ಪೂರಿ-ಸಾಗು ಮಾಡುವ ಬಗೆ

ಕಲ್ಪನಾ ಹೆಗಡೆ.

poori sagu

ಸಾಗು ಮಾಡಲು ಬೇಕಾಗುವ ಪದಾರ‍್ತಗಳು:
2 ಟೊಮೆಟೊ, 2 ಆಲೂಗಡ್ಡೆ, 2 ಡೊಣ್ಣಮೆಣಸಿನ ಕಾಯಿ, 1 ಗಡ್ಡೆ ಕೋಸು, 1 ಕ್ಯಾರೇಟ್, ಸ್ವಲ್ಪ ಹಸಿಬಟಾಣಿ ಕಾಳು, 2 ಹಸಿಮೆಣಸಿನ ಕಾಯಿ, 2 ಚಮಚ ಹುರಿಗಡ್ಲೆ, 1 ಚೂರು ಚಕ್ಕೆ, 1 ಏಲಕ್ಕಿ, ಸ್ವಲ್ಪ ತೆಂಗಿನಕಾಯಿ ತುರಿ, ರುಚಿಗೆ ತಕ್ಕಶ್ಟು ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ.

ಮಾಡುವ ಬಗೆ:
ಆಲೂಗಡ್ಡೆ, ಕ್ಯಾರೇಟ್, ಗಡ್ಡೆಕೋಸನ್ನು ಹೆಚ್ಚಿಕೊಂಡು ನೀರು, ಸ್ವಲ್ಪ ಉಪ್ಪು ಮತ್ತು ಹಸಿ ಬಟಾಣಿ ಕಾಳನ್ನು ಹಾಕಿ ಬೇಯಿಸಿಕೊಳ್ಳಿ. ಇನ್ನೊಂದು ಕಡೆ ಟೊಮೆಟೊ, ಡೊಣ್ಣಮೆಣಸಿನಕಾಯಿಯನ್ನು ಹೆಚ್ಚಿ ಬಾಣಲೆಗೆ ಎಣ್ಣೆ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಆನಂತರ ತೆಂಗಿನಕಾಯಿ ತುರಿ, ಚಕ್ಕೆ, ಏಲಕ್ಕಿ, ಹುರಿಗಡ್ಲೆ, ಹಸಿಮೆಣಸಿನಕಾಯಿ, ಇವೆಲ್ಲಾ ಪದಾರ‍್ತಗಳನ್ನು ಹುರಿಯದೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆಮೇಲೆ ಮೊದಲು ಬೇಯಿಸಿಕೊಂಡ ತರಕಾರಿಗಳ ಜೊತೆಗೆ ಹುರಿದ ಟೊಮೊಟೊ ಮತ್ತು ದೊಡ್ಡಮೆಣಸಿನಕಾಯಿಯನ್ನು ಹಾಗೂ ರುಬ್ಬಿದ ಮಸಾಲೆ, ರುಚಿಗೆ ತಕ್ಕಶ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಗೆ ಎಣ್ಣೆ ಕಾಯಿಸಿ, ಸಾಸಿವೆ ಹಾಕಿ ಒಗ್ಗರಣೆ ಹಾಕಿ.

ಪೂರಿಗೆ ಬೇಕಾಗುವ ಪದಾರ‍್ತಗಳು:
ಗೋದಿ ಹಿಟ್ಟು, ನೀರು, ಉಪ್ಪು ಮತ್ತು ಎಣ್ಣೆ.

ಮಾಡುವ ಬಗೆ:
ಪಾತ್ರೆಗೆ ಸ್ವಲ್ಪ ಉಪ್ಪು, ನೀರು ಹಾಕಿ ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಲಟ್ಟಣಗೆಯಿಂದ ಲಟ್ಟಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಲಟ್ಟಿಸಿದ ಪೂರಿಯನ್ನು ಎಣ್ಣೆಯಲ್ಲಿ ಬಿಟ್ಟು ಜಾಲಿಸೌಟಿನಿಂದ ಒತ್ತಿದರೆ ಚೆನ್ನಾಗಿ ಉಬ್ಬುತ್ತದೆ. ಕರಿದ ಪೂರಿಯೊಂದಿಗೆ ತಯಾರಿಸಿದ ಸಾಗುವನ್ನು ಹಾಕಿ ಸವಿಯಲು ನೀಡಿ.

(ಚಿತ್ರ ಸೆಲೆ: samanvaysingapore.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications