ಮನುಕುಲದ ಅಳಿವಿಗೆ ಕೇವಲ 2 ನಿಮಿಶ 30 ಸೆಕೆಂಡುಗಳು ಬಾಕಿ?

– ಅನ್ನದಾನೇಶ ಶಿ. ಸಂಕದಾಳ.

doomsday-clock

ಮನುಕುಲದ ಅಳಿವಿನ ಬಗ್ಗೆ ಎಚ್ಚರಿಸುವಂತ ಗಡಿಯಾರವೊಂದು (Doomsday Clock) ಶಿಕಾಗೋದಲ್ಲಿದ್ದು, 26 ಜನವರಿ 2017 ರಂದು ಅರಿಗರು(Scientists), ಆ ಗಡಿಯಾರದ ಮುಳ್ಳನ್ನು 30 ಸೆಕೆಂಡುಗಳ ಹೊತ್ತಿನಶ್ಟು ಮುಂದೆ ತಳ್ಳಿದರು. ಈಗ ಈ ಗಡಿಯಾರದಲ್ಲಿ ಹೊತ್ತು 11 ಗಂಟೆ 57 ನಿಮಿಶ 30 ಸೆಕೆಂಡುಗಳು. ಅಂದರೆ ಈ ಮುಳ್ಳುಗಳು (ರಾತ್ರಿ) 12 ಗಂಟೆಗೆ 2 ನಿಮಿಶ 30 ಸೆಕೆಂಡುಗಳಶ್ಟೇ ದೂರದಲ್ಲಿದೆ. ಈ ಮುಳ್ಳುಗಳು 12 ರ ಹೊತ್ತನ್ನು ತೋರಿಸಿದರೆ ಮನುಕುಲದ ವಿನಾಶ ಕಂಡಿತ ಎಂದು ಅಂದುಕೊಳ್ಳಲಾಗಿದೆ. ಹಲವು ವರುಶಗಳ ಹಿಂದೆ ಅಮೇರಿಕಾವು, ತಾನು ಹೊಂದಿರುವ ‘ನ್ಯೂಕ್ಲಿಯರ್ ಕೊಲ್ಲಣಿಗೆಗಳನ್ನು (weapons)’ ಕಡಿಮೆ ಮಾಡಬೇಕು ಎಂಬ ತೀರ‍್ಮಾನವನ್ನು ತಾಳಿ, ಆ ನಿಟ್ಟಿನಲ್ಲಿ ಹಮ್ಮುಗೆಯನ್ನು ರೂಪಿಸಿಕೊಂಡು ಸಾಗುತಿತ್ತು. ಆದರೆ 2016 ರ ಡಿಸೆಂಬರ್ ತಿಂಗಳಲ್ಲಿ ಈಗಿನ ಅದ್ಯಕ್ಶ ಡೊನಾಲ್ಡ್ ಟ್ರಂಪ್ ಅವರು, “ಅಮೆರಿಕಾ ಇನ್ನುಮುಂದೆ ಇನ್ನೂ ಹೆಚ್ಚು ಹೆಚ್ಚು ನ್ಯೂಕ್ಲಿಯರ್ ಕೊಲ್ಲಣಿಗೆಗಳನ್ನು ಕೂಡಿಡಬೇಕು, ಅದು ನಾಡು ನಾಡುಗಳ ನಡುವೆ ನ್ಯೂಕ್ಲಿಯರ್ ಕೈದುಗಳ(weapons) ಪೈಪೋಟಿಗೆ ದಾರಿ ನೀಡಿದರೂ ಪರವಾಗಿಲ್ಲ ” ಎಂಬ ಮಾತನ್ನು ಆಡಿದ್ದರು. ಅಮೇರಿಕಾ ಅದ್ಯಕ್ಶರ ಈ ಹೇಳಿಕೆ, ಅಲ್ಲಿಯವರೆಗೂ 11 ಗಂಟೆ 57 ನಿಮಿಶ ತೋರುತ್ತಿದ್ದ ಮುಳ್ಳುಗಳನ್ನು 30 ಸೆಕೆಂಡುಗಳ ಕಾಲ ಮುಂದೆ ದೂಡಲು ಕಾರಣವಾಗಿದೆ.

ಏನಿದು ‘ಅಳಿವು ತೋರುಕ’ ಗಡಿಯಾರ?

