ಚೀನಾ ಬಡ್ಡಿ ದರ ಕಡಿತಗೊಳಿಸುತ್ತಿರುವ ಕಾರಣವೇನು?

– ಅನ್ನದಾನೇಶ ಶಿ. ಸಂಕದಾಳ.

CHINASTOCKSAFP

ಚೀನಾದ ಸೆಂಟ್ರಲ್ ಬ್ಯಾಂಕ್ ಆದ ‘ಪೀಪಲ್ಸ್ ಬ್ಯಾಂಕ್ ಆಪ್ ಚೀನಾ’ ಮತ್ತೊಮ್ಮೆ ಬಡ್ಡಿ ದರವನ್ನು ಕಡಿತಗೊಳಿಸಿದೆ. ಪೀಪಲ್ಸ್ ಬ್ಯಾಂಕ್ ಆಪ್ ಚೀನಾ ಕಳೆದ ಆರು ತಿಂಗಳುಗಳಲ್ಲಿ ಬಡ್ಡಿ ದರ ಕಡಿತಗೊಳಿಸುತ್ತಿರುವುದು ಇದು ಮೂರನೇ ಬಾರಿ. ಚೀನಾದ ಹಣಕಾಸು ಏರ‍್ಪಾಟಿನ ಸ್ತಿತಿ-ಗತಿ ಎಣಿಸಿದ ಹಾಗೆ ಮುನ್ನಡೆ ಕಾಣುತ್ತಿಲ್ಲ. ಚೀನಾದ ಹಣಕಾಸಿನ ವಹಿವಾಟುಗಳು ಮಂದಗತಿಯಿಂದ ನಡೆಯುತ್ತಿರುವುದು, ಚೀನಾದ ಮೇಲಿರುವ ಸಾಲದ ಹೊರೆ ಹೆಚ್ಚುತ್ತಿರುವುದು – ಪದೇ ಪದೇ ಬಡ್ಡಿ ದರ ಕಡಿತಗೊಳಿಸುತ್ತಿರುವ ಹಿಂದಿನ ಕಾರಣವಾಗಿದೆ.

ಕಂಪನಿಗಳಿಗೆ, ಕೊಳ್ಳುಗರಿಗೆ ಬೇಕೆಂದಾಗ, ತಾನು ತೀರ‍್ಮಾನಿಸಿದ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುವುದು, ತಮ್ಮಲ್ಲಿ ಹಣವನ್ನು ಕೂಡಿಡುವವರಿಗೆ ಬಡ್ಡಿಯನ್ನು ಕೊಡುವ ಕೆಲಸವನ್ನು ಹಣಮನೆಗಳು ಮಾಡುತ್ತವೆ. ತಮ್ಮ ಬಳಿ ಇರುವ ಹಣ ಸಾಲದಾದಾಗ ಆ ನಾಡಿನ ಸೆಂಟ್ರಲ್ ಬ್ಯಾಂಕ್ ನಿಂದ ದುಡ್ಡನ್ನು ಉಳಿದ ಬ್ಯಾಂಕುಗಳು ಪಡೆಯುತ್ತವೆ. ಉಳಿದ ಬ್ಯಾಂಕುಗಳಿಗೆ ಹಣವನ್ನು ಕೊಡುವಾಗ ಸೆಂಟ್ರಲ್ ಬ್ಯಾಂಕ್ ತಾನೂ ಕೂಡ ಆ ಹಣದ ಮೇಲೆ ಬಡ್ಡಿಯನ್ನು ಹಾಕುತ್ತದೆ. ಅದನ್ನು ‘ರೆಪೋ ದರ’ವೆಂದು ಕರೆಯಲಾಗುತ್ತದೆ. ರೆಪೋ ದರವು ಕಡಿಮೆ ಇದ್ದಾಗ ಸೆಂಟ್ರಲ್ ಬ್ಯಾಂಕ್ ನಿಂದ ದೊರೆಯುವ ಹಣ ‘ಕಡಿಮೆ ದರ’ಕ್ಕೆ ದೊರೆಯುತ್ತದೆ, ರೆಪೋ ದರ ಹೆಚ್ಚಿದ್ದಾಗ ಸೆಂಟ್ರಲ್ ಬ್ಯಾಂಕ್ ನಿಂದ ಪಡೆಯುವ ಹಣ ತುಟ್ಟಿಯಾಗುತ್ತದೆ ಎಂದು ತಿಳಿಯಬಹುದು. ಬ್ಯಾಂಕುಗಳು ತಮ್ಮಲ್ಲಿ ಹೆಚ್ಚಿದ್ದ ಹಣವನ್ನು ಸೆಂಟ್ರಲ್ ಬ್ಯಾಂಕ್ ನಲ್ಲಿ ಇಡುವವು. ಆ ಹಣಕ್ಕೆ ಸೆಂಟ್ರಲ್ ಬ್ಯಾಂಕ್ ನೀಡುವ ಬಡ್ಡಿ ದರವನ್ನು ‘ತಿರು ರೆಪೋ ದರ'(reverse repo rate) ಎಂದು ಕರೆಯಲಾಗುತ್ತದೆ.

ಒಂದು ನಾಡಿನ ಹಣಕಾಸಿನ ವಹಿವಾಟುಗಳು ಸರಿಯಾದ ರೀತಿಯಲ್ಲಿ ಇರಬೇಕೆಂದರೆ ಆ ನಾಡಿನಲ್ಲಿ ಹಣದ ಹರಿವು ಚೆನ್ನಾಗಿರಬೇಕು. ಹಣದ ಹರಿವು ಚೆನ್ನಾಗಿರಬೇಕೆಂದರೆ ವ್ಯಾಪಾರ ವಹಿವಾಟುಗಳಲ್ಲಿ ಹೆಚ್ಚು ಹಣ ಹೂಡಿಕೆಯಾಗುತ್ತಿರಬೇಕು ಮತ್ತು ಮಂದಿಯು ಹಣವನ್ನು ಕರ‍್ಚು ಮಾಡುತ್ತಿರಬೇಕು. ಹೂಡಿಕೆಗಳು ಹೆಚ್ಚಾದಂತೆ ಆ ನಾಡಿನ ಹೆಚ್ಚಿನ ಮಂದಿಗೆ ಕೆಲಸ ಸಿಗುವದರಿಂದ, ಹೆಚ್ಚು ಹೆಚ್ಚು ಮಂದಿ ಸೇವೆಗಳಿಗಾಗಿ ಅತವಾ ಸರಕುಗಳಿಗಾಗಿ ಹಣವನ್ನು ಕರ‍್ಚು ಮಾಡುತ್ತಾರೆ. ಇಂತಹ ಹಣಕಾಸಿನ ವಹಿವಾಟುಗಳಿಂದ ನಾಡಿಗೂ ಆದಾಯವಿರುತ್ತಿದ್ದು, ತನ್ನ ಹಮ್ಮುಗೆಗಳಿಗೆ ಹಣವನ್ನು ಹೊಂದಿಸಲು ಅದು ಆ ನಾಡಿಗೆ ಅನುವು ಮಾಡಿಕೊಡುತ್ತದೆ. ಯಾವಾಗ ಹಣಕಾಸಿನ ಸನ್ನಿವೇಶ ಸರಿ ಇರುವುದಿಲ್ಲವೋ, ಆಗ ನಾಡಿನಲ್ಲಿ ಹೂಡಿಕೆಗಳು ಕಡಿಮೆಯಾಗುತ್ತವೆ. ಇದರಿಂದ ಕೆಲಸವಿಲ್ಲದಿಕೆ (unemployment) ಹೆಚ್ಚುತ್ತದೆ. ಇದರಿಂದ ಹಣಕಾಸಿನ ಹರಿವಿಗೆ ತಡೆಯಾಗಿ ನಾಡಿನ ಆದಾಯವು ಕಡಿಮೆ ಆಗುತ್ತದೆ. ಆಗ ಆ ನಾಡು ತನ್ನ ಹಮ್ಮುಗೆಗಳಿಗೆ ಹಣ ಹೊಂದಿಸಲು ಸಾಲವನ್ನು ಮಾಡಬೇಕಾಗುತ್ತದೆ. ಹಣಕಾಸಿನ ಪರಿಸ್ತಿತಿ ಸರಿ ಹೋಗುವವರೆಗೂ ಸಾಲದ ಹೊರೆ ಮೆಲ್ಲನೆ ಹೆಚ್ಚುತ್ತಾ ಹೋಗುತ್ತದೆ. ಚೀನಾದಲ್ಲಿ ಈಗ ಇಂತದೇ ಸನ್ನಿವೇಶವಿದೆ.

ಮಾಡುಗೆಗಳ ತಯಾರಿಕೆಗೆ ಹೆಚ್ಚಾಗಿ ಒತ್ತು ಕೊಟ್ಟಿರುವ ಚೀನಾದಲ್ಲಿ ಹೆಚ್ಚಿನ ಹೂಡಿಕೆ ಆ ವಲಯದ ಮೇಲಿದೆ. ಕಟ್ಟಡಗಳ ಕಟ್ಟುವಿಕೆ, ರಿಯಲ್ ಎಸ್ಟೇಟ್ ಉದ್ದಿಮೆ ಮತ್ತು ತಯಾರಿಕೆ ವಲಯಗಳಿಂದ ಚೀನಾದ ಆದಾಯಕ್ಕೆ ಹೆಚ್ಚಿನ ಕೊಡುಗೆಯಿದೆ. ಆದರೆ ಸರಕು ಮತ್ತು ಸೇವೆಗಳಿಗೆ ನಾಡಿನ ಒಳಗಡೆ ಬೇಡಿಕೆ ಕಡಿಮೆ ಇರುವುದರಿಂದ ಚೀನಾದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಹೊರನಾಡುಗಳಲ್ಲೂ ಚೀನಾದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ತಗ್ಗಿರುವುದರಿಂದ, ಹೊರಮಾರುಗೆ (export) ವಲಯಕ್ಕೂ ಹಿನ್ನಡೆ ಉಂಟಾಗಿದೆ. ಹಣಮನೆಗಳಿಂದ ಪಡೆದ ಸಾಲ ಮರುಪಾವತಿಸದವರ ಎಣಿಕೆಯೂ ಏರಿಕೆ ಕಾಣುತ್ತಿದೆ. ಹೂಡಿಕೆದಾರರು ಚೀನಾದ ಹಣಕಾಸಿನ ಪರಿಸ್ತಿತಿ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದು ತಮ್ಮ ಹಣವನ್ನು ಹೊರನಾಡಿನಲ್ಲಿ ತೊಡಗಿಸುತ್ತಿದ್ದಾರೆ. ಅಂದರೆ ಹೂಡಿಕೆಯ ಹೆಚ್ಚು ಹಣ ಚೀನಾದಿಂದ ಹೊರಹೋಗುತ್ತಿದೆ. ಈ ವರ‍್ಶ ಶೇ 7 ರಶ್ಟು ಏಳಿಗೆ ಹೊಂದಬೇಕು ಎಂಬ ಗುರಿ ಹೊಂದಿದ್ದ ಚೀನಾ, ತನ್ನ ನಾಡಿನಲ್ಲಿ ಬದಲಾದ ಹಣಕಾಸಿನ ಸನ್ನಿವೇಶಗಳಿಂದ ಆ ಗುರಿಯನ್ನು ತಲುಪದಿರುವ ಹಾಗಾಗಿದೆ. ಈ ಎಲ್ಲಾ ಕಾರಣದಿಂದ ಪೀಪಲ್ಸ್ ಬ್ಯಾಂಕ್ ಆಪ್ ಚೀನಾ, ಬಡ್ಡಿ ದರವನ್ನು ಆರು ತಿಂಗಳಲ್ಲಿ ಮೂರನೇ ಬಾರಿಗೆ ಕಡಿತ ಮಾಡಿದೆ.

ಸೆಂಟ್ರಲ್ ಬ್ಯಾಂಕ್ ರೆಪೋ ದರವನ್ನು ಕಡಿಮೆ ಮಾಡುವುದರಿಂದ, ಉಳಿದ ಹಣ ಮನೆಗಳು ತನ್ನ ಕೊಳ್ಳುಗರಿಗೆ ತಾನು ಹಾಕುವ ತೆರಿಗೆಯ ದರವನ್ನು ಕಡಿಮೆ ಮಾಡಲು ಮುಂದಾಗುವವು (ನೀಡುವ ಸಾಲದ ಮೇಲೆ ಮತ್ತು ಉಳಿತಾಯಕ್ಕೆಂದು ಮಂದಿ ತನ್ನಲ್ಲಿ ಕೂಡಿಡುವ ಹಣದ ಮೇಲೆ). ಇದರಿಂದ ಹೆಚ್ಚು ಮಂದಿ ಹಣಮನೆಗಳಿಂದ ಸಾಲವನ್ನು ಪಡೆಯಲು ಮುಂದಾಗಬಹುದು. ಕಂಪನಿಗಳಿಗೂ ಸಾಲವು ಕಡಿಮೆ ದರದಲ್ಲಿ ದೊರೆಯುವದರಿಂದ ಬೇರೆ ಬೇರೆ ವಲಯಗಳಲ್ಲಿ ಹೂಡಿಕೆಗಳು ಹೆಚ್ಚಾಗುವಂತೆ ಮಾಡುತ್ತದೆ. ಉಳಿತಾಯಕ್ಕೆಂದು ಕೂಡಿಡುವ ಹಣದ ಮೇಲೆ ದೊರೆಯುವ ಬಡ್ಡಿ ಕಡಿಮೆ ಇರುವುದರಿಂದ, ಹಣವನ್ನು ಕೂಡಿಡುವ ಬದಲು ಬೇರೆ ಬೇರೆ ಕಡೆ ಹೂಡಿ ಹೆಚ್ಚಿನ ಆದಾಯ ಹೊಂದಲು ಮಂದಿ ಮುಂದಾಗಬಹುದು. ಮಂದಿ ಹಣವನ್ನು ಕರ‍್ಚು ಮಾಡುತ್ತಿದ್ದಂತೆ ಸರಕುಗಳ ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಹೆಚ್ಚು ಕೆಲಸಗಳು ಹುಟ್ಟಿಕೊಂಡು ಕೆಲಸವಿಲ್ಲದಿಕೆ ಕಡಿಮೆಯಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳು ಕುಂಟುತ್ತಾ ಸಾಗುತ್ತಿರುವ ಹಣಕಾಸಿನ ಪರಿಸ್ತಿತಿಯನ್ನು ಸರಿದಾರಿಗೆ ತರಬಲ್ಲದಾಗಿವೆ ಎಂಬ ಲೆಕ್ಕಾಚಾರಗಳು ಬಡ್ಡಿ ದರ ಇಳಿಕೆಯ ಹಿಂದಿವೆ.

(ಚಿತ್ರ ಸೆಲೆ : blogs.wsj.com )

(ಮಾಹಿತಿ ಸೆಲೆ :  wsj.com, wiki-BankRate, economicshelp.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: