ಪತ್ತೇದಾರಿ ಕತೆ – ಕೊಲೆಗಾರ ಯಾರು?…..

– ಬಸವರಾಜ್ ಕಂಟಿ.

Jail

ಕಂತು-1 ಕಂತು-2 ಕಂತು-3

ಕೊಲೆ ನಡೆದ ಮೂರನೇಯ ದಿನ ಪೊಲೀಸ್ ಸ್ಟೇಶನ್ನಿನ ಒಂದು ಕೋಣೆಯಲ್ಲಿ ಮಹದೇವಯ್ಯನವರ ಹೆಂಡತಿ, ಇಬ್ಬರು ದತ್ತು ಮಕ್ಕಳು, ಕೆಲಸಗಾರ ಗುಂಡಣ್ಣ, ಮತ್ತು ಅವನ ಹೆಂಡತಿ ಕೂತಿದ್ದರು. ಆ ಕೋಣೆಗೆ ಅಳವಡಿಸಿದ್ದ ಕನ್ನಡಿಯ ಗಾಜಿನ ಮೂಲಕ ಕಮೀಶನರ್ ಮತ್ತು ಡಾಕ್ಟರ್ ಇನ್ನೊಂದು ಕೋಣೆಯಲ್ಲಿ ಕುಳಿತು ಅಲ್ಲಿ ನಡೆಯುವುದನ್ನು ನೋಡುತ್ತಿದ್ದರು. ಆ ಕೋಣೆಯಲ್ಲಿ ಕುಳಿತವರಿಗೆ ಕೇಳುವಂತೆ ಪಕ್ಕದಲ್ಲಿದ್ದ ಲಾಕಪ್ಪಿನಲ್ಲಿ ಎಸ್. ಆಯ್ ಅವರು ಕಳ್ಳನೊಬ್ಬನಿಗೆ ಹೊಡೆಯುವ ನಾಟಕವಾಡುತ್ತಿದ್ದರು. ಆ ‘ಕಳ್ಳ’ ಜೋರಾಗಿ ಅಳುವ ನಾಟಕವಾಡುತ್ತಿದ್ದ.
ಅದನ್ನು ಕೇಳಿ ಅಲ್ಲಿದ್ದ ಎಲ್ಲರಿಗೂ ಗಾಬರಿಯಾಗಿ, ಎದೆ ಬಡಿತ ಹೆಚ್ಚಾಗಿತ್ತು. ಅದರಲ್ಲೂ ಮಹದೇವಯ್ಯನವರ ಹೆಂಡತಿಗೆ ಹೆಚ್ಚಾಗಿಯೇ ಬಯವಾಗಿತ್ತು. ಎಶ್ಟಾದರೂ ಹೆಂಗಸು. ತುಸು ಸಮಯದಲ್ಲಿ ಎಸ್. ಆಯ್ ಅವರು ಪುಲಕೇಶಿ ಜೊತೆ ಎಲ್ಲರೂ ಇದ್ದ ಕೋಣೆಗೆ ಬಂದರು. ಎಸ್. ಆಯ್ ಕಯ್ಯಲ್ಲಿ ಒಂದು ಹಾಳೆ ಇತ್ತು.

ತಡಮಾಡದೆ, ಎಸ್. ಆಯ್ ಹೇಳಿದರು, “ನೋಡಿ, ನಮಗೆ ಕೊಲೆಗಾರ ಯಾರು ಅಂತ ಗೊತ್ತಾಗಿದೆ. ಹೆಣದ ಮೇಲೆ ನಮಗೆ ಒಂದು ಕೂದಲು ಸಿಕ್ತು. ಮೊನ್ನೆ ನಿಮ್ ಹತ್ರ ತೊಗೊಂಡಿದ್ದ ಕೂದಲಿನ ಜೊತೆ ಈ ಕೂದಲನ್ನೂ ಡಿ.ಎನ್.ಎ ಟೆಸ್ಟಿಗೆ ಕಳಿಸಿದ್ವಿ. ನಿಮ್ಮಲ್ಲಿ ಒಬ್ಬರ ಕೂದಲ ಜೊತೆ ಮ್ಯಾಚ್ ಆಗಿದೆ. ಹಾಗಾಗಿ ಕೊಲೆಗಾರ ಯಾರು ಅಂತ ಗೊತ್ತಾಗಿದೆ”

ಎಲ್ಲರಿಗೂ ಗಾಬರಿಯಾಗಿ ಮಾತು ಹೊರಡಲಿಲ್ಲ. ಎಸ್. ಆಯ್ ನೇರವಾಗಿ ಎರಡನೇ ದತ್ತು ಮಗ, ಕಾರ‍್ತಿಕ್ ಹತ್ರ ಬಂದು, “ಯಾಕೋ ಮಗನೇ ಕೊಲೆ ಮಾಡೋವಶ್ಟು ದರ‍್ಯನಾ?” ಎಂದು ಅವನ ಕೊರಳ ಪಟ್ಟಿ ಹಿಡಿದು ಬಯಲಿದ್ದ ಜಾಗಕ್ಕೆ ಎಳೆದರು.

ಅವನು, “ಸಾರ್ ನಾನ್ ಮಾಡಿಲ್ಲ ಸಾರ್.” ಎಂದು ಕಿರುಚಿದ.

ಬಿಡದೆ ಅವನನ್ನು ಬಯ್ಯುತ್ತ ಜೋರಾಗಿ ಎಳೆದಾಡಿದರು ಎಸ್. ಆಯ್. “ಲಾಕಪ್ಪಲ್ಲಿ ಹಾಕ್ರೋ ಇವಂಗೆ. ನಾಲ್ಕು ತದಕಿದ್ರೆ ಎಲ್ಲಾ ಬಾಯಿ ಬಿಡ್ತಾನೆ” ಎಂದ್ರು ಸಿಟ್ಟು ತೋರಿಸುತ್ತಾ.

ಆಗ ಮಹದೇವಯ್ಯನವರ ಹೆಂಡತಿ ಗಾಬರಿಯಲ್ಲಿ ಎದ್ದು ನಿಂತು, ಅಳುತ್ತಾ, “ಅವಂಗ್ ಏನೂ ಮಾಡ್ಬೇಡಿ. ಕೊಲೆ ಮಾಡಿದ್ದು ನಾನು” ಎಂದು ಎದ್ದು, ಕಾರ‍್ತಿಕ್ ನನ್ನು ಪೊಲೀಸರಿಂದ ರಕ್ಶಿಸಲು ಮುಂದಾದಳು.

ಎಸ್. ಆಯ್ ಮತ್ತು ಪುಲಕೇಶಿ ಒಬ್ಬರನ್ನೊಬ್ಬರು ನೋಡಿ ಮುಗುಳ್ನಕ್ಕರು. ಇದೇ ಸರಿಯಾದ ಸಮಯ ಎಂದು ಅರಿತ ಎಸ್. ಆಯ್,
“ನೋಡಿ ಮೇಡಂ, ಸರಿಯಾಗಿ ಹೇಳಿ ಅವತ್ ರಾತ್ರಿ ಏನ್ ನಡೀತು ಅಂತ” ಎಂದು ದಬಾಯಿಸಿದ.

ಹೆದರಿದ್ದ ಮೇಡಂ ಅಳುತ್ತಾ, ನಿದಾನವಾಗಿ ಎಲ್ಲವನ್ನೂ ಬಾಯಿಬಿಟ್ಟರು, “ಅವ್ನು ಕ್ರಿಶ್ಣಮೂರ‍್ತಿಯವರ ಮನೆಗೆ ಹೋಗಿ ಬಂದಿದ್ದು ಗೊತ್ತಾಗಿ ಅವ್ನನ್ನಾ ಪಾಲೋ ಮಾಡು ಅಂತ ಒಬ್ಬ ಡಿಟೆಕ್ಟೀವ್ ಗೆ ಹೇಳಿದ್ದೆ. ಆ ದಿನ ಅನುಪಮ್, ಪುಲಕೇಶಿಯವರ ಮನೆಗೆ ಹೋಗಿ ಬಂದದ್ದು ಗೊತ್ತಾಯ್ತು. ನನ್ ಬೆನ್ನ ಹಿಂದೆ ಅವ್ನು ಏನೋ ಮಾಡ್ತಾ ಇದಾನೆ ಅಂತ ಅನುಮಾನ ಬಂದು ತುಂಬಾ ಸಿಟ್ಟು ಬಂದಿತ್ತು. ರಾತ್ರಿ ಅವ್ನು ತಡವಾಗಿ ಮನೆಗೆ ಬಂದ. ಅವನಿಗಾಗಿ ಕಾದು ಕಾದು ನನ್ ಸಿಟ್ಟು ನೆತ್ತಿಗೇರಿತ್ತು. ಅವ್ನು ಬಂದು ನೇರ ಊಟಕ್ ಕುಂತ. ಮನೇಲಿ ಬೇರೆ ಯಾರೂ ಇರಲಿಲ್ಲ. ನಾನು ಅಲ್ಲಿಗೇ ಹೋಗಿ ಅವನಿಗೆ ಕ್ರಿಶ್ಣಮೂರ‍್ತಿಯವರ ಮನೆಗೆ, ಪುಲಕೇಶಿಯವರ ಮನೆಗೆ ಹೋಗಿದ್ದು ಯಾಕೆ ಅಂತ ಕೇಳ್ದೆ. ಅವನಿಗೆ ಯಾವತ್ತೂ ಇರದ ದೈರ‍್ಯ ಬಂದಿತ್ತು. ನನಗೇ ತಿರುಗಿ ತಿರುಗಿ ಮಾತಾಡ್ದಾ. ಮನೆಯಿಂದ ಓಡಿಸ್ಬಿಡ್ತೀನಿ ಅಂತೆಲ್ಲಾ ಅಂದ. ನನಗೆ ಕೋಪ ಬಂದು, ಟೇಬಲ್ ಮೇಲೆ ಕಾಲಿ ಇದ್ದ ನೀರಿನ ಜಗ್ ಎತ್ತಿ ಜೋರಾಗಿ ಅವನ ತಲೆಗೆ ಹೊಡ್ದೆ. ಅವ್ನು ಮೂರ‍್ಚೆ ಹೋಗಿ ಬಿದ್ದ. ನನಗೆ ಹೆದರಿಕೆ ಆಗಿ ಎಬ್ಬಿಸೋಕೆ ಪ್ರಯತ್ನ ಪಟ್ಟೆ. ಸ್ವಲ್ಪ ಹೊತ್ತಲ್ಲೇ ಅವನ ಉಸಿರಾಟ ನಿಂತು. ನಾನು ಅಲ್ಲೇ ತುಂಬಾ ಹೊತ್ತು ಕೂತಿದ್ದೆ ಏನು ಮಾಡೋದು ಅಂತ ಯೋಚನೆ ಮಾಡ್ತಾ”

ಪುಲಕೇಶಿಯವರು ನಡುವೆ ಮಾತಾಡಿದರು,  “ಆಗಲೇ ಅಲ್ವ, ಅನುಪಮ್ ನ ಒದ್ದೆ ಸಾಕ್ಸನಿಂದ ನೆಲದ ಮೇಲೆ ಆಗಿದ್ದ ಕೊಳೆ ನೀವು ಒರೆಸಿದ್ದು?”

ಅಳುತ್ತಾ, “ಹೌದು” ಎಂದರು ಮೇಡಂ. “ನನಗೆ ಮನೆ ಗಲೀಜಾಗಿದ್ರೆ ಸರಿ ಅನ್ಸೊಲ್ಲ”

“ಆಮೇಲೆ ಏನಾಯ್ತು?”

“ಆಮೇಲೆ ಏನಾದ್ರು ಆಗಲಿ ಅಂತ ಸುಮ್ಮನೆ ಮೇಲೆ ಹೋಗಿ ಮಲಗಿಬಿಟ್ಟೆ. ಅವ್ನು ಸತ್ತಿದ್ದೇನು ನನಗೆ ದುಕ್ಕ ಇರಲಿಲ್ಲ. ಪೊಲೀಸರಿಂದ ತಪಿಸಿಕೊಂಡ್ರೆ ಸಾಕಿತ್ತು”

“ಅನುಪಮ್ ಅವ್ರು ಕ್ರಿಶ್ಣಮೂರ‍್ತಿಯವರನ್ನಾ ಕಂಡಿದ್ದು ನಿಮಗ್ ಹೇಗ್ ಗೊತ್ತಾಯ್ತು?”

“ಗುಂಡಣ್ಣ ಹೇಳಿದ”

ಎಲ್ಲರೂ ಗುಂಡಣ್ಣನ ಕಡೆ ನೋಡಿದರು. ಅವನು ಗಾಬರಿಬಿದ್ದು, ನಡುಗುತ್ತ,

“ಸ್ ಸ್ ಸರ್ ಅವರ ಮನೆ ಕ್ ಕ್ ಕೆಲಸದವನು ನನಗೆ ಪೋನ್ ಮಾಡಿ ಹೇಳ್ದ ಸರ್. ನಾ ಮೇಡಂ ಅವರಿಗೆ ಹ್ ಹ್ ಹೇಳ್ದೆ ಅಶ್ಟೇ. ನನಗ್ ಬೇರೆ ಎ ಎ ಏನು ಗೊತ್ತಿಲ್ಲ ಸರ‍್” ಎಂದು ಬೇಡಿಕೊಳ್ಳುವ ರೀತಿಯಲ್ಲಿ ಹೇಳಿದನು.

ಮೇಡಂ ಕಡೆಗೆ ತಿರುಗಿ ಪುಲಕೇಶಿ ಕೇಳಿದರು, “ಈ ಇಬ್ಬರು ದತ್ತು ಮಕ್ಕಳಿಗೆ ನೀವೇ ನಿಜವಾದ ತಾಯಿ ಅಂತ ಅವರಿಗೆ ಗೊತ್ತಾ?”

ಈ ವಿಶಯ ಪುಲಕೇಶಿಗೆ ಹೇಗೆ ಗೊತ್ತಾಯ್ತು ಅಂತ ಒಂದು ಕ್ಶಣ ಬೆರಗಾಗಿ, ಮರುಕ್ಶಣ ಅದು ಹೊಳೆದು ಸುಮ್ಮನಾಗಿ ಮತ್ತೆ ಮಾತಾಡಿದರು ಮೇಡಂ, “ಇಲ್ಲ. ಅವರಿಗೆ ಗೊತ್ತಿಲ್ಲ. ನನ್ನ ಮತ್ತು ನನ್ ಗಂಡನ ಮದುವೆ ಮುಂಚಿನ ಸಂಬಂದ ಗೊತ್ತಾಗಿ ಎಲ್ಲಿ ನನ್ನಿಂದ ದೂರ ಆಗ್ತಾರೋ ಅಂತ ಯಾರಿಗೂ ಹೇಳಿರಲಿಲ್ಲ”

ಅಲ್ಲಿ ಕೂತಿದ್ದ ಕಿರಣ್ ಮತ್ತು ಕಾರ‍್ತಿಕ್ ಬೆರಗು ಗಣ್ಣಿನಿಂದ ನೋಡಿದರು. ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ತಮ್ಮ ತಾಯಿ ಯಾರು ಅಂತ ಗೊತ್ತಾಗಿಯೂ ಅವರ ಸ್ತಿತಿ ನೋಡಿ ಮರುಕ, ದುಕ್ಕ, ಬೆರಗು ಎಲ್ಲ ಬಾವಗಳೂ ಒಟ್ಟಿಗೆ ಮೂಡಿ ಏನು ಮಾಡಾಬೇಕೆಂದು ಗೊಂದಲವಾಗಿ ಸುಮ್ಮನಿದ್ದರು.

ವಾಡಿಕೆಯ ಮಾತುಗಳನ್ನು ಮುಗಿಸಿ, ಎಸ್. ಆಯ್ ಅವರು ಮೇಡಂ ಅವರನ್ನಾ ತಮ್ಮ ಕಸ್ಟಡಿಗೆ ತೆಗೆದುಕೊಂಡು ಲಾಕಪ್ಪಿನಲ್ಲಿ ಇರಿಸಿ, ಉಳಿದವರನ್ನು ಬಿಟ್ಟರು. ಗೊಂದಲದ ಬಾವದಲ್ಲಿಯೇ ಎಲ್ಲರೂ ಹೊರಟು ಹೋದರು. ಪುಲಕೇಶಿಯವರು ಎಸ್. ಆಯ್ ಅವರ ಕಡೆ ತಿರುಗಿ “ಕ್ರಿಶ್ಣಮೂರ‍್ತಿಯವರು ಏನು ಹೇಳಿದರು?” ಎಂದನು.

“ಮಹದೇವಯ್ಯನವರಿಗೆ ಮದುವೆಗಿಂತ ಮುಂಚೆ ಈ ಹೆಂಗಸಿನ ಜೊತೆ ಸಂಬಂದ ಇತ್ತಂತೆ. ಆದ್ರೆ ಮದುವೆ ಮಾಡ್ಕೊಳ್ಳೋಕೆ ಆಗಿಲ್ಲ, ಸಮಾಜದ ಕಟ್ಟುಪಾಡು ನೋಡಿ. ಅಲ್ದೆ ಅವರಿಗೆ ಒಳ್ಳೇ ಹೆಸರು, ಗವ್ರವ ಎಲ್ಲಾ ಇತ್ತು. ಅದಕ್ಕೆ ತಕ್ಶಣ ಇನ್ನೊಂದು ಹುಡುಗಿ ಜೊತೆ ಮದುವೆ ಮಾಡಿಕೊಂಡು ಈ ಹೆಂಗಸಿನ ಹಟದ ಪ್ರಕಾರ ಆ ಮಕ್ಕಳನ್ನ ದತ್ತು ತೊಗೊಂಡ್ರಂತೆ. ಆಮೇಲೆ ತಮ್ಮ ಹೆಂಡತಿ ಸತ್ ಮೇಲೆ, ಇವಳನ್ನಾ ಮದುವೆ ಆದ್ರಂತೆ. ಎರಡನೇ ಮದುವೆ ಅಲ್ವಾ… ಅದಕ್ಕೇ ಯಾರೂ ಅಶ್ಟು ತಲೆ ಕೆಡಿಸಿಕೊಂಡಿಲ್ಲ”

“ಹುಂ… ಈಗ ಆಸ್ತಿ?”

“ಅನುಪಮ್ ಹೆಸರಲ್ಲಿರೋದು ಈಗ ಮಹದೇವಯ್ಯನವರ ಹೆಸರಲ್ಲಿರೋ ಟ್ರಸ್ಟಗೆ ಹೋಗುತ್ತೆ. ಆದ್ರೆ ಮಹದೇವಯ್ಯನವರ ಹೆಸರಲ್ಲಿರೋ ಆಸ್ತಿ ಎಲ್ಲಾ ಈಗ ಇರೋ ದತ್ತು ಮಕ್ಕಳು, ಮತ್ತು ಈ ಹೆಂಗಸಿಗೇ ಹೋಗುತ್ತೆ”

“ಇರಲಿ ಬಿಡಿ, ಎಶ್ಟೇ ಆದ್ರು ಅವ್ರೂ ಮಹದೇವಯ್ಯನವರ ಹೆಂಡ್ತಿ, ಮಕ್ಕಳೇ ಅಲ್ವಾ?”

“ಅದೂ ಸರಿ”

(ಮುಗಿಯಿತು)

( ಚಿತ್ರ ಸೆಲೆ: graffitiknowhow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications