ಇಂದು ಹಬಲ್‍ಗೆ ತುಂಬಿದವು 25 ವರುಶಗಳು

ಪ್ರಶಾಂತ ಸೊರಟೂರ‍.

Hubble_in space_image_discovary
ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ ತಿಳಿದುಬರುತ್ತದೆ. ಹಲವು ನೂರು ವರುಶಗಳು ಬಾನಾಳವನ್ನು ಬರಿಗಣ್ಣಿನಿಂದ ಕಂಡು, ಅದರಿಂದ ಹೊಮ್ಮುವ ಅರಿವನ್ನು ಮನುಶ್ಯರು ತಿಳಿದುಕೊಂಡಿದ್ದರೂ, ಆಳ ಇನ್ನೂ ಆಳಕ್ಕೆ ನೋಡುವ ತಮ್ಮ ಕುತೂಹಲವನ್ನೇನೂ ಬಿಡಲಿಲ್ಲ. ಈ ತುಡಿತವು ಮುಂದಿನ ದಿನಗಳಲ್ಲಿ ಬೆಳಕಿನ ಮತ್ತು ಗಾಜಿನ ಗುಣಗಳನ್ನು ಬಳಸಿ ದೂರದ ವಸ್ತುವನ್ನು ದೊಡ್ಡದಾಗಿ ಹತ್ತಿರದಿಂದ ನೋಡುವ ದೂರತೋರುಕ (telescope) ಎಂಬ ಸಲಕರಣೆಯನ್ನು ಕಂಡುಹಿಡಿಯುವಂತೆ ಮಾಡಿತು.

17 ನೇ ಶತಮಾನದ ಶುರುವಿನಲ್ಲಿ ನೆದರಲ್ಯಾಂಡ್ಸ್ ನಲ್ಲಿ ಮೊದಲಬಾರಿಗೆ ದೂರತೋರುಕವನ್ನು ಮಾಡಲಾಯಿತು. 1608 ರಲ್ಲಿ ಹನ್ಸ್ ಲಿಪ್ಪರ್ಶೆ (Hans Lippershey), ಜಾಚಾರಿಯಸ್ ಜಾನ್ಸನ್ (Zacharias Janssen) ಮತ್ತು ಜೇಕಬ್ ಮಿಟಿಯ್ಸ್ (Jacob Metius) ಎಂಬ ಮೂವರು ಡಚ್ಚರು ಮೊಟ್ಟ ಮೊದಲಬಾರಿಗೆ ದೂರತೋರುಕವನ್ನು ಮಾಡಿದರು. 1609 ರಲ್ಲಿ ಇಟಲಿಯ ಗೆಲಿಲಿಯೋ ಗೆಲಿಲಿ (Galileo Galilei) ದೂರತೋರುಕದ ಕಟ್ಟಣೆಯನ್ನು ಸುದಾರಿಸಿ, ಅದನ್ನು ಬಳಕೆಗೆ ತಂದರು. ಹೀಗೆ ಶುರುವಾದ ದೂರುತೋರುಕದ ಪಯಣ ಮುಂದಿನ ಶತಮಾನಗಳಲ್ಲಿ ಹಲವು ಬೆಳವಣಿಗೆಯನ್ನು ಕಂಡಿತು. 20-21 ನೇ ಶತಮಾನದಲ್ಲಂತೂ ಇದರಲ್ಲಿ ಸಾಕಶ್ಟು ಸುದಾರಣೆಗಳಾದವು.

ದೂರುತೋರುಕಕ್ಕೆ ಹೆಚ್ಚಿನ ಕಸುವು ತುಂಬಬಹುದಾದ ಹೊಸದೊಂದು ತಿಳಿವನ್ನು ಬಾನರಿಗರಾಗಿದ್ದ (astronomer) ಲಿಮನ್ ಸ್ಪಿಟ್ಜರ್ (Lyman Spitzer) 1946 ರಲ್ಲಿ ತಮ್ಮ ಅರಕೆಹಾಳೆಯಲ್ಲಿ (research paper) ಮುಂದಿಟ್ಟರು. ಆ ಹೊಳಹು ಏನೆಂದರೆ ಅಲ್ಲಿಯವರೆಗೆ ಬರೀ ನೆಲದಲ್ಲಿ ನೆಲೆಗೊಳಿಸಿ ಬಾನಿನತ್ತ ನೋಟ ಬೀರುತ್ತಿದ್ದ ದೂರತೋರುಕವನ್ನು ನೆಲದಾಚೆ ಬಾನಿನಲ್ಲಿಯೇ ಅಣಿಗೊಳಿಸುವುದು! ನೆಲದ ಸುತ್ತಣದಾಚೆ ಬಾನಿನಲ್ಲಿ ದೂರತೋರುಕವನ್ನು ಅಣಿಗೊಳಿಸುವುದರಿಂದ ಮುಕ್ಯವಾಗಿ ಎರಡು ಪ್ರಯೋಜನಗಳಿವೆಯೆಂದು ಸ್ಪಿಟ್ಜರ್ ಸಾರಿದರು. ಅವುಗಳೆಂದರೆ,

1) ನೆಲದಲ್ಲಿರುವ ದೂರತೋರುಕವನ್ನು ತಲುಪಲು ಬೆಳಕು ನೆಲದ ಸುತ್ತಣವನ್ನು ದಾಟಿ ಬರಬೇಕಾಗುತ್ತದೆ. ನೆಲದ ಸುತ್ತಣವು ಬೆಳಕಿನ ಗುಣಮಟ್ಟವನ್ನು ಕಡಿಮೆಗೊಳಿಸುವುದರಿಂದ, ನೆಲದಲ್ಲಿರುವ ದೂರತೋರುಕದ ಮೂಲಕ ಕಾಣುವ ದೂರದ ವಸ್ತುವಿನ ನೋಟದ ಗುಣಮಟ್ಟವೂ ಕಡಿಮೆಯಾಗಿರುತ್ತದೆ. ಅದೇ ಬಾನಾಳಾದಲ್ಲಿರುವ ದೂರದ ವಸ್ತುವನ್ನು ಬಾನಿನಿಂದಲೇ ನೋಡಿದಾಗ ನೆಲದ ಸುತ್ತಣದ ಅಡ್ಡಿಯಿರದೇ ಹೆಚ್ಚಿನ ಗುಣಮಟ್ಟದ ನೋಟವು ದೂರತೋರುಕಕ್ಕೆ ಎಟುಕುವುಂತಾಗುವುದು.

2) ಬಾನಾಳಾದಲ್ಲಿರುವ ದೂರದ ವಸ್ತುವು ‘ಕಾಣುವ ಬೆಳಕಿನ’ (visible light) ಜತೆಗೆ ಕಡುನೇರಳೆ ಕದಿರುಗಳಂತಹ (ultra violet rays) ಇನ್ನೂ ಕೆಲವು ಕಾಣದ ಅಲೆಗಳನ್ನೂ ಸೂಸುತ್ತವೆ. ಆದರೆ ನೆಲದ ಸುತ್ತಣವು ಈ ಅಲೆಗಳನ್ನು ಹೀರಿಕೊಳ್ಳುವುದರಿಂದ ನೆಲದಲ್ಲಿ ಅಣಿಗೊಂಡಿರುವ ದೂರತೋರುಕಕ್ಕೆ ಈ ಬಗೆಯ ಅಲೆಗಳು ತಲುಪುವುದಿಲ್ಲ. ಬಾನಿನಲ್ಲಿ ನೆಲೆಗೊಂಡ ದೂರತೋರುಕಕ್ಕೆ ಈ ಬಗೆಯ ಅಡೆತಡೆಯಿರುವುದಿಲ್ಲ ಹೀಗಾಗಿ ದೂರದ ವಸ್ತುಗಳು ಸೂಸುವ ಕಾಣದ ಬೆಳಕಿನ ಅಲೆಗಳನ್ನೂ ತಕ್ಕುದಾದ ಸಲಕರಣೆಗಳನ್ನು ಬಳಸಿ ಸೆರೆಹಿಡಿಯಬಲ್ಲದು. ಇದರಿಂದಾಗಿ ಬಾನಾಳದ ತಿಳುವಳಿಕೆ ಹಲವು ಪಟ್ಟು ಹೆಚ್ಚುತ್ತದೆ.

ಮುಂದಿನ ಹಲವು ವರುಶಗಳು ಮೇಲಿನ ಒಳಿತುಗಳನ್ನು ಬಳಸಿಕೊಳ್ಳುವಂತಹ ದೂರತೋರುಕದ ಕಟ್ಟಣೆಯಲ್ಲಿ ಜಗತ್ತಿನ ಹಲವು ಅರಿಗರು ತೊಡಗಿದರು. ಈ ಎಡೆಬಿಡದ ಕೆಲಸದಲ್ಲಿ ಅಚ್ಚಳಿಯದ ಗೆಲುವು ಸಿಕ್ಕಿದ್ದು 1990 ರಲ್ಲಿ. ಅಮೇರಿಕಾದ ನಾಸಾ (NASA) ಮತ್ತು ಯುರೋಪಿನ ಬಾನರಿಮೆ ಕೂಟ (European Space Agency – ESA) ಒಡಗೂಡಿ 24.04.1990 ರಂದು ಹಬಲ್ (Hubble) ಎಂಬ ದೂರತೋರುಕವನ್ನು ಬಾನಿಗೇರಿಸಿತು.

hubble_1(ಹಬಲ್‍ನ ಹೊರಬಾಗಗಳು)

hubble_2(ಹಬಲ್‍ನ ಬಾಗಗಳು)

ಮುಂದಿನ ಹಲವು ವರುಶಗಳು ಬಾನಾಳಾದ ಬಗ್ಗೆ ಮನುಶ್ಯರ ತಿಳುವಳಿಕೆಯನ್ನೇ ಈ ಹಬಲ್ ದೂರತೋರುಕ ಬದಲಾಯಿಸಿತೆಂದರೆ ತಪ್ಪಾಗದು. ತನ್ನಲ್ಲಿರುವ ಸಲಕರಣೆಗಳಿಂದ ಹಿಂದೆಂದೂ ಕಂಡಿರದ ಬಾನಾಳದ ನೋಟವನ್ನು ಸೆರೆಹಿಡಿದ ಹಬಲ್, ಜಗತ್ತಿನೆಲ್ಲೆಡೆಯ ಅರಿಗರ ನೆಚ್ಚಿನ ಅರಿಮೆಯ ಸಲಕರಣೆಯಾಗಿದೆ.

ನೆಲದಿಂದ ಸುಮಾರು 552 ಕಿ.ಮೀ. ಎತ್ತರದಲ್ಲಿ ನೆಲದ ಸುತ್ತ ಸುತ್ತುವ ಹಬಲ್, ಬಾನಾಳಾದಲ್ಲಿ ಹೊಮ್ಮುವ ಬೆಳಕಿನ ಅಲೆಗಳನ್ನು ಸೆರೆಹಿಡಿಯುವ ಕಸುವು ಹೊಂದಿದೆ.

hubble_3_orbit

ಅದು ಸೆರೆಹಿಡಿದ ಬಾನಾಳಾದ ಬೆಳಕಿನ ಅಲೆಗಳ ಆದಾರದ ಮೇಲೆ ಹಿರಿ ಹಬ್ಬುವಿಕೆ (Big Bang) ಸುಮಾರು 13.4 ಬಿಲಿಯನ್ ವರುಶಗಳ ಹಿಂದೆ ಆಗಿದೆಯೆಂದು ಎಣಿಸಲಾಗಿದೆ. ನಮ್ಮ ಅರಿವಿಗೆ ಇಡಿಯಾಗಿ ಇನ್ನೂ ಎಟುಕದಿರುವ ಕಪ್ಪು ಶಕ್ತಿಯ (dark energy) ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುವಂತ ಹಲವಾರು ವಿಶಯಗಳು ಹಬಲ್ ಸೆರೆಹಿಡಿದ ತಿಟ್ಟಗಳಿಂದಾಗಿ ಗೊತ್ತಾಗಿವೆ.

Eagle_nebula_pillars(ಹಬಲ್ ಸೆರೆಹಿಡಿದ ಎಲ್ಲಕ್ಕಿಂತ ಹೆಸರುವಾಸಿಯಾದ ಇಗಲ್ ಬಾನ್ಮೋಡದ [nebula] ತಿಟ್ಟ)

 

0105-4x5color.ai

(ಹಬಲ್‍ನ 25 ನೇ ವರುಶದ ಹುಟ್ಟುಹಬ್ಬದ ನೆನಪಿಗಾಗಿ ನೆನ್ನೆ ನಾಸಾ ಹೊರತಂದ ತಿಟ್ಟ. ಸುಮಾರು 3000 ನಕ್ಶತ್ರಗಳನ್ನು ಹೊಂದಿರುವ ಈ ಹೊಳೆಯುವ ಗೊಂಚಲು 20,000 ಬೆಳಕಿನ ವರುಶಗಳಶ್ಟು ದೂರವಿದೆ. ಹಬಲ್ ಈ ತಿಟ್ಟವನ್ನು ಸೆರೆಹಿಡಿದಿತ್ತು)

ಹಬಲ್ ಬಾನಿಗೇರಿ ಇಂದಿಗೆ 25 ವರುಶಗಳಾದವು! ಬಾನಿನ ಬಗ್ಗೆ ನಮಗಿರುವ ತಿಳುವಳಿಕೆಯನ್ನು ಹೆಚ್ಚಿಸುತ್ತಿರುವ ಹಬಲ್ ಇನ್ನಶ್ಟು ಅರಿವನ್ನು ಹೊಮ್ಮಿಸುವಂತಾಗಲಿ.

(ತಿಳಿವಿನ ಮತ್ತು ತಿಟ್ಟ ಸೆಲೆಗಳು: http://hubblesite.org/, wikipedia.org, news.bbc.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: