮ ನಾಡಿನ ಎಲ್ಲೆಯ ಹರವನ್ನು ಹೆಚ್ಚಿಸಿಕೊಂಡರು. ಕ್ರಿ.ಶ. 450ನೆಯ ಇಸವಿಯಲ್ಲಿ ಕೆತ್ತಲ್ಪಟ್ಟಿರುವ ಈ ಕಲ್ಬರಹವು ಕದಂಬರಲ್ಲೇ ಗಟ್ಟಿಗನಾದ ಅರಸು ‘ಕಾಕುಸ್ತವರ‍್ಮ‘ನ ಆಡಳಿತವನ್ನು ಬಿಂಬಿಸುತ್ತದೆ. ಈ ಕಲ್ಬರಹವನ್ನು ‘ವೀರಗಲ್ಲು‘ (Hero Stone) ಎಂದೂ ಕರೆಯಬಹುದು. ಕಲ್ಬರಹದಲ್ಲಿರುವ ನುಡಿಯು ಹಲವಾರು ಸಂಗತಿಗಳನ್ನು ಮತ್ತು ಕನ್ನಡ ನಾಡಿನ ಹಿರಿಮೆಯನ್ನು ತಿಳಿಸುತ್ತದೆ. ಕದಂಬರು ಕನ್ನಡ ನುಡಿಯ ಬೆಳವಣಿಗೆಗಾಗಿ ಹಲವು ‘ಕನ್ನಡಿಗರ ಏಳಿಗೆ’ಯ ಕೆಲಸಗಳನ್ನು ಕೈಗೊಂಡಿದ್ದಾರೆ. ಈಗ ನಮ್ಮ ನಾಡಿನ ಮಂದಿಯಾಳ್ವಿಕೆಯ ಕಲ್ಬರಹದ ಹಿರಿಮೆಗಾಗಿ ‘ಹಲ್ಮಿಡಿ ಉತ್ಸವ‘ವನ್ನು ನಡೆಸುತ್ತದೆ

ಕಲ್ಬರಹದ ತಿರುಳು:

“ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋ[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಪತ್ತೊನ್ದಿ ವಿಟ್ಟಾರಕರ

ಹೊಸಗನ್ನಡದ ನುಡಿಮಾರಿಕೆ:
ಮೊದಲೆರಡು ಸಾಲುಗಳಲ್ಲಿ ಅಚ್ಯುತನನ್ನು ಹಾಡಿಹೊಗಳಲಾಗಿದೆ. – “ಲಕ್ಶ್ಮಿಯೊಡನಿರುವ ಅಚ್ಯುತನು ಶ್ಯಾರ‍್ಗ್ನ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ರಕ್ಕಸರಿಗೆ ಪ್ರಳಯದ ಹೊತ್ತಿನ ಬೆಂಕಿಯಂತೆಯೂ ಒಳ್ಳೆಯವರಿಗೆ ಸುದರ‍್ಶನ ಚಕ್ರದಂತೆಯೂ ತೋರುತ್ತಾನೆ”.

ಬಳಿಕದ ಸಾಲುಗಳು ರಾಜನಿಗೆ ನನ್ನಿಸಿ, ಅಲ್ಲಿ ನಡೆದ ಸಂಗತಿಗಳನ್ನು ತೆರೆದಿಡುತ್ತದೆ. – “ಕದಂಬರರರಸು, ತ್ಯಾಗಸಂಪನ್ನ, ಕಲಬೊರನ ವಯ್ರಿ ಎಂದೆನಿಸಿರುವ ಕಾಕುತ್ಸ ಬಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಡಿಯಾಳಿನಲ್ಲಿ ’ನರಿದಾವಿಳೆ ನಾಡಿನಲ್ಲಿ’ (ಸುತ್ತಲಿನ ಒಟ್ಟುನೆಲ) ಮ್ರುಗೇಶ ಮತ್ತು ನಾಗನೆಂಬ ಮೇಲಾಳುಗಳಿದ್ದರು. ಅವರು ಮ್ರುಗರಾಜ ಮತ್ತು ಸರ‍್ಪರಾಜರಂತೆ ವಯ್ರಿಗಳಿಗೆ ಹೆದರಿಕೆಯನ್ನು ಹುಟ್ಟುಸುತ್ತಿದ್ದರು. ಇವರ ಅಡಿಯಾಳಾಗಿ ’ಕೀರ‍್ತಿಗೊಂಡ ಬಟರಿ’ ಕುಲವೆಂಬ ಚೊಕ್ಕವಾದ ಬಾನಿಗೆ ಚಂದ್ರನಂತೆ ಹೊಳೆಯುವ ಪಶುಪತಿ ಎಂಬ ಹೆಸರಿನವನಿದ್ದ. ಅಳೂಪ ಕುಲಕ್ಕೆ ಇವನು ಶಿವ(ಪಶುಪತಿ)ನಂತಿದ್ದ. ಹೆಸರಾಂತ ತೆಂಕಣದ ಎಲ್ಲೆಯಲ್ಲಿ(ದಕ್ಶಿಣಾಪತ)ದಲ್ಲಿ ನೂರಾರು ಕಾಳಗಗಳ ಹೋಮವನ್ನು ಮಾಡಿ ಹಾಗು ಬಲಿಗಳನ್ನಕೊಟ್ಟು ಗಟ್ಟಿಗತನವನ್ನು ಮೆರೆದಿದ್ದ, ದಾನಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಪಡೆಯನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಕಾಳಗವನ್ನು ಮಾಡಿ ಗೆಲುವನ್ನು ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ನಾಡಿನ ಜನರ ಎದುರಲ್ಲಿ ಪಲ್ಮಡಿ(ಹಲ್ಮಿಡಿ)ಯನ್ನೂ, ಮೂಳಿವಳ್ಳಿ(ಇಂದಿನ ಮುಗುಳುವಳ್ಳಿ)ಯನ್ನೂ ಅವನಿಗೆ ನಲ್ಮೆಯಿಂದ ಆಡಳಿತ ನಡೆಸಲು ಬಳುವಳಿಯಾಗಿ ಕೊಡಲಾಯಿತು. ಇದು ಕಾದಾಳಿನ ಕತ್ತಿ ತೊಳೆದು ವೀರದಾನ ಕೊಡುವ ಸಮಾರಂಬವಾಗಲು ನಾಡ ಮೇಲಾಳುಗಳಾದ ಶ್ರೀ ಮ್ರುಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಊರುಗಳನ್ನು ವಿಜಯಿಗೆ ನೀಡಿದರು. ಈ ಕೊಡುಗೆಯನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯದ ಸುಂಕದ ಮೇಲಾಳುಗಳಾದ ಮ್ರುಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ನಲ್ಮೆಯಿಂದ ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಕೆಡುಕುಂಟಾಗುತ್ತದೆ”.

ಹಾಗೆಯೆ ಎಡಪಕ್ಕದಲ್ಲಿ ಇನ್ನೊಂದು ಸಾಲು ಹೀಗಿದೆ. – “ಇಲ್ಲಿನ ಗದ್ದೆಯ ಬೆಳೆಯಲ್ಲಿ ಪೂಜೆ ಮಾಡುವವರಿಗೆ ಹತ್ತನೆಯ ಒಂದು ಬಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು” – ಇದು ಈ ಕಲ್ಬರಹದ ತಿರುಳು. ಕದಂಬ ಲಿಪಿಯಲ್ಲಿರುವ ಈ ಕಲ್ಬರಹವು ಕನ್ನಡದೊಟ್ಟಿಗೆ ಸಂಸ್ಕ್ರುತ ಪದಗಳನ್ನೂ ಸೇರಿಸಿಕೊಂಡಿದೆ. ಇದರಲ್ಲಿ ‘ಎರಿದು’, ’ಕೊಟ್ಟಾರ‍್’, ’ಅದಾನ್’ ಮೊದಲಾದ ಪದಗಳನ್ನು ಕಾಣಬಹುದು, ಸೊಲ್ಲರಿಗರ ಪ್ರಕಾರ ಇವುಗಳು ಪಡುವಣದ ಹಳೆಗನ್ನಡದಲ್ಲಿವೆ.

ಕನ್ನಡ ನುಡಿ ಹಲ್ಮಿಡಿ ಕಲ್ಬರಹಕ್ಕಿಂತ ಹಳೆಯದೇ?
ಹೌದು, ಕನ್ನಡ ನುಡಿ ಹಲ್ಮಿಡಿ ಕಲ್ಬರಹಕ್ಕಿಂತ ಎಶ್ಟೋ ಹಳೆಯದು. ಆಡುನುಡಿಯಾಗಿ ಕನ್ನಡವನ್ನು ಹಲ ಸಾವಿರ ವರ‍್ಶಗಳಿಂದ ಬಳಸುತ್ತಿರಬಹುದು ಎಂದು ಹಳಮೆಯರಿಗರ ಮತ್ತು ನುಡಿಯರಿಗರ ಅನಿಸಿಕೆ. ಕೇವಲ ಕಲ್ಬರಹಗಳಾಗಲಿ, ಕನ್ನಡ ಪದಗಳುಳ್ಳ ಪಳೆಯುಳಿಕೆಗಳಾಗಲಿ ಕನ್ನಡ ನುಡಿ ಎಶ್ಟು ಹಳೆಯದೆಂದು ತಿಳಿಸಲಾರದು ( ಹೆಚ್ಚಿನ ಮಾಹಿತಿಗೆ ಡಾ. ಶಂಕರ ಬಟ್ಟರ “ಕನ್ನಡ ನುಡಿ ಎಶ್ಟು ಹಳೆಯದು?” ಎಂಬ ಬರಹವನ್ನು ಓದಿ).

ಹಲ್ಮಿಡಿ ಕಲ್ಬರಹಕ್ಕಿಂತ ಹಿಂದೆ ಅಂದರೆ ಕ್ರಿ.ಪೂ. 252ರ ಹೊತ್ತಿನ ಚಿತ್ರದುರ‍್ಗದ ಬ್ರಹ್ಮಗಿರಿಯಲ್ಲಿ ಸಿಕ್ಕಿರುವ ಅಶೋಕನ ಕಲ್ಬರಹದಲ್ಲಿ “ಇಸಿಲ” ಎಂಬ ಪದ ಕನ್ನಡದ್ದೇ ಆಗಿರಬೇಕೆಂದು ಹಳಮೆಯರಿಗರ ನಂಬಿಕೆ. ಹಲ್ಮಿಡಿ ಕಲ್ಬರಹದಲ್ಲಿ ‘ನರಿದಾವಿ[ಳೆ]ನಾಡ’ ಬಗ್ಗೆ ಹೇಳಿರುವುದರಿಂದ ಈ ಪದಬಳಕೆ ಮತ್ತು ಈ ಪದ ಬೊಟ್ಟುಮಾಡಿ ತೋರಿಸುವ ಆಡಳಿತದ ಬಾಗಗಳು, ‘ತಮಿಳಗಂ‘ಗಿಂತ ಹೆಚ್ಚು ಆಳವಾಗಿ ಇಲ್ಲಿ ಬೇರು ಬಿಟ್ಟಿರಬಹುದು. ಕ್ರಿ.ಶ 200ರ “ಕ್ಯಾರಿಶನ್ ಮೈಮ್” ಎಂಬ ಗ್ರೀಕ್ ನಾಟಕದಲ್ಲಿಯೂ ಕೂಡ ಕನ್ನಡದ ಹಲವಾರು ಪದಗಳ ಬಳಕೆಯನ್ನು ನೋಡಬಹುದು. ಇನ್ನೊಂದು ಸಂಗತಿ, ಚಿತ್ರದುರ‍್ಗ ಜಿಲ್ಲೆಯ ತಗರ‍್ತಿ ಬಳಿ ಸಿಕ್ಕಿರುವ ಕ್ರಿ.ಶ 350ರ ಗಂಗರ ಹೊತ್ತಿನ ಕಲ್ಬರಹವೊಂದು ಹಲ್ಮಿಡಿ ಕಲ್ಬರಹಕ್ಕಿಂತ ಹಳೆಯದು ಹಾಗು ಇದನ್ನು ಕೆತ್ತಿದ ಕೆಲವೇ ವರ‍್ಶಗಳ ಬಳಿಕ ಹಿರೇಹಡಗಲಿ, ಮ್ಯಾಕಡೋಲಿ, ಶಿವಪುರದ ಕಲ್ಬರಹಗಳನ್ನು ಕೆತ್ತಿಸಲ್ಪಟ್ಟಿರಬಹುದು ಎಂದು ನಾಡಿನ ಹೆಸರಾಂತ ಹಳಮೆಯರಿಗ ಶ.ಶೆಟ್ಟರ್ ಅವರ ಅನಿಸಿಕೆ.

(ಮಾಹಿತಿ ಮತ್ತು ಚಿತ್ರ ಸೆಲೆಗಳು: wikipedia, prajavani.net, kannadaprabha, “ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ” – ಶ.ಶೆಟ್ಟರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: