ಹಬ್ಬಿ ಹರಡಲಿ ತುಳುನುಡಿ

ಹರ‍್ಶಿತ್ ಮಂಜುನಾತ್.

maravanthe-beach-udupi

ನಮಗೆಲ್ಲಾ ತಿಳಿದಂತೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಶೆಯಲ್ಲಿ ತುಳುನುಡಿಯನ್ನು ಮೂರನೇ ನುಡಿಯಾಗಿ ಪರಿಗಣಿಸಿ ಪರೀಕ್ಶೆ ನಡೆಸಲಾಗಿತ್ತು. ತುಳುನುಡಿಯನ್ನು ಎಸ್.ಎಸ್.ಎಲ್.ಸಿ ಮಂಡಳಿಯಲ್ಲಿ ಮೂರನೇ ನುಡಿಯಾಗಿ ಅದಿಕ್ರುತ ಮಾಡುವ ಮೂಲಕ, ತುಳುನುಡಿಯ ಹಳಮೆಯಲ್ಲಿಯೇ ಹೊಸ ಮಯ್ಲುಗಲ್ಲು ನೆಟ್ಟಿತು. ತುಳುನುಡಿಯ ಹೆಚ್ಚುಗಾರಿಕೆಗೊಂದು ಕಿರೀಟ ಮೂಡಿಸಿದಂತಹ ಈ ನಡೆ ತುಳು ನುಡಿಯಾಡುಗರಲ್ಲಿ ನಲಿವು ಮೂಡಿಸಿದ್ದು ಸುಳ್ಳಲ್ಲ.

ತುಳುನಾಡೆಂದೇ ಕರೆಸಿಕೊಳ್ಳುವ ಮಂಗಳೂರು ಮತ್ತು ಉಡುಪಿಯ ಎಲ್ಲಾ ಕಲಿಕೆಮನೆಗಳಿಂದ ತುಳುನುಡಿಯ ಕಲಿಕೆಗೆ ಅಂದುಕೊಂಡ ಬೆಂಬಲ ಸಿಗದಿದ್ದರೂ, ಮಂಗಳೂರು ಉರ‍್ವಸ್ಟೋರ್ ನ ಪಾಂಪಯ್ ಕಲಿಕೆಮನೆಯವರು ಇಂತಹದ್ದೊಂದು ಸವಾಲಿಗೆ ಅಣಿಯಿಟ್ಟರು. ಏಪ್ರಿಲ್ 10ರಂದು ಮೂರನೇ ನುಡಿಯ ಆಯ್ಕೆಯಾಗಿ ನಡೆದ ತುಳು ಪರೀಕ್ಶೆಯಲ್ಲಿ ಪಾಂಪಯ್ ಕಲಿಕೆಮನೆಯ 18 ಮಕ್ಕಳು ಸವಾಲೆದುರಿಸುವ ಮೂಲಕ ಮಂದಿಯ ಹುಬ್ಬೇರಿಸಿದ್ದರು. ನಾಡಿನ ಕಲಿಕೆಯರಿಗರ ಗಮನ ಸೆಳೆದಿದ್ದ ಈ ಪ್ರಯತ್ನದಲ್ಲಿ, ಪರೀಕ್ಶೆ ಬರೆದ 18 ಮಂದಿಯೂ ತೇರ‍್ಗಡೆ ಹೊಂದುವ ಮೂಲಕ ತುಳುನುಡಿಯ ಮುಂದಿನ ಆಯ್ಕೆಗಳಿಗೊಂದು ಮುನ್ನುಡಿ ಬರೆದರು. ಹೀಗೆ ತುಳುವಿನಲ್ಲಿ ಪರೀಕ್ಶೆ ಬರೆದು ಮೊದಲ ಪ್ರಯತ್ನದಲ್ಲೇ ಜಯಗಳಿಸಿ, ನಾಡಿನೆಲ್ಲೆಡೆ ಗುರುತಿಸಿಕೊಳ್ಳುವ ಕೆಲಸ ನಮ್ಮಿಂದಾಗಿದೆ ಎಂಬ ಹೆಗ್ಗಳಿಕೆ ಆ ಕಲಿಕೆ ಮನೆಯವರದ್ದು.

ಇದಲ್ಲದೇ ಈ ವರುಶ ಮಂಗಳೂರಿನ ಬಂಟ್ವಾಳ ಬಳಿಯ ಶಂಬೂರು ಮತ್ತು ನಾಯಿಲದ ಮೊದಲ ಹಂತದ ಕಲಿಕೆಮನೆಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದೆ. ಇಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳಿಗೆ ತುಳುವಿನಲ್ಲಿ ಮೊದಲ ಹಂತದ ಪರೀಕ್ಶೆಗಳನ್ನು ನಡೆಸಲಾಯಿತು. ವಿಶೇಶವೆಂದರೆ ತುಳು ಪರೀಕ್ಶೆಯು ತುಳು ಲಿಪಿಯಲ್ಲಿಯೇ ಬರೆಯಲಾಗಿತ್ತು. ಇದು ತುಳು ಲಿಪಿಯ ಬಳಕೆಯಲ್ಲಿ ಮೊದಲ ಮತ್ತು ಹೆಚ್ಚುಗಾರಿಕೆಯ ನಡೆಯಾಗಿದೆ. ಸುಮಾರು ಎರಡು ಸಾವಿರ ವರುಶಕ್ಕೂ ಹೆಚ್ಚಿನ ಹಿನ್ನಡವಳಿ ಹೊಂದಿರುವ ತುಳುನುಡಿ, ಇಂದಿಗೂ ಕೇವಲ ಆಡುನುಡಿಯಾಗಿಯೇ ಉಳಿದಿದೆ. ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಇಂಡಿಯಾ ನಾಡಿನಾದ್ಯಂತ ತುಳು ನುಡಿಯಾಡುಗರಿದ್ದಾರೆ. ತೆಂಕಣ ದ್ರಾವಿಡ ನುಡಿ ಕುಟುಂಬದ ಐದು ನುಡಿಗಳಲ್ಲಿ ಒಂದಾಗಿರುವ ತುಳುನುಡಿ ಕನ್ನಡಕ್ಕೆ ಸಮಕಾಲೀನವಾದದ್ದು ಎಂಬ ಮಾತಿದೆ. ಆದರೆ ತುಳು ಮಾತ್ರ ಮಿಕ್ಕೆಲ್ಲಾ ನುಡಿಗಳಿಗಿಂತ ಹಿಂದೆ ಉಳಿದಿದೆ.

ತುಳುನುಡಿ ಹುಟ್ಟಿಕೊಂಡಾಗ ಮೊದಲು ಅದರದ್ದೇ ಆದ ಮೂಲ ಲಿಪಿ ಇರಲಿಲ್ಲ. ಮುಂದೆ ’ತಿಗಳಾರಿ’ ಎಂಬ ಲಿಪಿಯನ್ನು ಬಳಸತೊಡಗಿದರು. ಈ ಲಿಪಿಯ ಮುಕ್ಯ ನುಡಿ ಸಂಸ್ಕ್ರುತವಾಗಿತ್ತು. ವಿಶೇಶವೆಂದರೆ ಹಿಂದಿನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತಿತ್ತು. ಕ್ರಮೇಣ ಅದರ ಬಳಕೆ ಕಡಿಮೆಯಾಯಿತು. ಹಾಗಾಗಿ ಆ ಲಿಪಿಯ ಬಗ್ಗೆ ಬಲ್ಲವರು ಈಗ ಬಹಳ ಕಡಿಮೆ.

ತಾಯ್ನುಡಿಯ ಕಲಿಕೆಯ ಹೆಚ್ಚುಗಾರಿಕೆ?
ನಾಡಿನ ಮಂದಿಯು ಒಳ್ಳೆಯ ಗುಣಮಟ್ಟದ ಕಲಿಕೆ ನಡೆಸಬೇಕಾದರೆ, ಅಲ್ಲಿನ ಕಲಿಕೆಯೇರ‍್ಪಾಡು ತಾಯ್ನುಡಿಯಲ್ಲಿಯೇ ಇರಬೇಕು ಎಂಬುವುದು ಜಗತ್ತಿನ ತಿಳಿಗರು ಒಪ್ಪಿಕೊಂಡ ಸತ್ಯ. ಇದರ ಸುತ್ತ ಹಿಂದಿನಿಂದಲೂ ಹಲವಾರು ಅರಕೆಗಳು ನಡೆಯುತ್ತಲೇ ಬಂದಿವೆ. ಇವೆಲ್ಲಾ ಅರಕೆಗಳು ತಿಳಿಸಿರುವುದು, “ಮೊದಲ ಹಂತದ ಕಲಿಕೆ ತಾಯ್ನುಡಿಯಲ್ಲಾದರೆ ಮಾತ್ರ ಕಲಿಕೆ ಚೆನ್ನಾಗಿ ಸಾಗುತ್ತದೆ” ಎಂಬುದನ್ನು. ಇದನ್ನು ಸರಿಯಾಗಿ ಅರಿತುಕೊಂಡಿರುವ ನಾಡುಗಳು, ತಮ್ಮ ತಮ್ಮ ಕಲಿಕೆಯೇರ‍್ಪಾಡುಗಳನ್ನು ತಮ್ಮ ತಮ್ಮ ನುಡಿಗಳಲ್ಲಿಯೇ ಕಟ್ಟಿಕೊಂಡಿವೆ. ಹಾಗೆಯೇ ಮೊದಲ ಹಂತದ ಕಲಿಕೆಯಿಂದ ಎಲ್ಲಾ ಬಗೆಯ ಮೇಲ್ಮಟ್ಟದ ಕಲಿಕೆಯವರೆಗೂ ತಮ್ಮ ನುಡಿಯಲ್ಲಿಯೇ ನಡೆಸುವಂತೆ ಆಯಾ ನಾಡಿನ ಮಂದಿಗೆ ಅವಕಾಶ ಕಲ್ಪಿಸಿದೆ. ಅಲ್ಲದೇ ಇಂತಹ ನಾಡುಗಳೆಲ್ಲಾ ಇಂದು ಮುಂದುವರಿದ ನಾಡುಗಳ ಪಟ್ಟಿಯಲ್ಲಿ ಮೊದಲಿದೆ.

ಬೇರೆ ನುಡಿಯಲ್ಲಿ ಕಲಿಕೆಗೆ ತೊಡಗುವ ಮಕ್ಕಳು ಆ ನುಡಿಗೆ ಹೊಂದಿಕೊಂಡು ಒಳ್ಳೆಯ ಕಲಿಕೆ ನಡೆಸುವ ಸಾದ್ಯತೆಗಿಂತ, ತಾಯ್ನುಡಿಯ ಕಲಿಕೆಗೆ ಹೊಂದಿಕೊಳ್ಳುವುದು ಬೇಗ. ತಾಯ್ನುಡಿಯಲ್ಲಿ ಯಾವುದೇ ವಿಶಯದ ಅರಿವು ಮಕ್ಕಳಲ್ಲಿ ಚೆನ್ನಾಗಿ ಮೂಡಿದರೆ, ಅವರ ಕಲಿಕೆಗೆ ಒಂದು ಒಳ್ಳೆಯ ಅಡಿಪಾಯ ಸಿಗುತ್ತದೆ ಮತ್ತು ಮುಂದಿನ ಹಂತದ ಕಲಿಕೆಗೆ ಗಟ್ಟಿತನವನ್ನು ತಂದುಕೊಡುತ್ತದೆ.

ಹೀಗೆ ತುಳುನುಡಿಯನ್ನು ನಮ್ಮ ನಾಡಿನ ಮಕ್ಕಳ ಕಲಿಕೆಗೆ ಸೇರಿಸುವುದರಿಂದ ತುಳುನಾಡ ಮಂದಿಗೆ ತಾಯ್ನುಡಿಯ ಕಲಿಕೆಗೆ ಅವಕಾಶ ಸಿಗುತ್ತದೆ. ಅಲ್ಲದೇ ನಮ್ಮದೇ ನಾಡಿನ ನುಡಿಯೊಂದು ನಮ್ಮ ನಾಡಿನಾದ್ಯಂತ ಕಲಿಕೆಯ ವಿಶಯವಾಗುವುದರಿಂದ ಆ ನುಡಿಯ ವ್ಯಾಪ್ತಿ ಹಬ್ಬಿದಂತೆಯೂ ಆಗುತ್ತದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೆಲಸವಾಗಬೇಕಿದೆ. ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಶೆಯಲ್ಲಿ ತುಳುನುಡಿಯ ಬಳಕೆಗೆ ಅವಕಾಶ ಕಲ್ಪಿಸಿರುವುದರಿಂದ ಮುಂದಿನ ದಿನಗಳಲ್ಲಿ ಇದರತ್ತ ಹೆಚ್ಚಿನ ಮಂದಿಯನ್ನು ಕಲಿಕೆಗೆ ಬೆಂಬಲಿಸಬೇಕಿದೆ. ಇಂತಹ ಪ್ರಯತ್ನಗಳು ನಾಡಿನಾದ್ಯಂತ ಆಗುವುದರಿಂದ ತುಳುನುಡಿಯು ಬೇಗನೆ ಹರಡಿಕೊಂಡು ಬೆಳೆಯುವುದರಲ್ಲಿ ಎರಡು ಮಾತಿಲ್ಲ.

(ಚಿತ್ರ ಸೆಲೆ: karnataka.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks