“ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ”

– ಅನ್ನದಾನೇಶ ಶಿ. ಸಂಕದಾಳ.

Dalailama

ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ

ಇಂತಾ ಹೇಳಿಕೆ ನೀಡಿರುವ ಟಿಬೆಟನ್ ಬುದ್ದಿಸಂ ಗುರು 14ನೆ ದಲಾಯಿ ಲಾಮಾ, ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ‘ಚೀನಾದಲ್ಲಿ ಟಿಬೆಟನ್ ಬುದ್ದಿಸಂ ಅನ್ನು ಹತ್ತಿಕ್ಕಲಾಗುತ್ತದೆ’ ಎಂಬ ತಿರುಳು ಹೊಂದಿದೆ ಎಂಬುದೇ ಚೀನಾದವರ ಸಿಟ್ಟಿಗೆ ಕಾರಣ. “ದಲಾಯಿ ಲಾಮಾರವರ ಹೇಳಿಕೆ ಚೀನಾದವರ ನಡವಳಿಕೆಯನ್ನು ಜಗತ್ತಿನ ಮುಂದೆ ಕೆಟ್ಟದಾಗಿ ಬಿಂಬಿಸುತ್ತದೆ, ತಮ್ಮ ಹೇಳಿಕೆ ಮೂಲಕ ಟಿಬೆಟನ್ ಬುದ್ದಿಸಂ ಗೆ ದಲಾಯಿ ಲಾಮಾರವರು ತಕ್ಕಮೆಯನ್ನು (respect) ತೋರಿಸುತ್ತಿಲ್ಲ” ಎಂದು ಚೀನಾದ ನಾಯಕರು ದೂರುತ್ತಿದ್ದಾರೆ.

ಬುದ್ದಿಸಂ ನ ಒಂದು ಬಗೆಯಾದ ಟಿಬೆಟನ್ ಬುದ್ದಿಸಂ, ಬೌದ್ದ ದರ‍್ಮ ತಿಳಿಯಪಡಿಸುವ – ನಂಬಿಕೆಗಳನ್ನು, ವಾಡಿಕೆಗಳನ್ನು, ಕಟ್ಟುಪಾಡುಗಳನ್ನು ಮಂದಿಗೆ ತಿಳಿಸುವ ದರ‍್ಮವಾಗಿದೆ. ಗೌತಮ ಬುದ್ದನ ಕಲಿಸುಗೆಗಳೇ (teaching) ತಮ್ಮ ದರ‍್ಮ ಹೊಂದಿರುವ ವಾಡಿಕೆ ಮತ್ತು ಕಟ್ಟುಪಾಡುಗಳ ಸೆಲೆ ಎಂದು ಈ ದರ‍್ಮದ ಹಿಂಬಾಲಕರ ಗಟ್ಟಿಯಾದ ನಂಬಿಕೆಯಾಗಿದೆ. ಈ ದರ‍್ಮದ ನಂಬಿಕೆಗಳ ಮತ್ತು ಕಟ್ಟುಪಾಡುಗಳನ್ನು ತಿಳಿಸಲು ನಾನಾ ಕಲಿಕೆಮನೆಗಳಿದ್ದು ಅವುಗಳನ್ನು 5 ಗುಂಪುಗಳಾಗಿ ಮಾಡಲಾಗಿತ್ತು. ನ್ಯಿಂಗ್ಮಾ ( Nyingma ), ಕಾಗ್ಯು (Kagyu), ಸಕ್ಯ (Sakya), ಗೆಲುಗ್ (Gelug) ಮತ್ತು ಜೋನಾಂಗ್ (Jonang) ಎಂಬುದೇ ಆ ಕಲಿಕೆಮನೆಗಳು (institutions). ಸಕ್ಯಾ ಗುಂಪಿನ ಕಲಿಸುಗೆಯಿಂದ ಕವಲೊಡೆದು ಬೇರೆಯೇ ಗುಂಪಾಗಿದ್ದ ಜೋನಾಂಗನ್ನು, 1650 ರಲ್ಲಿ ಗೆಲುಗ್ ಗುಂಪಿನಲ್ಲಿ ಒಂದಾಗಿಸುವ ಮೂಲಕ ಕಲಿಕೆಮನೆಗಳ ಗುಂಪುಗಳು ಇಂದಿಗೆ ನಾಲ್ಕಾಗಿವೆ. ಮೊದಲ ಮೂರು ಕಲಿಕೆಮನೆಗಳನ್ನು ‘ಕೆಂಪು ಟೊಪ್ಪಿ ಕಲಿಕೆಮನೆ’ (red hat school) ಎಂದೂ, ಗೆಲುಗ್ ಗುಂಪನ್ನು ‘ಹಳದಿ ಟೊಪ್ಪಿ ಕಲಿಕೆಮನೆ’ (yellow hat school) ಎಂದು ಕರೆಯಲಾಗುತ್ತದೆ. ಗೆಲುಗ್ ಪಂಗಡ, ಟಿಬೆಟನ್ ಬುದ್ದಿಸಂ ನ ಹೊಸ ತಲೆಮಾರಿನ ಕಲಿಕೆಮನೆ ಎಂದೂ ಹೇಳುತ್ತಾರೆ.

ನಾಲ್ಕೂ ಗುಂಪಿನ ಕಲಿಕೆಮನೆಗಳು ದರ‍್ಮದ ಬಗ್ಗೆ ಹೇಳಿಕೊಡುವ ಶೇ 80 ರಶ್ಟು ಕಲಿಸುಗೆ ಒಂದೇ ಆಗಿವೆ. ಬೇರ‍್ಮೆ ಇರುವುದು ‘ಕೆಲವು ಪದಗಳ ಬಳಕೆಯಲ್ಲಿ, ಅವುಗಳ ಹುರುಳನ್ನು ತಿಳಿಯುವುದರಲ್ಲಿ, ಬುದ್ದನ ಅನಿಸಿಕೆ ಹೀಗಿದ್ದಿರಬಹುದೇ?’ ಎಂಬ ವಿಶಯಗಳ ಕುರಿತಾಗಿದೆ ಎಂದು ಹೇಳಲಾಗುತ್ತದೆ. ದರ‍್ಮದ ಬಗ್ಗೆ ತಿಳಿಸುವವರನ್ನು ‘ಲಾಮಾ’ ಎಂದು ಟಿಬೆಟನ್ ಬುದ್ದಿಸಂ ನಲ್ಲಿ ಹೇಳುವರು. ಗೆಲುಗ್ ಕಲಿಕೆ ಮನೆಯಲ್ಲಿ ದರ‍್ಮದ ಬಗ್ಗೆ ತಿಳಿಸುವ ಕಲಿಸುಗರ ಗುಂಪನ್ನು ‘ದಲಾಯಿ ಲಾಮಾಗಳು’ ಎಂದು ಕರೆಯುತ್ತಾರೆ. ಈ ಕಲಿಸುಗರು ಬಿಡುಗರಾಗಿದ್ದು (monks) ಇವರಲ್ಲಿ ಒಬ್ಬರನ್ನು ಗುರುವಾಗಿ ಆರಿಸಿ ‘ದಲಾಯಿ ಲಾಮಾ’ ಎಂಬ ಪಟ್ಟವನ್ನು ಕೊಡಲಾಗುತ್ತದೆ. ಈಗಿರುವ ದಲಾಯಿ ಲಾಮಾರಾದ ತೆನ್ಜಿನ್ ಗ್ಯಾತ್ಸೊ (Tenzin Gyatso) ಆ ಪಟ್ಟಕ್ಕೆ ಹದಿನಾಲ್ಕನೆಯವರು. ಈ ಪಟ್ಟದಲ್ಲಿರುವವರು ಟಿಬೆಟನ್ ಸರಕಾರವನ್ನೂ ನಡೆಸಬಲ್ಲವರಾಗಿರುವರು.tibetans

ಮುಂದಿನ ದಲಾಯಿ ಲಾಮಾರನ್ನು ಆರಿಸುವ ಬಗೆ ಬೇರೆಯೇ ಇದ್ದು, ಅದು ಹಿಂದಿನ ದಲಾಯಿ ಲಾಮಾರ ಮರುಹುಟ್ಟಿನ ಮೇಲೆ ನಿಂತಿರುತ್ತದೆ. ಟಿಬೆಟನ್ ಬುದ್ದಿಸಂ ಮರುಹುಟ್ಟಿನ (reincarnation) ಬಗ್ಗೆ ಹೆಚ್ಚಿನ ನಂಬಿಕೆ ಹೊಂದಿದೆ. ದಲಾಯಿ ಲಾಮಾರು ತಮ್ಮ ಮರುಹುಟ್ಟಿನ ಮಾಹಿತಿಯನ್ನು ತಿಳಿಸಬಲ್ಲವರಾಗಿರುತ್ತಾರೆ ಎಂದು ಹೇಳಲಾಗುತ್ತದೆ.ಲಾಮಾರು ಸತ್ತ ಮೇಲೆ ಅವರ ದೇಹವನ್ನು ಗದ್ದುಗೆಯ ಮೇಲಿಟ್ಟು ಅದನ್ನು ಸುಮಾರು ಹೊತ್ತು ಗಮನಿಸಲಾಗುತ್ತದೆ. ತಲೆಯ ಬಾಗ ಯಾವ ದಿಕ್ಕಿಗೆ ತಿರುಗುವುದೋ ಆ ದಿಕ್ಕಿನಲ್ಲಿ ಮುಂದಿನ ದಲಾಯಿ ಲಾಮಾ ಇದ್ದಾರೆಂದು ಅವರ ನಂಬಿಕೆ. ಒಂದು ವೇಳೆ ದೇಹವನ್ನು ಸುಟ್ಟರೆ ಹೊಗೆಯು ಯಾವ ದಿಕ್ಕಿನೆಡೆ ಹೋಗುವುದು ಎಂಬುದನ್ನು ಗಮನಿಸಿ ಆ ದಿಕ್ಕಿನೆಡೆ ಮುಂದಿನ ಲಾಮಾರ ಹುಡುಕಾಟ ನಡೆಸಲಾಗುವುದು. ತಾವು ತುಂಬಾ ಪವಿತ್ರ ಎಂದು ನಂಬಿರುವ ‘ಲಾಮೋ ಲಾಟ್ಸೋ’ (Lhamo Lhatso) ಎಂಬ ಕೊಳದ ಬದಿ ದ್ಯಾನಕ್ಕೆ ಕುಳಿತಾಗ ಮುಂದಿನ ದಲಾಯಿ ಲಾಮಾರ ಚಿತ್ರಣ ಸಿಗುವುದೆಂದೂ, ಅದರ ನೆಲೆಯ ಮೇಲೆ ಮುಂದಿನ ಗುರುಗಳ ಪತ್ತೆಹಚ್ಚುವ ವಾಡಿಕೆ ಇಟ್ಟುಕೊಂಡಿರುವರು. ಹೀಗೆ ತಮಗೆ ದೊರಕಿರುವ ಮಾಹಿತಿ ಬಳಸಿ ಚಿಕ್ಕ ಹುಡುಗರನ್ನು ಮಾತಾಡಿಸಿ ಹಿಂದಿನ ಲಾಮಾರು ಬಳಸುತ್ತಿದ್ದ ವಸ್ತುಗಳನ್ನು ಆ ಹುಡುಗರ ಮುಂದಿಟ್ಟು ಗುರುತಿಸಲು ಹೇಳುವರು. ವಸ್ತುಗಳನ್ನು ಗುರುತು ಹಿಡಿದ ಹುಡುಗನೇ ಹಿಂದಿನ ದಲಾಯಿ ಲಾಮರ ಮರುಹುಟ್ಟು ಎಂದು ತಿಳಿದು, ಆ ಹುಡುಗನನ್ನು, ಕಲಿಕೆ ಮನೆಗಳಿಗೆ ಕರೆತಂದು ಮುಂದಿನ ಗುರುಗಳಾಗಲು ತರಬೇತಿ ನೀಡುವರು. ಹೀಗೆ ಹಲವಾರು ನಂಬಿಕೆಗಳ ಮತ್ತು ವಾಡಿಕೆಗಳ ನೆಲೆಯ ಮೇಲೆ ಮುಂದಿನ ಗುರುಗಳ ಆಯ್ಕೆ ನಡೆಯುತ್ತದೆ.

ಹೀಗಿರುವಾಗ ತೆನ್ಜಿನ್ ಗ್ಯಾತ್ಸೊ ತಾವೇ ಕಡೆಯ ದಲಾಯಿ ಲಾಮಾ ಆಗಬಹುದು ಎಂದು ಹೇಳಿರುವುದು ಟಿಬೆಟನ್ನರ ಕಳವಳಕ್ಕೆ ಕಾರಣವಾಗಿದೆ. ಚೀನಾದ ಆಳ್ವಿಕೆಯಡಿ ಇದ್ದರೂ ಚೀನಾದಿಂದ ಬಿಡುಗಡೆ ಹೊಂದಿ ಟಿಬೆಟನ್ನರು ತಮ್ಮಾಳ್ವಿಕೆಯನ್ನು ಬಯಸುವರು. ತಮಗೆ ತಮ್ಮದೇ ಆದ ಗುರುತು ಇದ್ದು ಹಿನ್ನಡವಳಿಯಲ್ಲೂ (history) ತಮ್ಮನ್ನು ತಾವೇ ಆಳಿಕೊಂಡಿದ್ದಿದೆ ಎಂಬುದು ಟಿಬೆಟನ್ನರ ಗಟ್ಟಿಯಾದ ಹೇಳಿಕೆ. ಆದರೆ ಟಿಬೆಟ್ ಯಾವಾಗಲೂ ಚೀನಾದ ಆಳ್ವಿಕೆಯಲ್ಲೇ ಇತ್ತು ಎಂಬುದು ಚೀನಾದವರ ವಾದ. ಈ ವಿಚಾರವಾಗಿ ಮೊದಲಿಂದಲೂ ಚೀನಾ ಮತ್ತು ಟಿಬೆಟನ್ನರ ನಡುವೆ ತಿಕ್ಕಾಟ ನಡೆದೇ ಇದೆ. ಏಳಿಗೆಯ ಹೆಸರಿನಲ್ಲಿ ಟಿಬೆಟನ್ನರು ಇರುವ ಜಾಗಕ್ಕೆ ಚೀನಾ ರೈಲು ಸಂಪರ‍್ಕ ಒದಗಿಸಿದರು. ಅದಾದ ಮೇಲೆ ಚೀನಾದಿಂದ ಹೆಚ್ಚು ಮಂದಿ ವಲಸೆ ಬಂದು ಟಿಬೆಟನ್ನರ ನಡೆ-ನುಡಿಗೆ ದಕ್ಕೆಯಾಗಿದೆ ಎಂಬುದು ಟಿಬೆಟನ್ನರಿಗೆ ಅನಿಸಿದೆ. ಬಿಡುಗಡೆ ಬಯಸಿ 1959 ರಲ್ಲಿ ಟಿಬೆಟನ್ನರ ಹೋರಾಟ ಬಿರುಸಾದಾಗ ಚೀನಾ ಅದನ್ನು ಗಟ್ಟಿಯಾಗಿ ಹತ್ತಿಕ್ಕಿತು. ಇದನ್ನು ಕಂಡು ಬೇಸತ್ತ 14ನೆ ದಲಾಯಿ ಲಾಮಾ ತೆನ್ಜಿನ್ ಗ್ಯಾತ್ಸೊ, ಆ ವರ‍್ಶ ಅಂದರೆ 1959 ರಲ್ಲಿ ಟಿಬೆಟ್ ಇಂದ ಹೊರ ಬಂದು ಮತ್ತೆ ಇದುವರೆಗೂ ಅಲ್ಲಿ ಕಾಲಿಟ್ಟಿಲ್ಲ ಎಂದು ಹೇಳಲಾಗುತ್ತದೆ. “ಮರುಕವಿಲ್ಲದ ನಾಡಿನಲ್ಲಿರುವ (ಚೀನಾ) ಬೇರೊಬ್ಬರ ದೇಹದಲ್ಲಿ ತನ್ನ ಮರುಹುಟ್ಟು ಸಾದ್ಯವಿಲ್ಲ, ಕಡೆಯ ದಲಾಯಿ ಲಾಮಾ ನಾನೇ ಇರಬಹುದು” ಎಂಬ ಅವರ ಹೇಳಿಕೆಯ ಹಿಂದಿರುವ ಹಿನ್ನೆಲೆ ಇದಾಗಿದೆ.

ಟಿಬೆಟನ್ನರ ಗುರುಗಳ ಆಯ್ಕೆ ಬಹಳ ನಂಬಿಕೆಗಳ ಮೇಲೆ ನಡೆಯುತ್ತಿದ್ದರೂ, ಚೀನಾದವರು ಮಾತ್ರ “ನಿಮ್ಮ ದಲಾಯಿ ಲಾಮಾರ ಆಯ್ಕೆಗೆ ನಮ್ಮ ಒಪ್ಪಿಗೆ ಇರಲೇ ಬೇಕಿದೆ” ಎಂದು ಹೇಳಿ ಟಿಬೆಟನ್ನರ ವಿಶಯದಲ್ಲಿ ಮೂಗು ತೂರಿಸಿದ್ದು ಟಿಬೆಟನ್ನರ ಸಿಟ್ಟಿಗೆ ಕಾರಣವಾಗಿದೆ. ಚೀನಾಗೆ, ತನ್ನ ಅತಿ ದೊಡ್ಡ ಪ್ರಾಂತ್ಯವಾದ ಕ್ಸಿನ್ಜಿಯಾಂಗ್ (Xinjiang) ನಲ್ಲಿರುವ ಮುಸಲ್ಮಾನರಿಂದ ಹೆಚ್ಚಿನ ಬೆದರಿಕೆ ಇದ್ದು ಒಳನಾಡ ಕಾವಲು ಅದಕ್ಕೆ ಮುಕ್ಯವಾಗಿದೆ. ಆ ನಿಟ್ಟಿನಲ್ಲಿ ಟಿಬೆಟನ್ನರ ಕೋಪವನ್ನು ಕಡಿಮೆ ಮಾಡಲು ದಲಾಯಿ ಲಾಮಾರನ್ನು ಸಂತೈಸಿ ಟಿಬೆಟ್ ಗೆ ಮರಳಿ ಕರೆ ತಂದರೆ ಹೊರನಾಡುಗಳ ಕಣ್ಣಿನಲ್ಲಿ ತಕ್ಕ ಮಟ್ಟಿಗೆ ಒಳ್ಳೆಯ ಹೆಸರನ್ನು ಗಳಿಸಬಹುದು ಎಂಬುದು ಬಲ್ಲವರ ಅನಿಸಿಕೆ.

( ಚಿತ್ರ ಸೆಲೆ : upload.wikimedia.orgs1.zetaboards.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: