ಶಿಯಾ-ಸುನ್ನಿ ಕಿತ್ತಾಟ : ಏನದರ ಹಿನ್ನೆಲೆ?

– ಅನ್ನದಾನೇಶ ಶಿ. ಸಂಕದಾಳ.

iran-Masjidlutfallah

ಅರೇಬಿಕ್ ನುಡಿಯನ್ನು ಬೇರೆ ಬೇರೆ ರೀತಿಯಲ್ಲಿ ಮಾತನಾಡುವ 22 ನಾಡುಗಳ ಒಟ್ಟು ಪ್ರದೇಶವನ್ನು ‘ಅರಬ್ ಜಗತ್ತು’ ಎಂದು ಕರೆಯಲಾಗುತ್ತದೆ. ಅರಬ್ ಜಗತ್ತಿನ ಮತ್ತು ನಡು-ಮೂಡಣ ಏಶ್ಯಾ (middle east) ನಾಡುಗಳ ನಡುವೆ ಒಂದಲ್ಲ ಒಂದು ತಿಕ್ಕಾಟಗಳು ಹಿಂದಿನಿಂದಲೂ ಇದ್ದು, ಅರಬ್ ಜಗತ್ತು ಯಾವಾಗಲೂ ಸುದ್ದಿಯಲ್ಲಿರುವಂತೆ ಮಾಡಿವೆ. ಇದಕ್ಕೆ ತಾಜಾ ಎತ್ತುಗೆ ಎಂದರೆ – ಯೆಮೆನ್ ನಾಡಿನ ಮೇಲೆ ನಡೆಯುತ್ತಿರುವ ದಾಳಿಗಳು. ಅರಬ್ ಜಗತ್ತಿನಲ್ಲಿನ ಈ ನಡಾವಳಿಗಳ ಬಗ್ಗೆ ಈ ಹಿಂದೆ ಬರೆಯಲಾಗಿದೆ. ಮುಸ್ಲಿಂ ದರ‍್ಮದ ಎರಡು ದೊಡ್ಡ ಪಂಗಡಗಳಾದ ಶಿಯಾ-ಸುನ್ನಿ ಪಂಗಡಗಳ ನಡುವಿನ ಕಚ್ಚಾಟಗಳು ಕಾಳಗಗಳ ರೂಪ ಪಡೆದುಕೊಂಡು, ಹಲವಾರು ಮಂದಿ ಪ್ರಾಣ ತೆರುವಂತೆ ಮಾಡುತ್ತಿರುವುದು ಅರಬ್ ಜಗತ್ತಿನ ನೆಮ್ಮದಿ ಕದಡಿಸಿದೆ.

ಶಿಯಾ ಮತ್ತು ಸುನ್ನಿ ಮುಸಲ್ಮಾನರು ಹಲವಾರು ನಾಡುಗಳಲ್ಲಿ ನೆಲೆಸಿದ್ದು, ಶೇ 75 ರಶ್ಟು ಮುಸಲ್ಮಾನರು ಸುನ್ನಿ-ಇಸ್ಲಾಂ ದರ‍್ಮವನ್ನು ಪಾಲಿಸುವವರಾಗಿದ್ದಾರೆ. ಅಮೆರಿಕಾದ ಪ್ಯೂ ರಿಸರ‍್ಚ್ ಸೆಂಟರ್ ನ (Pew Research Center) 2011 ರ ವರದಿ ಪ್ರಕಾರ, ಶಿಯಾ ಮುಸ್ಲಿಮರೇ ಹೆಚ್ಚಿನ ಎಣಿಕೆಯಲ್ಲಿರುವ ನಾಡುಗಳು 4 – ಇರಾನ್, ಅಜೆರ‍್ಬೈಜಾನ್, ಬಹರೇನ್ ಮತ್ತು ಇರಾಕ್.  ಯೆಮೆನ್, ಕುವೈತ್, ಸೌದಿ ಅರೇಬಿಯಾ, ಆಪ್ಗಾನಿಸ್ತಾನ್, ಪಾಕಿಸ್ತಾನ್, ಟರ‍್ಕಿ, ಕತಾರ್, ಓಮನ್, ಯುನೈಟೆಡ್ ಅರಬ್ ಎಮಿರೇಟ್ಸ್, ಬಾರತ ಮುಂತಾದ ನಾಡುಗಳಲ್ಲಿ ಶಿಯಾ ಮುಸ್ಲಿಮರಿದ್ದರೂ, ಕಡಿಮೆ ಎಣಿಕೆಯಲ್ಲಿದ್ದಾರೆ. ಅರಬ್ ಜಗತ್ತಿನ ಮೇಲೆ ಹಿಡಿತವನ್ನು ಹೊಂದುವ ಸಲುವಾಗಿ ಶಿಯಾ-ಸುನ್ನಿಗಳ ನಡುವೆ ತಿಕ್ಕಾಟಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ.

ಸುನ್ನಿ ಇಸ್ಲಾಂ ಹೊಂದಿರುವ ಹಾಗೆ ಸಾಕಶ್ಟು ಒಳಪಂಗಡಗಳನ್ನು ಶಿಯಾ ಇಸ್ಲಾಂ ಕೂಡ ಹೊಂದಿದೆ. ಇತನಾಶರಿಯಾ (ಅತಿ ದೊಡ್ಡ ಪಂಗಡ – ಟ್ವೆಲ್ವರ‍್ಸ್ ಎಂದೂ ಕೂಡ ಕರೆಯಲಾಗುತ್ತದೆ), ಇಸ್ಮಾಯಿಲಿ (ಸೆವೆನರ‍್ಸ್ ಎಂದೂ ಕೂಡ ಕರೆಯಲಾಗುತ್ತದೆ), ಜೈದಿ (ಪೈವರ‍್ಸ್ ಎಂದೂ ಕೂಡ ಕರೆಯಲಾಗುತ್ತದೆ ) ಮತ್ತು ಅಲಾವಿಸ್ ಒಳಪಂಗಡಗಳು ಶಿಯಾ ಇಸ್ಲಾಂನ ಮುಕ್ಯ ಒಳಪಂಗಡಗಳು. ಹಿನ್ನಡವಳಿಯನ್ನು(history) ಗಮನಿಸಿದಾಗ, ಸುಮಾರು 16 ನೇ ಶತಮಾನದವರೆಗೂ ಶಿಯಾದವರು, ಸುನ್ನಿಯವರ ಆಳ್ವಿಕೆಯಲ್ಲಿದ್ದದ್ದು ಕಂಡುಬರುತ್ತದೆ. ಶಿಯಾದವರೂ ಕೂಡ ಬೇರೆ ಬೇರೆ ನಾಡುಗಳಲ್ಲಿ ಆಳ್ವಿಕೆ ನಡೆಸಿದ್ದರೂ ಅದು ಸುನ್ನಿಯವರ ಹಾಗೆ ಎಡೆಬಿಡದ (continuous) ಆಳ್ವಿಕೆಯಾಗಿ ಇರಲಿಲ್ಲ. ಹಾಗೇ ಅವರ ಆಳ್ವಿಕೆಯ ಹರವೂ ಕೂಡ ಬೇರೆ ಬೇರೆ ನಾಡುಗಳಲ್ಲಿ ತುಂಬಾ ಹೊತ್ತು ಇರಲಿಲ್ಲ. 16 ನೇ ಶತಮಾನದಲ್ಲಿ ಪರ‍್ಶಿಯಾ (ಇರಾನ್) ಆಡಳಿತ ನಡೆಸಿದ ಸಪಾವಿದ್ ಸಾಮ್ರಾಜ್ಯವು ಶಿಯಾ ಇಸ್ಲಾಮನ್ನೇ ಅದಿಕ್ರುತ ದರ‍್ಮವನ್ನಾಗಿ ಮಾಡಿತ್ತು. ಆದರೆ ಸರಿ ಸುಮಾರು ಇದೇ ಹೊತ್ತಿಗೆ ನಡು-ಮೂಡಣ ಮತ್ತು ತೆಂಕಣ ಏಶ್ಯಾದ ಬಹುಪಾಲು ನಾಡುಗಳು, ಸುನ್ನಿ ಇಸ್ಲಾಮಿನ ಒಟ್ಟೋಮನ್ ಮತ್ತು ಮೊಗಲ್ ಸಾಮ್ರಾಜ್ಯದ ಹತೋಟಿಗೆ ಒಳಪಟ್ಟಿದ್ದವು. 1900 ದಿಂದ ಶಿಯಾದವರ ಒಂದುಗೂಡಿಕೆ ಹುರುಪು ಪಡೆದುಕೊಂಡಿದ್ದು, ಇರಾನ್ ನಾಡು 20 ನೆ ಶತಮಾನದೀಚೆಗೆ ಶಿಯಾ ಇಸ್ಲಾಂನ ಬಹುದೊಡ್ಡ ಶಕ್ತಿಯಾಗಿ ಹೊಮ್ಮಿದೆ.

Sunni-Shia-Map-PEWಪ್ರಬಲವಾದ ಮಿಲಿಟರಿ ಪಡೆಯನ್ನು ಹೊಂದಿರುವ ಇರಾನ್, ಉಳಿದ ನಾಡುಗಳಲ್ಲಿನ ಶಿಯಾ ಇಸ್ಲಾಂ ಕೋಮಿನವರಿಗೆ ನೆರವು ನೀಡುತ್ತಾ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದೆ. ಶಿಯಾದವರೇ ಹೆಚ್ಚಿರುವ ಅಜೆರ‍್ಬೈಜಾನ್ ನಾಡಿನ ಆಳ್ವಿಕೆಯವರನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಳ್ಳಲು ಇರಾನ್ ಹವಣಿಸಿತ್ತು. ಆದರೆ ಜಾತ್ಯಾತೀತ ನಾಡಾದ ಅಜೆರ‍್ಬೈಜಾನ್ ಇರಾನ್ ನ ಕೈಗೆ ದಕ್ಕದಾಯಿತು. ಪಾಕಿಸ್ತಾನ್ ಮತ್ತು ಆಪ್ಗಾನಿಸ್ತಾನ್ ನಲ್ಲೇ ನಡೆಯುತ್ತಿರುವ ಒಳಗಿನ ತಿಕ್ಕಾಟಗಳಿಂದ ಮತ್ತು ತೆಂಕಣ ಏಶ್ಯಾದಲ್ಲಿ ಬಾರತ ಗಟ್ಟಿಯಾಗಿರುವ ನಾಡಾಗಿರುವುದರಿಂದ, ಆ ನಾಡುಗಳಲ್ಲಿ ತನ್ನ ಪ್ರಬಾವವನ್ನು ಬೀರಲು ಇರಾನ್ ಗೆ ಆಗುತ್ತಿಲ್ಲ. ತನ್ನ ಮೂಡಣ ದಿಕ್ಕಿನ ನಾಡುಗಳಲ್ಲಿ ಹೆಚ್ಚಾಗಿ ಏನೂ ಮಾಡಲು ಆಗದೇ ಇದ್ದುದರಿಂದ, ತನ್ನ ಪಡುವಣ ದಿಕ್ಕಿಗಿರುವ ನಾಡುಗಳ ಮೇಲೆ ಇರಾನ್ ಗಮನಹರಿಸಿದೆ. 1980 ರ ಹೊತ್ತಿನಲ್ಲಿ ಇರಾಕ್ ಜೊತೆ ಹೆಚ್ಚು ಕಾಲ ಕಾದಾಡಿದ್ದ ಇರಾನ್, ಸಿರಿಯಾ ನಾಡಿನ ಸಹಾಯದಿಂದ ಇರಾಕ್ ನಲ್ಲಿ ತಕ್ಕ ಮಟ್ಟಿಗೆ ಹಿಡಿತ ಹೊಂದಿತು. ಸಿರಿಯಾದವರ ಸಹಾಯದಿಂದಲೇ ಇರಾನ್, ಹಿಜಬುಲ್ಲಾ ಎಂಬ ದಿಗಿಲುಕೋರ ಕೂಟವನ್ನು ರಾಜಕೀಯ ಶಕ್ತಿಯಾಗಿ ಮಾರ‍್ಪಡಿಸಿ ಲೆಬನಾನ್ ನಲ್ಲಿ ಕೂರಿಸಿತು. ಅಮೇರಿಕಾದವರು ಇರಾಕನ್ನು 2003 ರಲ್ಲಿ ಸೋಲಿಸಿದಾಗ ಇರಾನ್ ಗೆ ಇನ್ನೂ ಹೆಚ್ಚಿನ ಅನುಕೂಲವಾಗಿತ್ತು. ಹಾಗೆಯೇ, ಬಹರೇನ್ ನಾಡಿನ ಒಳ ಕಚ್ಚಾಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಇರಾನ್ ಮನಸ್ಸು ಮಾಡಿತ್ತು. ಆದರೆ ಸೌದಿ ಅರೇಬಿಯಾ ಮತ್ತು ಅದರ ಗೆಳೆಯ ನಾಡುಗಳು ಮಿಲಿಟರಿ ಬಲ ಬಳಸಿ, ಬಹ್ರೇನಿನಲ್ಲಿ ಎದ್ದ ದಂಗೆಯನ್ನು ಹತ್ತಿಕ್ಕುವ ಮೂಲಕ, ಇರಾನ್‍ಗೆ ಹಿನ್ನಡೆ ಉಂಟುಮಾಡಿದರು. ಯೆಮೆನ್ ನಲ್ಲಿ ಶಿಯಾ ಇಸ್ಲಾಮಿನ ಜೈದಿ ಪಂಗಡದ ಹೌತಿಯವರಿಗೆ ಬೆಂಬಲ ನೀಡುತ್ತಿರುವುದು ಇರಾನ್ ಎಂದೇ ಸೌದಿಯವರ ದೂರಾಗಿದೆ.

ಒಂದು ಕಡೆ ಸೌದಿಯವರು ಹೌತಿಯವರ ಜೊತೆ ಕಾದಾಡುತ್ತಿದ್ದರೆ, ಉಳಿದ ನಾಡುಗಳು ಐ ಎಸ್ ಐ ಎಸ್ ದಿಗಿಲುಕೋರರ ಜೊತೆ ಕಾದಾಡುತ್ತಿರುವುದು ಇರಾನ್ ಗೆ ತನ್ನ ಮುಂದಿನ ನಡೆಗಳ ಬಗ್ಗೆ ಯೋಚಿಸಲು ಸಮಯ ದೊರಕಿಸಿಕೊಟ್ಟಿದೆ. ಮತ್ತೊಂದು ಕಡೆ ಜಿಹಾದಿಗಳು, ಇರಾನ್ ಮತ್ತು ಶಿಯಾ ಮುಸ್ಲಿಮರನ್ನು ಬೆದರಿಸುತ್ತಿದ್ದಾರೆ. ಇದರಿಂದ ಜಗತ್ತಿನ ಬಹುತೇಕ ನಾಡುಗಳ ಒಲವು ಇರಾನ್ ಕಡೆ ವಾಲುತ್ತಿರುವುದರಿಂದ ಇರಾನ್ ಗೆ ಅನುಕೂಲವನ್ನೇ ಮಾಡಿಕೊಡುತ್ತದೆ. ಅಮೇರಿಕಾದ ಜೊತೆ ಕೆಲವು ನ್ಯೂಕ್ಲಿಯರ್ ಒಪ್ಪಂದಗಳನ್ನೂ ಕೂಡ ಇರಾನ್ ಮಾಡಿಕೊಂಡಿದೆ. ಯೆಮೆನ್ ನಲ್ಲಾಗುತ್ತಿರುವಂತೆ ಸೌದಿ ಅರೇಬಿಯಾದ ಜಿಜಾನ್ ಮತ್ತು ನಜ್ರಾನ್ ಪ್ರಾಂತ್ಯದ ಶಿಯಾನವರೂ ಕೂಡ ಸೌದಿಯವರ ಎದುರು ದಂಗೆ ಎದ್ದರೆ, ಸೌದಿಯನ್ನು ಒಂದು ಮಟ್ಟಕ್ಕೆ ಬಗ್ಗಿಸಿ ತನ್ನ ಹಿಡಿತಕ್ಕೆ ಪಡೆಯಬಹುದು ಎಂಬುದು ಇರಾನಿನ ಲೆಕ್ಕಾಚಾರವಾಗಿದೆ.

ಸದ್ಯಕ್ಕೆ ಇರಾನ್ ಮತ್ತು ಶಿಯಾರವರ ಕೂಟ, ಸೌದಿ ಮತ್ತು ಸುನ್ನಿಯವರ ಕೂಟಕ್ಕಿಂತ ಮೇಲುಗೈ ಹೊಂದಿದಂತೆ ಕಂಡು ಬರುತ್ತಿದೆ. ಆದರೆ ಸುನ್ನಿ ಇಸ್ಲಾಮಿನವರು ಸಿರಿಯಾ ಮತ್ತು ಯೆಮೆನ್ ನಲ್ಲಿ ಅರೆಕಾಲಿಕ ಗೆಲುವನ್ನು ಪಡೆದು. ಮೆಲ್ಲನೆ ಇರಾನ್ ಗೆ ಎದಿರೇಟು ನೀಡಿದ್ದಾರೆ. ಲೆಬನಾನ್ ಅತವಾ ಯೆಮೆನ್ ನಲ್ಲೂ ಶಿಯಾ ಮುಸ್ಲಿಮರು ಮೇಲುಗೈ ಹೊಂದಿದ್ದರೂ, ಶಿಯಾದವರಿರುವ ಪ್ರದೇಶಗಳ ಮೇಲಶ್ಟೇ ತಮ್ಮ ಪ್ರಬಾವವನ್ನು ಬೀರಬಲ್ಲರು ಎಂದೇ ಬಗೆಯಲಾಗುತ್ತಿದೆ. ಕಾರಣ, ಎಣಿಕೆಯಲ್ಲಿ ಶಿಯಾದವರಿಗಿಂತ ಸುನ್ನಿಗಳು ಹೆಚ್ಚಿರುವುದು. ಆದ್ದರಿಂದ, ಒಂದೊಮ್ಮೆ ಇರಾನ್ ಅರೇಬಿಯನ್ ಪೆನನ್ಸುಲಾದ ಹಿಡಿತವನ್ನು ಪೂರ‍್ತಿಯಾಗಿ ಹೊಂದಿದರೂ, ಅದು ತನ್ನ ಆಳ್ವಿಕೆಯನ್ನು ಹೊಂದಲು ಅತವಾ ಹೇರಲು ಸಾದ್ಯವಿಲ್ಲ ಎಂದೇ ಹೇಳಬಹುದು. ಅರಬ್ ಜಗತ್ತಿನ ಎಲ್ಲಾ ಶಿಯಾದವರು ತನ್ನೊಂದಿಗೆ ಇದ್ದಾರೆ ಎಂದು ಇರಾನ್ ತಿಳಿದಿದ್ದರೂ, ಉಳಿದ ನಾಡುಗಳಲ್ಲಿರುವ ಶಿಯಾದವರ ಸುತ್ತ ಸುನ್ನಿಯವರೇ ಇರುವುದು ಇರಾನ್ ಗೆ ತಡೆಗೋಡೆಯಾಗಿದೆ ಎಂದೇ ಹೇಳಬಹುದು. ಹಾಗೆಯೇ, ಶಿಯಾ ಇಸ್ಲಾಮಲ್ಲೂ ಕೂಡ, ಬೇರೆ ಬೇರೆ ನಂಬಿಕೆಗಳ ನೆಲೆ ಮೇಲೆ ಹಲವಾರು ಒಳಪಂಗಡಗಳಿರುವುದರಿಂದ ಶಿಯಾದವರ ಒಗ್ಗೂಡಿಕೆ ಅಶ್ಟು ಸುಳುವಾಗಿಲ್ಲ. ಈ ಎಲ್ಲಾ ನಡವಾಳಿಗಳು ಇರಾನ್ ಮತ್ತು ಅರಬ್ ಜಗತ್ತಿನ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹುಟ್ಟಿಸಿದೆ.

(ಚಿತ್ರ ಸೆಲೆ : classes.colgate.edublogs.timesofisrael.com )

(ಮಾಹಿತಿ ಸೆಲೆ : stratfor.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications