ಕನ್ನಡಿಗರ ಕೆಚ್ಚೆದೆಯ ಮಯೂರಶರ‍್ಮ

ಕಿರಣ್ ಮಲೆನಾಡು.

ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ ಇದೆ.

ಮಯೂರಶರ‍್ಮನ ಹುಟ್ಟು ಮತ್ತು ಕದಂಬ ನಾಡನ್ನು ಕಟ್ಟಿಬೆಳೆಸಿದ ಬಗೆ:

myuraಬನವಾಸಿಯಿಂದ 35 ಕಿ.ಮಿ ದೂರದಲ್ಲಿರುವ ಇಂದಿನ ಶಿಕಾರಿಪುರದ ತಾಳಗುಂದದಲ್ಲಿ (ಇದರ ಹಳೆಯ ಹೆಸರು ತಾಣಗುಂದೂರು) ಸರಿಸುಮಾರು ಕ್ರಿ.ಶ 320ರ ಸರಿಸುಮಾರಿನಲ್ಲಿ ಹುಟ್ಟಿ ಬೆಳೆದ ಮಯೂರಶರ‍್ಮ ಅಪಾರವಾದ ಜಾಣ್ಮೆಯನ್ನು ಹೊಂದಿದ್ದ. ಆತನ ನೆತ್ತರಲ್ಲಿ ಕನ್ನಡತನವಿತ್ತು, ಮೈಮನವೆಲ್ಲ ಕನ್ನಡ ನಾಡಿಗಾಗಿ ಹಂಬಲಿಸುತ್ತಿತ್ತು. ಕದಂಬರ ಅರಸು ಶಾಂತಿವರ‍್ಮನ ಕಾಲದ ತಾಳಗುಂದದ ಕಲ್ಬರಹವು ಕದಂಬ ಅರಸುಮನೆತನವನ್ನು ಕಟ್ಟಿಬೆಳೆಸಿದ ಬಗೆಯನ್ನು ವಿವರಿಸುತ್ತದೆ. ಈಗಿನ ಚೆನ್ನೈ ಹತ್ತಿರದ ಕಂಚಿ ಆ ಕಾಲದಲ್ಲಿ ಕಲಿಕೆಗೆ ಹೆಸರುವಾಸಿಯಾಗಿತ್ತು. ಶಾತವಾಹನರ ಸಾಮಂತರಾಗಿದ್ದ ಪಲ್ಲವರು ಕಂಚಿಯ ಮೂಲಕ ಆಡಳಿತ ನಡೆಸುತ್ತಿದ್ದರು. ಮಯೂರಶರ‍್ಮನು ತನ್ನ ಅಜ್ಜ ಮತ್ತು ಗುರು ವೀರಶರ‍್ಮನೊಂದಿಗೆ ಕ್ರಿ.ಶ. 340 ರ ಸುಮಾರಿನಲ್ಲಿ ತನ್ನ ಕಲಿಕೆಗೊಸ್ಕರ ಕಂಚಿಗೆ ಹೋಗುತ್ತಾನೆ. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಕಲ್ಬರಹದಲ್ಲಿ ಹೇಳಿರುವಂತೆ ಮಯೂರಶರ‍್ಮನ ಅಜ್ಜ ವೀರಶರ‍್ಮನು ಕೂಡ ಅವನಿಗೆ ಸ್ವಂತ ಗುರುವಾಗಿದ್ದು ಅವನ ತಂದೆ ಬಂದುಸೇನನು ಕ್ಶತ್ರಿಯ ಚಳಕಗಳನ್ನು ಮೈಗೂಡಿಸಿಕೊಂಡಿದ್ದನು. ಪಲ್ಲವರು ಮಯೂರನನ್ನು ತಮ್ಮ ಅರಮನೆಯ ಕಾವಲುಗಾರನನ್ನಾಗಿ ನೇಮಿಸಿಕೊಂಡಿದ್ದರು ಎಂದು ಕೆಲವು ಹಳಮೆಯ ಸಂಗತಿಗಳಿಂದ ತಿಳಿದು ಬರುವುದುಂಟು.

ತಮಿಳು ಪಲ್ಲವರ ಆಡಳಿತದಲ್ಲಿದ್ದ ಕಂಚಿಯಲ್ಲಿ ಕನ್ನಡಿಗನಾದ ಮಯೂರಶರ‍್ಮನನ್ನು ಪಲ್ಲವರ ಕಾವಲುಗಾರರು ಒಮ್ಮೆ ಟೀಕಿಸಿಸುತ್ತಾರೆ ಇದರಿಂದ ಅವರೊಡನೆ ಹೊಡೆದಾಟವಾಗಿ ಅವರಿಂದ ಮಯೂರಶರ‍್ಮನು ಹೀಯಾಳಿತನಾಗುತ್ತಾನೆ. ಇದರಿಂದ ಕೋಪಗೊಂಡು ಪಲ್ಲವರಿಗೆ ಮುಯ್ಯಿ ತೀರಿಸಿಸಲು ಕಂಚಿಯನ್ನು ಬಿಟ್ಟು ಬರುತ್ತಾನೆ. ಕನ್ನಡಿಗರಿಗಾಗಿಯೇ ಗಟ್ಟಿಯಾದ ನಾಡನ್ನು ಕಟ್ಟಬೇಕೆಂಬ ಹಟ, ಕನ್ನಡಿಗರು ಆ ಹೊತ್ತಿನಲ್ಲಿ ಅನುಬವಿಸುತ್ತಿದ್ದ ನೋವನ್ನು ನೀಗಿಸಬೇಕೆಂಬ ಕಾಳಜಿ, ಪಲ್ಲವರು ಇಲ್ಲವೇ ಹೊರಗಿನ ಯಾವ ಅರಸರ ಅಡಿಯಾಳಾಗಿ ಕನ್ನಡಿಗರು ಬದುಕುವಂತಾಗಬಾರದು ಎಂಬ ಕಿಚ್ಚು, ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ಮಯೂರಶರ‍್ಮನನಿಗೆ ಪಲ್ಲವರು ಮಾಡಿದ ಈ ಹೀಯಾಳಿಕೆಯು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಹೀಗಾಗಿ ಹೊಸ ನಾಡು ಕಟ್ಟುವ ಕೆಲಸಕ್ಕೆ ಕೈ ಹಾಕುತ್ತಾನೆ. ಹೋರಾಟದ ಚಳಕ ಮತ್ತು ಕಾಳಗ ಕಲೆಯನ್ನು ಕಲಿಯುತ್ತಾನೆ. ಅಪಾರವಾದ ಕನ್ನಡಿಗರನ್ನು ಹುರಿದುಂಬಿಸಿ, ಅವರನ್ನೆಲ್ಲ ಕಟ್ಟಿಕೊಂಡು ಶ್ರೀಶೈಲದಲ್ಲಿ ಒಂದು ಕನ್ನಡಿಗರ ಕಾದಾಡುವ ಪಡೆಯನ್ನು ಕಟ್ಟುತ್ತಾನೆ, ಹಾಗೆಯೇ ಅಲ್ಲಿರುವ ಬಿಲ್ಲಾಳುಗಳ ಸ್ನೇಹ ಸಂಪಾದಿಸಿಕೊಂಡು ಬಿಲ್ಲರಿಮೆಯನ್ನು ಕಲಿಯುತ್ತಾನೆ.

ಇದೇ ಹೊತ್ತಿನಲ್ಲಿ ಪಲ್ಲವರ ರಾಜ ವಿಶ್ಣುಗೋಪ ಮತ್ತು ಬಡಗಣ ಬಾರತದ ರಾಜ ಸಮುದ್ರಗುಪ್ತನ ನಡುವೆ ನಡೆದ ಕಾಳಗದಲ್ಲಿ ಪಲ್ಲವರು ಮಂಕಾಗಿದ್ದರು(ಅಲಹಾಬಾದ್ ಕಲ್ಕಂಬದ ಬರಹ ತಿಳಿಸಿರುವಂತೆ). ಈ ವೇಳೆಯನ್ನು ಸರಿಯಾಗಿ ಉಪಯೋಗಿಸಿಕೊಂಡ ಮಯೂರಶರ‍್ಮನು ಶ್ರೀಶೈಲದಲ್ಲಿ ವಿಶ್ಣುಗೋಪನನ್ನು ಸೆದೆಬಡಿಯುತ್ತಾನೆ. ಮಯೂರನು ಕಂಚಿಯನ್ನು ತನ್ನ ಕೈವಶ ಮಾಡಿಕೊಂಡರೂ ತನಗೆ ಕಂಚಿಯನ್ನು ಆಳ ಬೇಕೆಂಬ ಕೆಟ್ಟಬಯಕೆ ಇಲ್ಲವೆಂದು, ಮುಯ್ಯಿ ತೀರಿಸಲು ಪಲ್ಲವರ ನಾಡನ್ನು ಕೈವಶ ಮಾಡಿಕೊಂಡನೆಂದು ಹಲವು ಹಳಮೆಯ ಸಂಗತಿಗಳು ತಿಳಿಸುತ್ತವೆ. ಬಳಿಕ ಪಲ್ಲವರು ಪಡುವಣ ಕರಾವಳಿಯಿಂದ ಮಲಪ್ರಬದವರೆಗೆ ಕದಂಬರು ನಾಡನ್ನಾಳುವುದನ್ನು ಒಪ್ಪಿಕೊಳ್ಳುವರು. ಬಳಿಕ ತನ್ನ ಊರಾದ ಬನವಾಸಿಗೆ ತೆರಳಿ ಕನ್ನಡದ ಕದಂಬ ನಾಡನ್ನು ಕಟ್ಟುವುದರಲ್ಲಿ ನಿರತನಾಗುತ್ತಾನೆ. ಈ ರೀತಿಯಾಗಿ ತೆಂಕಣಬಾರತದಲ್ಲಿ ಕನ್ನಡ ನಾಡೊಂದು ಗಟ್ಟಿಯಾಗಿ ಬೇರೂರಿತು.

ಕದಂಬರ ಹೆಸರಿನಳವಡಿಕೆ ತೆಂಕಣ ಬಾರತದಲ್ಲಿ ಕಂಡುಬರುವ ಕಾಡಂಬಿ ಮರವನ್ನು ಪೂಜಿಸುವವರಿಂದಲೂ ಹಾಗು ಇಂದಿನ ಕೇರಳ, ತಮಿಳುನಾಡು ಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಕಾದಾಟದಲ್ಲಿದ್ದ ಅಚ್ಚಕನ್ನಡದ ಕಡಂಬು ಎಂಬ ಬುಡಕಟ್ಟಿನವರಿಂದಲೂ ಬಂದಿದೆ ಎಂಬ ಅರಿವನ್ನು ಮಂಡಿಸಲಾಗಿದೆ. ವರದಾ ನದಿಯ ತಟದಲ್ಲಿ ಕದಂಬ ಅರಸುಮನೆತನವನ್ನು ಕಟ್ಟಿದ ಹಿರಿಮೆ ಮಯೂರನದ್ದು. ಕ್ರಿಶ್ಣವರ‍್ಮನ ಹೊತ್ತಿನ ಕಲ್ಬರಹಗಳಲ್ಲಿ ಕದಂಬರು ನಾಗರ ಪೀಳಿಗೆಯವರೆಂದು ಹೇಳಲಾಗಿದೆ. ಶಿಲಪ್ಪದಿಗಾರಂ ನಲ್ಲಿ ತಿಳಿಸಿರುವಂತೆ ಕದಂಬರನ್ನು ಕಟಂಬುಗಳೆಂದು ಹಾಗು ಪಡುವಣ ಕರ‍್ನಾಟಕದ ಕರಾವಳಿಯನ್ನು ಆಳುತ್ತಿದ್ದರು ಎಂದು ತಿಳಿಸಲಾಗಿದೆ. ಮೊತ್ತಮೊದಲಿಗೆ ಕನ್ನಡವನ್ನು ಬರಿಗೆಗಳಲ್ಲಿ ಬಳಸಿದ ಹಿರಿಮೆ ಕದಂಬರಿಗೆ ಸಲ್ಲಬೇಕು ಅದಕ್ಕೆ ಮಯೂರ ಹಾಕಿಕೊಟ್ಟ ಗಟ್ಟಿ ತಳಹದಿಯೇ ಆಗಿದೆ. ಮಯೂರನು ಕನ್ನಡ ನಾಡಿಗೆ ಒಳ್ಳೆಯ ಆಡಳಿತವನ್ನು ನೀಡಿದನು ಎಂಬುವುದರಲ್ಲಿ ಎರಡು ಮಾತಿಲ್ಲ. ಚಂದ್ರವಳ್ಳಿಯ ಕಲ್ಬರಹವು ಮಯೂರನ ಹಿರಿಮೆ ಮತ್ತು ಗರಿಮೆಗಳನ್ನು ತಿಳಿಸುತ್ತದೆ. ಮಯೂರನು ಬನವಾಸಿ ಪಟ್ಟಣವನ್ನು ತನ್ನ ಆಡಳಿತದ ಮೇಲ್ಪಟ್ಟಣವಾಗಿಸಿದನು.

ಇದೇ ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು 30 ಕಿ.ಮಿ.ಅಂತರದಲ್ಲಿದೆ. ಮಯೂರಶರ‍್ಮನು ಆಡಳಿತದ ಹರವು ಇಡೀ ನಡುಕರ‍್ನಾಟಕವನ್ನು ಹರಡಿತ್ತು. ಹಾಗೆಯೇ ಮಯೂರಶರ‍್ಮನು ಕಾಳಗದಲ್ಲಿ ಗೆದ್ದವುಗಳಲ್ಲಿ ಪಲ್ಲವರ ಕಂಚಿ, ಪುನ್ನಾಟ, ಶ್ರೀಶೈಲ ಹಾಗು ಇನ್ನಿತರ ನೆಲಗಳು ಇದ್ದವು. ಈ ವಿವರಗಳನ್ನು ಚಂದ್ರವಳ್ಳಿಯ ಕಲ್ಬರಹವು ಸೇರಿದಂತೆ ಇನ್ನಿತರ ಕದಂಬರ ಕಲ್ಬರಹಗಳು ತಿಳಿಸುತ್ತದೆ. ನಾಡಿನ ಮಂದಿಯ ಅನುಕೂಲಕ್ಕಾಗಿ ಚಂದ್ರವಳ್ಳಿ ಸೇರಿದಂತೆ ಹಲವೆಡೆ ಕೆರೆಗಳನ್ನು ಕಟ್ಟಿಸಿದನು. ಮಯೂರಶರ‍್ಮನ ಮಗ ಕಂಗವರ‍್ಮ 365 ರಲ್ಲಿ ಪಟ್ಟವೇರಿದ. ವಾಕಟಕರ ಅರಸು ಪ್ರುತ್ವಿಸೇನನಿಂದ ಕಾಳಗದಲ್ಲಿ ಸೋತನಾದರು ತನ್ನ ಕದಂಬ ನಾಡನ್ನು ಉಳಿಸಿಕೊಳ್ಳುವಲ್ಲಿ ಗೆದ್ದವನಾಗಿದ್ದ. ಮುಂದಿನ ಅರಸರುಗಳಾದ ರವಿವರ‍್ಮ ಮತ್ತು ಕಾಕುಸ್ತವರ‍್ಮ ಕದಂಬರ ಆಡಳಿತದ ಹರವನ್ನು ಹೆಚ್ಚಿಸಿದರು.

ನೆನಪಿನಂಗಳದಲ್ಲಿ ಮಯೂರ:
ಕರುನಾಡನ್ನು ಹುಟ್ಟುಹಾಕಿದ ಮಯೂರಶರ‍್ಮನ ನೆನಪಿನಲ್ಲಿ ಕನ್ನಡದ ನೆಚ್ಚಿನ ನಟ ಡಾ. ರಾಜಕುಮಾರ್ ನಟಿಸಿರುವ ‘ಮಯೂರ‘ ಎಂಬ ಓಡುತಿಟ್ಟವನ್ನು ಮಾಡಲಾಗಿದೆ. 1975ರಲ್ಲಿ ತೆರೆಕಂಡ ಈ ಓಡುತಿಟ್ಟವನ್ನು(ಸಿನೆಮಾ) ಮಾಡಲು ತಗಲಿದ ವೆಚ್ಚ 40 ರಿಂದ 45 ಲಕ್ಶರೂ ಆಗಿತ್ತು. ಚಿತ್ರಗಳಿಸಿದ್ದು ಆಗಿನ ಕಾಲಕ್ಕೆ ಮೂರು ಕೋಟಿಗೂ ಹೆಚ್ಚು. ಕನ್ನಡವನ್ನು ನೆತ್ತರಿನಲ್ಲಿ ತುಂಬಿಕೊಂಡಿದ್ದ ಮತ್ತು ಕನ್ನಡನಾಡಿನ ವಯ್ರಿಗಳನ್ನು ಹಿಮ್ಮೆಟ್ಟಿಸ್ಸಿದ್ದ ‘ಕದಂಬ’ರ ನೆನಪಿಗಾಗಿ ನಮ್ಮ ನಾಡಿನ ಆಡಳಿತವು ‘ಕದಂಬೋತ್ಸವ‘ ವನ್ನು ಆಚರಿಸುತ್ತಿದೆ. ಮಯೂರನ ಜಾಣ್ಮೆ ಮತ್ತು ಕೆಚ್ಚೆದೆಯನ್ನು ನಾವು ಕನ್ನಡಿಗರು ಅಳವಡಿಸಿಕೊಳ್ಳೋಣ, ಹಾಗೆಯೇ ಮಯೂರನಂತೆ ಕನ್ನಡ ನಾಡನ್ನು ಕಟ್ಟುವವರು ಹುಟ್ಟಲಿ.

ಕನ್ನಡ ನಾಡಿಗೆ ಕದಂಬರ ಕೊಡುಗೆಯನ್ನು ತಿಳಿಯಲು ಇಲ್ಲಿ ಓದಿ: ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆ

(ಮಾಹಿತಿ ಸೆಲೆ: wiki, vijayakarnataka.com, knowledgeforgk, ಪ್ರೊ. ಶ. ಶೆಟ್ಟರ್ ಅವರ “ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ” ಮತ್ತು
ಆರ್. ಡಿ. ಜಿ ಯವರ ‘ಇತಿಹಾಸದ ಮಹಾಪುರುಶರು’ ಹೊತ್ತಗೆಗಳು)
(ಚಿತ್ರ ಸೆಲೆ: wikimedia)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s