ಇದು ದಿನದ 24 ಗಂಟೆಗಳ ಕಾಲ ಚಾಲ್ತಿಯಲ್ಲಿದ್ದು ಸಮಯ ತೋರುವ ನಾವು ಬಳಸುವ ದಿನಬಳಕೆಯ ಗಡಿಯಾರವಲ್ಲ. ನ್ಯೂಕ್ಲಿಯರ್  ಕಾಳಗದ ಹೆದರಿಕೆಯಲ್ಲಿ ಬದುಕುತ್ತಿರುವ ಮನುಕುಲದ ಕೊನೆಯನ್ನು ತೋರಿಸುವ ಗಡಿಯಾರ. ‘ಶಿಕಾಗೋ ಅಟಾಮಿಕ್ ಸೈಂಟಿಸ್ಟ್ಸ್’  ಎಂಬ ಅಂತರಾಶ್ಟ್ರೀಯ ಅರಿವಿಗರ ಕೂಟ ಈ ಗಡಿಯಾರದ ಹುಟ್ಟಿಗೆ ಕಾರಣ. ಜಗತ್ತಿನ ಎರಡನೇ ಕಾಳಗದ ಹೊತ್ತಿನಲ್ಲಿ (World War 2), ನ್ಯೂಕ್ಲಿಯರ್  ಕೈದುಗಳನ್ನು ತಯಾರಿಸುವ ಸಾದ್ಯತೆಗಳನ್ನು ನೋಡಲು ಅಮೇರಿಕಾವು ಯುನೈಟೆಡ್ ಕಿಂಗ್ಡಮ್ ಮತ್ತು ಕೆನಡಾದ ಬೆಂಬಲದೊಂದಿಗೆ, ‘ಶಿಕಾಗೋ ಅಟಾಮಿಕ್ ಸೈಂಟಿಸ್ಟ್ಸ್ ಕೂಟ’ದವರ ಮುಂದಾಳತ್ವದಲ್ಲಿ ‘ಮ್ಯಾನ್ ಹಟ್ಟನ್  ಪ್ರಾಜೆಕ್ಟ್’ ಎಂಬ ಹಮ್ಮುಗೆಯನ್ನು ಹಾಕಿಕೊಳ್ಳುತ್ತದೆ. ಈ ಹಮ್ಮುಗೆಯ ಮೂಲಕ ನ್ಯೂಕ್ಲಿಯರ್  ಕೈದುಗಳ ತಯಾರಿಕೆಯಲ್ಲಿ ಗೆಲುವನ್ನೂ ಕಾಣುತ್ತದೆ. ಹೀಗೆ ಹುಟ್ಟು ಪಡೆದುಕೊಂಡ ಆ ಕೊಲ್ಲಣಿಗೆಗಳನ್ನು ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ, 1945ರ ಆಗಸ್ಟ್  6 ಮತ್ತು 9 ರಂದು ಹಾಕಲಾಗುತ್ತದೆ.  ಜಪಾನಿನಲ್ಲಿ ನ್ಯೂಕ್ಲಿಯರ್  ಕೈದುಗಳಿಂದಾದ ಸಾವು-ನೋವು-ಕೆಟ್ಟ ಪರಿಣಾಮಗಳನ್ನು ಕಂಡು ಎಚ್ಚ್ಚೆತ್ತುಗೊಂಡ ಅರಿಗರು, ಜಗತ್ತಿಗೆ ಈ ಕೊಲ್ಲಣಿಗೆಗಳಿಂದಿರುವ ಕುತ್ತನ್ನು ತಿಳಿಸಲು ‘ದ ಬುಲೆಟಿನ್ ಆಪ್ ದ ಅಟಾಮಿಕ್ ಸೈಂಟಿಸ್ಟ್ಸ್’ ಎಂಬ ಸುದ್ದಿಹಾಳೆಯೊಂದನ್ನು(magazine) 1947ರಲ್ಲಿ ಹೊರತರುತ್ತಾರೆ. ಈ ಕೊಲ್ಲಣಿಗೆಗಳ ಅಳವನ್ನು(capacity) ಅರಿತಿದ್ದ ಅವರು, ಜಗತ್ತಿಗೆ ಅದರಿಂದಾಗುವ ಕೇಡಿನ ಬಗ್ಗೆ ಎಚ್ಚರಿಸುವ ಸಲುವಾಗಿ ಈ ಅಳಿವು ತೋರುಕ ಗಡಿಯಾರವನ್ನು ಹೊರತಂದರು. 1947ರಿಂದ ಹೊರಬರುತ್ತಿರುವ ‘ದ ಬುಲೆಟಿನ್ ಆಪ್ ದ ಅಟಾಮಿಕ್ ಸೈಂಟಿಸ್ಟ್ಸ್’ ಸುದ್ದಿಹಾಳೆಯು, ಈ  ಗಡಿಯಾರವನ್ನು ತನ್ನ ಪ್ರತಿಯೊಂದು ಕಂತಿನ ಮುಕಪುಟವಾಗಿ ಹೊಂದಿದೆ.

ಎಲ್ಲಿದೆ  ಈ ‘ಅಳಿವು ತೋರುಕ’ ಗಡಿಯಾರ??

ಶಿಕಾಗೋದ ವಿಶ್ವವಿದ್ಯಾಲಯದಲ್ಲಿರುವ ‘ದ ಬುಲೆಟಿನ್’ನ ಕಚೇರಿಯ ಗೋಡೆಯೊಂದರ ಮೇಲೆ ಈ ಗಡಿಯಾರವಿದೆ.  1947 ರಿಂದಲೂ ಈ ಗಡಿಯಾರದ ಉಸ್ತುವಾರಿಯನ್ನು “ದ ಬುಲೆಟಿನ್”ನ  ಸೈನ್ಸ್ ಅಂಡ್ ಸೆಕ್ಯೂರಿಟಿ ಬೋರ‍್ಡ್ ನವರು ನೋಡಿಕೊಳ್ಳುತ್ತಿದ್ದಾರೆ. ಈ ಗಡಿಯಾರದಲ್ಲಿ ‘ನಡು ರಾತ್ರಿ 12 ಗಂಟೆ’ ಎಂದಾಗುತ್ತದೋ, ಅಂದು ಜಗತ್ತು ನಾಶವಾಗುವ ದಿನ. 1947ರಲ್ಲಿ ಈ ಗಡಿಯಾರವನ್ನು ಹೊರತಂದಾಗ, ರಾತ್ರಿ 12 ಗಂಟೆಗೆ 7 ನಿಮಿಶ ದೂರ ಇರುವಂತೆ, ಅಂದರೆ  ರಾತ್ರಿ 11 ಗಂಟೆ 53 ನಿಮಿಶ ತೋರಿಸುವಂತೆ ಗಡಿಯಾರದ ಹೊತ್ತನ್ನು ಇರಿಸಲಾಗಿತ್ತು. 1947 ರಿಂದ ಇಲ್ಲಿಯವರೆಗೂ ಈ ಗಡಿಯಾರದ ಮುಳ್ಳುಗಳನ್ನು ಒಟ್ಟು 22 ಬಾರಿ ಹಿಂದೆ ಅತವಾ ಮುಂದೆ ಸರಿಸಲಾಗಿದೆ. ಜಗತ್ತು/ಮನುಕುಲ ಅಳಿವಿಗೆ ಎಶ್ಟು ಹತ್ತಿರವಿದೆ ಎಂಬುದು, ಈ ಗಡಿಯಾರದ ಮುಳ್ಳುಗಳು 12 ಗಂಟೆಗೆ ಎಶ್ಟು ಸಮೀಪದಲ್ಲಿದೆ ಎಂಬುದರಿಂದ ತಿಳಿಯಬೇಕಾಗುತ್ತದೆ. ಹಾಗಂತ ಈ ಗಡಿಯಾರದ ಒಂದು ನಿಮಿಶ, ದಿನಬಳಕೆಯ ಗಡಿಯಾರದ ಇಶ್ಟು ನಿಮಿಶ/ತಾಸು/ದಿನ ಎಂದು ಹೇಳಲು ಬರುವುದಿಲ್ಲ.  ಮನುಕುಲದ ಅಳಿವಿಗೆ ಕಾರಣವಾಗುವ ಬೆಳವಣಿಗೆಗಳ ಸೂಚಕ ಈ ಗಡಿಯಾರ.

ಗಡಿಯಾರದ ಮುಳ್ಳುಗಳ ಸರಿಸುವಿಕೆ:

doomsday-1947-2017

‘ದ ಬುಲೆಟಿನ್’ನ ಸದಸ್ಯರು ಈ ಗಡಿಯಾರದ ಮುಳ್ಳನ್ನು ಹಿಂದೆ ಅತವಾ ಮುಂದೆ ಸರಿಸುವಾಗ ನ್ಯೂಕ್ಲಿಯರ್  ಕೈದುಗಳ ತಯಾರಿಕೆಯಲ್ಲಿ ಅತವಾ ಮಾರಾಟದಲ್ಲಿ ನಡೆಯುತ್ತಿರುವ ಬೆಳೆವಣಿಗೆಗಳನ್ನು ಮಾತ್ರವಲ್ಲದೇ, ಮನುಕುಲಕ್ಕೆ ಕುತ್ತಾಗಬಹುದಾದ ಬೇರೆ ಬೇರೆ ವಿಚಾರಗಳನ್ನೂ ಪರಿಗಣಿಸುತ್ತಾರೆ.  ಬದಲಾಗುತ್ತಿರುವ ಹವಾಗುಣ,  ಉಸುರಿಯ ಚಳಕದರಿಮೆ(Bio-Technology) ವಲಯದಲ್ಲಿ ನಡೆಯುತ್ತಿರುವ ಅರಕೆಗಳು ಮತ್ತು ದೊರೆತಗಳು, ಉಸುರಿಗಳನ್ನು ಬಳಸಿ ನಡೆಸುವ ದಿಗಿಲುಕೋರುತನದ (Bioterrorism) ವಿಶಯಗಳೂ ಕೂಡ ಮುಳ್ಳುಗಳ ಕದಲಿಕೆಯ ತೀರ‍್ಮಾನದಲ್ಲಿ ಪರಿಗಣಿಸಲ್ಪಡುವ ವಿಚಾರಗಳು. ಇದುವರೆಗೂ ‘ದ ಬುಲೆಟಿನ್’ನ ಸದಸ್ಯರು ಈ ಗಡಿಯಾರದ ಮುಳ್ಳುಗಳನ್ನು ಹಿಂದೆ ಅತವಾ ಮುಂದೆ ಸರಿಸಲು ಕಾರಣವಾದ ಕೆಲ ಮುಕ್ಯವಾದ ಆಗುಹಗಳು ಹೀಗಿವೆ.

  • 1947 –  ರಾತ್ರಿ ಹನ್ನೆರಡು ಗಂಟೆಗೆ 7 ನಿಮಿಶ ದೂರ (11 ಗಂಟೆ 53 ನಿಮಿಶ ) → ಗಡಿಯಾರ ಹೊರತಂದ ಮೊದಲ ದಿನ ಇರಿಸಿದ ಹೊತ್ತು
  • 1949 –  ರಾತ್ರಿ ಹನ್ನೆರಡು ಗಂಟೆಗೆ 3 ನಿಮಿಶ ದೂರ(11 ಗಂಟೆ 57 ನಿಮಿಶ ) → ರಶ್ಯಾ ನಾಡು ತನ್ನ ಮೊದಲ ನ್ಯೂಕ್ಲಿಯರ್ ಕೊಲ್ಲಣಿಗೆಯನ್ನು ಪರೀಕ್ಶೆ ಮಾಡಿದ್ದರಿಂದ.
  • 1953 – ರಾತ್ರಿ ಹನ್ನೆರಡು ಗಂಟೆಗೆ 2 ನಿಮಿಶ ದೂರ (11 ಗಂಟೆ 58 ನಿಮಿಶ ) → ಅಮೆರಿಕಾ ಹೈಡ್ರೋಜನ್ ಬಾಂಬ್ ತಯಾರಿಸಿದ್ದರಿಂದ
  • 1963 – ರಾತ್ರಿ ಹನ್ನೆರಡು ಗಂಟೆಗೆ 12 ನಿಮಿಶ ದೂರ (11 ಗಂಟೆ 48 ನಿಮಿಶ ) → ನಾಡುಗಳು ನ್ಯೂಕ್ಲಿಯರ್ ಕೊಲ್ಲಣಿಗೆಯ ಪರೀಕ್ಶೆಗಳನ್ನು ನಿಲ್ಲಿಸುವ ತೀರ‍್ಮಾನ ತಾಳಿದ್ದರಿಂದ
  • 1984 – ರಾತ್ರಿ ಹನ್ನೆರಡು ಗಂಟೆಗೆ 3 ನಿಮಿಶ ದೂರ (11 ಗಂಟೆ 57 ನಿಮಿಶ ) → ಅಮೇರಿಕಾ ಮತ್ತು ರಶ್ಯಾ ನಾಡುಗಳ ನಡುವಿನ ತಿಕ್ಕಾಟ ತಾರಕಕ್ಕೆ ಏರಿದ್ದರಿಂದ
  • 1991 – ರಾತ್ರಿ ಹನ್ನೆರಡು ಗಂಟೆಗೆ 17 ನಿಮಿಶ ದೂರ(11 ಗಂಟೆ 43 ನಿಮಿಶ ) → ಅಮೇರಿಕಾ ಮತ್ತು ರಶ್ಯಾ ನಾಡುಗಳ ನಡುವಿನ ತಿಕ್ಕಾಟ ಕೊನೆಗೊಂಡಿದ್ದರಿಂದ
  • 2015 – ರಾತ್ರಿ ಹನ್ನೆರಡು ಗಂಟೆಗೆ 3 ನಿಮಿಶ ದೂರ (11 ಗಂಟೆ 57 ನಿಮಿಶ ) → ಪರಿಸರದ ಬಗ್ಗೆ ಕಾಳಜಿಯನ್ನು ಕಡೆಗಣಿಸಿ ನಡೆಯುತ್ತಿರುವ ಬೆಳವಣಿಗೆ, ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ನ್ಯೂಕ್ಲಿಯರ್ ಕೈದುಗಳ ಕೂಡಿಡುವಿಕೆಯಿಂದ
  • 2017 – ರಾತ್ರಿ ಹನ್ನೆರಡು ಗಂಟೆಗೆ 2 ನಿಮಿಶ 30 ಸೆಕೆಂಡು ದೂರ (11 ಗಂಟೆ 57 ನಿಮಿಶ 30 ಸೆಕೆಂಡುಗಳು ) → ‘ಅಮೇರಿಕಾ ಹೆಚ್ಚು ಹೆಚ್ಚು ಪರಮಾಣು ಕೊಲ್ಲಣಿಗೆಗಳನ್ನು ಕೂಡಿಡಬೇಕು’ ಎಂಬ ಆ ನಾಡಿನ ಅದ್ಯಕ್ಶರ ಹೇಳಿಕೆಯಿಂದ

ಕೊನೆದಾಗಿ:

‘ದ ಬುಲೆಟಿನ್’ನ ಈ ಗಡಿಯಾರ ಜಾಗತಿಕ ಮಟ್ಟದಲ್ಲಿ ಯಾವ ನಾಡು ಹೆಚ್ಚು ಶಕ್ತಿ ಹೊಂದಿದೆ ಎಂಬುದನ್ನು ತೋರಿಸುವ ಸಲುವಾಗಿ ಹೊರತಂದಿದ್ದಲ್ಲ. ಮನುಕುಲದ ಉಳಿವಿಗೆ ಸತತವಾಗಿ ಸವಾಲೊಡ್ಡಿ, ಮನುಕುಲವನ್ನು ಅಳಿವಿನ ಸನಿಹಕ್ಕೆ ತಳ್ಳುತ್ತಿರುವ ಬೆಳವಣಿಗೆಗಳನ್ನು ತೋರಿಸಲು ಇರುವ ಗಡಿಯಾರ ಇದು. ಈಗ ಕೇವಲ  2 ನಿಮಿಶ 30 ಸೆಕೆಂಡು ದೂರದಲ್ಲಿ ನಿಂತಿರುವ ಮುಳ್ಳುಗಳು ಇನ್ನೂ ಮುಂದೆ ಸರಿಯಲು ಅತವಾ ಹಿಂದೆ ಬರಲು ಏನೇನು ಬೆಳವಣಿಗೆಗಳಾಗಬಹುದು ಎಂಬುದನ್ನು ಕಾದು ನೋಡಬೇಕು!

(ಮಾಹಿತಿ ಸೆಲೆ: thebulletin.orgವಿಕಿಪೀಡಿಯ, wired.co.uk, weforum.org )

(ಚಿತ್ರ ಸೆಲೆ: history.comavclub.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: