ನೆರಳನ್ನು ನುಂಗಿದ ನಾಗರಕಟ್ಟೆ

– ರತೀಶ ರತ್ನಾಕರ.

tree-189909_640

ಎತ್ತಣ ತಿರುಗಿದರು ಹಸಿರಿನ ಔತಣ ನೀಡುವ ಊರು ನನ್ನದು. ಅಜ್ಜ ಅಜ್ಜಿಯು ಈ ಊರಿಗೆ ಬಂದಾಗ ಇದು ದಟ್ಟಕಾಡು. ಅಪ್ಪ-ಚಿಕ್ಕಪ್ಪಂದಿರೆಲ್ಲಾ ಆಡುವ ಮಕ್ಕಳು. ಕೂಡಿ ಬೆಳೆದಿದ್ದ ಎತ್ತಗ ಹಾಗು ಮಡ್ಲು ಮರಗಳ ಬುಡದಲ್ಲಿ ಬೀಡು ಬಿಟ್ಟವರು, ಇಂದಿಗೆ ಮಂಗಳೂರು ಹೆಂಚಿನ ಮನೆ ಒಡೆಯರು. ‘ಏನಾದ್ರು ಆಗಲಿ ಮಕ್ಕಳು ಓದಿ, ಪೇಟೆ ಸೇರಿ, ಬದುಕು ಮಾಡೋ ಹಂಗೆ ಆದ್ವು.’ ಎಂಬ ಊರವರ ಮಾತನ್ನು ಕೇಳಿ, ಒಳಗೊಳಗೇ ನಲಿಯುತ್ತಿರುವ ಅಪ್ಪನ ಕಾಲದವರೆಗೂ ಎಲ್ಲವೂ ಚೆನ್ನಾಗಿದೆ.

ನಮ್ಮೆಲ್ಲಾ ಬೆಳವಣಿಗೆಯನ್ನು ನೋಡುತ್ತಾ ಇಂದಿಗೂ ನೆರಳೀಯುತ್ತ ನಿಂತಿವೆ ಆ ಎತ್ತಗ ಮತ್ತು ಮಡ್ಲು ಮರಗಳು. ಮನೆಯಂಗಳವ ದಾಟಿ ಅಡಿಕೆ ತೋಟದ ಬಾವಿಗೆ ಹೋಗುವ ದಾರಿಯಲ್ಲಿಯೇ ಅವುಗಳ ನೆಲೆ. ಚಿಕ್ಕವನಿದ್ದಾಗ, ತಂಗಿಯೊಡನೆ ಆಡುತ್ತಿದ್ದ ಅಡುಗೆ-ಗುಡುಗೆ ಆಟಕ್ಕೆ ಇವುಗಳ ಬುಡವೇ ನೆಚ್ಚಿನ ತಾಣ. ಒಣಗಿದ ಅಡಿಕೆ ಹಾಳೆಗಳನ್ನು ಮರದ ಬುಡಕ್ಕೆ ಒರಗಿಸಿ, ಅದರೊಳಗೆ ಕೂತು ಮನೆಕಟ್ಟಿದೆವೆಂದು ಹಿಗ್ಗುತ್ತಿದ್ದೆವು. ದನಕ್ಕೆ ಕಟ್ಟಿದ ಹಗ್ಗವ ಕದ್ದು, ಮರದ ಹರೆಗೆ ಕಟ್ಟಿ ಉಯ್ಯಾಲೆಯಾಡಿದ್ದು ಎದೆಯಲ್ಲಿ ಇನ್ನೂ ತೂಗುತ್ತಿದೆ. ಪಕ್ಕದಲ್ಲೇ ಇದ್ದ ಹಿಪ್ಪುನೇರಳೆ ಗಿಡದ ಟೊಂಗೆ ಕಿತ್ತು, ಒಂದರ ಪಕ್ಕ ಒಂದಿರಿಸಿ, ತೆಂಗಿನ ಗರಿಯನ್ನು ಮಳೆಬಿಲ್ಲಿನಾಕಾರದಲ್ಲಿ ಕಟ್ಟಿ, ‘ಜಟಗಪ್ಪನ ಅಡ್ಡೆ’ಯಂತೆ ಮಾಡಿದ್ದೆವು. ಮುಂದೆ ನಾನು, ಹಿಂದೆ ನೀನು ಎಂದು ಅಡ್ಡೆಯನ್ನು ಹೆಗಲ ಮೇಲೆ ಹೊತ್ತು ಕುಣಿದು, ಆ ಕುಣಿತಕ್ಕೆ ‘ಜಡ್ ಜಡ್ಡು… ಮಣ್ಕು ಮಣ್ಕು.’ ಅಂತ ಬಾಯಲ್ಲೇ ತಾಳ ಸೇರಿಸಿ ನಲಿದಿದ್ದೆವು. ಮರದ ಎಲೆ ಉದುರಿ ಅಡ್ಡೆಗೆ ಬಿದ್ದರೆ, ಅದು ನಮ್ಮ ಪೂಜೆಗೆ ಮೆಚ್ಚಿ ಜಟಗಪ್ಪ ಕೊಟ್ಟ ಪ್ರಸಾದವಾಗಿರುತ್ತಿತ್ತು… ಆ ನೆನಪುಗಳೆಲ್ಲವೂ ಮರಗಳ ನೆರಳಿನಲ್ಲಿ ಇನ್ನೂ ತಂಪಾಗಿವೆ. ಊರಿಗೆ ಬಂದಾಗಲೆಲ್ಲಾ ಈ ಮರದಡಿಯಲ್ಲಿ ಕೂತು ಹರಟುವುದು, ಎಳವೆಯ ಆಟಗಳ ಮೆಲುಕು ಹಾಕುವುದು ನಿಂತಿರಲಿಲ್ಲ.

ಅದ್ಯಾವತ್ತೋ, ತೋಟದಲ್ಲಿ ಕೆಲಸ ಮಾಡುವಾಗ ದೊಡ್ಡ ನಾಗರಹಾವು ಕಾಣಿಸಿಕೊಂಡಿತಂತೆ. ಒಂದೆರೆಡು ಸಲ ಮನೆ ಅಂಗಳದ ಹತ್ತಿರವೂ ಬಂದಿದ್ದವಂತೆ. ‘ಏನೋ ತೊಂದ್ರೆ ಇರಬೇಕು. ಒಂದ್ಸಲ ಕೇಳಿಸಿನೋಡಿ.’ ಎಂದು ಯಾರೋ ಬಿಟ್ಟಿ ಸಲಹೆ ಕೊಟ್ಟು, ಕೇಳಿಸಲು ಹೋಗುವ ವಿಳಾಸನೂ ಕೊಟ್ಟರಂತೆ. ಎದ್ನೊ ಬಿದ್ನೊ ಅಂತ ಕವಡೆ ಬಿಡುವವರ ಮನೆಯ ಜಗಲಿ ಮೆಟ್ಟಿ, ಪಂಚಾಂಗ ತೆಗಿಸಿ, ಗ್ರಹಚಾರದ ಲೆಕ್ಕಾಚಾರ ಹಾಕಿಸಿದರು ಮನೆಯಲ್ಲಿ. ‘ಯಾವಾಗಲಾದ್ರೂ ಹಾವನ್ನು ಹೊಡೆದಿದ್ದ್ರಾ?’ ಅಂತ ಅವರು ಕೇಳಿದರಂತೆ. ಮರದ ಕೆಳಗೆ ತಟ್ಟಿ ಕಟ್ಟಿಕೊಂಡಿದ್ದಾಗಲೋ, ಹುಲ್ಲಿನ ಮನೆಯಲ್ಲಿ ಇದ್ದಾಗಲೋ, ಮನೆಯ ಹತ್ತಿರ ಬಂದ ಹಾವು ಮಕ್ಕಳಿಗೆ ಕಚ್ಚಿದಿರಲೆಂದು ಅಜ್ಜ ಹೊಡೆದು ಸಾಯಿಸಿದ್ದ ಹಾವಿನ ಕತೆಯನ್ನು ಹೇಳಿದರಂತೆ.

‘ಲೆಕ್ಕದಲ್ಲಿ ಹೇಳಬೇಕು ಅಂದ್ರೆ ನೀವು ಸಿಕ್ಕಾಪಟ್ಟೆ ಸಿರಿವಂತರಾಗಿರ ಬೇಕಿತ್ತು. ತುಂಬಾ ಮುಂದುವರೆದಿರಬೇಕಿತ್ತು. ಈ ಹಾವು ಹೊಡ್ದಿರೊ ದೋಶಾನೆ ನಿಮ್ಮನ್ನ ಕಾಡ್ತಾ ಇರೋದು. ಒಂದು ನಾಗರಕಟ್ಟೆ ಮಾಡಿಸಿ. ಹಾವಿಗೊಂದು ನೆಲೆ ಮಾಡಿಕೊಡಿ. ಮೂರು ತಿಂಗಳಿಗೊಂದು ಪೂಜೆ ಮಾಡಿಸ್ತಾ ಇರಿ. ಎಲ್ಲಾ ಒಳ್ಳೇದಾಗುತ್ತೆ.’ ಅಂದರಂತೆ. ಹಾವಿಂದ ಕೆಡಕು ಆಗೋ ಮುಂಚೆಯೇ ಅದಕ್ಕೊಂದು ನೆಲೆಮಾಡಿ ಬಿಡೋಣ ಎಂದು ಕಟ್ಟೆಕಟ್ಟುವ ಕೆಲಸವನ್ನು ಶುರುಮಾಡಿಯೇ ಬಿಟ್ಟರು.

‘ಮೂರು ತಿಂಗಳು ಕೋಳಿ, ಮೀನು, ಏನು ತಿನ್ನಂಗಿಲ್ಲ. ಮಡಿಯಲ್ಲೇ ಇರಬೇಕು. ಜೋಪಾನ…” ಅಪ್ಪ – ಅಮ್ಮ ಇಬ್ಬರೂ ಕರೆ ಮೇಲೆ ಕರೆ ಮಾಡಿ ನೆನಪಿಸುತ್ತಲೇ ಇದ್ದರು. ಹೇಳುವಶ್ಟು ಹೇಳಿದೆ. ಇವರಿನ್ನು ಮಾತು ಕೇಳರು ಎಂದು ಗೊತ್ತಾದ ಮೇಲೆ, ‘ಏನಾದ್ರೂ ಮಾಡ್ಕೊಳಿ’ ಎಂದು ಕೈಚೆಲ್ಲಿ ಕೂತಾಗಿತ್ತು. ಅಂತು ಇಂತು ಕಟ್ಟೆ ಕಟ್ಟಾಗಿತ್ತು. ಕಟ್ಟೆಗೊಂದು ಕಲ್ಲನ್ನು ತಂದು ಕೂರಿಸುವ ದಿನ ಬಂದೇ ಬಿಡ್ತು. ಮನೆಯಲ್ಲಂದು ಹೆಚ್ಚುಕಡಿಮೆ ಮದುವೆ ವಾತಾವರಣ. ಆದರೆ ಅಂದು ಕಟ್ಟೆ ಕಟ್ಟಿದ ಜಾಗವನ್ನು ನೋಡಿದವನೇ ದಂಗಾಗಿದ್ದೆ!

ಒಂದು ಕಾಲದಲ್ಲಿ ಕುಟುಂಬಕ್ಕೆ ಸೂರಾಗಿದ್ದ ಎತ್ತಗ ಮತ್ತು ಮಡ್ಲು ಮರಗಳ ಬುಡವೇ ಕಟ್ಟೆಯ ಜಾಗವಾಗಿತ್ತು. ಹತ್ತು-ಹತ್ತರ ಆಯದಲ್ಲಿ ಎರಡಡಿ ಎತ್ತರದ ಸಿಮೆಂಟಿನ ಕಟ್ಟೆ. ಅದರ ಮೇಲೊಂದು ಮಳೆಬಿಲ್ಲಿನಾಕಾರಾದ ಚಿಕ್ಕಗೂಡು. ಮರಗಳ ಸುತ್ತ ಬಿದಿರು ಮುಳ್ಳಿನ ಬೇಲಿ. ಅಲ್ಲಿ ಕಟ್ಟಿದ ಕಟ್ಟೆಯ ಮೇಲೆ ಯಾರೂ ಹತ್ತುವಂತಿಲ್ಲ. ಮುಟ್ಟು – ಮುಡಚಟ್ಟು ಆಗುವಂಗಿಲ್ಲ. ಅದಕ್ಕೆ ಬೇಲಿಯೇ ಕಾವಲುಗಾರ. ಮೂರು ತಿಂಗಳಿಗೊಮ್ಮೆ ಪೂಜೆ ಮಾಡುವವರು ಬಂದು, ಕಟ್ಟೆಯನ್ನು ಹತ್ತಿ, ಗೂಡು ತೊಳೆದು ಪೂಜೆ ಮಾಡುವಾಗಲಶ್ಟೇ ಬೇಲಿಯ ಒಳಗೆ ಬರಲಪ್ಪಣೆಯಂತೆ. ಇನ್ನು ಮುಂದೆ ಅಲ್ಲಿ ಕೂತು ಕಾಲಕಳೆಯುವಂತಿಲ್ಲ. ನೆನಪುಗಳ ಬರಮಾಡಿಕೊಳ್ಳುವಂತಿಲ್ಲ!

ಪೂಜೆ ಪುರಸ್ಕಾರಗಳೆಲ್ಲವೂ ಮುಗಿದಿವೆ. ಯಾವಾಗಲಾದರು ಬಾವಿಯ ಕಡೆ ಹೊರಟಾಗ ಆ ಮರಗಳು ಕರೆಯುತ್ತವೆ. ಆದರೆ ಮಳೆಬಿಲ್ಲಿನಾಕಾರದ ಗೂಡು ಕಣ್ಣ ಬಿಡದೆ ಗದರಿಸುತ್ತದೆ. ಆ ಗೂಡನ್ನು ನೋಡಿದಾಗಲೆಲ್ಲಾ ಅಡ್ಡೆಯ ನೆನಪಾಗುತ್ತದೆ. ಆಟಿಕೆಯ ಅಡ್ಡೆ ಎಂದೋ ಕಳೆದುಹೋಯಿತು. ದಿಟವಾದ ‘ಜಟಗಪ್ಪನ ಅಡ್ಡೆ’ ಆಚರಣೆಯಿಂದಲೂ ಮರೆಯಾಗಿದೆ. ಅದನ್ನು ಯಾವ ಕಟ್ಟೆ ನುಂಗಿಹಾಕಿತೋ ಗೊತ್ತಿಲ್ಲ. ಮರಗಳಿಗೂ ನನ್ನಂತೆ ಅಗಲಿಕೆಯ ನೋವು ಇರಬಹುದೇ? ಇದ್ದರೂ ಅವು ಯಾರ ಬಳಿ ತೋಡಿಕೊಳ್ಳುತ್ತವೆ? ಬುಡದಲ್ಲಿರುವ ಕಟ್ಟೆಯ ಬಳಿಯೇ? ಸುತ್ತಲಿರುವ ಬೇಲಿಯ ಬಳಿಯೇ? ಸುಂಕದವನ ಮುಂದೆ ಸಂಕಟ ಹೇಳಿಕೊಂಡ ಹಾಗೆ.

‘ಯಾಕೆ ಹೀಗೆ ಮಾಡಿದಿರಪ್ಪ?’ ಎಂದರೆ, ‘ಎಶ್ಟು ದಿನ ಅಂತ ನಾವು ಹಿಂದುಳಿದೇ ಇರೋದು? ಮೇಲೆ ಬರಬೇಕು. ಮುಂದುವರಿಯಬೇಕು. ಅದಕ್ಕಂತ ದೇವರು ನಮ್ಮ ಕೈ ಹಿಡಿಯೋದು ಬೇಡ್ವ ಮಗನೇ?’ ತಿರುಗಿ ಮತ್ತಶ್ಟು ಕೇಳ್ವಿಗಳು ಬಂದವು. ‘ಹೊಸ ಸಿಮೆಂಟಿನ ಕಟ್ಟೆಯ ಎದುರು ನಮ್ಮ ಜಾಗದಲ್ಲಿಯೇ ನಾವು ಹೊರಗಿನವರಾಗಿದ್ದೇವೆ. ಆ ಕಟ್ಟೆಯ ಕೆಳಗೆ ಕೈಕಟ್ಟಿ ಕುಳಿತಿರುವವರೆಗೂ ನಾವು ಮುಂದುವರೆದವರಲ್ಲ.’ ಎಂದಿದ್ದಕ್ಕೆ ‘ಅದಿಕ ಪ್ರಸಂಗಿ’ ಎಂಬ ಬಿರುದು ಸಿಕ್ಕಿತು.

ಬೇಲಿಯ ದಾಟಿ ಮರವನಪ್ಪಲು ಇರುವ ತಡೆತ ಏನೆಂದು ತಿಳಿಯುತ್ತಿಲ್ಲ. ಒಂದು ಕಾಲದ ಮನೆಯಾಗಿದ್ದ ಮರಗಳಿಗೆ ಇಂದು ಬೇಲಿಯ ಸೆರೆಮನೆ. ಸೂರನ್ನಿತ್ತ ತಪ್ಪಿಗೆ ಅವು ಸೆರೆಯಾಳುಗಳು. ಬಿಡಿಸೋಣವೆಂದರೆ ಕಾಣದ ಕೋಳವೊಂದು ಕೈ ಕಟ್ಟಿಹಾಕಿದೆ. ಬಿಸಿಲನ್ನು ತಡೆದು ಹಡೆದ ಮರದ ನೆರಳ ನಾಗರಕಟ್ಟೆ ನುಂಗಿಹಾಕಿದೆ!

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನಮ್ಮೂರ ಹಳ್ಳಿಕಟ್ಟೆ ಕತೆಯಾಯ್ತು

ಅನಿಸಿಕೆ ಬರೆಯಿರಿ: