ಸಣ್ಣಕತೆ: ಅರಳಿ ಮರ

ಪ್ರಶಾಂತ ಎಲೆಮನೆ.

arali-mara

ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು ವಾಡಿಕೆ. ಅದು ವ್ಯಂಗ್ಯವೂ ಹೌದು, ಮಾತಿಗೂ ಹೌದು. ಮಾರು ಮಾರು ದೂರಕ್ಕೆ ಒಂದೊಂದು ಮನೆ, ಮನೆಯಲ್ಲೋ ಹಿರಿ ಜೀವಗಳು. ಕಾಡು ಬಾ ಅನ್ನುತ್ತೆ ಊರು ಹೋಗು ಅನ್ನುತ್ತೆ ತರದವರು. ಮಕ್ಕಳೆಲ್ಲ ಓದಿ ಪಟ್ಟಣಕ್ಕೆ ಸೇರಿಯಾಗಿದೆ. ಹಬ್ಬಕ್ಕೆ ಬಂದರೆ ಹೆಚ್ಚು. ಒಮ್ಮೊಮ್ಮೆ ಮಾತುಕತೆ ಹೀಗಿರುತ್ತೆ, ಅಪ್ಪ ಮಗನಿನೆ ಅಂತಾನೆ, “ಮಾಣಿ ಒಂದು ದಿನ ಜಾಸ್ತಿ ಇದ್ದು ಹೋಗು”. ಅದಕ್ಕೆ ಮಗ ಅಂತಾನೆ,” ರಜಾ ಇಲ್ಲೆ”.

ಮಗ ಮನೆ ಸೇರೋ ಯಾವ ನಂಬಿಕೆಯೂ ಇಲ್ಲ. ಹಾಗಂತ ಇವರೂ ಊರು ಬಿಡೋದು ಸುಲಬವೇನಲ್ಲ. ಹುಟ್ಟಿದ ಊರು, ಅದು ಅಲ್ಲದೇ ಅಲ್ಲಿ ಹೋಗಿ ಮಾಡೋದೇನು? ಅನ್ನೋ ಗೊಂದಲ. ಮಲೆನಾಡಿನ ಸುಮಾರು ಕಡೆ ಊರುಗಳೇ ಕಾಲಿ, ಊರಿನ ಹುಡುಗರೆಲ್ಲ ಪಟ್ಟಣ ಸೇರಿಯಾಗಿದೆ. ಹಿಂದೆ “ಕೆಟ್ಟು ಪಟ್ಟಣ ಸೇರು” ಅಂತಿದ್ರು. ಈಗ ಅದು “ಕೆಟ್ಟು ಹಳ್ಳಿ ಸೇರು” ಅಂತಾಗಿದೆ.
ಬೆಳಿಗ್ಗೆ ಅವತ್ತು ಪೋನು ಸದ್ದು ಮಾಡಿತ್ತು, ಏನಂತ ನೋಡೋಣ ಅಂತ ಪರಮೇಶ್ವರ ಬಟ್ಟ(ರಾಯರು) ಪೋನು ಎತ್ತಿದರು, ನೋಡಿದರೆ ತಮ್ಮ ಮಹಾಬಲೇಶ.
“ಅಣ್ಣ ಬುಲ್ದೊಜರ್ ನವ ನಾಳೆ ಬತ್ನಡ…”
“ಯಂತಕೆ?”
“ಅಲ್ಲಿ ದಿಂಬದ ಮೇಲಿನ ಜಾಗ ಚೊಕ್ಕ ಮಾಡ್ಸನ ಅಂತ”
“ಏನ್ ಮಾಡಕು?” ರಾಯರ ತಲೆಯಲ್ಲಿ ಪ್ರಶ್ನೆ.
“ಸಣ್ಣ ಕೋಣೆ ಕಟ್ಸಕು. ನಾಳೆ ಬೆಳಿಗ್ಗೆ 8 ಕ್ಕೆ ಬತ್ತ, ಒಂದು ಚೂರು ಬುಲ್ದೊಜರ್ ನವಂಗೆ ಬರಕೆ ಜಾಗ ಬಿಡಿಸಿ ಕೊಡು” ಅಂತ ಹೇಳಿ ಇಟ್ಟ ಮಹಾಬಲೇಶ.
ರಾಯರಿಗೆ ಏನು ಹೇಳಬೇಕು ಅಂತಾನೆ ತೋಚಲಿಲ್ಲ. ಅದು ದಿಂಬದ ಜಾಗ (ತೋಟದ ಮೇಲಿನ ಜಾಗ). ಅಲ್ಲಿ ಸುಮಾರು ವರುಶದ ಹಿಂದೆ ಒಂದು ಸಣ್ಣ ಗುಡಿಸಲಿತ್ತು. ಅದು ತೆಗೆದ ಮೇಲೆ ಅಲ್ಲೇನು ಇರಲಿಲ್ಲ. ಪಾಲಾದ ಮೇಲೆ ಅದು ತಮ್ಮ ಮಹಾಬಲೇಶನ ಪಾಲಿಗೆ ಹೋಯಿತು. ಈಗ್ಗೆ ಹತ್ತು ವರುಶದ ಹಿಂದೆ ಸರಕಾರದ ಕಡೆಯಿಂದ ಎಕರೆಗೆ 100 ಏಲಕ್ಕಿ ಗಿಡ ಕೊಡೋದು ಅಂತ ಆಯಿತು. ರಾಯರು ತಗೊಂಡು ಬರೋಕೆ ಹೋದರು. ಅಲ್ಲಿ ಸರತಿಯಲ್ಲಿ ಇವರದ್ದು ಕೊನೆ. ತಗೊಂಡು ಬರೋವಾಗ ಅಲ್ಲಿದ್ದ ಮಾಣಿ ಅಂದ “ಒಂದು ಅರಳಿ ಗಿಡ ಉಳಿದು ಹೋಗಿದೆ ತಗೊಂಡು ಹೋಗಿ.” ದುಡ್ಡೇನು ಇಲ್ಲವಲ್ಲ. ಸರಿ ಅಂತ ಅದನ್ನೂ ತಗೊಂಡು ಬಂದರು. ತಗೊಂಡಿದ್ದೆನೋ ಸರಿ ಆದರೆ ಬಂದ ಮೇಲೆ ಅದನ್ನ ಎಲ್ಲಿ ನೆಡಬೇಕು ಅಂತ ಸಮಸ್ಯೆ. ಇವರಿಗೆ ಅದನ್ನ ಮೇಲೆ ಗುಡ್ಡದಲ್ಲಿ ಹಾಕೋ ಮನಸ್ಸು, ಆದರೆ ಮಗ ಬಿಡಲಿಲ್ಲ ಇಲ್ಲೇ ನೆಡೋಣ ಅಂತ ಹಟ ಹಿಡಿದ. ಮಗನ ಒತ್ತಾಯಕ್ಕೆ ದಿಂಬದಲ್ಲಿ ನೆಡೋದು ಅಂತ ಆಯ್ತು.

ಅದನ್ನ ನೆಡೋವಾಗ ಮುಂದೆ ಇಲ್ಲಿ ನೆಟ್ಟರೆ ಕಡೀಬೇಕು ಅಂತ ಅವರಿಗೆ ಗೊತ್ತಿತ್ತು. ಈಗ ಇರಲಿ ಅಂತ ನೆಟ್ಟದ್ದೇ. ಆದರೆ ವರುಶ ಕಳೆದಂತೆ ಅವರಿಗೆ ಅದರ ಮೇಲೆ ಒಲವು ಬಂದದ್ದು ಸುಳ್ಳಲ್ಲ. ಅರಳಿ ಮರಕ್ಕೆ ಕಟ್ಟೆ ಕಟ್ಟಿ 4 ವರುಶಕ್ಕೆ ಉಪನಯನ ಮಾಡೋದು ಬ್ರಾಹ್ಮಣ ಕುಟುಂಬದ ಸಂಪ್ರದಾಯ. ಹಾಗೆ ಮಾಡಿದ ಮೇಲೆ ಅದಕ್ಕೆ ಪೂಜೆನೂ ಮಾಡಬೇಕು, ಕಡೀಬಾರ‍್ದು. ಹೀಗೆಲ್ಲ ಇದೆ. ಹಾಗಾಗಿಯೇ ರಾಯರು ಅರಳೀಮರಕ್ಕೆ ಉಪನಯನ ಬೇಡ ಅಂತ ತೀರ‍್ಮಾನಿಸಿದ್ದರು. ಆದರೆ ಅದರ ಮೇಲೆ ಅವರಿಗೆ ಒಂದು ತರ ಲಗಾವು ಬಂದು ಬಿಟ್ಟಿತ್ತು. ಅದಕ್ಕೆ ನೀರೆರೆದಿದ್ದು ಮಾತ್ರವಲ್ಲ, ಒಂದೆರಡು ವರುಶ ಗೊಬ್ಬರ ಕೂಡ ಹಾಕಿದ್ದರು. ತಮ್ಮ ಮಹಾಬಲೇಶನ ತೋಟದ ಉಸ್ತುವಾರಿ ರಾಯರದ್ದೇ. ಅದು ಅಲ್ಲದೆ ಮಹಾಬಲೇಶ ಊರು ಸೇರೋದು ಆಗದ ಮಾತು ಅಂತ ಇವರಿಗೂ ಮನವರಿಕೆ ಆಗಿತ್ತು. ಹಾಗಾಗಿ ತಮ್ಮ ಹೀಗೆ ಹೇಳಿದ್ದು ಅವರಿಗೆ ಅನಿರೀಕ್ಶಿತ.

ಕಳೆದ ವರುಶ ಅದಕ್ಕೊಂದು ಕಟ್ಟೆ ಕಟ್ಟಿಸಿಯಾಗಿತ್ತು, ಮೂರೂ ಜನ ಕೂರೊ ಹಂಗಿದ್ದು. ಮಗ ಮನೆ ಬಿಟ್ಟ, ಹೆಂಡತಿಗೆ ಸದಾ ಅನಾರೋಗ್ಯ. ಹಾಗಾಗಿಯೇ ಬಹುಶ ರಾಯರಿಗೆ ಅದರ ಮೇಲೆ ಹೆಚ್ಚು ಲಗಾವು ಬಂದಿರಬಹುದು. ಊರ ಮಂಜಯ್ಯ, ಚಂದ್ರಯ್ಯ ಅವರ ಜೊತೆ ಕಾಡು ಹರಟೆಗೂ ಅದೇ ಜಾಗ (ಮಳೆಗಾಲ ಬಿಟ್ಟು). ಮಹಾಬಲೇಶ್ವರನ ಪೋನು ಬಂದ ಮೇಲೆ ರಾಯರಿಗೆ ಮನಸ್ಸು ಕೆಟ್ಟಿತ್ತು. ‘ಜಾಗ ಬೇರೆ ಮಾಡಿ ಕೊಡಬೇಕಂತೆ’, ಗೊಣಗಿ ಕೊಂಡರು ಅವರು. ತಮ್ಮ ಎಂದಿನ ಲಯದಲ್ಲಿ ಸಂಜೆ ಅರಳಿ ಮರದ ಕೆಳಗೆ ಕೂತರು. ಇವತ್ತು ಅಲ್ಲಿ ಯಾರ ಸುಳಿವೂ ಇರಲಿಲ್ಲ. ಇವತ್ತು ಅಲ್ಲಿ ಕುಳಿತು ಕೊಳ್ಳೋ ಕೊನೆ ದಿನ ಅಂತ ಅವರಿಗೆ ನಂಬಲೇ ಆಗುತ್ತಿಲ್ಲ. ‘ಈ ಮರದ ಆಯುಸ್ಸು 300-400 ವರುಶವಂತೆ, ನಿನಗೆ ಹತ್ತೇ ವರುಶ ಮನಸಲ್ಲೇ ಅಂದರು ರಾಯರು. “ಚಿರತೆ ನರ ಬಕ್ಶಕ ಅಂತೆ, ಆದರೆ ಈ ಬುಲ್ಡೋಜರ್ ಇದೆಯಲ್ಲ ಅದು ಬೂ ಬಕ್ಶಕ” ಜೋರಾಗೆ ಅಂದರು ರಾಯರು. ಯಾರಾದರೂ ಕೇಳಿಸಿಕೊಂಡರೋ ಏನೋ ಗೊತ್ತಿಲ್ಲ.

ವಯಸ್ಸು 65 ಆದರೂ ಈಗಲೂ ರಾಯರಿಗೆ ತಲೆಗೆ ದಿಂಬು ಕೊಡೋದೆ ತಡ ನಿದ್ರೆ ಹತ್ತಿ ಬಿಡುತ್ತೆ. ಆದರೆ ಅವತ್ತು ಹಾಗಾಗಲಿಲ್ಲ. ನೂರಾರು ಯೋಚನೆಗಳು. 20 ವರ‍್ಶದ ಹಿಂದೆ ಸತ್ತ ಮಗಳ ನೆನಪು. ಅದು ಇವತ್ತೇ ಯಾಕೆ ಹಾಗೆ ಕಾಡುತ್ತಿದೆ ಗೊತ್ತಿಲ್ಲ. ಅದಕ್ಕೂ ಈ ಅರಳಿ ಮರಕ್ಕೂ ಏನಾದರು ಸಂಬಂದ ಇದೆಯಾ ಗೊತ್ತಿಲ್ಲ. ಬೆಳಗಿನ ಜಾವ ತಟ್ ಅಂತ ಕಣ್ತೆರೆದರು ರಾಯರು. ರಾತ್ರಿ ಯಾವಾಗ ನಿದ್ರೆ ಬಂತೋ ಗೊತ್ತಿಲ್ಲ. ಗಂಟೆ 7 ಆಗಿತ್ತು. ಅಶ್ಟು ಹೊತ್ತು ಮಲಗೋಲ್ಲ ಅವರು. ಆದರೆ ಮನೆಯ ಜಾನುವಾರುಗಳನ್ನೆಲ್ಲ ನೋಡಿಕೊಳ್ಳುದಕ್ಕೆ ಆಗೋಲ್ಲ ಅಂತ ಕೊಟ್ಟ ಮೇಲೆ ಸ್ವಲ್ಪ ತಡ ಆಗುತ್ತೆ, ಆದರೆ ಇವತ್ತು ಜಾಸ್ತಿನೆ ತಡ ಆಗಿತ್ತು.
ಮನಸ್ಸು ಯಾಕೋ ಕೇಳಲಿಲ್ಲ. ಮತ್ತೆ ತಮ್ಮನಿಗೆ ರಿಂಗಾಣಿಸಿದರು.
“ಎಶ್ಟು ಹೊತ್ತಿಗೆ ಬತ್ನಡ”
“ಬತ್ತಿಕ್ಕು, 10 ಆದರೂ ಆಗಲಕ್ಕು” ಆ ಕಡೆಯಿಂದ ಉತ್ತರ.
“ಯಾರದ್ದು ಬುಲ್ಡೋಜರ‍್?” ರಾಯರ ಪ್ರಶ್ನೆ
“ಶಿವಪ್ಪನ ಮಗ ಮಂಜಂದು, ದುಡ್ಡು ಎಶ್ಟು ಅಂತ ಇನ್ ಮಾತಾಡಕು”
“ಹೌದ, ಏನಿಲ್ಲ ಅಂದ್ರು 5 ತಾಸು ಕೆಲಸ ಆಗ್ತೇನ!” ತಟ್ಟನೆ ಹೇಳಿದರು ರಾಯರು.
“ಬೇಕೇನ! ಎಲ್ಲ ಸಮ ಮಾಡಕೆ ಹೇಳಿದ್ದಿ”
“ಅರಳಿ ಮರ” ಅಂತ ಅನಾಯಾಸವಾಗಿ ಹೇಳಿದರು ರಾಯರು.
“ಹೌದು, ಅದರ ಬುಡ ಸಹಿತ ಕೀಳಕು. ಅವರ ಜೊತೆ ಕೆಲಸದವ ಮಂಜಂಗು ಹೇಳಿದ್ದಿ” ಅಂದ ಮಹಾಬಲೇಶ.
ರಾಯರಿಗೆ ಏನು ತೋಚಲಿಲ್ಲ. ಪೋನ್ ಇಟ್ಟರು.
ಸರಿಯಾಗಿ 10.30 ಕ್ಕೆ ಬಂತು ಬುಲ್ಡೋಜರ್. “ನಾನು ಮರ ಕೀಳೋಲ್ಲ, ಅಂತ ‘ಬುಲ್ಡೋಜರ‍್’ ದರಣಿ ಕೂತರೆ ಹೇಗಿರುತ್ತೆ” ಅಂತಾನೂ ಯೋಚನೆ ರಾಯರ ತಲೇಲಿ ಬಂತು, ಹಾಗೆ ಹೋಯಿತು. “ನರಪ್ರಾಣಿಗೇನೇ ಇರಲ್ಲ, ಅವಕ್ಕೆ ಇರುತ್ತಾ” ಅಂತ ಸಮಜಾಯಿಸಿ ಕೊಟ್ಟುಕೊಂಡರು ಅವರು.

ಸುಮಾರು ಐದು ಗಂಟೆ ಕೆಲಸವೇ ಆಯ್ತು. ಅರಳಿ ಮರ ತೆಗಿಯೋಕಂತಲೇ ಅದರಲ್ಲಿ ನಾಲ್ಕು ತಾಸು ಹಿಡೀತು. ರಾಯರು ಸ್ವಲ್ಪ ಅಲ್ಲೆಲ್ಲ ಅಡ್ಡಾಡಿ ಬಂದು ಬಿಟ್ಟರು. ಹಿಂದೆ ಜಾನುವಾರು ಮಾರಿ ಬಿಡುವಾಗಲು ಹೀಗೆ ಆಗಿತ್ತು. ಇಟ್ಟುಕೊಂಡರೆ ಅವುಗಳ ಒಪ್ಪ-ವಯಿನ ಕಶ್ಟ. ಇನ್ನೊಂದು ಕಡೆ ಚಿಕ್ಕಂದಿನಿಂದ ಸಾಕಿ ಸಲಹಿದವು, ಆ ಸಲುಗೆ ಇನ್ನು ಇರಲ್ವಲ್ಲಾ ಅನ್ನೊ ಸಂಕಟ. ಒಟ್ಟಾರೆ ಜಾನುವಾರು ಮಾರುವಾಗ ಅವರಿಗೆ ಕಣ್ಣಲ್ಲಿ ನೀರೇ ಬಂದುಬಿಟ್ಟಿತು.

ಕೆಲಸ ಮುಗಿದ ಮೇಲೆ ದಿಂಬವೆಲ್ಲ ಮಣ್ಣಿನ ರಾಶಿ, ಗಣಿಗಾರಿಕೆ ಮಾಡದಂತಿತ್ತು. ಅವತ್ತು ರಾತ್ರಿನೂ ರಾಯರಿಗೆ ಸರಿಯಾಗಿ ನಿದ್ರೆ ಹತ್ತಲಿಲ್ಲ. ಮಗಳ ಸಾವು ಕಣ್ಣಿಗೆ ಕಟ್ಟಿದಂತೆ ಕಾಣ್ತಾ ಇತ್ತು. ನಿದ್ರೆ ಬರೋ ತರ ಇಲ್ಲ ಅಂತ ಎದ್ದು ಬಂದು ಜಗಲಿಯ ದೀಪ ಹಚ್ಚಿದರು. ನೋಡಿದರೆ ಹೊರಗಡೆ ಬಾರಿ ಮಳೆ. ಸಂಜೆವರೆಗೂ ಮಳೆ ಬರೋ ಸೂಚನೆ ಇರಲಿಲ್ಲವಲ್ಲ ಅಂದುಕೊಂಡರು.
ಬೆಳಿಗ್ಗೆ ಎದ್ದವರೆ ದಿಂಬದ ಕಡೆ ನೆಡದರು. ಮಳೆಯ ರಬಸಕ್ಕೆ ಮಣ್ಣೆಲ್ಲ ತೊಳೆದು ಕೆಸರು ಗುಂಡಿಯಾಗಿತ್ತು. ತೋಟದಲ್ಲೆಲ್ಲ ಮಣ್ಣು. ರಾಯರು ಕಿತ್ತ ಮರದ ಬುಡಕ್ಕೆ ಹೋದರು, ನೀರು ಮಣ್ಣ ತೊಳೆದ ಜಾಗದಲ್ಲಿ ಚಿಕ್ಕ ಅರಳಿ ಸಸಿ ಈಗೇನೆ ಹುಟ್ಟಿತೇನೋ ಅನ್ನುವಂತಿತ್ತು.

(ಚಿತ್ರ ಸೆಲೆ: asergeev.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: