ತೈಲ ಬೆಲೆ ಇಳಿಕೆ : ಇನ್ನೆಶ್ಟು ದಿನ?

– ಅನ್ನದಾನೇಶ ಶಿ. ಸಂಕದಾಳ.

Oil-Price-Fall-

ಇತ್ತೀಚೆಗೆ ತೈಲ ಬೆಲೆ ಇಳಿಕೆಯನ್ನೇ ಕಾಣುತ್ತಿದೆ. ‘ಇಳಿಕೆಯನ್ನೇ ಕಾಣುತ್ತಿರುವ ತೈಲ ಬೆಲೆ ಮತ್ತೆ ಏರುವುದು ಯಾವಾಗ?’ ಎಂಬ ಸನ್ನಿವೇಶವನ್ನು ತೈಲ ಹೊರಮಾರುಗ (export) ನಾಡುಗಳು ಎದುರು ನೋಡುತ್ತಿವೆ. ಯಾಕೆಂದರೆ ತೈಲ ಹೊರಮಾರುಗೆಯಿಂದ ಆ ನಾಡುಗಳಿಗೆ ದೊಡ್ಡ ಮಟ್ಟದ ಗಳಿಕೆಯಿದೆ. ತೈಲ ಬೆಲೆ ಇಳಿಕೆ ಅರೆಹೊತ್ತಿನ ನಡವಳಿಕೆ (temporal behavior) ಮಾತ್ರ ಎಂಬ ಎಣಿಕೆ ಆ ನಾಡುಗಳಾದ್ದಾಗಿತ್ತು. ಆದರೆ ಬ್ಯಾರೆಲ್ ಒಂದಕ್ಕೆ ಮೊದಲಿದ್ದ ಬೆಲೆ (100-120 ಡಾಲರ‍್) ತಲುಪುವುದು ಸದ್ಯಕ್ಕೆ ಸಾದ್ಯವಿಲ್ಲ ಎಂದು ಒಪೆಕ್ ಒಕ್ಕೂಟದಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿದಿಸುವ ಮೊಹಮ್ಮದ್-ಅಲ್-ಮಾದಿ ನೀಡಿರುವ ಹೇಳಿಕೆ, ತೈಲ ಬೆಲೆ ಇನ್ನೂ ಹಲವಾರು ದಿನಗಳ ಕಾಲ ಏರುವುದಿಲ್ಲ ಎನ್ನುವುದನ್ನು ತಿಳಿಸುತ್ತದೆ ( OPEC : Organization of the Petroleum Exporting Countries – ತೈಲ ಹೊರಮಾರುಗ ನಾಡುಗಳ ಒಕ್ಕೂಟ ).

ಬ್ರೆಂಟ್ ಕ್ರೂಡ್‘ ಮತ್ತು ‘ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್‘ ಎಂಬ ತೈಲ ಬಗೆಗಳನ್ನು ಬಳಸಿ, ಜಾಗತಿಕ ಮಟ್ಟದಲ್ಲಿ ತೈಲದ ಗುಣಮಟ್ಟ ಮತ್ತು ಬೆಲೆ ಅಳೆಯಲು ಅಳೆಮಟ್ಟವನ್ನು (benchmark) ತೀರ‍್ಮಾನಿಸಲಾಗುತ್ತದೆ. ಬ್ರೆಂಟ್ ಕ್ರೂಡ್ ಮತ್ತು ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ ಎಂಬುದು ಕಚ್ಚಾ ತೈಲದ ಬಗೆಗಳಾಗಿದ್ದು ಹೆಚ್ಚಿನ ಗುಣಮಟ್ಟದ್ದಾಗಿದೆ ಎಂದು ಹೇಳಲಾಗುತ್ತದೆ. ತೈಲ ಬೆಲೆಯನ್ನು ಸಾಮಾನ್ಯವಾಗಿ ಬ್ಯಾರೆಲ್ ಲೆಕ್ಕದಲ್ಲಿ ನಿಕ್ಕಿ ಮಾಡಲಾಗಿರುತ್ತದೆ. ಸುಮಾರು ದಿನಗಳಿಂದ ಒಂದು ಬ್ಯಾರೆಲ್ ಬ್ರೆಂಟ್ ಮತ್ತು ವೆಸ್ಟ್ ಟೆಕ್ಸಾಸ್ ಕಚ್ಚಾ ತೈಲದ ಬೆಲೆ, 45 ರಿಂದ 55 ಡಾಲರ್ ಒಳಗಡೆಯೇ ವಹಿವಾಟು ನಡೆಸುತ್ತಿರುವುದು, ಸದ್ಯಕ್ಕೆ ತೈಲ ಬೆಲೆ ಏರಿಕೆ ಆಗಬಹುದಿಕೆಯನ್ನು (possibility) ದೂರ ಸರಿಸುವಂತೆ ಕಾಣುತ್ತಿದೆ. ಇದನ್ನು ಸರಿದೋರಿಸುವಂತೆ (justify), “2016 ರ ಕೊನೆಗೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಮುಟ್ಟಬಹುದು” ಎಂದು ಬಿ ಪಿ ಕ್ಯಾಪಿಟಲ್ ಮೇಲಾಳಾದ ಬೂನ್ ಪಿಕನ್ಸ್ ಅವರು ಹೇಳಿದ್ದಾರೆ [ಬಿ ಪಿ ಕ್ಯಾಪಿಟಲ್ : ತೈಲದಂತಹ ಶಕ್ತಿ ಒಡಮೆಗಳ (energy resources) ಮೇಲೆ ಹೂಡಿಕೆ ಮಾಡುವ ಅಮೇರಿಕಾದ ಕಂಪೆನಿ].

ಅಮೇರಿಕಾ ಹೊಂದಿರುವ ತೈಲದ ಸೆಲೆಗಳಿಂದ (oil sources) ಹೊರ ತೆಗೆಯುತ್ತಿರುವ ತೈಲದ ಅಳವಿಯಲ್ಲಿ ಏರಿಕೆ ಕಂಡಿದ್ದು, ಅಮೆರಿಕಾ ತನ್ನ ಒಳಗಿನ ಬೇಡಿಕೆಯನ್ನು ತಕ್ಕ ಮಟ್ಟಿಗೆ ತಾನೇ ನೀಗಿಸುಕೊಳ್ಳುವಂತಾಗಿದೆ. ಇದು ಒಪೆಕ್ ನಾಡುಗಳಿಂದ ಅಮೆರಿಕಾದ ಕಚ್ಚಾ ತೈಲ ಆಮದನ್ನು ಕಡಿತಗೊಳಿಸಿದೆ. ಚೈನಾದ ಮಂದಗತಿಯ ಬೆಳವಣಿಗೆಗಳು ಆ ನಾಡಿನ ತೈಲ ಆಮದು ಕಡಿಮೆ ಆಗುವಂತೆ ಮಾಡಿದೆ. ಯುರೋಪ್ ನಿಂದಲೂ ತೈಲ ಬೇಡಿಕೆ ಕಡಿಮೆ ಆಗಿದೆ. ಹಾಗೆ ಲಿಬಿಯಾದಲ್ಲಿ ಕಚ್ಚಾ ತೈಲ ಉತ್ಪಾದನೆ ಬಹಳ ಏರಿಕೆ ಕಂಡಿದೆ. ಕಚ್ಚಾತೈಲ ಉತ್ಪಾದಿಸುವುದರಲ್ಲಿ ಮೊದಲ ಸ್ತಾನದಲ್ಲಿರುವ ಸೌದಿ ಅರೇಬಿಯಾದವರು ಇರಾನನ್ನು ಮತ್ತು ರಶ್ಯಾವನ್ನು ತೈಲ ಮಾರುಕಟ್ಟೆಯಲ್ಲಿ ಹಿಂದಿಕ್ಕುವ ಇರಾದೆ ಹೊಂದಿದ್ದಾರೆ. ಆದರಿಂದ ಬೇಡಿಕೆ ಕಡಿಮೆ ಇದ್ದರೂ ಬೆಲೆ ಕಡಿಮೆ ಮಾಡದೇ ಮಾರುಕಟ್ಟೆಯಲ್ಲಿ ತಾವೇ ಮೇಲುಗೈ ಹೊಂದುವ ನಿಲುವು ಸೌದಿಯವರದು. ಈ ಬೆಳವಣಿಗೆಗಳು ಒಪೆಕ್ ನಾಡುಗಳಿಗೆ ಸಾಮಾನ್ಯವಾಗಿ ಇರುತ್ತಿದ್ದ ಹೆಚ್ಚಿನ ತೈಲ ಬೇಡಿಕೆಯನ್ನು ತಗ್ಗಿಸಿವೆ.

ತೈಲ ಉತ್ಪಾದನೆಯನ್ನು ಕುಗ್ಗಿಸದೇ ಮುಂದುವರೆಯುವ ಸೌದಿಯವರ ನಡೆ, ಉಳಿದ ಒಪೆಕ್ ನಾಡುಗಳಿಗೆ ಮಾರುಕಟ್ಟೆಯಲ್ಲಿ ಅವರ ಉಳಿವಿಗೆ ಸವಾಲೊಡ್ಡಿದೆ. ತಾವು ಉತ್ಪಾದನೆಯನ್ನು ಕಡಿಮೆ ಮಾಡಿ, ಸೌದಿಯವರಿಗೆ ಮಾರುಕಟ್ಟೆಯಲ್ಲಿ ಮೇಲುಗೈ ಹೊಂದುವಂತೆ ಅನುವು ಮಾಡಿಕೊಳ್ಳುವುದು ಅವರಿಗೂ ಇಶ್ಟವಿಲ್ಲ. ಆದರೆ, ತಾವೂ ಈ ಪೈಪೋಟಿಯಲ್ಲಿ ಇರಬೇಕಾಗಿರುವುದು ಆ ಉಳಿದ ನಾಡುಗಳಿಗೆ ಅನಿವಾರ‍್ಯವಾಗಿದೆ. ತೈಲ ಉತ್ಪಾದನೆ ಹೆಚ್ಚಿದ್ದು ಬೇಡಿಕೆ ಕಡಿಮೆ ಇರುವ ಬೆಳವಣಿಗೆಗಳು ಈಗ ತೈಲ ಬೆಲೆ ಕಡಿಮೆಯಾಗುವಂತೆ ಮಾಡಿವೆ ಮತ್ತು ಹೆಚ್ಚಿನ ಕಾಲ ಇದು ಹೀಗೆ ಮುಂದುವರೆಯುವ ಸೂಚನೆ ತೋರುತ್ತಿರುವುದೂ ನಿಜ. ಆದರೆ ತೈಲ ಬೆಲೆ ಕುಸಿತ ಆ ನಾಡುಗಳ ಗಳಿಕೆಯ ಮೇಲೆ ಮತ್ತು ಹಣಕಾಸಿನ ಏರ‍್ಪಾಡಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರಿಂದ, ತೈಲ ಬೆಲೆ ಕುಸಿತವನ್ನು ಆ ನಾಡುಗಳು ಎಲ್ಲಿಯವರೆಗೂ ತಾಳಿಕೊಳ್ಳಬಲ್ಲವು ಮತ್ತು ಹೇಗೆ ಸಂಬಾಳಿಸಬಲ್ಲವು ಎಂಬುದನ್ನು ಕಾದು ನೋಡಬೇಕಿದೆ!

(ಚಿತ್ರ ಸೆಲೆ : ivoffshore.com )

(ಮಾಹಿತಿ ಸೆಲೆ : wiki-WestTexasIntermediatewiki-BrentCrudeeconomictimes.indiatimes.comespresso.economist.com

theweek.co.ukeconomist.comreuters.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: