ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆ

ಕಿರಣ್ ಮಲೆನಾಡು.

ಹಿಂದಿನ ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಅರಿತೆವು. ಪಂಪನು ಕದಂಬರ ಬನವಾಸಿಯನ್ನು ಬಣ್ಣಿಸುತ್ತ ‘ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ’ ಎನ್ನುತ್ತಾನೆ. ಕದಂಬರು ಚಿನ್ನದ ಕನ್ನಡನಾಡನ್ನು ಕಟ್ಟಿ ಕನ್ನಡಿಗರಿಗೆ ಕೊಡುಗೆಯಾಗಿ ಕೊಟ್ಟಿದ್ದನ್ನು ಬಣ್ಣಿಸಲು ಇಶ್ಟು ಸಾಕಲ್ಲವೇ? ಈ ಬರಹದಲ್ಲಿ ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆಯನ್ನು ತಿಳಿಯೋಣ.

ಕದಂಬರ ಕೊಡುಗೆಗಳು:

1. ಕದಂಬರ ಆಡಳಿತ ನುಡಿಯಾಗಿ ಕನ್ನಡ
ಮೊಟ್ಟಮೊದಲಿಗರಾಗಿ ಕನ್ನಡನಾಡನ್ನು ಕಟ್ಟಿದವರು ಕದಂಬರು. ಅವರ ಹೊತ್ತಿನಲ್ಲಿ ಮಂದಿಯ ಆಡುನುಡಿಯಾದ ಕನ್ನಡವೇ ಆಡಳಿತ ನುಡಿಯಾಗಿತ್ತು. ಬನವಾಸಿಯು ಕನ್ನಡ ನಾಡಿನ ಮೊಟ್ಟಮೊದಲ ಆಡಳಿತದ ಪಟ್ಟಣವಾಗಿತ್ತು. ಅವರ ಆಡಳಿತದ ಹರವು ತೆಂಕಣ ಕರ‍್ನಾಟಕ ಮತ್ತು ನಡು ಕರ‍್ನಾಟಕವನ್ನು ಆವರಿಸಿತ್ತು. ರಾಜ್ಯವನ್ನು ಮಂಡಲ ಮತ್ತು ದೇಶ (ನಾಡು) ಎಂದು ವಿಬಾಗಿಸಲಾಗಿತ್ತು. ನಾಡನ್ನು ಕಟ್ಟಿದ ಮಯೂರಶರ‍್ಮ, ಅವನ ಮುಂದಿನ ಪೀಳಿಗೆಯ ಕಾಕುಸ್ತವರ‍್ಮ ಮತ್ತು ರವಿವರ‍್ಮರ ಆಡಳಿತದ ಹೊತ್ತಿನಲ್ಲಿ ಕದಂಬರು ಉತ್ತುಂಗಕ್ಕೇರಿದ್ದರು, ಅದೇ ರೀತಿಯಲ್ಲಿ ಕನ್ನಡ ನುಡಿಯನ್ನು ಉತ್ತುಂಗಕ್ಕೇರಿಸಿದ್ದರು.

ಕದಂಬರು ಶಿಸ್ತಿನ ಆಡಳಿತ, ಮಂದಿಯ ಏಳಿಗೆ, ಕನ್ನಡ ಮತ್ತು ಕರ‍್ನಾಟಕದ ವಯ್ರಿಗಳನ್ನು ಹಿಮ್ಮೆಟ್ಟಿಸುವ ಎದೆಗಾರಿಕೆಗೆ ಹೆಸರುವಾಸಿಯಾದವರು. ನಾಡಿನ ಎಲ್ಲೆ ಎಲ್ಲೆಗಳಲ್ಲಿ ಕನ್ನಡವನ್ನು ಪಸರಿಸಿದವರು ಇವರು, ಹೀಗಾಗಿ ನಾವು ಕದಂಬರ ಹಲವಾರು ಕನ್ನಡದ ಕಲ್ಬರಹಗಳನ್ನು ಮತ್ತು ದುಡ್ಡುಗಟ್ಟಿಗಳಲ್ಲಿ ಕನ್ನಡವನ್ನು ಇಂದಿಗೂ ಕಾಣಬಹುದಾಗಿದೆ. ಮೊತ್ತಮೊದಲ ಕನ್ನಡದ ಕಲ್ಬರಹ ‘ಹಲ್ಮಿಡಿ ಕಲ್ಬರಹ‘ವನ್ನು ಕೆತ್ತಿಸಿದವರು ಕದಂಬರು. ಇದಲ್ಲದೇ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ 50 ಕ್ಕೂ ಹೆಚ್ಚು ಕಲ್ಬರಹಗಳನ್ನು ಕನ್ನಡದಲ್ಲೇ ಕೆತ್ತಿಸಿದ್ದಾರೆ. ಉಡುಪಿ ಜಿಲ್ಲೆಯ ಪರ‍್ಕಳದಲ್ಲಿ ಸರಿಸುಮಾರು ಕ್ರಿ. ಶ. 500ರ ಹೊತ್ತಿನ, ಕನ್ನಡ ಲಿಪಿಯಿಂದ ಕೂಡಿದ ಕಲ್ಲುಬಿಲ್ಲೆಯೊಂದನ್ನು ಇತ್ತೀಚಿಗೆ ಕಂಡುಹಿಡಿಯಲಾಯಿತು. ಇದರಿಂದ ನಮಗೆ ತಿಳಿಯುವುದೇನೆಂದರೆ ಕರ‍್ನಾಟಕದ ಕರಾವಳಿ ಬಾಗದಲ್ಲೂ ಕೂಡ ಇವರು ತಮ್ಮ ಚಾಪನ್ನು ಮೂಡಿಸಿದ್ದರು ಎಂದು.

 

2. ಹಣಕಾಸು ಮತ್ತು ವಹಿವಾಟಿನಲ್ಲಿ ಕನ್ನಡ
ಕದಂಬರು ನಾಡಿನ ಏಳಿಗೆಗಾಗಿ ನಾಡಿನೊಳಗೆ ಮತ್ತು ಹೊರಗೆ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದರು. ಕ್ರುಶಿ ಮತ್ತು ಇತರ ವಹಿವಾಟುಗಳಿಗೆ ಕಡಿಮೆದರದಲ್ಲಿ ಸುಂಕವನ್ನು ವಿದಿಸುತ್ತಿದ್ದರು. ನಾಡಿನ ಹಣಕಾಸನ್ನು ನಿಬಾಯಿಸಲು ಕಲ್ಲುದುಡ್ಡು ಮತ್ತು ಲೋಹದ ದುಡ್ಡನ್ನು ಅಚ್ಚೊತ್ತಿಸುತ್ತಿದ್ದರು. ಸುಂಕದ ಹೆಸರುಗಳನ್ನೂ ಕೂಡ ಅಚ್ಚಕನ್ನಡದಲ್ಲಿ ಬಳಕೆ ಮಾಡುತ್ತಿದ್ದರು. ಕೆಲವು ಸುಂಕದ ಹೆಸರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಕದಂಬರ ತಾಮ್ರದ ದುಡ್ಡುಗಟ್ಟಿಗಳು

ಸತಾರಾ ಕಲೆಕ್ಟೋರೇಟಿನಲ್ಲಿ, ಕದಂಬರ ಆಳ್ವಿಕೆಯಲ್ಲಿ ಟಂಕಿಸಿದ ವೀರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ದುಡ್ಡುಗಟ್ಟಿಗಳು ದೊರಕಿವೆ. ಅರಸು ಬಗೀರತನ ಕಾಲದ (ಕ್ರಿ.ಶ. 390-415) ಶ್ರೀ ಮತ್ತು ಬಾಗಿ ಎಂಬ ಕನ್ನಡ ಪದಗಳಿರುವ ಬಂಗಾರದ ದುಡ್ಡುಗಟ್ಟಿಯೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಸರಿಸುಮಾರು ಕ್ರಿ.ಶ. 400 ರ ತಾಮ್ರದ ದುಡ್ಡುಗಟ್ಟಿಯಲ್ಲಿ ‘ಶ್ರೀಮಾನರಾಗಿ‘ ಎಂಬ ಕನ್ನಡ ಪದವಿದೆ. ಒಂದೊಂದು ತಾಮ್ರದ ದುಡ್ಡುಗಟ್ಟಿಯೂ 200 ರಿಂದ 400 ಮಿ. ಗ್ರಾಂ ತೂಗುತ್ತದೆ. ಶಾತವಾಹನರು ಮತ್ತು ಚುಟುಗಳು ಬಳಸುತ್ತಿದ್ದ ಶಾತವಾಹನ ಬ್ರಾಹ್ಮಿ ಲಿಪಿಯ ಬದಲಾಗಿ ಕನ್ನಡವನ್ನು ಬಳಸಿಕೊಂಡಿದ್ದು ಕನ್ನಡಕ್ಕೆ ಕೊಟ್ಟ ದೊಡ್ಡ ಕೊಡುಗೆ ಎಂದು ಹೇಳಬಹುದು.

3. ಕದಂಬರ ಕಟ್ಟುಬಗೆಯ ಪರಿ (Architectural style) ಮತ್ತು ಕನ್ನಡ ನಾಡಿನ ದೇಗುಲಗಳು
ಕದಂಬರು ತಮ್ಮದೇ ಆದ ಕಟ್ಟುಬಗೆಯನ್ನು ಅಳವಡಿಸಿಕೊಂಡಿದ್ದರು. ಇದು ಕನ್ನಡ ನಾಡಿನ ಮೊತ್ತಮೊದಲ ಕಟ್ಟುಬಗೆಯನ್ನಬಹುದು. ಅರಸು ಮಯೂರಶರ‍್ಮನು ತನ್ನದೇ ಆದ ದ್ರಾವಿಡ ರೀತಿಯಲ್ಲಿ ಹಲವಾರು ದೇಗುಲಗಳನ್ನು ಕಟ್ಟಿದನು. ಮುಂದಿನ ಪೀಳಿಗೆಯ ಕದಂಬರಸುಗಳು ಕೂಡ ಮಯೂರಶರ‍್ಮನ ಪರಿಯನ್ನು ಮುಂದುವರೆಸಿದರು. ಬನವಾಸಿ, ಐಹೊಳೆ, ಬಾದಾಮಿ, ಹಂಪಿ ಮತ್ತು ಕನ್ನಡ ನಾಡಿನ ಇತೆರೆಡೆಗಳಲ್ಲಿ ಕದಂಬರ ರೀತಿಯ ದೇಗುಲಗಳನ್ನು ಕಾಣಬಹುದು.

ಕದಂಬರ ಕಟ್ಟುಬಗೆಯಲ್ಲಿ ಎದ್ದು ಕಾಣುವಂತದ್ದು ‘ಕದಂಬ ಗೋಪುರ’. ಈ ಗೋಪುರವು ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಓರಣವಾಗಿಟ್ಟುಕೊಂಡು ಚೂಪಾಗುತ್ತಾ ಹೋಗುತ್ತದೆ. ಗೋಪುರಗಳ ತುತ್ತತುದಿಯಲ್ಲಿ ಚಿಕ್ಕದಾದ ಕಳಶವನ್ನು ಜೋಡಿಸಲಾಗುತ್ತದೆ. ದೇಗುಲದ ನಡುಹೊರಮೈ ಬಾಗವು ನಾಲ್ಕು ಸರಿಬದಿಗಳನ್ನ ಹೊಂದಿದ್ದು, ಗೋಪುರವು ಪಿರಮಿಡ್ ಇಟ್ಟಳದ ರೀತಿಯಲ್ಲಿರುತ್ತದೆ. ಗೋಪುರದ ಹೊರಮಯ್ಯಿಯ ನಡುವು ಓರೆದಿಬ್ಬಗಳನ್ನು ಹೊಂದಿದೆ. ದೇಗುಲದ ಹೊರಮೈನಲ್ಲಿ ಇತರರ ಕಟ್ಟುಬಗೆಯಲ್ಲಿರುವಂತೆ ಆಡಂಬರಗಳಿಲ್ಲ. ಕದಂಬರ ಈ ಬಗೆಯು ಚಾಲುಕ್ಯರ ಮತ್ತು ಹೊಯ್ಸಳರ ಕಟ್ಟುಬಗೆಯ ತಳಹದಿ ಎನ್ನಬಹುದು. ಕೆಳಕಂಡಂತೆ ಕರ‍್ನಾಟಕದ ಹಲವೆಡೆಯಲ್ಲಿ ಕದಂಬರ ಕಟ್ಟುಬಗೆಯ ದೇಗುಲಗಳನ್ನು ನೋಡಬಹುದು.

 

ಈಗಿನ ಕರುನಾಡಿನ ಜೊತೆಗೆ ತೆಂಕಣ ಮಹಾರಾಶ್ಟ್ರ, ಗೋವಾ ಮತ್ತು ಪಡುವಣ ಆಂದ್ರವನ್ನಾಳುತ್ತಿದ್ದ ಕನ್ನಡದ ಇತರೆ ಅರಸುಮನೆತನಗಳಾದ ಕಲ್ಯಾಣಿ ಚಾಲುಕ್ಯ, ಬಾದಾಮಿ ಚಾಲುಕ್ಯ, ರಾಶ್ಟ್ರಕೂಟರುಗಳು ಕದಂಬರ ದೇಗುಲ ಕಟ್ಟುಬಗೆಯನ್ನು ಬಳಸಿಕೊಂಡಿದ್ದರು. ಹೀಗಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಕದಂಬರ ರೀತಿಯ ದೇಗುಲಗಳನ್ನು ಕಾಣಬಹುದು. ಇವುಗಳಲ್ಲಿ ಮಹಾರಾಶ್ಟ್ರದ ಕೊಲ್ಲಾಪುರದ ಪಂಚಗಂಗಾ ದೇಗುಲ, ಮಹಾಬಲೇಶ್ವರ ದೇಗುಲ ಮತ್ತು ಕನ್ನೇರಿಮಟ. ಆಂದ್ರದಲ್ಲಿ ವಿಜಯನಗರದರಸರು ಕಟ್ಟಿದ ಶ್ರೀಶೈಲಂನ ಕೆಲವು ದೇಗುಲಗಳು, ಆಲಂಪುರದ ಪಾಪನಾಶಿ ದೇಗುಲಗಳು ಮತ್ತು ನಳಗೊಂಡದ ಪಾಣಗಲ್ಲಿನಲ್ಲಿರುವ ಚಾಯಸೋಮೇಶ್ವರ ದೇಗುಲಗಳು ಮತ್ತು ಗೋವೆಯ ತಂಬ್ಡಿ ಸುರಲದಲ್ಲಿರುವ ಮಹಾದೇವ ದೇಗುಲ.

ಇತರೆ ಅರಸು ಮನೆತನಗಳು ಕದಂಬರ ಕಟ್ಟುಬಗೆಯನ್ನು ಬಳಸಿಕೊಂಡಿದ್ದರಿಂದ ಅವುಗಳನ್ನು ಈ ರೀತಿಯಾಗಿ ಹೇಳಬಹುದು; ಕದಂಬ-ಚಾಲುಕ್ಯ, ಕದಂಬ-ಹೊಯ್ಸಳ, ಕದಂಬ-ಯಾದವ ಮತ್ತು ಇತರೆ ಕಟ್ಟುಬಗೆಗಳು.

 

ಕದಂಬರ ರೀತಿಯ ಕೆಲವು ದೇಗುಲಗಳಲ್ಲಿ ಪರದೆ ಕಿಂಡಿಗಳಿರುವ ಕಿಟಕಿಗಳನ್ನು ಹಾಗು ಇನ್ನಿತರ ದೇಗುಲಗಳಲ್ಲಿ ಮೇಲ್ಚಾವಣಿಯ ಹೊರಚಾಚನ್ನು ಕಾಣಬಹುದು. ಕದಂಬರ ಇನ್ನೊಂದು ಕವಲಾದ ಹಾನಗಲ್ಲಿನ ಕದಂಬರು ಬೆಳಗಾವಿಯ ದೇಗಾವಿಯಲ್ಲಿ ಕಮಲ-ನಾರಾಯಣ ದೇಗುಲವನ್ನು ಬನವಾಸಿಯ ಕದಂಬರ ರೀತಿಯಲ್ಲೇ ಕಟ್ಟಿದರು. ಬನವಾಸಿಯಲ್ಲಿರುವ ಮದುಕೇಶ್ವರ ದೇಗುಲವನ್ನು ಮೊದಲಿಗೆ ಕದಂಬರ ರೀತಿಯಲ್ಲೇ ಕಟ್ಟಿದ್ದರು, ಆದರೆ ಅದು ಕಾಲಕ್ಕೆ ತಕ್ಕಂತೆ ಇತರೆ ಅರಸುಮನೆತನಗಳಿಂದ ಹಲವು ಮಾರ‍್ಪಾಟುಗಳನ್ನು ಹೊಂದುತ್ತಾ ಬಂದಿತು. ಮದುಕೇಶ್ವರ ದೇಗುಲದ ಹಲವು ಬಾಗಗಳಲ್ಲಿ ಚಾಲುಕ್ಯರ ಕಟ್ಟುಬಗೆಯನ್ನೂ ಕೂಡ ಕಾಣಬಹುದು.

ಕದಂಬರು ದೇಗುಲಗಳನ್ನಲ್ಲದೆ ಪುತ್ತಳಿ ಮತ್ತು ಕಲ್ಬರಹಗಳನ್ನು ತಮ್ಮದೇ ಆದ ರೀತಿಯಲ್ಲಿ ಕೆತ್ತಿಸುತ್ತಿದ್ದರು. ಬನವಾಸಿಯ ದೇಗುಲಗಳ ಕಲ್ಲಿನ ಕೆತ್ತನೆಗಳನ್ನು ಮತ್ತು ಕಲ್ಲಿನ ಗುಚ್ಚದ ಕೆತ್ತನೆಯ ಅಂದ ಚೆಂದವನ್ನು ಸವಿದೇ ನೋಡಬೇಕು. ಕಡೆದಿಡಲಾದ ಕಲ್ಲು ಪುತ್ತಳಿಗಳ ಬೆರಗು, ಈ ಬೆರಗುಮೂಡಿಸುವ ಕುಸುರಿಗಾರಿಕೆ ಕೆತ್ತುಗನ ಕೈಚಳಕವನ್ನು ಎತ್ತಿ ತೋರಿಸುತ್ತದೆ. ಮದುಕೇಶ್ವರ ದೇಗುಲದ ಕಟ್ಟುಬಗೆಯ ರೀತಿ, ಮೋಡಿಮಾಡಿದಂತೆ ಕಾಣುವ ಕಲ್ಲು ಮಂಟಪದ ಚೆಲುವು ಮತ್ತು ರತಗಳ ಚೆಲುವನ್ನು ನೋಡಿಯೇ ತೀರಬೇಕು. ಇಳಿಜಾರು ರೀತಿಯ ಚಾವಣಿಯೂ ಮದುಕೆಶ್ವರ ದೇಗುಲದ ಚೆಲುವನ್ನು ಇಮ್ಮಡಿಸಿದೆ.

4. ಕನ್ನಡ ನಲ್ಬರಹ ಮತ್ತು ಕದಂಬರು.

ಕದಂಬರ ದೊಡ್ಡ ಕೊಡುಗೆಯೆಂದರೆ ಕನ್ನಡ ನುಡಿಯನ್ನು ಮೇಲ್ನುಡಿಯಾಗಿ ಬಳಸಿದ್ದು ಮತ್ತು ಬೆಳೆಸಿದ್ದು. ಹಳಮೆಯಲ್ಲಿ ನಮಗೆ ಕದಂಬರ ನಲ್ಬರಹದ ಬಗ್ಗೆ ಹೆಚ್ಚು ಮಾಹಿತಿ ಸಿಗದಿದ್ದರೂ ನಂತರದಲ್ಲಿ ಬಂದ ಕನ್ನಡದ ಕವಿಗಳು ಕದಂಬರನ್ನು ಬಣ್ಣಿಸಿದರು. ಪಂಪನು ಹೀಗೆ ಹೇಳುತ್ತಾನೆ – ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ‘ ಅಂದರೆ ಮನಸ್ಸಿಗೆ ಕಡಿವಾಣಹಾಕಿದರು ಕೂಡ ಮನಸ್ಸಿಗೆ ಕನ್ನಡದ ಬನವಾಸಿ ದೇಶವೇ ನೆನಪಾಗುತ್ತದೆ ಎಂದು. 1500ರ ಹೊತ್ತಿನ ಕವಿ ಚಾಮರಸನ ‘ಪ್ರಬುಲಿಂಗಲೀಲೆ’ ಕಾವ್ಯದ ನೆಲೆ ಮತ್ತು ಹಿನ್ನೆಲೆ ಬನವಾಸಿಯಾಗಿತ್ತು.

ಕದಂಬರು ಹಲವಾರು ಕಲ್ಬರಹಗಳನ್ನು ಕನ್ನಡ ಲಿಪಿಯಲ್ಲಿಯೇ ಕೆತ್ತಿಸಿದರು. ಕ್ರಿ.ಶ. 450ರ ಹೊತ್ತಿನಲ್ಲಿ ಕೆತ್ತಲ್ಪಟ್ಟಿರುವ ಕನ್ನಡದ ಮೊದಲ ಕಲ್ಬರಹ ‘ಹಲ್ಮಿಡಿ ಕಲ್ಬರಹ’ದಲ್ಲಿ ಕದಂಬರ ರಾಜ ಕಾಕುತ್ಸವರ‍್ಮನ ಆಡಳಿತದ ರೀತಿಯನ್ನು ಹೇಳುತ್ತದೆ. ಈ ಕಲ್ಬರಹವು ನಲ್ಬರಹದ ಬಗೆಯಲ್ಲೇ ಕೆತ್ತಲ್ಪಟ್ಟಿದ್ದರಿಂದ ಇದನ್ನು ಕನ್ನಡ ನಲ್ಬರಹದ ಮೊದಲ ಕುರುಹು ಎನ್ನಲಡ್ಡಿಯಿಲ್ಲ. ‘ಕದಂಬ ಲಿಪಿ’ಯು ನಮ್ಮ ಈಗಿನ ಕನ್ನಡ ಲಿಪಿಯ ತಳಹದಿ ಎನ್ನಬಹುದು.

ಕದಂಬರು ಮತ್ತು ನೆನಪಿನ ಹಬ್ಬ
ಕನ್ನಡವನ್ನು ನೆತ್ತರಿನಲ್ಲಿ ತುಂಬಿಕೊಂಡಿದ್ದ ಮತ್ತು ಕನ್ನಡನಾಡಿನ ವಯ್ರಿಗಳನ್ನು ಹಿಮ್ಮೆಟ್ಟಿಸ್ಸಿದ್ದ ‘ಕದಂಬ’ರ ನೆನಪಿಗಾಗಿ ನಮ್ಮ ನಾಡಿನ ಆಡಳಿತವು ‘ಕದಂಬೋತ್ಸವ‘ ವನ್ನು ಆಚರಿಸುತ್ತಿದೆ. ಕರುನಾಡನ್ನು ಹುಟ್ಟುಹಾಕಿದ ಮಯೂರಶರ‍್ಮನ ನೆನಪಿನಲ್ಲಿ ಕನ್ನಡದ ನೆಚ್ಚಿನ ನಟ ಡಾ. ರಾಜಕುಮಾರ್ ನಟಿಸಿರುವ ‘ಮಯೂರ‘ ಎಂಬ ಓಡುತಿಟ್ಟವನ್ನು ಮಾಡಲಾಗಿದೆ. ಕಾರವಾರದಲ್ಲಿರುವ ಬಾರತದ ಹಡಗುಪಡೆಯ ಬಂದರಿಗೆ ‘ಐಏನ್ಎಸ್ ಕದಂಬ’ ಎಂದು ಹೆಸರಿಡಲಾಗಿದೆ. ಕನ್ನಡಿಗರನ್ನು ಒಗ್ಗೂಡಿಸಿ ಕರುನಾಡನ್ನು ಹುಟ್ಟುಹಾಕುವಲ್ಲಿ ಕದಂಬರ ಕೊಡುಗೆ ಅಪಾರ. ಇವರ ಕೊಡುಗೆಯು ಈಗಿನ ಕನ್ನಡದ ಪೀಳಿಗೆಗೆ ಮಾದರಿಯಾಗಲಿ. ಹಲತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸಗಳು ಕನ್ನಡಿಗರಿಂದ ಬರಲಿ.

(ಮಾಹಿತಿ ಮತ್ತು ಚಿತ್ರ ಸೆಲೆ: kannada.nativeplanet, vijayakrnatakawikipedia, karnataka.com, esyclopedia.com)

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. 04/03/2015

    […] ಕನ್ನಡ ನಾಡಿಗೆ ಕದಂಬರ ಕೊಡುಗೆಯನ್ನು ತಿಳಿಯಲು ಇಲ್ಲಿ ಓದಿ: ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗ… […]

  2. 09/10/2016

    […] ಕನ್ನಡ ನಾಡಿಗೆ ಕದಂಬರ ಕೊಡುಗೆಯನ್ನು ತಿಳಿಯಲು ಇಲ್ಲಿ ಓದಿ: ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗ… […]

ಅನಿಸಿಕೆ ಬರೆಯಿರಿ:

%d bloggers like this: